ಅರುಣ್​ಸಿಂಗ್​ರಿಂದ ಮುನಿರತ್ನಗೆ ಸಿಕ್ಕಿದೆ ಭರವಸೆ; ಇನ್ನು ಎರಡು ತಿಂಗಳಷ್ಟೇ !

ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕೆಲವರು ಮಾತನಾಡುತ್ತಿರುವದನ್ನು ನೋಡಿದ್ದೇನೆ. ರೋಡ್​ನಲ್ಲಿ ನಿಂತು ಮಾತನಾಡುವುದು ಒಳ್ಳೆಯದಲ್ಲ. ಯಡಿಯೂರಪ್ಪ ವಚನಭ್ರಷ್ಟ ಅಲ್ಲ, ಮಾತಿಗೂ ತಪ್ಪಿಲ್ಲ. ಕೆಲವು ಸಂದರ್ಭದಲ್ಲಿ ಹೀಗಾಗುವುದು ಸಹಜ. ಹಾಗಂತ ರೋಡ್​ನಲ್ಲಿ ನಿಂತು ಮಾತನಾಡುವುದು ಒಳ್ಳೆಯದಲ್ಲ ಎಂದು ಮುನಿರತ್ನ ಹೇಳಿದ್ದಾರೆ.

  • TV9 Web Team
  • Published On - 14:07 PM, 14 Jan 2021
ಶಾಸಕ ಮುನಿರತ್ನ

ಬೆಂಗಳೂರು: ಈ ಬಾರಿ ಆರ್​.ಆರ್.ನಗರ ಉಪಚುನಾವಣೆಯಲ್ಲಿ ಗೆದ್ದಿದ್ದ ಮುನಿರತ್ನ ಸಚಿವ ಸ್ಥಾನ ಸಿಕ್ಕೇ ಸಿಗುತ್ತದೆ ಎಂದು ಬಹುವಾದ ನಿರೀಕ್ಷೆಯಲ್ಲಿದ್ದರು. ಆದರೆ ಅವರ ಲೆಕ್ಕಾಚಾರ ಉಲ್ಟಾ ಆಗಿ, ಈ ಸಲದ ಸಂಪುಟ ವಿಸ್ತರಣೆಯಲ್ಲೂ ಸ್ಥಾನ ಸಿಗದಾಯಿತು. ಇದರಿಂದ ನೊಂದಿದ್ದ ಮುನಿರತ್ನ ನಿನ್ನೆ ಕುಮಾರಕೃಪಾದಲ್ಲಿ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್​ರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಹಾಗೇ ತಮಗೆ ಸಚಿವ ಸ್ಥಾನ ಸಿಗದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಮಂತ್ರಿಗಿರಿ ನನ್ನ ಹಣೆಯಲ್ಲಿ ಬರೆದಿಲ್ಲ ಎಂದುಕೊಳ್ಳುತ್ತೇನೆ. ಸಚಿವ ಸ್ಥಾನ ಸಿಗಬೇಕು ಎಂದು ಬರೆದಿದ್ದರೆ ಖಂಡಿತ ಸಿಗುತ್ತದೆ. ನಮ್ಮ ಹಣೆಯಲ್ಲಿ ಏನು ಬರೆದಿರುತ್ತದೆಯೋ ಅದೇ ಸಿಗುತ್ತದೆ ಎಂದು ಹೇಳಿದರು.

ಯಡಿಯೂರಪ್ಪ ವಚನಭ್ರಷ್ಟರಲ್ಲ
ಸಚಿವ ಸ್ಥಾನ ಸಿಕ್ಕಿಲ್ಲ ಎಂದು ಕೆಲವರು ಮಾತನಾಡುತ್ತಿರುವದನ್ನು ನೋಡಿದ್ದೇನೆ. ಯಡಿಯೂರಪ್ಪ ವಚನಭ್ರಷ್ಟ ಅಲ್ಲ, ಮಾತಿಗೂ ತಪ್ಪಿಲ್ಲ. ಕೆಲವು ಸಂದರ್ಭದಲ್ಲಿ ಹೀಗಾಗುವುದು ಸಹಜ. ಹಾಗಂತ ರೋಡ್​ನಲ್ಲಿ ನಿಂತು ಮಾತನಾಡುವುದು ಒಳ್ಳೆಯದಲ್ಲ. ನಾನು ತಾಳ್ಮೆಯಿಂದ ಕೆಲಸ ಮಾಡುತ್ತೇನೆ. ಸಂಪುಟ ದರ್ಜೆಯ ಸಚಿವನಿಗಿಂತಲೂ ಹೆಚ್ಚು ಅಧಿಕಾರವನ್ನು ಕ್ಷೇತ್ರದ ಜನರು ನೀಡಿದ್ದಾರೆ. ಇನ್ನು ಸಿಡಿ ಇದೆ ಎಂದು ಹೇಳುತ್ತಿರುವವರು ಅದನ್ನು ತೋರಿಸಿ. ಯಡಿಯೂರಪ್ಪನವರ ಬಗ್ಗೆ ಆಧಾರ ರಹಿತ ಆರೋಪ ಮಾಡಬೇಡಿ ಎಂದು ಹೇಳಿದರು.

ಇನ್ನೆರಡು ತಿಂಗಳು ಎಂದಿದ್ದಾರೆ
ಸಚಿವ ಸ್ಥಾನ ಸಿಕ್ಕಿಲ್ಲ ಎಂದು ನನಗೆ ಚಿಂತೆಯಿಲ್ಲ. ನಿನ್ನೆ ಅರುಣ್​ ಸಿಂಗ್​ರನ್ನು ಖುದ್ದಾಗಿ ಭೇಟಿಯಾಗಿದ್ದೇನೆ. ಅವರು ಇನ್ನು ಒಂದೂವರೆ-ಎರಡು ತಿಂಗಳು ಎಂದು ಹೇಳಿದ್ದಾರೆ. ಹಾಗೂ ಸಿಗಲಿಲ್ಲ ಎಂದರೆ ನನ್ನ ಹಣೆಯಲ್ಲಿ ಸಚಿವ ಸ್ಥಾನ ಬರೆದಿಲ್ಲ ಅಂದುಕೊಳ್ಳುತ್ತೇನೆ ಎಂದು ಮುನಿರತ್ನ ತಿಳಿಸಿದರು.

ದೆಹಲಿಗೆ ಹೋಗಿ ನಾಯಕರಿಗೆ ದೂರು ನೀಡಿ ಆದ್ರೆ ಇಲ್ಲಿ ಹಗುರವಾಗಿ ಮಾತನಾಡಿ ಪಕ್ಷಕ್ಕೆ ಧಕ್ಕೆ ತರಬೇಡಿ -ಸಿಎಂ ಯಡಿಯೂರಪ್ಪ