06-06-2024

ಭಾರತ ಟಿ20 ತಂಡದ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ

Author: ಪೃಥ್ವಿ ಶಂಕರ

2024ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಐರ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ಗೆಲುವಿನ ಆರಂಭವನ್ನು ಮಾಡಿದೆ. 97 ರನ್‌ಗಳ ಗುರಿಯನ್ನು ಭಾರತ ತಂಡ 12.2 ಓವರ್‌ಗಳಲ್ಲಿ ಸಾಧಿಸಿತು.

ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ 37 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 52 ರನ್ ಕಲೆಹಾಕಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇದರೊಂದಿಗೆ ರೋಹಿತ್ ಶರ್ಮಾ ತಮ್ಮ ನಾಯಕತ್ವದಲ್ಲಿ  ಹೊಸ ದಾಖಲೆ ಬರೆದಿದ್ದಾರೆ. ಅವರು ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಿ ಭಾರತದ ಅತ್ಯಂತ ಯಶಸ್ವಿ ಟಿ20 ನಾಯಕ ಎನಿಸಿಕೊಂಡಿದ್ದಾರೆ.

ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಇದುವರೆಗೆ 55 ಟಿ20 ಪಂದ್ಯಗಳನ್ನಾಡಿದ್ದು,42ರಲ್ಲಿ ಗೆಲುವು ಸಾಧಿಸಿದೆ. ಹಾಗೆಯೇ 12 ಪಂದ್ಯಗಳಲ್ಲಿ ಸೋತಿದ್ದು, ಒಂದು ಪಂದ್ಯ ಟೈ ಆಗಿದೆ.

ಧೋನಿ ನಾಯಕತ್ವದಲ್ಲಿ ಭಾರತವು 72 ಟಿ20 ಪಂದ್ಯಗಳಲ್ಲಿ 41 ಪಂದ್ಯಗಳನ್ನು ಗೆದ್ದಿದ್ದು,28ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ಟೈ ಆಗಿದ್ದು, ಎರಡರಲ್ಲಿ ಫಲಿತಾಂಶ ಬಂದಿಲ್ಲ.

ಹಾಗೆಯೇ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ 50 ಪಂದ್ಯಗಳಲ್ಲಿ 30 ಪಂದ್ಯಗಳನ್ನು ಗೆದ್ದಿದ್ದು,16ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ ಎರಡು ಪಂದ್ಯಗಳು ಟೈ ಆಗಿದ್ದವು.

ಇನ್ನು ಈ ಪಂದ್ಯದಲ್ಲಿ ರೋಹಿತ್ 36 ಎಸೆತಗಳಲ್ಲಿ 30ನೇ ಟಿ20 ಅಂತಾರಾಷ್ಟ್ರೀಯ ಅರ್ಧಶತಕ ಪೂರೈಸಿದರು. ವಿರಾಟ್ ಕೊಹ್ಲಿ 2012 ರಿಂದ 2022 ರ ಕೊನೆಯ ಐದು ವಿಶ್ವಕಪ್‌ಗಳಲ್ಲಿ ಅರ್ಧಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದರು. ಆದರೆ ಈ ಬಾರಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದಾರೆ.

ಈ ಇನ್ನಿಂಗ್ಸ್‌ನಲ್ಲಿ ಮೂರು ಸಿಕ್ಸರ್‌ಗಳನ್ನು ಬಾರಿಸಿದ ರೋಹಿತ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್‌ಗಳನ್ನು ಪೂರೈಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಮೈಲಿಗಲ್ಲನ್ನು ತಲುಪಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

NEXT: ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಸಿಕ್ಸರ್‌ ಬಾರಿಸಿದ ತಂಡ ಯಾವುದು ಗೊತ್ತಾ?