ಬಾಂಗ್ಲಾದೇಶದಲ್ಲಿ ನಿಲ್ಲದ ಹಿಂಸಾಚಾರ; ಕರ್ಫ್ಯೂ, ಕಂಡಲ್ಲಿ ಗುಂಡು ಹೊಡೆಯಲು ಆದೇಶ
Bangladesh violence: 1971ರ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ಕೊಡುವ ಸರ್ಕಾರದ ಕ್ರಮದ ವಿರುದ್ಧ ಭುಗಿಲೆದ್ದ ಪ್ರತಿಭಟನೆಗಳು ಈಗ ಹಿಂಸಾಚಾರಕ್ಕೆ ತಿರುಗಿವೆ. ಪರಿಸ್ಥಿತಿ ನಿಯಂತ್ರಣಕ್ಕೆ ಬರದ ಹಿನ್ನೆಲೆಯಲ್ಲಿ ದೇಶವ್ಯಾಪಿ ಕರ್ಫ್ಯೂ ಘೋಷಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಗಳಿಗೆ ಉದ್ಯೋಗ ಮೀಸಲಾತಿ ಕೊಡುವ ಕ್ರಮದ ಬಗ್ಗೆ ಬಾಂಗ್ಲಾ ನ್ಯಾಯಾಲಯ ಇಂದು ತೀರ್ಪು ನೀಡುತ್ತಿದೆ.
ಢಾಕಾ, ಜುಲೈ 21: ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ ಸದಸ್ಯರಿಗೆ ಮೀಸಲಾತಿ ಕೊಡುವ ಸಂಬಂಧ ಉದ್ಭವಿಸಿದ ಹಿಂಸಾಚಾರ ವಾರಗಳೇ ಆದರೂ ಕಡಿಮೆ ಆಗಿಲ್ಲ. ಇದೀಗ ಬಾಂಗ್ಲಾದೇಶದಲ್ಲಿ ರಾಷ್ಟ್ರವ್ಯಾಪಿ ಕಟ್ಟುನಿಟ್ಟಿನ ನಿಷೇಧಾಜ್ಞೆ (ಕರ್ಫ್ಯೂ) ಜಾರಿ ಮಾಡಲಾಗಿದೆ. ಗಲಭೆ ಮಾಡುವವರ ವಿರುದ್ಧ ಶೂಟ್ ಅಟ್ ಸೈಟ್ (ಕಂಡಲ್ಲಿ ಗುಂಡು ಹೊಡೆಯುವ) ಆದೇಶ ನೀಡಲಾಗಿದೆ. ದೇಶದ ವಿವಿಧೆಡೆ ಸೈನಿಕರನ್ನು ನಿಯೋಜಿಸಿ ಭದ್ರತೆ ಬಿಗಿಗೊಳಿಸಲಾಗಿದೆ. ಇಂದು ಇಲ್ಲಿನ ಸರ್ವೋಚ್ಚ ನ್ಯಾಯಾಲಯ ಈ ಮೀಸಲಾತಿ ಪ್ರಕರಣದಲ್ಲಿ ತೀರ್ಪು ನೀಡಲಿದ್ದು, ಇನ್ನಷ್ಟು ಹೆಚ್ಚಿನ ಜಾಗ್ರತೆ ವಹಿಸಿ ಭದ್ರತೆ ಬಿಗಿಗೊಳಿಸಲಾಗಿದೆ.
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಮತ್ತು ಗಲಭೆಗಳಿಂದ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಈವರೆಗೆ 133 ಜನರು ಬಲಿಯಾಗಿರುವುದು ತಿಳಿದುಬಂದಿದೆ. ಯೂನಿವರ್ಸಿಟಿ ವಿದ್ಯಾರ್ಥಿಗಳಿಂದ ಶುರುವಾದ ಪ್ರತಿಭಟನೆ ಬಳಿಕ ಹಿಂಸಾಚಾರಕ್ಕೆ ತಿರುಗಿತು. ಪೊಲೀಸರ ವಿರುದ್ದ ಹಿಂಸಾಚಾರ ಮೊದಲುಗೊಂಡಿತಾದರೂ ಮೀಸಲಾತಿ ಸಮರ್ಥಕರೂ ಕೂಡ ಸಂಘರ್ಷದಲ್ಲಿ ಸೇರಿಕೊಂಡಿದ್ದಾರೆ. ಇದರೊಂದಿಗೆ ಬಾಂಗ್ಲಾದಲ್ಲಿ ಸಿವಿಲ್ ವಾರ್ ರೀತಿಯ ಸ್ಥಿತಿ ನಿರ್ಮಾಣವಾಗಿದೆ.
ಹಿಂಸಾಚಾರ ನಿಯಂತ್ರಿಸಲು ಮೂರು ದಿನಗಳ ಹಿಂದೆ ಬಾಂಗ್ಲಾದೇಶದಾದ್ಯಂತ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಲಾಗಿತ್ತು. ನಿನ್ನೆ ಶನಿವಾರ ಜನರು ಅಗತ್ಯ ವಸ್ತುಗಳನ್ನು ಖರೀದಿಸಲು ಅನುವಾಗುವಂತೆ ಒಂದಷ್ಟು ಕಾಲ ಕರ್ಫ್ಯೂ ತೆರವುಗೊಳಿಸಲಾಗಿತ್ತು. ಈಗ ಅನಿರ್ದಾವಧಿಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಬಾಂಗ್ಲಾದೇಶದಿಂದ 1,000 ಭಾರತೀಯ ವಿದ್ಯಾರ್ಥಿಗಳು ವಾಪಸ್
ಇದೇ ವೇಳೆ, ಬಾಂಗ್ಲಾದೇಶದಲ್ಲಿ ಸಿಲುಕಿದ್ದ ಒಂದು ಸಾವಿರದಷ್ಟು ಭಾರತೀಯ ವಿದ್ಯಾರ್ಥಿಗಳನ್ನು ವಿಮಾನ, ಬಸ್ ಇತ್ಯಾದಿ ವಾಹನಗಳ ಮೂಲಕ ವಾಪಸ್ ತರಲಾಗಿದೆ. ಅಮೆರಿಕ ಸೇರಿದಂತೆ ಕೆಲ ದೇಶಗಳು ತಮ್ಮ ನಾಗರಿಕರಿಗೆ ಬಾಂಗ್ಲಾದೇಶಕ್ಕೆ ಪ್ರಯಾಣ ಮಾಡದಂತೆ ಎಚ್ಚರಿಸಿದೆ. ರಾಜತಾಂತ್ರಿಕ ಸಿಬ್ಬಂದಿ ಮತ್ತವರ ಕುಟುಂಬದವರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆ.
ಬಾಂಗ್ಲಾದೇಶದಲ್ಲಿ ಯಾಕೆ ಈ ಹಿಂಸಾಚಾರ?
1971ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ಪ್ರತ್ಯೇಕ ದೇಶವಾಗಿತ್ತು. ಆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ ವ್ಯಕ್ತಿಗಳ ಸಂಬಂಧಿಕರಿಗೆ ಬಾಂಗ್ಲಾ ಸರ್ಕಾರಿ ಉದ್ಯೋಗದಲ್ಲಿ ಶೇ. 30ರಷ್ಟು ಮೀಸಲಾತಿ ಕಲ್ಪಿಸಲಾಗಿದೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ತೀವ್ರ; ಜೈಲಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು, ನೂರಾರು ಕೈದಿಗಳ ಬಿಡುಗಡೆ
17 ಕೋಟಿ ಜನಸಂಖ್ಯೆಯಲ್ಲಿ ಮೂರು ಕೋಟಿಗೂ ಹೆಚ್ಚು ಬಾಂಗ್ಲಾ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಈ ರೀತಿ ಮೀಸಲಾತಿ ಕೊಡುವುದನ್ನು ಹಲವರು ವಿರೋಧಿಸುತ್ತಿದ್ದಾರೆ. ಈ ಪ್ರತಿಭಟನೆಯೇ ಈಗ ಹಿಂಸಾಚಾರಕ್ಕೆ ಎಡೆ ಮಾಡಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