ಪ್ರಿಯ ಅಪ್ಪಂದಿರೇ, ಎರಡು ತಲೆಮಾರುಗಳ ಮಧ್ಯೆ ನೀವಿದ್ದೀರಿ. ಬೆನ್ನ ಹಿಂದೆ ನಿಮ್ಮ ಅಪ್ಪ-ಅಮ್ಮ, ಕಣ್ಣ ಮುಂದೆ ನಿಮ್ಮ ಮಕ್ಕಳು-ಕುಟುಂಬ. ನೀವು ಸಾಗಿಬಂದ, ಸಾಗಿಬರುತ್ತಿರುವ ಹಾದಿಯಲ್ಲಿ ಯಾವುದೇ ನೆನಪುಗಳು ಕೈಮಾಡಿ ನಿಲ್ಲಿಸಬಹುದು. ವಾಸ್ತವ ಸಂಗತಿಗಳು ಕಾಲಿಗೆ ಚಕ್ರ ಕಟ್ಟಲು ನೋಡಬಹುದು. ಈ ಎರಡರ ಮಧ್ಯೆ ಹೃದಯ-ಮೆದುಳು ಗುದ್ದಾಟಕ್ಕೆ ಬಿದ್ದಿರಬಹುದು, ಬಿದ್ದರೂ ನಾವು ನಡೆದಿದ್ದೇ ಹಾದಿ ಎಂದೂ ಸಾಗುತ್ತಿರಲೂಬಹುದು. ಹೀಗೆ ನೀವು ಸಾಕಷ್ಟು ವಿಧದಲ್ಲಿ ಆಂತರಿಕವಾಗಿ ಬೆಳೆದಿದ್ದೀರಿ, ಬೆಳೆಯುತ್ತಲೂ ಇದ್ದೀರಿ. ಹಾಗಿದ್ದರೆ ಅಪ್ಪನಾಗುತ್ತಿದ್ದಂತೆ ನಿಮ್ಮೊಳಗಿನ ನೀವು ರೂಪಾಂತರಕ್ಕೆ ಒಳಗಾದಿರೇ? ಅಪ್ಪನಾಗುವುದೆಂದರೆ ಅನುಭವವೇ, ಅವಕಾಶವೇ, ಆದರ್ಶವೇ, ಅನಿವಾರ್ಯವೇ, ಜವಾಬ್ದಾರಿಯೇ, ಸಹಜ ಪ್ರಕ್ರಿಯೆಯೆ ಅಥವಾ ಇದ್ಯಾವುದೂ ಅಲ್ಲವಾಗಿದ್ದರೆ ಇನ್ನೂ ಏನೇನು? ಒಮ್ಮೆ ಹಿಂತಿರುಗಿ ನೋಡಬಹುದೆ ಎಂದು ಕೆಲ ಅಪ್ಪಂದಿರಿಗೆ ‘ಟಿವಿ9 ಕನ್ನಡ ಡಿಜಿಟಲ್’ ಕೇಳಿತು. ಇದೋ ಹೊಸ ಸರಣಿ ‘ಅಪ್ಪನಾಗುವುದೆಂದರೆ’ ಇಂದಿನಿಂದ ಪ್ರಾರಂಭ.
ನಿಮಗೂ ಈ ಸರಣಿಯಲ್ಲಿ ಪಾಲ್ಗೊಳ್ಳಬೇಕು ಎನ್ನಿಸಿದರೆ ದಯವಿಟ್ಟು ಬರೆಯಿರಿ. ಕನಿಷ್ಟ 1000 ಪದಗಳಿರಲಿ, ನಾಲ್ಕೈದು ಭಾವಚಿತ್ರಗಳು ಮತ್ತು ಸ್ವವಿವರವೂ ಇರಲಿ. ಇ- ಮೇಲ್ tv9kannadadigital@gmail.com
ಪರಿಕಲ್ಪನೆ: ಶ್ರೀದೇವಿ ಕಳಸದ
ದಾವಣಗೆರೆಯ ಶ್ರೀಹರ್ಷ ಅವರು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಾಸಿಸುತ್ತಿದ್ಧಾರೆ. ವೃತ್ತಿಯಿಂದ ತಂತ್ರಜ್ಞರಾಗಿರುವ ಇವರು ಕನ್ನಡದ ಮೊಟ್ಟಮೊದಲ ಆಡಿಯೋ ಪುಸ್ತಕಗಳ ಆ್ಯಪ್ ‘ಆಲಿಸಿರಿ’ ಸಂಸ್ಥಾಪಕರು. ವೈಟ್ ಬೋರ್ಡ್ ಅನಿಮೇಷನ್ ಅನ್ನು ಮೊದಲ ಬಾರಿಗೆ ಕನ್ನಡದಕ್ಕೆ ತಂದವರು. ಬೆರಗು ವಿಜ್ಞಾನ ಪತ್ರಿಕೆಯ ಸಂಪಾದಕರು. ಕನ್ನಡದಲ್ಲಿ ಕಂಪ್ಯೂಟರ್ ಕೋಡಿಂಗ್ ಮಾಡುವಲ್ಲಿ ಯಶಸ್ವಿಯಾದವರು ಮತ್ತು ‘ಆಟಿಕೆ’ ಎಂಬ ಕನ್ನಡದಲ್ಲಿ ಕಲಿಕೆಯ ವಿಡಿಯೋ ಗೇಮ್ ತಯಾರಿಸಿದವರು.
