Agnipath Scheme: ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಗೂರ್ಖಾಗಳ ಭರ್ತಿಗೆ ನೇಪಾಳ ತಡೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Aug 26, 2022 | 8:00 AM

75 ವರ್ಷಗಳ ಸೇನಾ ಪರಂಪರೆ ಮುಂದುವರಿಯುವ ಸಾಧ್ಯತೆಯ ಬಗ್ಗೆ ಪ್ರಶ್ನೆಗಳು ಮೂಡಿವೆ. ಭಾರತೀಯ ಸೇನೆಯಲ್ಲಿ ಗೂರ್ಖಾ ರೆಜಿಮೆಂಟ್ ಹೆಸರಿನ ಸಶಸ್ತ್ರ ದಳವೇ ಇದೆ.

Agnipath Scheme: ಅಗ್ನಿಪಥ್ ಯೋಜನೆಯಡಿ ಭಾರತೀಯ ಸೇನೆಗೆ ಗೂರ್ಖಾಗಳ ಭರ್ತಿಗೆ ನೇಪಾಳ ತಡೆ
ಭಾರತೀಯ ಸೇನೆಯ ಗೂರ್ಖಾ ರೆಜಿಮೆಂಟ್ ಯೋಧರು
Follow us on

ಕಠ್ಮಂಡು: ಭಾರತೀಯ ಸೇನೆಯಲ್ಲಿ (Indian Army) ನೇಪಾಳದ (Nepal) ಪ್ರಜೆಗಳಿಗೂ ಸೇವೆ ಸಲ್ಲಿಸಲು ಅವಕಾಶವಿದೆ. ಆದರೆ ಅಗ್ನಿಪಥ್ ಯೋಜನೆಯಡಿ (Agnipath Scheme) ಭಾರತೀಯ ಸೇನೆಯ ನೇಮಕಾತಿಗೆ ಗೂರ್ಖಾಗಳು ಭರ್ತಿಯಾಗಬಾರದು (Gorkha Recruitment) ಎಂದು ನೇಪಾಳ ಸರ್ಕಾರವು ಸೂಚನೆ ನೀಡಿದ್ದು, 75 ವರ್ಷಗಳ ಸೇನಾ ಪರಂಪರೆ ಮುಂದುವರಿಯುವ ಸಾಧ್ಯತೆಯ ಬಗ್ಗೆ ಪ್ರಶ್ನೆಗಳು ಮೂಡಿವೆ. ಭಾರತೀಯ ಸೇನೆಯಲ್ಲಿ ಗೂರ್ಖಾ ರೆಜಿಮೆಂಟ್ ಹೆಸರಿನ ಸಶಸ್ತ್ರ ದಳವೇ ಇದ್ದು, ನೇಪಾಳಿಗಳಿಗೆ ಸೇನೆಯು ಉದ್ಯೋಗದ ಮುಖ್ಯ ಮಾರ್ಗ ಎನಿಸಿದೆ. ಎರಡೂ ದೇಶಗಳ ಸೇನಾ ಮುಖ್ಯಸ್ಥರನ್ನು ಪರಸ್ಪರ ದೇಶಗಳು ‘ಗೌರವ ಜನರಲ್’ ಎಂದು ಘೋಷಿಸುವ ಮೂಲಕ ಸೌಹಾರ್ದ ಸಂಬಂಧ ಕಾಪಾಡಿಕೊಳ್ಳಲು ಯತ್ನಿಸುತ್ತವೆ.

ಸೆಪ್ಟೆಂಬರ್ 5ರಂದು ಭಾರತೀಯ ಸೇನೆಯ ಮುಖ್ಯಸ್ಥರಾದ ಜನರಲ್ ಪಾಂಡೆ ಅವರು ನೇಪಾಳಕ್ಕೆ ಭೇಟಿ ನೀಡಿ, ‘ಗೌರವ ಜನರಲ್’ ಅಧಿಕಾರ ಸ್ವೀಕರಿಸಲಿದ್ದಾರೆ. ಇದೇ ಹೊತ್ತಿಗೆ ನೇಪಾಳವು ಭಾರತೀಯ ಸೇನೆಯ ‘ಅಗ್ನಿವೀರ’ರಾಗಿ ನೇಪಾಳಿಗಳ ಸೇರ್ಪಡೆಗೆ ತಡೆಯೊಡ್ಡಿರುವುದು ಈ ಪರಂಪರೆಯ ಭವಿಷ್ಯ ಏನಾಗಬಹುದು ಎಂಬ ಬಗ್ಗೆ ಅಸ್ಪಷ್ಟತೆ ಮೂಡುವಂತೆ ಮಾಡಿದೆ. ನೇಪಾಳದ ವಿದೇಶಾಂಗ ವ್ಯವಹಾರಗಳ ಸಚಿವ ನಾರಾಯಣ ಖಡ್ಕಾ ಈ ಕುರಿತು ನೇಪಾಳದಲ್ಲಿರುವ ಭಾರತದ ರಾಯಭಾರಿ ನವೀನ್ ಶ್ರೀವಾಸ್ತವ ಅವರಿಗೆ ತಮ್ಮ ಸರ್ಕಾರದ ನಿರ್ಧಾರ ತಿಳಿಸಿದ್ದಾರೆ. ಭಾರತ, ನೇಪಾಳ ಮತ್ತು ಬ್ರಿಟನ್ ನಡುವೆ ನವೆಂಬರ್ 9, 1947ರಲ್ಲಿ ಆಗಿರುವ ತ್ರಿಪಕ್ಷೀಯ ಒಪ್ಪಂದದ ಹಲವು ಅಂಶಗಳು ಅಗ್ನಿಪಥ್​ ಯೋಜನೆ ಒಳಗೊಳ್ಳುವುದಿಲ್ಲ. ಈ ಸಂಬಂಧ ನೇಪಾಳದ ಇತರ ರಾಜಕೀಯ ಪಕ್ಷಗಳು ಮತ್ತು ಚಿಂತಕರೊಂದಿಗೆ ಸಮಾಲೋಚನೆಯ ನಂತರ ಸರ್ಕಾರವು ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.

