ಮುಂಬೈ ದಾಳಿ ಸಂಚುಕೋರ ತಹಾವುರ್ ರಾಣಾ ಹಸ್ತಾಂತರಕ್ಕೆ ಅಮೆರಿಕ ಸುಪ್ರೀಂ ಕೋರ್ಟ್ ಸಮ್ಮತಿ: ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಗೆಲುವು
ಮುಂಬೈಯಲ್ಲಿ 2008ರ ನವೆಂಬರ್ 26ರಂದು ನಡೆದ ಭೀಕರ ಉಗ್ರ ದಾಳಿಯ ಸಂಚುಕೋರನನ್ನು ಅಮೆರಿಕದಿಂದ ಭಾರತ ಕರೆತರುವ ನಿಟ್ಟಿನಲ್ಲಿ ಮಾಡಿದ ರಾಜತಾಂತ್ರಿಕ ಯತ್ನಗಳು ಕೊನೆಗೂ ಫಲ ಕೊಟ್ಟಿದೆ. ಉಗ್ರ ತಹಾವುರ್ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡುವ ವಿಚಾರವಾಗಿ ಅಮೆರಿಕದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.
ನವದೆಹಲಿ, ಜನವರಿ 25: 2008ರ ಮುಂಬೈ ದಾಳಿಯ ಸಂಚುಕೋರ ತಹಾವುರ್ ರಾಣಾ ಹಸ್ತಾಂತರಕ್ಕೆ ಅಮೆರಿಕದ ಸುಪ್ರೀಂಕೋರ್ಟ್ ಕೊನೆಗೂ ಸಮ್ಮತಿಸಿದ್ದು ಭಾರತಕ್ಕೆ ಮಹತ್ವದ ರಾಜತಾಂತ್ರಿಕ ಜಯ ಸಿಕ್ಕಿದೆ. ಹೀಗಾಗಿ ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ರಾಣಾನನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ. ಡೊನಾಲ್ಡ್ ಟ್ರಂಪ್ ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮರು ದಿನವೇ ಅಮೆರಿಕ ಸುಪ್ರೀಂಕೋರ್ಟ್ನಿಂದ ಈ ತೀರ್ಪು ಹೊರಬಿದ್ದಿದೆ.
ರಾಣಾ ಹಸ್ತಾಂತರವನ್ನು ಅಮೆರಿಕ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಾಗಿತ್ತು. ಆದರೆ ರಾಣಾ ಮನವಿಯನ್ನು ವಜಗೊಳಿಸಿರುವ ಕೋರ್ಟ್, ಭಾರತಕ್ಕೆ ಹಸ್ತಾಂತರ ಮಾಡಬಹುದು ಎಂದು ತೀರ್ಪು ನೀಡಿದೆ.
ರಾಣಾನನ್ನು ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಕಳೆದ ನವಂಬರ್ನಲ್ಲಿ ಅಮೆರಿಕ ಸುಪ್ರೀಂ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಒಂದು ದಿನದ ನಂತರ ಅಮೆರಿಕ ಸುಪ್ರೀಂ ಕೋರ್ಟ್ ರಿಟ್ ಅರ್ಜಿಯನ್ನು ತಿರಸ್ಕರಿಸಿದೆ. ಮುಂಬೈ ದಾಳಿ ಅಪರಾಧಿಯನ್ನು ಭಾರತಕ್ಕೆ ಗಡಿಪಾರು ಮಾಡುವ ಮನವಿಗೆ ಅಮೆರಿಕ ಸರ್ಕಾರ ಬೆಂಬಲ ಸೂಚಿಸಿತ್ತು.
ತಹಾವುರ್ ರಾಣಾ ಕಾನೂನು ಆಯ್ಕೆಗಳ ಬಾಗಿಲು ಬಂದ್
ಭಾರತಕ್ಕೆ ಗಡಿಪಾರಾಗುವುದನ್ನು ತಪ್ಪಿಸಲು ತಹಾವುರ್ ರಾಣಾಗೆ ಇದು ಕೊನೆಯ ಅವಕಾಶವಾಗಿತ್ತು. ಈಗ ಸುಪ್ರೀಂ ಕೋರ್ಟ್ ಅರ್ಜಿ ತಿರಸ್ಕರಿಸಿರುವುದರಿಂದ ಆತನ ಮುಂದಿರುವ ಆಯ್ಕೆಗಳೆಲ್ಲ ಬಂದ್ ಆಗಿದ್ದು, ಭಾರತಕ್ಕೆ ಗಡಿಪಾರಾಗಲೇಬೇಕಿದೆ.