ಮಗಳೆಂಬ ಜೀವದೆಳೆಯನ್ನು ಪದರಪದರಗಳಿಂದ ಹೆಕ್ಕಿ ತೆಗೆಯುವಾಗ ಏನೆಲ್ಲ ವಿಚಾರಗಳು ಇವರಿಂದ ಸ್ಫುರಣಗೊಂಡಿವೆ ಎಂಬುದನ್ನು ನೀವೇ ಓದಿ.
ಹಾಗೆ ನೋಡಿದರೆ ನಾನಾಗಲೀ ನನ್ನ ಹೆಂಡತಿಯಾಗಲೀ ಪೇರೆಂಟ್ ಮೆಟಿರಿಯಲ್ಗಳೇ ಅಲ್ಲ. ಮದುವೆಯಾಗಿ ಬಾಳಲೂ ಸಹ ವಿನ್ಯಾಸಗೊಂಡವರಲ್ಲ. ಇದಕ್ಕೆ ತಕ್ಕಂತೆ ಮದುವೆಯಾದ ನಾಲ್ಕು ವರ್ಷಗಳ ಕಾಲ ನಮಗೆ ಮಗುವಾಗಲಿಲ್ಲ. ಒಂದು ಮಗು ಬೇಕು ಅಂತ ನಮಗೆ ಅನ್ನಿಸಲೂ ಇಲ್ಲ. ಅಚ್ಚರಿಯೆಂದರೆ ನಮಗೆ ಬಂಧುಗಳಿಂದಾಗಲೀ, ಗೆಳೆಯರಿಂದಾಗಲೀ ಸಮಾಜದಿಂದಾಗಲೀ ಒಮ್ಮೆಯೂ ಸಹ ಮಗು ಮಾಡಿಕೊಳ್ಳಿ ಎಂದು ಒತ್ತಡ ಕೂಡ ಬರಲಿಲ್ಲ. ಹಾಗಾಗಿ ಬದುಕೆಂಬುದು ಪಾಂಗಿಕವಾಗಿ ತಿಳಿನೀರಿನ ಒಡ್ಡಿಲ್ಲದ ಝರಿಯಂತೆ ಹರಿಯುತ್ತಿತ್ತು.
ಆಸ್ಟ್ರೇಲಿಯಾಕ್ಕೆ ವಲಸೆ ಬಂದಾಗ ಕೈಯಲ್ಲಿ ಸ್ವಲ್ಪ ಅಗತ್ಯಕ್ಕಿಂತ ಹೆಚ್ಚು ದುಡ್ಡಾದಂತೆ ಬ್ಯಾಂಕ್ ಬ್ಯಾಲೆನ್ಸ್ ತೂಕ ಪಡೆದುಕೊಂಡಂತೆ ಬದುಕಲ್ಲಿ ಒಂದು ಖಾಲೀತನವಿದೆ ಎಂದು ಅನ್ನಿಸತೊಡಗಿತು. ಸದ್ಯಕ್ಕೆ ಹೀಗಿದೆ, ಕಾರು ಬರುತ್ತದೆ, ಮುಂದೆ ಮನೆಯಾಗುತ್ತದೆ ಅಥವಾ ಎರಡು ಮೂರು ಮನೆಗಳಾದರೂ ಬರಬಹುದು. ನಂತರ ಏನು, ಬದುಕೆಂದರೆ ಇಷ್ಟೆನೇ? ಬದುಕಿಗೆ ಒಂದು ಗುರಿಯೇ ಇಲ್ಲವೆಂದೆನಿಸತೊಡಗಿತ್ತು ನಮ್ಮಿಬ್ಬರಿಗೆ. ಆಗ ನಾವಿಬ್ಬರೂ ಇರಲಾರದೆ ಇರುವೆ ಬಿಟ್ಟುಕೊಳ್ಳಲು ನಿರ್ಧರಿಸಿದೆವು!
ನಮ್ಮ ಇರುವನ್ನು ಮುಂದಿನ ಕಾಲಕ್ಕೆ ಮುಂದುವರಿಸುವ ಜೀವವೊಂದು ಈ ಜಗತ್ತಿಗೆ ಕಾಲಿಡಲಿರುವ ಸೋಜಿಗವೇ ರೋಮಾಂಚನವೆನ್ನಿಸಲು ಶುರುವಾಯಿತು. ಆದರೆ ಹುಟ್ಟುವ ಮಗುವಿನ ಬಗ್ಗೆ ನನಗೂ ನನ್ನ ಮಡದಿಗೂ ಇದ್ದ ಏಕೈಕ ಸ್ಪಷ್ಟತೆಯೆಂದರೆ ಹುಟ್ಟುವ ಮಗು ಹೆಣ್ಣುಮಗುವೇ ಆಗಿರಬೇಕೆಂದು. ನಮಗೆ ಗಂಡುಮಗುವಿನ ತಾಯ್ತಂದೆಯರಾಗಿರುವ ಬಗ್ಗೆ ಕಲ್ಪನೆಯನ್ನೂ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ. ಈಗಲೂ ಸಹ ನಮಗೆ ಮಾಡಿಕೊಳ್ಳಲಾಗಿಲ್ಲ. ಬಹುಶಃ ಗಂಡು ಹುಟ್ಟಿದ್ದರೆ ಎದೆಯೊಡೆದುಕೊಳ್ಳುತ್ತಿದ್ದೆವೇನೋ. ಹೆಣ್ಣುಮಕ್ಕಳಿಲ್ಲದ ಜೀವನ ವ್ಯರ್ಥವೆಂದೇ ಬಗೆದಿದ್ದೆವು. ಈ ಹೆಣ್ಣುಮಕ್ಕಳ ಹಿನ್ನೆಲೆಯಲ್ಲಿ ನನ್ನ ಸಹವರ್ತಿಗಳ ಎರಡು ಅಭಿಪ್ರಾಯಗಳನ್ನು ದಾಖಲಿಸಲೇಬೇಕು. ಇಬ್ಬರೂ ಆಸ್ಟ್ರೇಲಿಯನ್ ಮೂಲದವರು. ಒಬ್ಬನ ಪ್ರಕಾರ, ಹೆಣ್ಣುಮಗುವೆಂದರೆ ಜೀವನಪೂರ್ತಿ ಹೊಣೆ. ಗಂಡುಮಗು ಹದಿವಯಸ್ಸನ್ನು ಮುಟ್ಟುತ್ತಿದ್ದಂತೆ ನೇಪಥ್ಯಕ್ಕೆ ಸರಿದು ತನ್ನ ಲೋಕದೊಳಗೆ ಮುಳುಗಿ ಹೋಗುತ್ತದೆ. ಆದರೆ ಹೆಣ್ಣುಮಗು ಹಾಗಲ್ಲ ಭರ್ಜರಿ ಬೆಳಕಿನ ರಂಗಮಂದಿರದ ಮೇಲೆಯೇ ಇರಲು ಬಯಸುತ್ತದೆ. ಅಲ್ಲಿ ಸದಾ ತಾಂಡವ ನೃತ್ಯ ನಡೆಯುತ್ತಲೇ ಇರುತ್ತದೆ, ಅದನ್ನು ನೋಡುತ್ತಲೇ ಇರಬೇಕಾಗುತ್ತದೆ. ಇನ್ನೊಬ್ಬ ಎರಡು ಗಂಡು ಒಂದು ಹೆಣ್ಣುಮಗುವಿನ ತಂದೆ. ಆತ ಹೇಳಿದ್ದು, ‘ನನ್ನ ಗಂಡುಮಕ್ಕಳು ಕೆಲಸಕ್ಕೆ ಬಾರದವರು, ಬರೀ ತನ್ನ ಗರ್ಲ್ ಫ್ರೆಂಡ್ಸ್ಗಳ ಮನೆಯ ಹಿತ್ತಲು ಗುಡಿಸುವುದು ರಿಪೇರಿ ಮಾಡುವುದರಲ್ಲೇ ಮುಳುಗಿರುತ್ತಾರೆ. ಆದರೆ ನನ್ನ ಮಗಳು ಹಾಗಲ್ಲ, ತನ್ನ ಬಾಯ್ಫ್ರೆಂಡ್ ಅನ್ನು ಕರೆತಂದು ನನ್ನ ಮನೆಯ ಹಿತ್ತಲಿನ ಕೆಲಸ ಮಾಡಿಸುತ್ತಾಳೆ!’