ವಾಡಿಕೆಯಂತೆ ಸೆಪ್ಟೆಂಬರ್ 29ರಿಂದ ಒಂದಿಡೀ ತಿಂಗಳು ನೇಪಾಳದ ವಿವಿಧೆಡೆ ಭಾರತೀಯ ಸೇನೆಯ ಭರ್ತಿ ಱಲಿಗಳು ನಡೆಯಬೇಕಿತ್ತು. ಆದರೆ ನೇಪಾಳ ಸರ್ಕಾರದ ತಕರಾರಿನ ಹಿನ್ನೆಲೆಯಲ್ಲಿ ಈ ಪ್ರಯತ್ನಳಿಗೆ ಹಿನ್ನೆಡೆಯಾಗಿದೆ. ಕೊವಿಡ್-19 ಪಿಡುಗಿನಿಂದಾಗಿ ಕಳೆದ ಎರಡು ವರ್ಷಗಳಿಂದ ನೇಪಾಳದಲ್ಲಿ ಸೇನಾ ಭರ್ತಿ ಱಲಿಗಳು ನಡೆದಿರಲಿಲ್ಲ. ‘ಅಗ್ನಿಪಥ್ ಯೋಜನೆಯಡಿ ಸೇವೆ ಸಲ್ಲಿಸುವ ಯುವಕರು ನಾಲ್ಕು ವರ್ಷಗಳ ನಂತರ ಮನೆಗಳಿಗೆ ಹಿಂದಿರುಗುತ್ತಾರೆ. ಸಶಸ್ತ್ರ ತರಬೇತಿ ಪಡೆದವರಿಂದ ಸಮಾಜದ ಮೇಲೆ ಉಂಟಾಗಬಹುದಾದ ಪರಿಣಾಮದ ಬಗ್ಗೆ ಪ್ರಶ್ನೆಗಳಿವೆ. ಮುಖ್ಯವಾಗಿ 20ರ ಹರೆಯದಲ್ಲಿರುವ ಯುವಕರಿಗೆ ನಂತರದ ದಿನಗಳಲ್ಲಿ ಉದ್ಯೋಗ ಒದಗಿಸುವುದು ಹೇಗೆ ಎಂಬುದಕ್ಕೆ ಉತ್ತರ ಸಿಗಬೇಕಿದೆ’ ಎಂದು ನೇಪಾಳ ಆತಂಕ ವ್ಯಕ್ತಪಡಿಸಿದೆ.

ಭಾರತದಲ್ಲಿ ಬ್ರಿಟಿಷ್ ಆಡಳಿತವಿದ್ದಾಗ ಬ್ರಿಟನ್ ಸರ್ಕಾರ ಮತ್ತು ನೇಪಾಳಿ ಸರ್ಕಾರದೊಂದಿಗೆ ಒಪ್ಪಂದವಾಗಿತ್ತು. ಅದರಂತೆ ನೇಪಾಳಿ ಪ್ರಜೆಗಳಿಗೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು 1816ರಿಂದಲೂ ಅವಕಾಶ ಸಿಕ್ಕಿದೆ. ಭಾರತವು ಸ್ವತಂತ್ರಗೊಂಡ ನಂತರವೂ ಈ ಪರಂಪರೆ ಮುಂದುವರಿಯಿತು. ಕಳೆದ ಜೂನ್ 14ರಂದು ಕೇಂದ್ರ ಸರ್ಕಾರವು ಅಗ್ನಿಪಥ್ ಯೋಜನೆಯನ್ನು ಘೋಷಿಸಿತ್ತು. ಈ ಯೋಜನೆಯಡಿ 17.5 ವರ್ಷದಿಂದ 21 ವರ್ಷದೊಳಗಿನವರಿಗೆ ಸಶಸ್ತ್ರ ದಳಗಳಲ್ಲಿ ನಾಲ್ಕು ವರ್ಷಗಳ ಅವಧಿಗೆ ನೇಮಿಸಿಕೊಳ್ಳುವುದಾಗಿ ಹೇಳಿತ್ತು. ಈ ಪೈಕಿ ಶೇ 25ರಷ್ಟು ಸಿಬ್ಬಂದಿಗೆ 15 ವರ್ಷಗಳ ಸೇವಾವಧಿ ಸಿಗಲಿದೆ ಎಂದು ಕೇಂದ್ರ ಹೇಳಿತ್ತು. ಈ ಯೋಜನೆ ವಿರೋಧಿಸ ದೇಶಾದ್ಯಂತ ಪ್ರತಿಭಟನೆಗಳು ನಡೆದಿತ್ತು. ನಂತರದ ದಿನಗಳಲ್ಲಿ ಸರ್ಕಾರವು ಗರಿಷ್ಠ ವಯೋಮಿತಿಯನ್ನು 23 ವರ್ಷಗಳಿಗೆ ವಿಸ್ತರಿಸಿತು.