ಇದಕ್ಕೂ ಮುನ್ನ ಅಮೆರಿಕ ಸರ್ಕಾರ ರಾಣಾ ಪರ ವಕೀಲರ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ನ್ಯಾಯಾಲಯದಲ್ಲಿ ವಾದ ಮಂಡಿಸಿತ್ತು. ಯುಎಸ್ ಸಾಲಿಸಿಟರ್ ಜನರಲ್ ಎಲಿಜಬೆತ್ ಬಿ. ಪ್ರಿಲೋಗರ್ ಅವರು ಡಿಸೆಂಬರ್ 16 ರಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ದಾಖಲೆಯಲ್ಲಿ ಈ ವಿಷಯ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ರಾಣಾ ಭಾರತಕ್ಕೆ ಹಸ್ತಾಂತರದಿಂದ ವಿನಾಯಿತಿ ಪಡೆಯಲು ಅರ್ಹನಲ್ಲ ಎಂದು ಅಮೆರಿಕ ಸರ್ಕಾರದ ಪರ ವಕೀಲರು ವಾದಿಸಿದ್ದರು.
ರಾಣಾ ಪರ ವಕೀಲರು ಅಮೆರಿಕ ಸರ್ಕಾರದ ಶಿಫಾರಸನ್ನು ಪ್ರಶ್ನಿಸಿದ್ದರು ಮತ್ತು ಅವರ ರಿಟ್ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ಗೆ ವಿನಂತಿಸಿದ್ದರು. ಜನವರಿ 17ರಂದು ರಾಣಾ ಅರ್ಜಿ ವಿಚಾರಣೆ ನಡೆದಿತ್ತು. ಅಂತಿಮವಾಗಿ ಇದೀಗ ತೀರ್ಪು ಹೊರಬಿದ್ದಿದೆ.
ಯಾರು ಈ ತಹಾವುರ್ ರಾಣಾ?
ತಹಾವುರ್ ರಾಣಾ ಪೂರ್ತಿ ಹೆಸರು ತಹಾವುರ್ ಹುಸೇನ್ ರಾಣಾ (63 ವರ್ಷ). ಈತ ಪಾಕಿಸ್ತಾನಿ ಮೂಲದ ಕೆನಡಾ ಪ್ರಜೆ. ರಾಣಾ ಪಾಕಿಸ್ತಾನಿ ಸೇನೆಯಲ್ಲಿಯೂ ಸೇವೆ ಸಲ್ಲಿಸಿದ್ದಾನೆ ಮತ್ತು ಸೇನೆಯಲ್ಲಿ ವೈದ್ಯನಾಗಿದ್ದ. ಆದಾಗ್ಯೂ, 90 ರ ದಶಕದಲ್ಲಿ ರಾಣಾ ಕೆನಡಾಕ್ಕೆ ಹೋದ ಮತ್ತು ನಂತರ ಅಲ್ಲಿ ಪೌರತ್ವವನ್ನು ಪಡೆದಿದ್ದ.
ಇದನ್ನೂ ಓದಿ: ಸ್ಯಾನ್ ಫ್ರಾನ್ಸಿಸ್ಕೋದ ಭಾರತೀಯ ಧೂತಾವಾಸದ ಮೇಲಿನ ದಾಳಿ ಪ್ರಕರಣ, ಸಚಿವ ಜೈಶಂಕರ್ ಏನಂದ್ರು?
ಮುಂಬೈ ದಾಳಿಯಲ್ಲಿ ಪಾತ್ರವೇನು?
ಮುಂಬೈ ದಾಳಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಡೇವಿಡ್ ಹೆಡ್ಲಿ ರಾಣಾನ ಸ್ನೇಹಿತ. ಡೇವಿಡ್ ಹೆಡ್ಲಿಯನ್ನು ರಾಣಾ ಅಪರಾಧ ಜಗತ್ತಿಗೆ ತಳ್ಳಿದನೆಂದು ಹೇಳಲಾಗಿದೆ. 2008 ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಮಾಸ್ಟರರ್ ಮೈಂಡ್ ಹೆಡ್ಲಿಯನ್ನು ನಂತರ ಅಮೆರಿಕ ಬಂಧಿಸಿತ್ತು. ಹೆಡ್ಲಿಯ ವಿಚಾರಣೆಯ ಸಮಯದಲ್ಲಿ, ಮುಂಬೈ ದಾಳಿಯಲ್ಲಿ ರಾಣಾ ಶಾಮೀಲಾಗಿರುವುದು ಬಹಿರಂಗವಾಯಿತು. ರಾಣಾನನ್ನು 2009 ರಲ್ಲಿ ಅಮೆರಿಕದ ತನಿಖಾ ಸಂಸ್ಥೆಗಳು ಬಂಧಿಸಿವೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:29 am, Sat, 25 January 25