19-06-2024

ಅಚ್ಚರಿಯ ನಿರ್ಧಾರ ಪ್ರಕಟಿಸಿದ ಕೇನ್ ವಿಲಿಯಮ್ಸನ್

Author: ಪೃಥ್ವಿ ಶಂಕರ

ಟಿ20 ವಿಶ್ವಕಪ್‌ನಿಂದ ಲೀಗ್ ಹಂತದಲ್ಲೇ ಹೊರಬಿದ್ದ ಬಳಿಕ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ.

ಕೇನ್ ವಿಲಿಯಮ್ಸನ್ ನ್ಯೂಜಿಲೆಂಡ್‌ನ ಕೇಂದ್ರ ಗುತ್ತಿಗೆಯನ್ನು ತೆಗೆದುಕೊಳ್ಳದಿರಲು ನಿರ್ಧರಿಸಿದ್ದಾರೆ.

ಪ್ರಸ್ತುತ ಕ್ರೇಂದ್ರ ಗುತ್ತಿಗೆಗೆ ಒಳಪಟ್ಟಿರುವ ಕೇನ್ ವಿಲಿಯಮ್ಸನ್ ವಾರ್ಷಿಕವಾಗಿ 5.25 ಕೋಟಿ ರೂಗಳನ್ನು ವೇತನವಾಗಿ ಪಡೆಯುತ್ತಿದ್ದಾರೆ. ಇದರ ಹೊರತಾಗಿಯೂ ಅವರು ತಮ್ಮ ಒಪ್ಪಂದವನ್ನು ವಿಸ್ತರಿಸದಿರಲು ನಿರ್ಧರಿಸಿದ್ದಾರೆ.

ಕೇಂದ್ರೀಯ ಒಪ್ಪಂದದ ಜೊತೆಗೆ ಕೇನ್ ವಿಲಿಯಮ್ಸನ್ ಈಗ ಟಿ20 ಮತ್ತು ಏಕದಿನ ತಂಡಗಳ ನಾಯಕತ್ವವನ್ನು ತೊರೆಯಲಿದ್ದಾರೆ.

33 ವರ್ಷ ವಯಸ್ಸಿನ ಕೇನ್ ವಿಲಿಯಮ್ಸನ್ ಈಗ ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸುತ್ತಿದ್ದಾರೆ. ಹೀಗಾಗಿ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಅಲ್ಲದೆ ವಿಶ್ವದಾದ್ಯಂತ ಟಿ20 ಲೀಗ್‌ಗಳಲ್ಲಿ ಆಡಲು ಅವಕಾಶಗಳನ್ನು ಎದುರು ನೋಡುತ್ತಿದ್ದೇನೆ ಎಂದು ವಿಲಿಯಮ್ಸನ್ ಹೇಳಿದ್ದಾರೆ. ಆದರೆ, ಅವಕಾಶ ಸಿಕ್ಕಾಗಲೆಲ್ಲಾ ನ್ಯೂಜಿಲೆಂಡ್‌ ಪರ ಆಡುವುದಾಗಿ ತಿಳಿಸಿದ್ದಾರೆ.

ಕೇನ್ ವಿಲಿಯಮ್ಸನ್​ಗೂ ಮೊದಲು, ಎಡಗೈ ವೇಗದ ಬೌಲರ್ ಟ್ರೆಂಟ್ ಬೌಲ್ಟ್ ಕೂಡ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು.