ನಾಳೆ ಮೊದಲ ಪಂದ್ಯ: ಮಾಯಾಂಕ್ ಇನ್ನಿಂಗ್ಸ್ ಆರಂಭಿಸುವರೆ ಅಥವಾ ರಾಹುಲ್?

ಆಂತರರಾಷ್ಟ್ರೀಯ ಮಟ್ಟದಲ್ಲಿ ಎದುರಾಗಿದ್ದ ಕ್ರಿಕೆಟ್ ಬರ ಕ್ರಮೇಣ ಕೊನೆಗೊಳ್ಳುತ್ತಿದೆ. ಎರಡು ಬಲಿಷ್ಠ ಕ್ರಿಕೆಟಿಂಗ್ ರಾಷ್ಟ್ರಗಳಾಗಿರುವ ಭಾರತ ಮತ್ತು ಅಸ್ಟ್ರೇಲಿಯ ನಡುವೆ ಪೂರ್ಣ ಪ್ರಮಾಣದ ಕ್ರಿಕೆಟ್ ಸರಣಿ ಶುಕ್ರವಾರದಿಂದ ಆರಂಭಗೊಳ್ಳಲಿದೆ. ಈ ರಾಷ್ಟ್ರಗಳ ಮಧ್ಯೆ ಆಸ್ಟ್ರೇಲಿಯದಲ್ಲಿ ನಡೆದಿರುವ 50 ಓವರ್​ಗಳ ಪಂದ್ಯಗಳಲ್ಲಿನ ಸಾಧನೆಗಳ ಸಂಕ್ಷಿಪ್ತ ವಿವರ ಇಲ್ಲಿದೆ.

  • Arun Belly
  • Published On - 18:59 PM, 26 Nov 2020

ಇಡೀ ಕ್ರಿಕೆಟಿಂಗ್ ವಿಶ್ವವೇ ಕುತೂಹಲದಿಂದ ಎದುರುನೋಡುತ್ತಿರುವ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಕ್ರಿಕೆಟ್ ಸರಣಿ ನಾಳೆಯಿಂದ (ಶುಕ್ರವಾರ) ಆರಂಭವಾಗಲಿದೆ. ಮೊದಲ ಮೂರು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳು ನಡೆಯಲಿದ್ದು ಅದಾದ ಮೇಲೆ ಮೂರು ಪಂದ್ಯಗಳ ಟಿ20ಐ ಸರಣಿ ಹಾಗೂ ಕೊನೆಯಲ್ಲಿ 4-ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಬೇರೊಂದು ಅರ್ಥದಲ್ಲಿ ಹೇಳಬೇಕೆಂದರೆ ಭಾರತದ ಎರಡು-ತಿಂಗಳು ಆವಧಿಯ ಪೂರ್ಣ ಪ್ರಮಾಣದ ಕಿಕೆಟ್ ಸರಣಿಗೆ ಕ್ಷಣಗಣನೆ ಶುರುವಾಗಿದೆ.

ಮೊದಲು, ಈ ಎರಡು ರಾಷ್ಟ್ರಗಳ ನಡುವೆ ಆಸ್ಟ್ರೇಲಿಯದಲ್ಲಿ ನಡೆದಿರುವ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳುವ ಪ್ರಯತ್ನ ಮಾಡುವ. ಇವೆರಡು ದೇಶಗಳು 51 ಬಾರಿ ಆಸ್ಟ್ರೇಲಿಯದಲ್ಲಿ ಮುಖಾಮುಖಿಯಾಗಿವೆ ಮತ್ತು ಅತಿಥೇಯ ರಾಷ್ಟ್ರವು 36 ಪಂದ್ಯಗಳನ್ನು ಗೆದ್ದಿದ್ದರೆ ಭಾರತ ಕೇವಲ 13ರಲ್ಲಿ ಮಾತ್ರ ಜಯಗಳಿಸಿದೆ. ಅಂದಹಾಗೆ, ಭಾರತ-ಆಸ್ಟ್ರೇಲಿಯ50 ಓವರ್​ಗಳ ಪಂದ್ಯದಲ್ಲಿ ಮೊಟ್ಟಮೊದಲ ಬಾರಿಗೆ ಪರಸ್ಪರ ಎದುರಾಗಿದ್ದು ಬರೋಬ್ಬರಿ 40 ವರ್ಷಗಳ ಹಿಂದೆ, 1980ರಲ್ಲಿ. ನಿಮಗೆ ಆಶ್ವರ್ಯವಾಗಬಹುದು, ಸೀಮಿತ ಆವೃತ್ತಿಯ ಕ್ರಿಕೆಟ್​ನಲ್ಲಿ ಬಹಳ ಕಡಿಮೆ ಅನುಭವವಿದ್ದ ಭಾರತ, ಪ್ಯಾಕರ್​ ಸರಣಿಯಲ್ಲಿ ಆಡಿದ ಆನುಭವವೂ ಸೇರಿದಂತೆ ಹಲವಾರು ಪಂದ್ಯಗಳನ್ನಾಡಿದ್ದ ಆಸ್ಟ್ರೇಲಿಯವನ್ನು 66 ರನ್​ಗಳಿಂದ ಸೋಲಿಸಿತ್ತು. ಆ ಪಂದ್ಯದಲ್ಲಿ ಭಾರತದ ಪರ ಸಂದೀಪ್ ಪಾಟೀಲ್, ರೋಜರ್ ಬಿನ್ನಿ ಮತ್ತು ದಿಲಿಪ್ ದೋಷಿ ಮಿಂಚಿದ್ದರು.

