ಫೇಸ್​ಬುಕ್-ಆ್ಯಪಲ್ ನಡುವೆ ಹಗ್ಗಜಗ್ಗಾಟಕ್ಕೆ ಏನೆಲ್ಲಾ ಆಯಾಮ: ಕಾಳಜಿಯೋ? ಹುನ್ನಾರವೋ?

ಅಮೆರಿಕಾದ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಫೇಸ್​ಬುಕ್, ‘ಆ್ಯಪಲ್​ ಆಪರೇಟಿಂಗ್ ಸಿಸ್ಟಂನ ಹೊಸ ಅಪ್​ಡೇಟ್​ಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಹೊರೆಯಾಗಲಿದೆ’ ಎಂದು  ವ್ಯಾಖ್ಯಾನಿಸಿದೆ.

ಫೇಸ್​ಬುಕ್-ಆ್ಯಪಲ್ ನಡುವೆ ಹಗ್ಗಜಗ್ಗಾಟಕ್ಕೆ ಏನೆಲ್ಲಾ ಆಯಾಮ: ಕಾಳಜಿಯೋ? ಹುನ್ನಾರವೋ?
ಆ್ಯಪಲ್ ಮತ್ತು ಫೇಸ್​ಬುಕ್ (ಪ್ರಾತಿನಿಧಿಕ ಚಿತ್ರ)
Follow us
guruganesh bhat
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 18, 2020 | 8:53 PM

ವಾಷಿಂಗ್​ಟನ್: ಜಾಗತಿಕ ಟೆಕ್ ದಿಗ್ಗಜ ಕಂಪನಿಗಳಾದ ಫೇಸ್​ಬುಕ್ ಮತ್ತು ಆ್ಯಪಲ್​ ನಡುವಣ ಹಗ್ಗಜಗ್ಗಾಟ ಸದ್ಯಕ್ಕೆ ನಿಲ್ಲುವಂತಿಲ್ಲ. ಬಳಕೆದಾರರ ದತ್ತಾಂಶ ಉಪಯೋಗಿಸುವ ಕುರಿತು ಎರಡೂ ಕಂಪನಿಗಳು ಕೆಸರೆರೆಚಾಟದಲ್ಲಿ ನಿರತವಾಗಿವೆ. ಅಮೆರಿಕಾದ ಪ್ರಮುಖ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಿರುವ ಫೇಸ್​ಬುಕ್, ‘ಆ್ಯಪಲ್​ ಆಪರೇಟಿಂಗ್ ಸಿಸ್ಟಂನ ಹೊಸ ಅಪ್​ಡೇಟ್​ಗಳು ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ ಹೊರೆಯಾಗಲಿದೆ’ ಎಂದು  ವ್ಯಾಖ್ಯಾನಿಸಿದೆ.

ಆ್ಯಪಲ್​ ಐಒಎಸ್-14 ಕಾರ್ಯಾಚರಣೆ ವ್ಯವಸ್ಥೆಗೆ (IOS-14 Operating System) ಹೊಸ ಅಪ್​ಡೇಟ್​ಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಅಪ್​ಡೇಟ್​ನಲ್ಲಿ ಟ್ರ್ಯಾಕಿಂಗ್​ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದಾಗಿ ಆ್ಯಪಲ್ ಘೋಷಿಸಿದೆ. ಆ್ಯಪಲ್​ನ ಈ ಕ್ರಮ ಇದೀಗ ಫೇಸ್​ಬುಕ್​ನ ಕೆಂಗಣ್ಣಿಗೆ ಗುರಿಯಾಗಿದೆ.

ಫೇಸ್​ಬುಕ್​ನ ವಾದವೇನು? ಕಿರು ಉದ್ದಿಮೆದಾರರು ಮತ್ತು ಗ್ರಾಹಕರ ನಡುವಣ ಬೆಸುಗೆಗೆ ಆ್ಯಪಲ್​ನ ಹೊಸ ನಿಯಮಗಳಿಂದ ತೊಂದರೆಯಾಗಲಿದೆ. ನಿರ್ದಿಷ್ಟ ಗುಂಪಿನ ಜನರಿಗೆ ತಮ್ಮ ಉತ್ಪನ್ನಗಳ ಬಗ್ಗೆ ಜಾಹೀರಾತು ತಲುಪಿಸಲು ವ್ಯಾಪಾರಿಗಳಿಗೆ ಕಷ್ಟವಾಗುತ್ತದೆ ಎಂದು ಫೇಸ್​ಬುಕ್ ಅಭಿಪ್ರಾಯಪಟ್ಟಿದೆ. ತನ್ನ ಬಳಕೆದಾರರ ಮೇಲೆ ಆ್ಯಪಲ್​ ಈ ನಿಯಮಗಳನ್ನು ಬಲವಂತವಾಗಿ ಜಾರಿಗೊಳಿಸುತ್ತಿದೆ. ಆ್ಯಪಲ್​ನ ಈ ಕ್ರಮವು ಮುಕ್ತ ಅಂತರ್ಜಾಲ ಪರಿಕಲ್ಪನೆಯ ಆಶಯಗಳನ್ನು ಉಲ್ಲಂಘಿಸುತ್ತದೆ ಎಂದು ಫೇಸ್​ಬುಕ್ ವಿಶ್ಲೇಷಿಸಿದೆ.

ಆ್ಯಪಲ್​ನ ವಾದವೇನು?

ಐಒಎಸ್​-14ಕ್ಕೆ ಬಿಡುಗಡೆ ಮಾಡುತ್ತಿರುವ ಅಪ್​ಡೇಟ್​ಗಳನ್ನು ಆ್ಯಪಲ್ ಸಮರ್ಥಿಸಿಕೊಂಡಿದೆ. ತಾವು ಬಳಸುತ್ತಿರುವ ಉಪಕರಣಗಳಿಂದ ಎಂಥ ದತ್ತಾಂಶಗಳನ್ನು ಯಾರೆಲ್ಲಾ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಬಳಕೆದಾರರಿಗೆ ಇರಬೇಕು. ತಮ್ಮ ದತ್ತಾಂಶಗಳು ಅಂತರ್ಜಾಲದಲ್ಲಿ ನಿರ್ದಿಷ್ಟ ಸಂಸ್ಥೆಗಳಿಗೆ ನೀಡುವ ಅಥವಾ ಬಿಡುವ ಆಯ್ಕೆ ಬಳಕೆದಾರರಿಗೆ ಇರಬೇಕು. ಆ್ಯಪ್​ಸ್ಟೋರ್​ಗೆ ಬರುವ ಆ್ಯಪ್​ಗಳು ಇಂಥ ಆಯ್ಕೆಯನ್ನು ಬಳಕೆದಾರರಿಗೆ ಒದಗಿಸಬೇಕು ಎಂಬ ಸ್ಪಷ್ಟ ನಿಲುವನ್ನು ಆ್ಯಪಲ್ ತಳೆದಿದೆ.

ಇದನ್ನೂ ಓದಿ: ಬಜರಂಗ ದಳಕ್ಕೆ ನಿರ್ಬಂಧ ಹೇರುವ ಅಗತ್ಯವಿಲ್ಲ; ಸಂಸದೀಯ ಸಮಿತಿಗೆ ಫೇಸ್​ಬುಕ್​ ವಿವರಣೆ

ಅಮೆರಿಕದ ಪ್ರಮುಖ ದಿನಪತ್ರಿಕೆಗಳಲ್ಲಿ ಫೇಸ್​ಬುಕ್ ನೀಡಿರುವ ಜಾಹಿರಾತು

ಕಾಳಜಿಯೋ? ಹುನ್ನಾರವೋ?

ಆ್ಯಪಲ್​ ತನ್ನ ಆಪರೇಟಿಂಗ್ ಸಿಸ್ಟಂನಿಂದ ದತ್ತಾಂಶ ಸೋರಿಕೆಗೆ ತಡೆಯೊಡ್ಡುವ ಮಾತನಾಡಿದ ನಂತರ ಫೇಸ್​ಬುಕ್ ಕಿರು ಉದ್ದಿಮೆಗಳ ಪರವಾಗಿ ಮಾತನಾಡಲು ಶುರು ಮಾಡಿದೆ. ಸಣ್ಣ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅವರ ಸಂಸ್ಥೆಗಳ ಜಾಹೀರಾತನ್ನು ನಿರ್ದಿಷ್ಟ ಗುಂಪಿಗೆ (ಟಾರ್ಗೆಟ್ ಆಡಿಯನ್ಸ್) ತಲುಪಿಸಲು ಆ್ಯಪಲ್​ನ ನಿಯಮದಿಂದ ಅಡಚಣೆಯಾಗುತ್ತದೆ ಎಂದು ವಾದ ಮಾಡುತ್ತಿದೆ.

