ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಸಮನ್ವಯ ನೆಲ ಎಂದು ಖ್ಯಾತಿ ಪಡೆದಿರುವ ಹಾರಕೂಡ ಶ್ರೀ ಚೆನ್ನಬಸವ ಶಿವಯೋಗಿಗಳ 73ನೇ ಜಾತ್ರಾ ಮಹೋತ್ಸವ ಬಹಳ ವಿಜ್ರಂಭಣೆಯಿಂದ ನೆರವೇರಿತು.
ಜನವರಿ 4ರಂದು ಸಂಜೆ 6 ಗಂಟೆಗೆ ಸರಿಯಾಗಿ ರಥೋತ್ಸವ ಜರುಗಿತು. ಲಕ್ಷಾಂತರ ಭಕ್ತರು ರಥಕ್ಕೆ ಬಾಳೆ ಹಣ್ಣು ಮತ್ತು ಒಣ ಖರ್ಜುರ ಎಸೆದು ತಮ್ಮ ಇಷ್ಟಾರ್ಥಗಳನ್ನು ನೆರವೇರಿಸುವಂತೆ ಶಿವಯೋಗಿಗಳಲ್ಲಿ ಬೇಡಿಕೊಂಡರು.
ಧಾರವಾಡದ ಮುರುಘಾ ಮಠದ ಪೀಠಾಧ್ಯಕ್ಷರು ಪೂಜ್ಯ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶ್ರೀ ಜಗದ್ಗುರು ತೋಂಟದಾರ್ಯ ಮಠ ಮುಂಡರಗಿ ಹಾಗೂ ನಿಷ್ಕಲ ಪಂಟಪ ಬೈಲೂರು ಶ್ರೀ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳಿಂದ ಸಂಜೆ 7 ಗಂಟೆಗೆ ಶಿವಾನುಭವ ಚಿಂತನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ, ಹುಮನಾಬಾದ್ ಶಾಸಕ ಸಿದ್ದಲಿಂಗಪ್ಪ ಪಾಟೀಲ್, ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.
ಜನವರಿ 5 ರಂದು ಕುಸ್ತಿ ಪಂದ್ಯಾವಳಿಗಳು ನಡೆದವು. ಸಂಸ್ಥಾನ ಹಿರೇಮಠದ ಕುಸ್ತಿ ಕ್ರೀಡಾಂಗಣದಲ್ಲಿ ಜರುಗಿದ ಥಿಯೇಟರ್ ಕುಸ್ತಿ ಪಂದ್ಯಾವಳಿಯನ್ನು ಹಾರಕೂಡದ ಪೂಜ್ಯಶ್ರೀ ಡಾ. ಚನ್ನವೀರ ಶಿವಾಚಾರ್ಯರು ಕುಸ್ತಿ ಪೈಲ್ವಾನರ ಕೈಜೋಡಿಸಿ ಉದ್ಘಾಟಿಸಿದರು.
ಮಧ್ಯಾಹ್ನ 12 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ಜರುಗಿದ ಕುಸ್ತಿ ಪಂದ್ಯಾವಳಿಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ಹರಿಯಾಣ, ನವದೆಹಲಿ, ತೆಲಂಗಾಣದ ಸಾವಿರಾರ ಕುಸ್ತಿಪಟುಗಳು ಭಾಗವಹಿಸಿದ್ದರು.
ಹಾರಕೂಡ ಹಿರೇಮಠವು ಕಲ್ಯಾಣ ಕರ್ನಾಟಕ ಭಾಗದ ಸುಪ್ರಸಿದ್ಧ ಮಠವಾಗಿದೆ. ಬಸವಾದಿ ಶರಣರ ಸಮಾನತೆಯ ತತ್ವ, ಪಂಚಾಚಾರ್ಯರ ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶವನ್ನು ಪಾಲನೆ ಮಾಡುತ್ತಾ ಲೋಕೋದ್ಧಾರದ ಕಾರ್ಯ ಮಾಡುತ್ತಿದೆ.
ಈ ಮಠದ 6 ನೇ ಪೀಠಾಧಿಪತಿ ಆಗಿದ್ದ ಲಿಂ.ಸದ್ಗುರು ಚನ್ನಬಸವ ಶಿವಯೋಗಿಗಳು ತಾವು ಕೈಗೊಂಡಿರುವ ಸಮಾಜೋಧಾರ್ಮಿಕ ಕಾರ್ಯಗಳಿಂದ ಈ ಭಾಗದಲ್ಲಿ ಮನೆ ಮಾತಾಗಿದ್ದರು. ಸಮಾಜದಲ್ಲಿ ಸದ್ಭಾವನೆಗೆ ಶ್ರಮಿಸಿದ್ದರು. ತತ್ವಪದಕಾರರ, ಸಾಹಿತಿ, ಸಂಗೀತಗಾರ, ಕ್ರೀಡಾಪಟುಗಳ ಆಶ್ರಯದಾತರೆಂದು ಕೂಡ ಹೆಸರು ಗಳಿಸಿದ್ದರು.