12-01-2024

ಟಿ20 ಕ್ರಿಕೆಟ್​ನಲ್ಲಿ ಮಾರ್ಟಿನ್ ಗಪ್ಟಿಲ್ ದಾಖಲೆ ಮುರಿದ ಬಾಬರ್

Author: ಪೃಥ್ವಿ ಶಂಕರ

ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಪಾಕಿಸ್ತಾನ ತಂಡ 46 ರನ್​ಗಳ ಹೀನಾಯ ಸೋಲು ಅನುಭವಿಸಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್, ಕೇನ್ ವಿಲಿಯಮ್ಸನ್ ಹಾಗೂ ಡೇರೆಲ್ ಮಿಚೆಲ್ ಅವರ ಅರ್ಧಶತಕದ ಆಧಾರದ ಮೇಲೆ 226 ರನ್ ಕಲೆಹಾಕಿತು.

ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ತನ್ನೇಲ್ಲ ವಿಕೆಟ್ ಕಳೆದುಕೊಂಡು 180 ರನ್ ಕಲೆಹಾಕಲಷ್ಟೇ ಶಕ್ತವಾಯಿತು.

ಈ ಪಂದ್ಯದಲ್ಲಿ ತಂಡದ ಪರ 35 ಎಸೆತಗಳಲ್ಲಿ 57 ರನ್ ಕಲೆಹಾಕಿದ ಮಾಜಿ ನಾಯಕ ಬಾಬರ್ ಆಝಂ ಗೆಲುವಿಗಾಗಿ ಏಕಾಂಗಿ ಹೋರಾಟ ನಡೆಸಿದರು. ಆದರೆ ತಂಡಕ್ಕೆ ಗೆಲುವು ದಕ್ಕಲಿಲ್ಲ.

ಆದರೂ ಈ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ ಬಾಬರ್ ಟಿ20 ಕ್ರಿಕೆಟ್​ನಲ್ಲಿ ಮಾಜಿ ಕಿವೀಸ್ ಆಟಗಾರ ಮಾರ್ಟಿನ್ ಗಪ್ಟಿಲ್ ಅವರ ದಾಖಲೆಯನ್ನು ಮುರಿದರು.

ಈ ಪಂದ್ಯದಲ್ಲಿ 57 ರನ್ ಬಾರಿಸಿದ ಬಾಬರ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಈ ಮೂಲಕ 2009 ಮತ್ತು 2022 ರ ನಡುವೆ ಕಿವೀ ತಂಡದ ಪರ 122 ಟಿ20 ಪಂದ್ಯಗಳಲ್ಲಿ 3531 ರನ್ ಬಾರಿಸಿದ್ದ ಗುಪ್ಟಿಲ್ ಅವರ ದಾಖಲೆಯನ್ನು ಬಾಬರ್ ಮುರಿದರು.

ಪ್ರಸ್ತುತ ಬಾಬರ್ 105 ಟಿ20 ಪಂದ್ಯಗಳಲ್ಲಿ 3542ರನ್ ಸಿಡಿಸಿದ್ದು, ಅಧಿಕ ರನ್ ಕಲೆಹಾಕಿದ ಆಟಗಾರರ ಪೈಕಿ 3ನೇ ಸ್ಥಾನಕ್ಕೇರಿದ್ದಾರೆ.

ಬಾಬರ್ ಹೊರತುಪಡಿಸಿ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಆಡಿರುವ115 ಪಂದ್ಯಗಳಲ್ಲಿ 4008 ರನ್ ಗಳಿಸಿದ್ದಾರೆ.

ಹಾಗೆಯೇ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರ ರೋಹಿತ್ ಶರ್ಮಾ 149 ಪಂದ್ಯಗಳ 141 ಇನ್ನಿಂಗ್ಸ್‌ಗಳಲ್ಲಿ 31.07 ಸರಾಸರಿಯಲ್ಲಿ 3853 ರನ್ ಗಳಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.