ಮಗಳೆಂಬ ಹಕ್ಕಿಯೊಂದಿಗೆ…
ಆಸ್ಟ್ರೇಲಿಯಾದಲ್ಲಿ ಮಗುವಿನ ಲಿಂಗಪರೀಕ್ಷೆಯ ಬಗ್ಗೆ ನಿಷೇಧವಿಲ್ಲ. ಮೂರನೇ ತಿಂಗಳಿಗೆ ನನ್ನ ಹೆಂಡತಿಯನ್ನು ಸ್ಕ್ಯಾನಿಂಗ್ಗೆ ಕರೆದೊಯ್ದಾಗ, ಮಗುವಿನ ಎದೆಬಡಿತ, ಬೆಳವಣಿಗೆ ಇತ್ಯಾದಿಗಳ ಬಗ್ಗೆ ವಿವರಿಸಿದ ವೈದ್ಯರು ಮಗುವಿನ ಲಿಂಗದ ಬಗ್ಗೆ ಹೇಳಲೇ ಇಲ್ಲ. ನಾನೂ ಸಹ ಕುತೂಹಲ ತಡೆಯಲಾರದೇ ‘ನೀವು ಲಿಂಗವನ್ನೇ ತಿಳಿಸಲಿಲ್ಲವಲ್ಲ ವೈದ್ಯರೇ?’ ಅಂತ ಕೇಳಿಯೇಬಿಟ್ಟೆ. ಲಿಂಗದ ವಿವರಗಳನ್ನು ತಿಳಿದುಕೊಂಡು ಹೊರಬರುತ್ತಿದ್ದಂತೆ ನನಗೆ ನನ್ನ ಬಗ್ಗೆ ಒಂದು ಅಸಹನೆಯ ಭಾವವೊಂದು ಮೂಡತೊಡಗಿತ್ತು. ಅಷ್ಟಕ್ಕೂ ನನಗೆ ಮಗುವಿನ ಲಿಂಗದ ಬಗ್ಗೆ ಈ ಕುತೂಹಲ ಮೂಡಿದ್ದು ಏಕೆ? ಹೆಣ್ಣಾಗಿದ್ದರೆ ನನಗೆ ನಿರಾಶೆಯಾಗುತ್ತಿತ್ತೇ? ಗಂಡಾಗಿದ್ದರೆ ಇನ್ನೂ ಹೆಚ್ಚು ಹಿಗ್ಗುತ್ತಿದ್ದೆನೇ? ಅನೇಕ ವರ್ಷಗಳಿಂದ ಸ್ಮೃತಿಪಟಲದಿಂದಲೇ ಅಳಿಸಲು ಪ್ರಯತ್ನಿಸುತ್ತಿರುವ ಪಿತೃಪ್ರಭುತ್ವದ ಕಪಿಮುಷ್ಠಿಯಲ್ಲಿ ಇಂದಿಗೂ ಬಂಧಿಯಾಗಿದ್ದೇನೆಯೇ? ಈ ದರಿದ್ರ Patriarchy ನನ್ನಿಂದ ತೊಲಗುವುದು ಯಾವಾಗ? ಎನ್ನಿಸಿತು.
ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಧಾರಾವಾಹಿ ಮುಂದುವರೆಯುವುದು
ಮಗು ಹುಟ್ಟುವಾಗ ಇಲ್ಲಿ ಎಷ್ಟು ಜನ ಬೇಕಾದರೂ ಬಸುರಿಯ ಜೊತೆಗಿರಬಹುದು. ರಕ್ಕಸ ಚಳಿಗಾಲದ ನಟ್ಟಿರುಳಲ್ಲಿ ಮಗುವಿನ ತಲೆ ಮಾತ್ರ ಹೊರಬಂದಾಗ, ‘ಓಹ್ ಲುಕ್ಸ್ ಲೈಕ್ ಡ್ಯಾಡ್’ ಅಂತ ಉದ್ಘಾರ ತೆಗೆದಳು ಸೂಲಗಿತ್ತಿ! ಮಗು ಪೂರ್ತಿ ಹೊರಬಂದಾಗ ಕರುಳಬಳ್ಳಿಯನ್ನು ನಾನೇ ಕತ್ತರಿಸಿದೆ. ಮಗುವನ್ನು ತಕ್ಷಣ ತಾಯಿಯ ಎದೆಯ ಮೇಲೆ ಹಾಕುವುದು ವಾಡಿಕೆ. ಎದೆಯ ಮೇಲೆ ಹಾಕಿದ ಕೂಡಲೇ ಮಗು ನಿಧಾನಕ್ಕೆ ತಲೆ ಎತ್ತರಿಸಿ ತಾಯಿಯ ಮುಖ ನೋಡಿ ತುಟಿಯಗಲಿಸಿತು. ಆ ಗಳಿಗೆ ನನ್ನ ಕಣ್ಣಮುಂದೆ ನಾನು ಸಾಯುವವರೆಗೆ ಹೆಪ್ಪುಗಟ್ಟಿರುತ್ತದೆ! ಮಗುವಿಗೆ ಹಾಲು ಕುಡಿಸಲು ಸಾಧ್ಯವಾಗದಷ್ಟು ನಿತ್ರಾಣವಾಗಿ ಹೋಗಿದ್ದಳು ನನ್ನ ಹೆಂಡತಿ. ಸೂಲಗಿತ್ತಿ ಬಾಟಲಿಯಲ್ಲಿ ಪುಡಿಯಿಂದ ಮಾಡಿದ ಹಾಲನ್ನು ಹಾಕಿಕೊಂಡು ಕುಡಿಸಲು ಪ್ರಯತ್ನಿಸಿದಳು, ಅದು ಕುಡಿಯಲಿಲ್ಲ. ಆಕೆ ಬಾಟಲಿಯನ್ನು ನನ್ನ ಹೆಂಡತಿಯ ತಾಯಿಯ ಕೈಗಿತ್ತು ಕುಡಿಸಲು ಹೇಳಿದಳು. ಆಗಲೂ ಮಗು ಕುಡಿಯಲಿಲ್ಲ. ಗಂಡಸರು ಮಗುವನ್ನು ಬೆಳೆಸಲು ನಾಲಾಯಕ್ಕು ಎಂಬ Stereotype ಅನ್ನು ನಂಬಿಕೊಂಡಿದ್ದವರಂತೆ ಅವರಿಬ್ಬರೂ ನನಗೆ ಮಗುವನ್ನೂ ಬಾಟಲಿಯನ್ನೂ ಒಪ್ಪಿಸಲೇ ಇಲ್ಲ. ನಾನು ಕೇಳಿ ಪಡೆದುಕೊಂಡು ಮಗುವನ್ನು ತೊಡೆ ಮೇಲೆ ಮಲಗಿಸಿಕೊಂಡು ಬಾಟಲಿಯನ್ನು ಬಾಯಿಗಿಡುತ್ತಿದ್ದಂತೆ ಮಗು ಜನ್ಮಾಂತರದ ಹಸಿವನ್ನು ತೀರಿಸಿಕೊಳ್ಳುವಂತೆ ಹಾಲು ಕುಡಿಯತೊಡಗಿತು!
ಜೀವಜಾಲದೊಳಗೆ
ನನಗೆ ಎಷ್ಟೋ ಸಾರಿ ಅನ್ನಿಸಿದ್ದಿದೆ. ಈ ಗಂಡಸು ಎಷ್ಟು ಅಸಹಾಯಕ ಮತ್ತು ನಿರುಪಯೋಗಿ ಜೀವಿ! ಕನಿಷ್ಟ ಪಕ್ಷ ತನ್ನ ವೀರ್ಯದಿಂದ ಹುಟ್ಟಿದ ಮಗುವಿಗೆ ಕುಡಿಸಲಾದರೂ ಆತನ ಎದೆಯಿಂದ ಕೊಂಚ ಹಾಲು ಜಿನುಗಬಾರದೇ? ತೀರಾ ಗಂಡಸನ್ನು parenting ಸುಖದಿಂದ ಇಷ್ಟು ದೂರ ಇಟ್ಟಿದ್ದು ಪ್ರಕೃತಿ ನಮಗೆ ಮಾಡಿದ ಅನ್ಯಾಯವಲ್ಲವೇ? ದಿನಕ್ಕೆ ಹಲವಾರು ಬಾರಿ ನನ್ನನ್ನು ಕಾಡುವ ಪ್ರಶ್ನೆಯಿದು. ಗಂಡಸು ಅಂತ ಅದ್ಯಾವ ತಿರುಪೆ ಷೋಕಿಗೆ ಹೆಮ್ಮೆಪಡುತ್ತೇವೋ ತಿಳಿಯದು!
