ವಿಸ್ಟ್ರಾನ್​ ಸಂಸ್ಥೆ ಪುನಾರಂಭಕ್ಕೆ ಭರದ ಸಿದ್ಧತೆ.. ಕೆಲಸ ಕಳೆದುಕೊಂಡ ಕಾರ್ಮಿಕರಿಗೆ ಮತ್ತೆ ಕೆಲಸ ಸಿಗುವ ನಿರೀಕ್ಷೆ

ಡಿಸೆಂಬರ್ 12, 2020ದೇಶದ ಕೈಗಾರಿಕಾ ರಂಗದ ಇತಿಹಾಸದಲ್ಲೇ ಒಂದು ರೀತಿಯ ಕರಾಳ ದಿನ ಎಂದರೆ ತಪ್ಪೇನಿಲ್ಲ. ಅಂದು ಕೋಲಾರ ಜಿಲ್ಲೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿದ್ದ ವಿಶ್ವದ ಪ್ರತಿಷ್ಠಿತ ಐಪೋನ್​ ತಯಾರಿಕಾ ಕಂಪನಿ ವಿಸ್ಟ್ರಾನ್​ ಕಂಪನಿಯ ಮೇಲೆ ಅಲ್ಲಿನ ಕಾರ್ಮಿಕರು ದಾಂಧಲೆ ನಡೆಸಿದ್ದರು

  • ರಾಜೇಂದ್ರ ಸಿಂಹ.ಬಿ.ಎಲ್
  • Published On - 20:23 PM, 14 Jan 2021
ವಿಸ್ಟ್ರಾನ್​ ಸಂಸ್ಥೆ

ಕೋಲಾರ: ಕಾರ್ಮಿಕರಿಗೆ ಸರಿಯಾದ ವೇತನ ಹಾಗೂ ಸೌಲಭ್ಯಗಳನ್ನು ನೀಡಿಲ್ಲವೆಂದು ಆರೋಪಿಸಿ ವಿಸ್ಟ್ರಾನ್ ಸಂಸ್ಥೆಯ ಕಾರ್ಮಿಕರು ಸಂಸ್ಥೆಯ ಕಟ್ಟದ ಮೇಲೆ ದಾಂಧಲೆ ನಡೆಸಿ ಒಂದು ತಿಂಗಳು ಕಳೆದಿದೆ. ಒಂದು ತಿಂಗಳ ನಂತರ ಏನೆಲ್ಲಾ ಬದಲಾವಣೆ ಆಗಿದೆ, ಸದ್ಯ ಸಂಸ್ಥೆಯ ಪರಿಸ್ಥಿತಿ ಹೇಗಿದೆ, ಪೊಲೀಸರ ತನಿಖೆ ಎಲ್ಲಿಯವರೆಗೆ ಬಂದಿದೆ, ತಪ್ಪು ಮಾಡದ ಕಾರ್ಮಿಕರ ಪರಿಸ್ಥಿತಿ ಏನು? ಈ ಎಲ್ಲದರ ಕುರಿತಾದ ಅಪ್​ಡೇಟೆಡ್​ ವರದಿ ಇಲ್ಲಿದೆ.

ಡಿಸೆಂಬರ್ 12, 2020ರಂದು ಆಗಿದ್ದೇನು..?
ಡಿಸೆಂಬರ್ 12, 2020ದೇಶದ ಕೈಗಾರಿಕಾ ರಂಗದ ಇತಿಹಾಸದಲ್ಲೇ ಒಂದು ರೀತಿಯ ಕರಾಳ ದಿನ ಎಂದರೆ ತಪ್ಪೇನಿಲ್ಲ. ಅಂದು ಕೋಲಾರ ಜಿಲ್ಲೆ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿದ್ದ ವಿಶ್ವದ ಪ್ರತಿಷ್ಠಿತ ಐಪೋನ್​ ತಯಾರಿಕಾ ಕಂಪನಿ ವಿಸ್ಟ್ರಾನ್​ ಕಂಪನಿಯ ಮೇಲೆ ಅಲ್ಲಿನ ಕಾರ್ಮಿಕರು ದಾಂಧಲೆ ನಡೆಸಿದ್ದರು. ಕಂಪನಿ ಸರಿಯಾಗಿ ಕಾರ್ಮಿಕರಿಗೆ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಏಕಾಏಕಿ ಕಂಪನಿ ಕಟ್ಟಡದ ಮೇಲೆ ಮುಗಿಬಿದ್ದಿದ್ದರು.

