ಏಕದಿನ ವಿಶ್ವಕಪ್‌ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಆಘಾತ ಎದುರಾಗಿದೆ.
01 November 2023
ತಂಡದ ಸ್ಟಾರ್ ವೇಗದ ಬೌಲರ್ ಡೇವಿಡ್ ವಿಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ವಿಲ್ಲಿ, ‘ಈ ದಿನ ಬರಬೇಕೆಂದು ನಾನು ಎಂದಿಗೂ ಬಯಸಲಿಲ್ಲ. ಬಾಲ್ಯದಿಂದಲೂ ಇಂಗ್ಲೆಂಡ್ ಪರ ಕ್ರಿಕೆಟ್ ಆಡುವ ಕನಸು ಕಂಡಿದ್ದೆ. ಆ ಕನಸು ಈಡೇರಿದೆ.
ಹೀಗಾಗಿ ನಾನು ಈ ವಿಶ್ವಕಪ್‌ನ ಕೊನೆಯಲ್ಲಿ ನಾನು ಅಂತರರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಹೊಂದುತಿದ್ದೇನೆ. ಇದರ ಬಗ್ಗೆ ನನಗೆ ತುಂಬಾ ಬೇಸರವಾಗಿದೆ ಎಂದು ಬರೆದುಕೊಂಡಿದ್ದಾರೆ.
33 ವರ್ಷ ವಯಸ್ಸಿನ ವಿಲ್ಲಿ, ಮೇ 2015 ರಲ್ಲಿ ಇಂಗ್ಲೆಂಡ್ ಪರ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದ್ದರು. ನಂತರ ಅದೇ ವರ್ಷ ಟಿ20ಗೆ ಪಾದಾರ್ಪಣೆ ಮಾಡಿದರು.
ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಮಿಂಚಿರುವ ವಿಲ್ಲಿ, 70 ಏಕದಿನದಲ್ಲಿ 625 ರನ್ ಮತ್ತು 94 ವಿಕೆಟ್ ಹಾಗೂ 43 ಟಿ20 ಪಂದ್ಯಗಳಲ್ಲಿ 51 ವಿಕೆಟ್‌ಗಳನ್ನು ಪಡೆದಿದ್ದಾರೆ.
ವಿಲ್ಲಿ ಅವರು 2016 ರಲ್ಲಿ ಭಾರತದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಸ್ಥಾನ ಗಳಿಸಿದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು. ಅಲ್ಲದೆ 2022 ರಲ್ಲಿ ಆಸ್ಟ್ರೇಲಿಯಾದಲ್ಲಿ ಪ್ರಶಸ್ತಿ ಗೆದ್ದ ಇಂಗ್ಲೆಂಡ್ ತಂಡದ ಭಾಗವಾಗಿದ್ದರು.
ಹಾಲಿ ಚಾಂಪಿಯನ್ ಇಂಗ್ಲೆಂಡ್‌ನ ವಿಶ್ವಕಪ್ ಪಯಣ ಅತ್ಯಂತ ಕಳಪೆಯಾಗಿದೆ. ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ಒಂದರಲ್ಲಿ ಮಾತ್ರ ಗೆದ್ದಿದೆ.
ಈ ಎಡಗೈ ಸೀಮರ್ ಇದುವರೆಗೆ ಆಡಿರುವ ಮೂರು ಪಂದ್ಯಗಳಲ್ಲಿ 42 ರನ್ ಬಾರಿಸುವುದರೊಂದಿಗೆ ಐದು ವಿಕೆಟ್ ಪಡೆದಿದ್ದರು.