ಮಗು ಅಂತ ಆದ ಮೇಲೆ ‘ನಾನು’ ಅನ್ನುವ ಸಮಯಾವಕಾಶ ಅಳಿಸಿಹೋಗುತ್ತದೆ. ಮೊದಲಾದರೆ ಆಫೀಸಿಗೆ ಹೋಗುವ ಮುಂಚೆ ಕನ್ನಡಿಯ ಮುಂದೆ ನಾಲ್ಕೈದು ನಿಮಿಷ ನಿಂತು ಅಂಗಿಯ ಟಕ್ ಸರಿಯಾಗಿದೆಯೇ, ಪ್ಯಾಂಟು ಸರಿಯಾಗಿ ಕೂತಿದೆಯೇ, ಇಸ್ತ್ರೀಕಲ್ಲು ಎಲ್ಲಾದರೂ ಸುಕ್ಕನ್ನು ತಪ್ಪಿಸಿ ಮುಂದೆ ಜಾರಿದೆಯೇ ಎಂದು ಒಂದು ಸಾರಿ ನೋಡಿಕೊಳ್ಳುವ ಅವಕಾಶವಿತ್ತು. ವಾರಕ್ಕೆ ಪ್ರತಿದಿನ ಅಂಗಿಗಳು ಬದಲಾಗುತ್ತಿದ್ದರೆ ಪ್ಯಾಂಟುಗಳು ಎರಡು ದಿನಕ್ಕೊಮ್ಮೆ ಬದಲಾಗುತ್ತಿದ್ದವು. ಈಗ ದಿಕ್ಕಿಲ್ಲದ ಸಹಾಯವಿಲ್ಲದ ಪರದೇಶದಲ್ಲಿ ಎಲ್ಲ ಕೆಲಸಗಳನ್ನೂ ನಾವೇ ಮಾಡಿಕೊಂಡು ಉಳಿಯುವ ಸಮಯದಲ್ಲಿ ಎರಡು ವಾರಕ್ಕೊಮ್ಮೆ ಪ್ಯಾಂಟ್ ಬದಲಾಯಿಸಲು ಸಾಧ್ಯವಾದರೆ ಹೆಚ್ಚು. ಒಂದು ಅಂಗಿ ವಾರದಲ್ಲಿ ಒಮ್ಮೆಯಾದರೂ ಪುನರಾವರ್ತನೆಯಾಗುತ್ತದೆ. ಇಸ್ತ್ರಿ ಸುಕ್ಕುಗಳು ಕಾಣೆಯಾಗುವುದು ಒಂದು ವೈಭೋಗವೇ ಸರಿ. ಮಕ್ಕಳೊಂದಿಗರಾಗುವ ಎಲ್ಲ ಗೆಳೆಯರ ಒಂದೇ ವರಾತ. ನನಗೆ ‘ಮಿಟೈಮ್’ ಅಂತ ಸಿಗೋದಿಲ್ಲ ಮಾರಾಯ ಅಂತ. ಅದಕ್ಕೆ ನನ್ನ ಉತ್ತರ ಒಂದೇ! ಮಿಟೈಮ್ ಎನ್ನುವುದು ನೆಗೆದುಬಿದ್ದು ಹೋಯಿತು ಇನ್ನೇನಿದ್ದರೂ ‘ವಿಟೈಮ್’ ಮಾತ್ರ.
ಮೊದಲು ವಾರಕ್ಕೆ ಐದು ಸಿನಿಮಾ ನೋಡುತ್ತಿದ್ದೆ. ವೆಬ್ ಸೀರೀಸ್ಗಳನ್ನು ರಾತ್ರೋ ರಾತ್ರಿ ಮುಗಿಸುತ್ತಿದ್ದೆ. ಈಗ ಒಂದೇ ಸಿನಿಮಾವನ್ನು ಕಂತುಗಳಲ್ಲಿ ವಾರಗಳ ಕಾಲ ನೋಡುವುದಾಗುತ್ತದೆ ಅಂತ ಗತವೈಭವವನ್ನು ನೆನೆಸಿಕೊಂಡು ಗೋಳಾಡುವಾಗ ಅವರ ಹೆಗಲ ಮೇಲೆ ಕೈಯಿಟ್ಟು ಸಹಾನುಭೂತಿ ತೋರಿಸಬೆಕೋ ಅಥವಾ ಇರಲಾರದೆ ಇರುವೆ ಬಿಟ್ಕೊಂಡೆ, ಅನುಭವಿಸು ಮಗನೇ ಅಂತ ಕೊಂಕಾಡಿ ಸ್ಯಾಡಿಸ್ಟ್ ಥರಾ ನಗಬೇಕೋ ಅಂತ ಗೊತ್ತಾಗುವುದಿಲ್ಲ. ಆದರೆ ನಮಗೆ ದಿಗಿಲು ಬೀಳುವಂತಾಗುವುದು ಭವಿಷ್ಯ ನೆನೆಸಿಕೊಂಡಾಗ. ನಮಗಿಂತ ದೊಡ್ಡ ಮಕ್ಕಳಿರುವವರು ನಾವಿನ್ನೂ ಕಾಣಬೇಕಿರುವುದನ್ನು ವಿವರಿಸಿ ಗಹಗಹಿಸಿ ಹಾರರ್ ಸಿನಿಮಾ ತೋರಿಸುವಾಗ. ಮೊದಲೆಲ್ಲಾ ವೀಕೆಂಡ್ ಎಂದರೆ ನಮಗ ನಿದ್ದೆ. ಗಡದ್ದಾದ ತೃಪ್ತಿಕರವಾದ ಭರಪೂರ ನಿದ್ದೆ! ಈಗ ನಿದ್ದೆ ನೆಗೆದುಬಿದ್ದು ಹೋಗಲಿ ಮಕ್ಕಳನ್ನು ವೀಕೆಂಡುಗಳಲ್ಲಿ ಸಕ್ರಿಯರಾಗಿಡುವುದೊಂದು ತಲೆನೋವಿನ ಜವಾಬ್ದಾರಿ. ವೀಕೆಂಡಿನಲ್ಲಿ ಮಕ್ಕಳನ್ನು ಕಾರಿನಲ್ಲಿ ಹೇರಿಕೊಂಡು ಈಜಾಟಕ್ಕೋ, ಸಂಗೀತಕ್ಕೋ, ಕುಣಿತ ಕಲಿಯುವುದಕ್ಕೋ ಕರೆದುಕೊಂಡು ಹೋಗುವಾಗ ಹೆತ್ತವರ ಮುಖಲ್ಲಿ ಕಾಣುವ ಸ್ಟ್ರೆಸ್ ಇದೆಯಲ್ಲ ಅದನ್ನು ನೋಡುತ್ತಲೇ ನಮ್ಮ ಅಳ್ಳೆಗಳು ನಡುಗತೊಡಗುತ್ತವೆ. ಇದು ಕಾಣದೂರಿನಲ್ಲಿ ನಮ್ಮ ಭವಿಷ್ಯ! ಒಂದೊಂದು ಸಾರಿ ಇಂತಾ ಜೀವನ ಬೇಕಾ ಅನ್ನಿಸತೊಡಗುತ್ತದೆ. ಆದರೆ ಯಾವುದಲ್ಲದಿದ್ದರೂ ಹಡೆದ ತಪ್ಪಿಗಾದರೂ ಬದುಕಬೇಕಲ್ಲ!
ಹಾರುವುದೆಂದರೆ…
ನಾನು ಚಿಕ್ಕವನಿದ್ದಾಗ ನನ್ನನ್ನು ಬೆಳಸಲು ನನ್ನಮ್ಮ ನಿಜವಾಗಿಯೂ ಕಷ್ಟಪಟ್ಟಿದ್ದಾಳೆ ಅಂತ ಅಮಾಯಕವಾಗಿ ಅಂದುಕೊಂಡಿದ್ದೆ. ನನಗೆ ಮಕ್ಕಳು ಹುಟ್ಟುವವರೆಗೂ ಇದೊಂದು ಮೂಢನಂಬಿಕೆಯೇ ಆಗಿತ್ತು. ನಾವು ಏನೂ ಉಣ್ಣದಿದ್ದರೆ ಎರಡೇಟು, ಮಧ್ಯಾಹ್ನ ಒಣಗಿಹೋದ ರೊಟ್ಟಿಯನ್ನು ತಿಂದುಬರದಿದ್ದರೆ ನಾಲ್ಕು ಬಿಗಿತ. ಆಟವಾಡಲು ಬೀದಿಯಲ್ಲಿ ಅಕ್ಕಪಕ್ಕದ ಮಕ್ಕಳೊಂದಿಗೆ ಬೆಳಿಗ್ಗೆ ಆಚೆ ಹೋದರೆ ಕೂಳು ತಿನ್ನುವುದಕ್ಕೆ ಹೊರತುಪಡಿಸಿ ನಾವು ಮನೆಕಡೆ ತಲೆ ಕೂಡ ಹಾಕುತ್ತಿರಲಿಲ್ಲ. ಇನ್ನೇನು ಕಷ್ಟಪಡುವುದು ಮಣ್ಣು? ಇನ್ನು ಇಲ್ಲಿ, ಬೀದಿಯಲ್ಲಿ ಆಟವಾಡಲು ಮಕ್ಕಳು ಸಿಗುವುದಿಲ್ಲ. ಇಡೀದಿನ ಮನೆಯಲ್ಲೇ ಕೂರಿಸಿ ಆಡಿಸಬೇಕು. ಒಳ್ಳೆಯ ಆಟದ ಮೈದಾನಗಳಿವೆಯಾದರೂ ಎಷ್ಟು ಹೊತ್ತು ಅಂತ ಕರೆದುಕೊಂಡು ಹೋಗಲು ಸಾಧ್ಯ? ಮಕ್ಕಳು ಒಂದೋ ಟಿವಿ ನೋಡಬೇಕು ಇಲ್ಲವೇ ಆಟವಾಡಬೇಕು. ತಪ್ಪಿದಲ್ಲಿ ಸತತವಾಗಿ ಮೈಮೇಲೆ ಎರಗುವುದಲ್ಲದೆ ನಾಲ್ಕು ಗೋಡೆಗಳ ಮಧ್ಯೆ ತಲೆಕೆಟ್ಟಂತಾಗಿ ಹಿಂಸೆಯಲ್ಲೂ ತೊಡಗುತ್ತವೆ.
