ವಿಮಾನದಲ್ಲಿ ಜನಿಸಿದ ಮಗುವಿಗೆ ತಾಯಿ ಇಟ್ಟ ಹೆಸರೇನು ಗೊತ್ತಾ?

ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ವಿಮಾನದ ಮುಖಾಂತರ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯದಲ್ಲಿಯೇ ಹೆರಿಗೆಯಾಗಿದೆ. ಹೀಗಾಗಿ ಆ ತಾಯಿ ತನ್ನ ಮಗುವಿಗೆ ಈಗ ಸ್ಕೈ ಎಂದು ಹೆಸರಿಟ್ಟಿರುವ ಘಟನೆ ಅಮೆರಿಕಾದಲ್ಲಿ ನಡೆದಿದೆ.

ಅಮೆರಿಕಾದ ಅಲಾಸ್ಕಾದ ಗ್ಲೆನೆಲ್ಲನ್‌ನ ಸಣ್ಣ ಸಮುದಾಯದಲ್ಲಿ ಜೀವನ ನಡೆಸುತ್ತಿರುವ ಕ್ರಿಸ್ಟಲ್ ಹಿಕ್ಸ್ ಎಂಬ ಮಹಿಳೆಗೆ ಆಗಸ್ಟ್ 5ರಂದು ಹೆರಿಗೆ ನೋವು ಶುರುವಾಗಿದೆ. ಆಗ ಗರ್ಭಿಣಿಯನ್ನು ವಿಮಾನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಮಹಿಳೆಗೆ ದಾರಿ ಮಧ್ಯದಲ್ಲಿಯೇ ಹೆರಿಗೆಯಾಗಿದೆ. ಹೀಗಾಗಿ ಮಹಿಳೆ ಆ ಮಗುವಿಗೆ ಸ್ಕೈ ಐರಾನ್ ಹಿಕ್ಸ್‌ ಎಂದು ಹೆಸರಿಟ್ಟಿದ್ದಾಳೆ.

ನಿಗದಿತ ಅವಧಿಗೂ ಮುನ್ನವೇ ಮಗು ಜನಿಸಿದ್ದರಿಂದ ಮಗುವನ್ನು ಉಸಿರಾಟದ ಯಂತ್ರದಲ್ಲಿ ಇರಿಸಿ, ತಾಯಿ ಮತ್ತು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಮುಂದಿನ ವಾರ ತಾಯಿ ಮತ್ತು ಮಗುವನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ನಿರೀಕ್ಷೆ ಇದೆ ಎನ್ನಲಾಗಿದೆ.

ಜೊತೆಗೆ ಮಗು ಸುಮಾರು 18,000 ಅಡಿ ಅಂದರೆ 5,500 ಮೀಟರ್ ಎತ್ತರದಲ್ಲಿ ಜನಿಸಿದೆ. ಹೀಗಾಗಿ ಮಗುವಿನ ಜನನ ಪ್ರಮಾಣ ಪತ್ರದಲ್ಲಿ, ಜನನ ಸ್ಥಳದ ಮಾಹಿತಿಯಲ್ಲಿ ಯಾವ ಸ್ಥಳವನ್ನು ಉಲ್ಲೇಖಿಸಬೇಕು ಎನ್ನುವ ಗೊಂದಲದಲ್ಲಿ ಈಗ ವೈದ್ಯರು ಸಿಲುಕಿದ್ದಾರೆ ಎನ್ನಲಾಗಿದೆ.

Related Tags:

Related Posts :

Category: