ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹಿಂಸಾಚಾರ ಇದುವರೆಗೆ 32 ಮಂದಿ ಸಾವು, ಸರ್ಕಾರಿ ಸುದ್ದಿವಾಹಿನಿಗೆ ಬೆಂಕಿ
ನಾಗರಿಕ ಸೇವಾ ನೇಮಕಾತಿ ನಿಯಮಗಳ ಸುಧಾರಣೆಗೆ ಒತ್ತಾಯಿಸಿ ನೂರಾರು ಪ್ರತಿಭಟನಾಕಾರರು ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪ್ರಸ್ತುತ ಇರುವ ಮೀಸಲಾತಿ ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಲಾಗಿದೆ, ಸರ್ಕಾರಿ ಸುದ್ದಿ ವಾಹಿನಿಯ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಲಾಗಿದೆ.
ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಹಿಂಸಾಚಾರ ಮುಂದುವರೆದಿದೆ. ಈ ಹಿಂಸಾಚಾರದಲ್ಲಿ ಇದುವರೆಗೆ 32 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿಭಟನಾಕಾರರು ಢಾಕಾದಲ್ಲಿನ ರಾಜ್ಯ ಸರ್ಕಾರ ಸುದ್ದಿವಾಹಿನಿಯ ಪ್ರಧಾನ ಕಚೇರಿಗೆ ಬೆಂಕಿ ಹಚ್ಚಿದ್ದಾರೆ, ಪ್ರಧಾನ ಕಚೇರಿಯಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳನ್ನು ಸಹ ನಾಶಪಡಿಸಿದ್ದಾರೆ.
ಒಂದು ದಿನ ಮೊದಲು ಸರ್ಕಾರಿ ಟಿವಿ ಕಚೇರಿಯಲ್ಲಿ ಪ್ರಧಾನಿ ಶೇಖ್ ಹಸೀನಾ ಅವರ ಸಂದರ್ಶನ ನಡೆದಿತ್ತು. ಬಾಂಗ್ಲಾದೇಶದ ಪ್ರತಿಭಟನಾಕಾರರು ಮೀಸಲಾತಿಯನ್ನು ಕೊನೆಗೊಳಿಸಬೇಕೆಂಬ ತಮ್ಮ ಬೇಡಿಕೆಗೆ ಅಚಲರಾಗಿದ್ದಾರೆ. ಹಿಂಸಾಚಾರದ ಹಿನ್ನೆಲೆಯಲ್ಲಿ ದೇಶದ ಎಲ್ಲಾ ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚುವಂತೆ ಶೇಖ್ ಹಸೀನಾ ಸರ್ಕಾರ ಆದೇಶಿಸಿದೆ. ಅಲ್ಲದೆ ಪರಿಸ್ಥಿತಿ ನಿಯಂತ್ರಿಸಲು ಬಿಗಿ ಬಂದೋಬಸ್ತ್ ಮಾಡುವಂತೆ ಸೂಚನೆ ನೀಡಲಾಗಿದೆ.
ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯದ ನಂತರ ಮೀಸಲಾತಿ ವ್ಯವಸ್ಥೆ ಜಾರಿಯಲ್ಲಿದೆ. ಇದರ ಅಡಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮಕ್ಕಳಿಗೆ ಶೇ.30, ದೇಶದ ಹಿಂದುಳಿದ ಜಿಲ್ಲೆಗಳ ಯುವಕರಿಗೆ ಶೇ.10, ಮಹಿಳೆಯರಿಗೆ ಶೇ.10, ಅಲ್ಪಸಂಖ್ಯಾತರಿಗೆ ಶೇ.5 ಮತ್ತು ಅಂಗವಿಕಲರಿಗೆ ಶೇ.1ರಷ್ಟು ಮೀಸಲಾತಿ ಕಲ್ಪಿಸಲಾಗಿತ್ತು.