ಒಂದು ವರ್ಷದ ಹಿಂದಷ್ಟೇ ಕಾರ್ಯಾರಂಭ ಮಾಡಿದ್ದ ಕಂಪನಿಯನ್ನು ಸಾವಿರಾರು ಜನ ಕಾರ್ಮಿಕರು ನೋಡ ನೋಡುತ್ತಿದ್ದಂತೆ ಕೇವಲ ಒಂದೇ ಗಂಟೆಯಲ್ಲಿ, ಅಸ್ಥಿಪಂಜರದಂತೆ ಮಾಡಿದ್ದರು. ಇದು ದೇಶದ ಕೈಗಾರಿಕಾ ಇತಿಹಾಸದಲ್ಲೇ ಒಂದು ದೊಡ್ಡ ಕಪ್ಪುಚುಕ್ಕೆಯಾಗಿತ್ತು. ಅಲ್ಲದೆ ವಿಶ್ವ ಮಟ್ಟದಲ್ಲಿ ಭಾರತಕ್ಕೆ ಹೂಡಿಕೆ ಮಾಡಲು ಆಲೋಚನೆ ಮಾಡಬೇಕಾದಂತ ಸ್ಥಿತಿ ನಿರ್ಮಾಣವಾಗಿತ್ತು.

ಕಾರ್ಮಿಕರ ಕ್ಷಮೆ ಕೇಳಿದ್ದ ವಿಸ್ಟ್ರಾನ್​..!
ದಾಂಧಲೆ ಪ್ರಕರಣ ನಡೆದು ಒಂದೇ ವಾರದಲ್ಲಿ ವಿಸ್ಟ್ರಾನ್​ ಕಂಪನಿ ಆತಂಕರಿಕ ತನಿಖೆ ನಡೆಸಿತ್ತು. ಇದಾದ ನಂತರ ಕಂಪನಿಯಲ್ಲೇ ಕೆಲವೊಂದು ತಪ್ಪುಗಳಿದೆ ಎಂದು ಗೊತ್ತಾದ ಹಿನ್ನೆಲೆಯಲ್ಲಿ ಬಹಿರಂಗವಾಗಿಯೇ ಕಾರ್ಮಿಕರ ಕ್ಷಮೆ ಕೇಳಿತ್ತು. ಅಷ್ಟೇ ಅಲ್ಲದೇ ಕಂಪನಿಯ ಉಪಾಧ್ಯಕ್ಷ ವಿನ್ಸೆಂಟ್​ ಲೀ ಅವರನ್ನು ವಜಾಮಾಡಿತ್ತು. ಜೊತೆಗೆ ಕಾರ್ಮಿಕರ ಬಾಕಿ ಇರುವ ವೇತನ ಅತಿ ಶೀಘ್ರದಲ್ಲಿ ಇತ್ಯರ್ಥಪಡಿಸುವ ಭರವಸೆಯನ್ನು ಸಹ ನೀಡಿತ್ತು.

ಕಂಪನಿಯ ದಾಂದಲೆ ಪ್ರಕರಣದಲ್ಲಿ ಪೊಲೀಸ್​ ತನಿಖೆ ಏನಾಗಿದೆ..?
ವಿಸ್ಟ್ರಾನ್​ ಕಂಪನಿಯಲ್ಲಿ ಕಾರ್ಮಿಕರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಜಿಲ್ಲೆ ವೇಮಗಲ್​ ಪೊಲೀಸ್​ ಠಾಣೆಗೆ ದೂರು ನೀಡಲಾಗಿತ್ತು. ಎರಡು ಪಾಳಯದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 7000 ಜನ ಕಾರ್ಮಿಕರ ವಿರುದ್ದ ದೂರು ದಾಖಲಿಸಲಾಗಿತ್ತು. ಇದಾದ ನಂತರ ಕೋಲಾರ ಪೊಲೀಸರು ದಾಂಧಲೆ ನಡೆಸಿದ್ದ ಸುಮಾರು 170 ಕಾರ್ಮಿಕರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು.

ಜೊತೆಗೆ, ದಾಂಧಲೆ ವೇಳೆ ಐಪೋನ್​, ಲ್ಯಾಪ್​ಟ್ಯಾಪ್​ ಕಳುವಾಗಿದೆಯೆಂದು ದೂರನ್ನೂ ದಾಖಲಿಸಲಾಗಿತ್ತು. ಸದ್ಯ ಕಳುವಾಗಿದ್ದ ಮೊಬೈಲ್​ ಹಾಗೂ ಲ್ಯಾಪ್​ಟ್ಯಾಪ್​ಗಳ ಪೈಕಿ ಪೊಲೀಸರು 18 ಮೊಬೈಲ್​ ಪೋನ್​ ಹಾಗೂ 17 ಲ್ಯಾಪ್​ಟ್ಯಾಪ್​ಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ಎಲ್ಲಾ ಬೆಳವಣಿಗೆ ನಡುವೆ ಬಂಧನವಾಗಿದ್ದ 136 ಜನ ಕಾರ್ಮಿಕರಿಗೆ ಜಾಮೀನು ಸಿಕ್ಕಿದ್ದು, 34 ಜನರಿಗೆ  ಜಾಮೀನು ಸಿಗಬೇಕಿದೆ. ಇನ್ನು ಕಂಪನಿಯಲ್ಲಿ ಹಾಳಾಗಿದ್ದ ವಸ್ತುಗಳನ್ನು, ಯಂತ್ರೋಪಕರಣಗಳನ್ನು ಮರು ಜೋಡಿಸುವ ಕೆಲಸವೂ ನಡೆಯುತ್ತಿದೆ ಈ ಹಿನ್ನೆಲೆಯಲ್ಲಿ ಕೋಲಾರ ಪೊಲೀಸರು ವಿಸ್ಟ್ರಾನ್​ ಕಂಪನಿಗೆ ಬಿಗಿ ಭದ್ರತೆ ಒದಗಿಸಿದ್ದಾರೆ.

ದಾಂಧಲೆ ಮಾಡದ ಕಾರ್ಮಿಕರಿಗೆ ಮತ್ತೆ ಉದ್ಯೋಗ ಭಾಗ್ಯ..!
ದಾಂಧಲೆ ನಡೆದು ಒಂದು ತಿಂಗಳ ನಂತರ ವಿಸ್ಟ್ರಾನ್​ ಕಂಪನಿ ಮತ್ತೆ ಕಾರ್ಯಾರಂಭ ಮಾಡಲು ಬೇಕಾದ ಸಕಲ ಸಿದ್ದತೆಗಳನ್ನು ಮಾಡಿಕೊಂಡಿದೆ. ಈಗ ಕಂಪನಿ ತನ್ನ ಭದ್ರೆತೆಯನ್ನು ಹೆಚ್ಚಿಸಿಕೊಂಡಿದೆ. ಈ ಮೊದಲು ಕಂಪನಿಗೆ ಕೇವಲ ಒಂದೇ ಒಂದು ಸೆಕ್ಯೂರಿಟಿ ಗೇಟ್​ ಅಳವಡಿಸಲಾಗಿತ್ತು. ಆದರೆ ಈಗ ಮೂರು ಹಂತದ ಸೆಕ್ಯೂರಿಟಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ವಿಸ್ಟ್ರಾನ್​ ಕಂಪನಿಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಪುನಃ ನೇಮಕ ಮಾಡಿಕೊಳ್ಳಲು ಕೆಲ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ. ದಾಂಧಲೆಯಲ್ಲಿ ಪಾಲ್ಗೊಳ್ಳದ ಕಾರ್ಮಿಕರನ್ನು ಗುರುತಿಸಿ ಅವರಿಗೆ ಕೆಲಸ ಕೊಡಲು ಸಂಸ್ಥೆ ಮುಂದಾಗಿದೆ. ಸಿಸಿ ಕ್ಯಾಮರಾ ವಿಡಿಯೋಗಳನ್ನು ಆಧರಿಸಿ ಹಾಗೂ ಪೊಲೀಸರು ತನಿಖೆ ನಡೆಸಿ ನೀಡಿದ ವರದಿಯ ಆಧಾರದ ಮೇಲೆ ಅಮಾಯಕರು ಯಾರು.. ದಾಂಧಲೆಯಲ್ಲಿ ಭಾಗಿಯಾದ ಕಾರ್ಮಿಕರು ಯಾರು ಎಂದು ಗುರುತಿಸಲಾಗುತ್ತಿದೆ. ಯಾರು ದಾಂಧಲೆ ನಡೆಸಿಲ್ಲವೋ ಅವರನ್ನು ಮಾತ್ರ ಕೆಲಸಕ್ಕೆ ಕರೆದುಕೊಳ್ಳಲಾಗುತ್ತಿದೆ.

ಎರಡು ಮೂರು ತಿಂಗಳಲ್ಲಿ ಮತ್ತೆ ಕಾರ್ಯಾರಂಭ..!
ವಿಸ್ಟ್ರಾನ್​ ಕಂಪನಿ ವ್ಯವಸ್ಥೆ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದ್ದು ಕೆಲಸ ಕಳೆದುಕೊಂಡಿದ್ದ ಕಾರ್ಮಿಕರಿಗೆ ಮತ್ತೆ ಕೆಲಸ ಸಿಗುವ ಅವಕಾಶ ಒಂದೆಡೆಯಾದರೆ. ಮತ್ತೊಂದೆಡೆ ವಿಸ್ಟ್ರಾನ್​ ಕಂಪನಿ ಕಾರ್ಯಾರಂಭ ಮಾಡಲು ಬೇಕಾದ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ, ಈ ಬೆಳವಣಿಗೆಗಳನ್ನು ನೋಡಿದರೆ ಕಂಪನಿ ಇನ್ನು ಎರಡರಿಂದ ಮೂರು ತಿಂಗಳಲ್ಲಿ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Wistron iPhone plant violence ತಪ್ಪು ಎರಡು ಕಡೆಯಿಂದಲೂ ಆಗಿದೆ, ಆದರೆ ಯಾರದೇ ಉದ್ಯೋಗಕ್ಕೂ ಚ್ಯುತಿ ಇಲ್ಲ