ಕೆಲ ಜಾಲತಾಣಗಳಲ್ಲಿ ಪ್ರಕಟವಾಗಿರುವ ತಜ್ಞರ ವಿಶ್ಲೇಷಣೆಗಳ ಪ್ರಕಾರ ಈ ನಿಲುವಿನ ಹಿಂದೆ ಫೇಸ್​ಬುಕ್​ನ ಸ್ವಯಂ ಹಿತಾಸಕ್ತಿಯೂ ಇದೆ. ಕಿರು ಉದ್ದಿಮೆಗಳ ಜಾಹೀರಾತು ಪ್ರಸಾರದಿಂದ (ಬೂಸ್ಟಿಂಗ್) ಫೇಸ್​ಬುಕ್​​ಗೆ ಹಣ ಪಾವತಿಯಾಗುತ್ತದೆ. ಟಾರ್ಗೆಟ್ ಆಡಿಯನ್ಸ್​ ಗುರುತಿಸಲು ಫೇಸ್​ಬುಕ್ ಬಳಕೆದಾರರ ಮಾಹಿತಿಯನ್ನು ತನ್ನ ಸೂತ್ರಗಳ (ಆಲ್ಗರಿದಂ) ಮೂಲಕ ವಿಶ್ಲೇಷಿಸುತ್ತದೆ. ಆ್ಯಪಲ್​ ಉಪಕರಣಗಳ​ ಬಳಕೆದಾರರಿಂದ ಎಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂಬ ವಿವರಗಳನ್ನು ಫೇಸ್​ಬುಕ್ ಈವರೆಗೂ ಬಿಟ್ಟುಕೊಟ್ಟಿಲ್ಲ.

ಈಗಿನಂತೆಯೇ ಮುಂದೆಯೂ ಕಿರು ಉದ್ದಿಮೆಗಳಿಗೆ ನೆರವಾಗುವ ನೀತಿಗಳನ್ನೇ ನಾವು ಹೊಂದಿರುತ್ತೇವೆ ಎಂದು ಫೇಸ್​ಬುಕ್ ತಿಳಿಸಿದೆ. ತನ್ನ ಆದಾಯದ ಒಟ್ಟು ಶೇ 98ರಷ್ಟು ಭಾಗವನ್ನು ಟಾರ್ಗೆಟ್ ಆಡಿಯೆನ್ಸ್​ಗೆ ಜಾಹೀರಾತು ತಲುಪಿಸುವುದರಿಂದಲೇ ಪಡೆಯುವ ಫೇಸ್​ಬುಕ್, ಇದಕ್ಕೆ ಪ್ರತಿಯಾಗಿ ವಿವಿಧ ಸೇವೆಗಳನ್ನು ಉಚಿತವಾಗಿ ಒದಗಿಸುವ ಬಗ್ಗೆ ಪ್ರಸ್ತಾಪಿಸುತ್ತಿದೆ.

ಆದರೆ ಆ್ಯಪಲ್ ಕಂಪನಿ ಮಾತ್ರ ತನ್ನ ಬಳಕೆದಾರರಿಗೆ ಫೇಸ್​ಬುಕ್​ನಿಂದ ಸಿಗಬಹುದಾದ ಉಳಿದೆಲ್ಲಾ ಅನುಕೂಲಗಳಿಗಿಂತ ಬಳಕೆದಾರರ ದತ್ತಾಂಶ ಸೋರಿಕೆ ತಡೆಯುವುದೇ ಆದ್ಯತೆ ಎಂಬ ನಿಲುವು ತಳೆದಿದೆ. ‘ತಮ್ಮ ಬಗ್ಗೆ ಏನೆಲ್ಲಾ ಮಾಹಿತಿ ಸಂಗ್ರಹಿಸಲಾಗುತ್ತಿದೆ ಮತ್ತು ಅದನ್ನು ಹೇಗೆಲ್ಲಾ ಬಳಸಲಾಗುತ್ತದೆ ಎಂದು ತಿಳಿಯುವ ಹಕ್ಕು ಬಳಕೆದಾರರಿಗೆ ಇದೆ. ಫೇಸ್​ಬುಕ್​ ಇನ್ನು ಮುಂದೆಯೂ ಆ್ಯಪ್​ಗಳಲ್ಲಿ, ವೆಬ್​ಸೈಟ್​ಗಳಲ್ಲಿ ತನಗೆ ಬೇಕಾದ ಮಾಹಿತಿ ಸಂಗ್ರಹಿಸಬಹುದು. ಆದರೆ ಬಳಕೆದಾರರ ಅನುಮತಿಯನ್ನು ಐಒಎಸ್ 14 ಕಡ್ಡಾಯಗೊಳಿಸುತ್ತದೆ’ ಎಂದು ಆ್ಯಪಲ್ ಕಂಪನಿಯ ಸಿಇಒ ಟಿಮ್​ಕುಕ್ ಟ್ವೀಟ್ ಮಾಡಿದ್ದಾರೆ.

ಫೇಸ್​ಬುಕ್​ ವಿರುದ್ಧ ಅಮೆರಿಕ​ ಸರ್ಕಾರದಿಂದ ಮೊಕದ್ದಮೆ; ಪ್ರತಿಸ್ಪರ್ಧಿಗಳನ್ನು ಹತ್ತಿಕ್ಕುತ್ತಿದೆ ಎಂಬ ಆರೋಪ

Published On - 8:51 pm, Fri, 18 December 20