ಕುಟುಂಬಸ್ಥರಿಂದಲೇ ಮೋಸ: ನೊಂದ ಮಹಿಳೆ ವಿಷ ಸೇವಿಸಿ ಜೀವನ್ಮರಣದ ಹೋರಾಟ..

  • Ayesha Banu
  • Published On - 7:08 AM, 22 Nov 2020

ಬೆಂಗಳೂರು: ಸೆಲ್ಫಿ ವಿಡಿಯೋ ಮಾಡಿ ಮಕ್ಕಳೆದುರೇ ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಂದ್ರಾಲೇಔಟ್‌ನ ಅರುಂಧತಿನಗರದಲ್ಲಿ ನಡೆದಿದೆ. ಫಾತಿಮಾ(30) ಎಂಬ ಮಹಿಳೆ ತನ್ನ ಇಬ್ಬರು ಮಕ್ಕಳ ಎದುರೇ ವಿಷ ಸೇವಿಸಲು ಮುಂದಾಗಿದ್ರು.

ಫಾತಿಮಾ ಕೆಲ ವರ್ಷದಿಂದ ಗಲ್ಫ್ ಕಂಟ್ರಿ, ದುಬೈ, ಕುವೈತ್​ನಲ್ಲಿ ಮನೆಗೆಲಸ‌‌ ಮಾಡ್ತಿದ್ದಳು. ತಾನು ಅಲ್ಲಿ ಗಳಿಸಿದ ಹಣವನ್ನು ಕುಟುಂಬಸ್ಥರಿಗೆ ಕಳಿಸುತ್ತಿದ್ದಳು. ಹೀಗೆ ಸುಮಾರು 9 ಲಕ್ಷ ರೂ. ಕಳುಹಿಸಿದ್ದಾಳಂತೆ. ಆದರೆ ತಾನು ಕಳುಹಿಸಿದ್ದ ಹಣ ಈಗ ಕೇಳಿದ್ರೆ ವಾಪಸ್ ನೀಡುತ್ತಿಲ್ಲವೆಂದು ಆರೋಪಿಸಿ ಫಾತಿಮಾ ವಿಷ ಸೇವಿಸಿದ್ದಾಳೆ.

ತಾಯಿ ರಫಿಕಾ ಬೇಗಂ, ಅಣ್ಣ ಜಾಫರ್, ಅತ್ತಿಗೆ ಸಮೀನಾ, ಅಕ್ಕ ಆಯೇಷಾ, ಅಕ್ಕನ ಮಗ ಸೈಯದ್ ವಿರುದ್ಧ ಹಣ ಕಬಳಿಕೆ ಆರೋಪ ಮಾಡಿದ್ದು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಂಡಿಲ್ಲ. ತಾನು ವಿದೇಶಕ್ಕೆ ಹೋಗಿ ಕಷ್ಟಪಟ್ಟು ದುಡಿದ ಹಣ ಪಡೆದು ಕುಟುಂಬಸ್ಥರೇ ಮೋಸ ಮಾಡಿದ್ದಾರೆ. ನಾನು ನನ್ನ ಮಕ್ಕಳಿಗೆ ಭವಿಷ್ಯ ರೂಪಿಸುವುದು ಹೇಗೆ ಎಂದು ನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸೆಲ್ಫಿ ವಿಡಿಯೋ ಮಾಡಿಟ್ಟು ಫಾತಿಮಾ ವಿಷ ಸೇವಿಸಿದ್ದಾಳೆ. ಆಕೆಯ ಸ್ಥಿತಿ ಗಂಭೀರವಾಗಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.