ಹಾಗೆಯೇ, ಆಸ್ಟ್ರೇಲಿಯದಲ್ಲಿ ಭಾರತ ಕೊನೆಯ ಬಾರಿಗೆ (2018-19) ಆಡಿದ ಪಂದ್ಯದಲ್ಲೂ 7 ವಿಕೆಟ್​ಗಳ ಜಯಗಳಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಆಸ್ಟ್ರೇಲಿಯ ಎಲ್ಲ ವಿಕೆಟ್​ಗಳನ್ನು ಕಳೆದುಕೊಂಡು 230 ರನ್ ಗಳಿಸಿದ್ದರೆ ಭಾರತ ಕೇವಲ 3 ವಿಕೆಟ್ ಕಳೆದುಕೊಂಡು 234 ರನ್ ಗಳಿಸಿ ಸುಲಭ ಜಯ ಸಾಧಿಸಿತ್ತು. ಯುಜ್ವೇಂದ್ರ ಚಹಲ್ 6 ವಿಕೆಟ್ ಪಡೆದರೆ ಬ್ಯಾಟಿಂಗ್​ನಲ್ಲಿ ಮಿಂಚಿದ್ದ ಮಹೇಂದ್ರಸಿಂಗ್ ಧೋನಿ ಮತ್ತು ಕೇದಾರ್ ಜಾಧವ್ ಕ್ರಮವಾಗಿ 87* ಮತ್ತು 61* ರನ್ ಬಾರಿಸಿದ್ದರು. ಈ ಎರಡೂ ಪಂದ್ಯಗಳು ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದು ವಿಶೇಷ.

ಆಸ್ಟ್ರೇಲಿಯ, ತನ್ನ ನೆಲದಲ್ಲಿ ಗಳಿಸಿರುವ ಗರಿಷ್ಠ ಮೊತ್ತ 359/4 (2004, ಎಸ್​ಸಿಜಿ) ಆಗಿದ್ದರೆ, ಭಾರತ 2016ರಲ್ಲಿ ಅದೇ ಮೈದಾನದಲ್ಲಿ 4/331 ರನ್​ಗಳ ಮೊತ್ತ ಪೇರಿಸಿದ್ದು ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ಹಾಗೆಯೇ, 1981ರಲ್ಲಿ ಭಾರತ ಗಳಿಸಿದ 63 ಕನಿಷ್ಠ ಮೊತ್ತವಾಗಿದ್ದರೆ, ಆಸ್ಟ್ರೇಲಿಯ1991 ಪರ್ತ್​ನಲ್ಲಿ ನಡೆದ ಪಂದ್ಯದಲ್ಲಿ 101 ರನ್​ಗಳ ಮೊತ್ತಕ್ಕೆ ಔಟಾಗಿತ್ತು.

ಇನ್ನು ವೈಯಕ್ತಿಕ ಗರಿಷ್ಠ ಸ್ಕೋರ್ ನೋಡುವುದಾದರೆ, 2016 ಪರ್ತ್ ಪಂದ್ಯದಲ್ಲಿ 171 ರನ್ ಗಳಿಸಿದ್ದ ರೋಹಿತ್ ಶರ್ಮ ಭಾರತದ ಪರ ಈ ದಾಖಲೆಯನ್ನು ಹೊಂದಿದ್ದರೆ, ಅದೇ ಪಂದ್ಯದಲ್ಲಿ 149 ರನ್ ಬಾರಿಸಿದ ಸ್ಟೀವ್ ಸ್ಮಿತ್ ಆಸ್ಟ್ರೇಲಿಯ ಪರ ಆ ದಾಖಲೆಯನ್ನು ಹೊಂದಿದ್ದಾರೆ.

ಕನ್ನಡ

ಸಂದೀಪ್ ಪಾಟೀಲ್

ಸರಿ, ಈಗ ನಾಳಿನ ಪಂದ್ಯದ ಬಗ್ಗೆ ನೋಡೋಣ. ಮೇಲಿನ ಕ್ರಮಾಂಕದಲ್ಲಿ ರೊಹಿತ್ ಶರ್ಮ ಅವರ ಅನುಪಸ್ಥಿತಿ ಭಾರತವನ್ನು ಕಾಡಲಿದೆ. ಆದರೆ, ಅವರ ಸ್ಥಾನಕ್ಕೆ ಫಾರ್ಮನಲ್ಲಿರುವ ಬದಲೀ ಆಟಗಾರರು ಲಭ್ಯರಿದ್ದಾರೆ, ಮಾಯಾಂಕ್ ಅಗರ್​ವಾಲ್ ಮತ್ತು ಕೆ ಎಲ್ ರಾಹುಲ್. ಟೀಮ್ ಮ್ಯಾನೇಜ್ಮೆಂಟ್ ರಾಹುಲ್​ರನ್ನು ಶಿಖರ್ ಧವನ್ ಜೊತೆ ಇನ್ನಿಂಗ್ಸ್ ಆರಂಭಿಸಲು ನಿರ್ಧರಿಸಿದರೆ, ಅಗರ್​ವಾಲ್ 5ನೇ ಕ್ರಮಾಂಕದಲ್ಲಿ ಆಡಬೇಕಾಗುತ್ತದೆ ಇಲ್ಲವೆ ಅವರನ್ನು ಕೈಬಿಟ್ಟು ಕರ್ನಾಟಕದವರೇ ಆದ ಮನೀಶ್ ಪಾಂಡೆಯನ್ನು ಆ ಸ್ಥಾನದಲ್ಲಿ ಆಡಿಸಬಹುದು. ಮಾಯಾಂಕ್ ಆರಂಭಿಕನಾಗಿ ಆಡಿದರೆ, ಮಧ್ಯಮ ಕ್ರಮಾಂಕದಲ್ಲಿ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ರಾಹುಲ್ ಆಡಲಿದ್ದಾರೆ.

ಆಲ್​ರೌಂಡರ್​ಗಳಾಗಿರುವ ಹಾರ್ದಿಕ್ ಪಾಂಡೆ ಮತ್ತು ರವೀಂದ್ರ ಜಡೇಜಾ ಕ್ರಮವಾಗಿ ನಂಬರ್ 6 ಮತ್ತು 7ನೇ ಸ್ಥಾನದಲ್ಲಿ ಆಡಲಿದ್ದಾರೆ. ಲೇಟ್ಆರ್ಡರ್​ನಲ್ಲಿ, ಬೌಲರ್​ಗಳಾಗಿರುವ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ/ಶಾರ್ದುಲ್ ಠಾಕುರ್ ಮತ್ತು ಚಹಲ್ ಆಡಬಹುದು.

ಭಾರತದ ತಂಡ ಕಳೆದ 9 ತಿಂಗಳುಗಳಿಂದ ಅಂತರರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ, ಆದರೆ ಆಸ್ಸೀಗಳು ಸೆಪ್ಟೆಂಬರ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೀಮಿತ ಓವರ್​ಗಳ ಸರಣಿಗಳನ್ನು ಆಡಿದ್ದಾರೆ. ಹಾಗಾಗಿ, ಭಾರತ ಕೊಂಚ ಜಾಗ್ರತೆಯಿಂದ ಆಡಬೇಕಿರುವುದು ಸಮಯದ ಕರೆಯಾಗಿದೆ.

ಕನ್ನಡ

ಕೆ ಎಲ್ ರಾಹುಲ್

ಕನ್ನಡ

ಆರನ್ ಫಿಂಚ್ ಮತ್ತು ವಿರಾಟ್ ಕೊಹ್ಲಿ