ಎಂಥ ಆಟವಾದರೂ ಕಾಲುಗಂಟೆಯಲ್ಲಿ ಬೋರು ಹೊಡೆದುಕೊಳ್ಳುವ ಮಕ್ಕಳಿಗೆ ಮತ್ತೊಂದು ಆಟದಲ್ಲಿ ತೊಡಗಿಸುವಂತೆ ಮಾಡಲು ಅದೆಂತಹ ಶಕ್ತಿಶಾಲಿ ಸೃಜನಶೀಲತೆ ಬೇಕು! ಮೂರು ಹೊತ್ತು ತಿನ್ನಲು ನಾಲ್ಕೈದು ಆಯ್ಕೆಗಳನ್ನು ಎದುರಿಗಿಡಬೇಕು. ತಿನ್ನಲು ಹಟ ಮಾಡುವ ಮಕ್ಕಳನ್ನು ಹೊಡೆದರೆ ಜೈಲು! ಶಾಲೆಯಲ್ಲಿ ಬೇರಾವುದಾದರೂ ಮಕ್ಕಳಿಗೆ ಶೇಂಗಾ, ಮೊಟ್ಟೆ ಹಾಲುಗಳ ಅಲರ್ಜಿ ಇದ್ದರೆ ಇವುಗಳಿಂದ ಮಾಡಿದ ತಿನಿಸನ್ನು ಊಟದ ಡಬ್ಬಿಗೆ ಕಟ್ಟುವಂತಿಲ್ಲ. ಇದರ ಮೇಲೆ ‘ಇಸ್ಕಿ ಮಾ ಕೀ ಆಂಖ್’ ಇಲ್ಲಿನ ಕೆಲ ಮಕ್ಕಳಿಗೆ ಗೋಧಿಯ ಅಲರ್ಜಿಯೂ ಇರುತ್ತದೆ. ಆವಾಗ ಚಪಾತಿಯನ್ನೂ ಕಟ್ಟುವಂತಿಲ್ಲ. ಇಷ್ಟೆಲ್ಲ ಯೋಚನೆ ಮಾಡುವ ಅವಶ್ಯಕತೆ ನಮ್ಮ ತಾಯ್ತಂದೆಯರಿಗೆ ಇತ್ತಾ? ಅನ್ನ ಹಾಲು ಮೊಸರು ಮೇಲೆ ಅರ್ಧ ಚಮಚ ಕಡಲೆಪುಡಿ ಇಟ್ಟರೆ ಆಗಿ ಹೋಯ್ತು. ಅದು ಬೇಡ ಅಂತ ಹಠ ಮಾಡಿದರೆ ಹದವಾಗಿ ಕುಂಡೆಯ ಮೇಲೆ ಒದೆಗಳು ಬೀಳುತ್ತಿದ್ದವು!
ಇದನ್ನೂ ಓದಿ: ಕಮಲ ಅಪ್ಪನಿಗೆ ಬಸವ ಅಮ್ಮನಿಗೆ ಯಾಕೆ ಸಹಾಯ ಮಾಡಬಾರದು?
ಗಂಡ ಅಂತಾದ ಮೇಲೆ ಪರಂಪರಾಗತವಾಗಿ ಬಂದ Misogynyಯ ಬೆಂಬಲ ಪಡೆದು ಹೆಂಡತಿಯ ಮೇಲೆ ದಬ್ಬಾಳಿಕೆ ಮಾಡಿ ಏನೋ ಒಂದಷ್ಟು ಗಿಟ್ಟಿಸಿಕೊಳ್ಳಬಹುದು. ಅಪ್ಪ ಅಂತಾದ ಮೇಲೆ ಅದು ಮೈಗಂಟಿದ ಚರ್ಮದಂತಹಾ ಕರ್ಮ ಫಲ. ಪ್ರತಿದಿನ ಈ ಫಲವನ್ನು ಕಂತುಕಂತಾಗಿ ಸವಿಯಲೇಬೇಕು! ಅಜೀರ್ಣವಾದಾಗ ಗೆಳೆಯರ ಬಳಿ ಗೋಳಾಡಿಕೊಂಡೋ ಈ ರೀತಿಯ ಲೇಖನ ಬರೆದೋ ಅರಗಿಸಿಕೊಳ್ಳಬೇಕು.