ಮತ್ತಷ್ಟು ಓದಿ: ಕನ್ನಡಿಗರಿಗೆ ಉದ್ಯೋಗ ಮೀಸಲಾತಿ: ಆತಂಕ ಬೇಡ, ಉದ್ಯಮಿಗಳಿಗೆ ಕರ್ನಾಟಕ ಸರ್ಕಾರ ಅಭಯ
ಹೀಗಾಗಿ, ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ 56 ಪ್ರತಿಶತ ಮೀಸಲಾತಿ ಇತ್ತು. 2018 ರಲ್ಲಿ, ಬಾಂಗ್ಲಾದೇಶದ ಯುವಕರು ಈ ಮೀಸಲಾತಿಯನ್ನು ವಿರೋಧಿಸಿದರು. ಹಲವಾರು ತಿಂಗಳುಗಳ ಪ್ರತಿಭಟನೆಯ ನಂತರ, ಬಾಂಗ್ಲಾದೇಶ ಸರ್ಕಾರವು ಮೀಸಲಾತಿಯ ಅಂತ್ಯವನ್ನು ಘೋಷಿಸಿತು.
ಕಳೆದ ತಿಂಗಳು, ಜೂನ್ 5 ರಂದು, ಬಾಂಗ್ಲಾದೇಶದ ಸರ್ವೋಚ್ಚ ನ್ಯಾಯಾಲಯವು ದೇಶದಲ್ಲಿ ಹಳೆಯ ಮೀಸಲಾತಿ ವ್ಯವಸ್ಥೆಯನ್ನು ಮರು ಜಾರಿಗೊಳಿಸಲು ಆದೇಶಿಸಿತು. ಶೇಖ್ ಹಸೀನಾ ಸರ್ಕಾರವೂ ಸುಪ್ರೀಂ ಕೋರ್ಟ್‌ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿತು, ಆದರೆ ಸುಪ್ರೀಂ ಕೋರ್ಟ್ ಆದೇಶವನ್ನು ಎತ್ತಿಹಿಡಿಯಿತು.
ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದರು. ಬಾಂಗ್ಲಾದೇಶದ ವಿಶ್ವವಿದ್ಯಾಲಯಗಳಿಂದ ಆರಂಭವಾದ ಈ ಪ್ರತಿಭಟನೆ ಈಗ ಹಿಂಸಾಚಾರಕ್ಕೆ ತಿರುಗಿದೆ. ಸಂದರ್ಶನದಲ್ಲಿ ಪ್ರಧಾನಿ ಶೇಖ್ ಹಸೀನಾ ಅವರು ಕಾನೂನು ಮತ್ತು ಸುವ್ಯವಸ್ಥೆಯನ್ನು ಅನುಸರಿಸಲು ಜನರಿಗೆ ಮನವಿ ಮಾಡಿದರು ಮತ್ತು ಪ್ರತಿಭಟನಾಕಾರರ ಸಾವಿನ ಬಗ್ಗೆ ದುಃಖ ವ್ಯಕ್ತಪಡಿಸಿದರು.
ಬಾಂಗ್ಲಾದೇಶದ ರಾಜಧಾನಿ ಢಾಕಾ ಸೇರಿದಂತೆ ದೇಶದ ಹಲವು ನಗರಗಳನ್ನು ಹಿಂಸಾಚಾರ ಆವರಿಸಿದೆ. ಮೀಸಲಾತಿಯಿಂದಾಗಿ ಬಾಂಗ್ಲಾದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರ ಹೆಚ್ಚಿನ ಮಕ್ಕಳು ನಾಗರಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಭಟನಾಕಾರರು ಹೇಳುತ್ತಾರೆ. ಈ ವರ್ಗವನ್ನು ಸಾಮಾನ್ಯವಾಗಿ ಶೇಖ್ ಹಸೀನಾ ಸರ್ಕಾರದ ಬೆಂಬಲಿಗರು ಎಂದು ಪರಿಗಣಿಸಲಾಗುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