T20 World Cup 2024: ಟೀಂ ಇಂಡಿಯಾದಲ್ಲಿ ಐವರು ಆರಂಭಿಕರು; ಯಾರಿಗೆ ಸಿಗಲಿದೆ ಅವಕಾಶ?
Author: ಪೃಥ್ವಿ ಶಂಕರ
ಮುಂದಿನ ವರ್ಷ ಟಿ20 ವಿಶ್ವಕಪ್ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ನಡೆಯಲಿದೆ. ಇದಕ್ಕಾಗಿ ಟೀಂ ಇಂಡಿಯಾ ಈಗಾಗಲೇ ಸಿದ್ಧತೆ ಆರಂಭಿಸಿದೆ.
ಭಾರತ ತಂಡ ಐದು ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಇದರ ನಂತರ ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಮೂರು ಪಂದ್ಯಗಳ ಸರಣಿಯನ್ನು ಆಡಲಿದೆ.
ಈ ಮೂಲಕ 2024 ರ ಟಿ 20 ವಿಶ್ವಕಪ್‌ಗೆ ಯಂಗ್ ಟೀಂ ಇಂಡಿಯಾ ಸಿದ್ಧವಾಗುತ್ತಿದೆ. ಆದರೆ ತಂಡದಲ್ಲಿ ಆರಂಭಿಕ ಸ್ಥಾನಕ್ಕೆ ಐವರ ನಡುವೆ ಪೈಪೋಟಿ ಹೆಚ್ಚಿರುವುದು ಆಯ್ಕೆ ಮಂಡಳಿಯ ತಲೆನೋವು ಹೆಚ್ಚಿಸಿದೆ.
ಯಶಸ್ವಿ ಜೈಸ್ವಾಲ್: ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾ ಪರ ಆರಂಭಿಕರಾಗಿ 2023ರ ಏಷ್ಯನ್ ಗೇಮ್ಸ್‌ನಲ್ಲಿ ನೇಪಾಳ ವಿರುದ್ಧ ಶತಕ ಕೂಡ ಬಾರಿಸಿದ್ದರು. ಭಾರತ ಪರ 12 ಟಿ20 ಪಂದ್ಯಗಳನ್ನಾಡಿರುವ ಜೈಸ್ವಾಲ್ 349 ರನ್ ಗಳಿಸಿದ್ದಾರೆ.
ರುತುರಾಜ್ ಗಾಯಕ್ವಾಡ್: ರುತುರಾಜ್ ಗಾಯಕ್ವಾಡ್ ಐಪಿಎಲ್ 2023 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಅವರ ನಾಯಕತ್ವದಲ್ಲಿ ಭಾರತವು ಏಷ್ಯನ್ ಗೇಮ್ಸ್ 2023 ರಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಅಲ್ಲದೆ ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾ ಪರ ಅತ್ಯುತ್ತಮ ಶತಕ ಗಳಿಸಿ 123 ರನ್ಗಳ ಇನ್ನಿಂಗ್ಸ್ ಆಡಿದ್ದರು.
ಇಶಾನ್ ಕಿಶನ್: ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇಶಾನ್ ಕಿಶನ್ ಅನೇಕ ಬಾರಿ ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಕಿಶನ್ ಓಪನಿಂಗ್ ಜೊತೆಗೆ ವಿಕೆಟ್ ಕೀಪರ್ ಜವಾಬ್ದಾರಿಯನ್ನೂ ನಿಭಾಯಿಸಬಲ್ಲರು.
ಶುಭ್ಮನ್ ಗಿಲ್: ವರ್ಷಗಳಿಂದ ಭಾರತ ತಂಡದ ಆರಂಭಿಕರಾಗಿರುವ ಗಿಲ್ ಕೆಲವೇ ಎಸೆತಗಳಲ್ಲಿ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಅಂತರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಶತಕ ಸಿಡಿಸಿರುವ ಗಿಲ್ ಭಾರತ ಪರ ಇದುವರೆಗೆ 11 ಟಿ20 ಪಂದ್ಯಗಳಲ್ಲಿ 304 ರನ್ ಕಲೆ ಹಾಕಿದ್ದಾರೆ.
ರೋಹಿತ್ ಶರ್ಮಾ: ರೋಹಿತ್ ಶರ್ಮಾ ಟಿ20 ವಿಶ್ವಕಪ್ ಆಡಬೇಕೆಂಬುದು ಹಲವರ ಅಭಿಪ್ರಾಯವಾಗಿದೆ. ಆದರೆ ಈ ಬಗ್ಗೆ ರೋಹಿತ್ ಯಾವುದೇ ಸ್ಪಷ್ಟನೆ ನೀಡಿಲ್ಲ. ಒಂದು ವೇಳೆ ರೋಹಿತ್ ಆಡಿದರೆ, ಓಪನಿಂಗ್ ಸಮಸ್ಯೆ ಮತ್ತಷ್ಟು ಹೆಚ್ಚಲಿದೆ.