ಐ ಎಮ್ ಎಫ್ ಒತ್ತಡಕ್ಕೆ ಮಣಿದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್ ಗೆ ತಲಾ ರೂ. 30 ಹೆಚ್ಚಿಸಿದ ಪಾಕ್ ಸರ್ಕಾರ!
ತೈಲದ ಮೇಲಿನ ಸಬ್ಸಿಡಿಯನ್ನು ಕೊನೆಗಾಣಿಸದ ಹೊರತು ಯಾವುದೇ ರೀತಿಯ ನಿರಾಳತೆ ಒದಗಿಸಲು ಐ ಎಮ್ ಎಫ್ ನಿರಾಕರಿಸಿದ್ದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಹೊರೆಯನ್ನು ಸಾರ್ವಜನಿಕರ ಮೇಲೆ ಹಾಕದೆ ವಿಧಿಯಿಲ್ಲ ಎಂದು ಇಸ್ಮಾಯಿಲ್ ಹೇಳಿದರು.
Islamabad: ಪಾಕಿಸ್ತಾನದ ಪದಚ್ಯುತ ಪ್ರಧಾನ ಮಂತ್ರಿ ಇಮ್ರಾನ್ ಖಾನ್ (Imran Khan) ಭಾರತವನ್ನು, ನಮ್ಮ ಇಕಾನಮಿಯನ್ನು ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು (PM Narendra Modi) ಹೊಗಳುತ್ತಿರುವುದು ಯಾಕೆ ಅಂತ ಗೊತ್ತಾಗುತ್ತಿದೆ. ಮಾಜಿ ಕ್ರಿಕೆಟರ್ ನಿಂದ ಭಾರತಕ್ಕೆ ಪ್ರಶಂಸೆಯ ಅಗತ್ಯವಿಲ್ಲ, ಅದು ಬೇರೆ ವಿಷಯ. ಅದರೆ ಪಾಕಿಸ್ತಾನದ ಪ್ರಸಕ್ತ ಸ್ಥಿತಿಯನ್ನು ಅವರಿಗಿಂತ ಚೆನ್ನಾಗಿ ಯಾರು ಬಲ್ಲರು? ಭಾರತದಲ್ಲಿ ಮೊನ್ನೆ ಕೇಂದ್ರ ಸರ್ಕಾರವು ಪೆಟ್ರೋಲಿಯಂ ಪದಾರ್ಥಗಳ ಮೇಲೆ ಅಬ್ಕಾರಿ ಶುಲ್ಕ ಕಡಿತಗೊಳಿಸಿದ್ದರಿಂದ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಹತ್ತತ್ತು ರೂ. ಗಳ ಇಳಿಕೆಯಾಯಿತು. ಆದರೆ ಪಾಕಿಸ್ತಾನದಲ್ಲಿ ಏನಾಗಿದೆ ಗೊತ್ತಾ? ಗುರುವಾರ ಮಧ್ಯರಾತ್ರಿಯಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 30 ರೂ. ಏರಿಕೆ ಮಾಡಿ ಪಾಕಿಸ್ತಾನ ಸರ್ಕಾರ (Pakistan government) ಪ್ರಕಟಣೆ ಹೊರಡಿಸಿದೆ!
ಈ ಹೆಚ್ಚಳದ ನಂತರ ಆ ದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ. 179.85, ಡೀಸೆಲ್ ರೂ 174. 15/ಲೀ., ಸೀಮೆ ಎಣ್ಣೆ (ಕೆರೊಸೀನ್) ರೂ. 155.95/ಲೀ., ಮತ್ತು ಲೈಟ್ ಡೀಸೆಲ್ ರೂ. 148.41/ಲೀ. ಆಗಿದೆ.
ತೀವ್ರ ಸ್ವರೂಪದ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಪಾಕಿಸ್ತಾನವನ್ನು ಸದ್ಯದ ಸ್ಥಿತಿಯಿಂದ ಪಾರು ಮಾಡಲು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ (ಇಂಟರ್ ನ್ಯಾಶನಲ್ ಮಾನಿಟರಿ ಫಂಡ್) ಜೊತೆ ಕತಾರ್ ನಲ್ಲಿ ನಡೆದ ಮಾತುಕತೆ ವಿಫಲಗೊಂಡ ಮತ್ತು 6 ಬಿಲಿಯನ್ ಡಾಲರ್ ಮೊತ್ತದ ಯೋಜನೆಯೊಂದಕ್ಕೆ ಸಂಬಂಧಿಸಿದಂತೆ ಐಎಮ್ ಎಫ್ ಸ್ಟಾಫ್-ಹಂತದ ಒಪ್ಪಂದ ಕೊನೆಗೊಂಡ ಒಂದು ದಿನದ ನಂತರ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಇಸ್ಮಾಮಾಬಾದ್ ನಲ್ಲಿ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಇಂಧನದ ಬೆಲೆ ಹೆಚ್ಚಿಸುವ ಘೋಷಣೆ ಮಾಡಿದರು.
‘ಪರಿಷ್ಕೃತ ಬೆಲೆಗಳು ಗುರುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ,’ ಎಂದು ಇಸ್ಮಾಯಿಲ್ ಘೋಷಿಸಿದರು.
ಸಾಲ ಮಂಜೂರಾತಿ ಘೋಷಣೆ ಮಾಡಿರುವ ಐಎಮ್ಎಫ್, ಪೆಟ್ರೋಲಿಯಂ ಪದಾರ್ಥಗಳು ಮತ್ತು ಇಂಧನ ಸಬ್ಸಡಿಗಳನ್ನು ರದ್ದು ಮಾಡುವುದರ ಜೊತೆಗೆ ತುರ್ತು ಕಾರ್ಯಸಾಧು ಕ್ರಿಯಾ ಯೋಜನೆಗಳಿಗೆ ಒತ್ತು ನೀಡಬೇಕೆಂದು ಹೇಳಿದೆ.
ತೈಲದ ಮೇಲಿನ ಸಬ್ಸಿಡಿಯನ್ನು ಕೊನೆಗಾಣಿಸದ ಹೊರತು ಯಾವುದೇ ರೀತಿಯ ನಿರಾಳತೆ ಒದಗಿಸಲು ಐ ಎಮ್ ಎಫ್ ನಿರಾಕರಿಸಿದ್ದರಿಂದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯ ಹೊರೆಯನ್ನು ಸಾರ್ವಜನಿಕರ ಮೇಲೆ ಹಾಕದೆ ವಿಧಿಯಿಲ್ಲ ಎಂದು ಇಸ್ಮಾಯಿಲ್ ಹೇಳಿದರು.
ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸುವ ಒಪ್ಪಂದವನ್ನು ಐ ಎಮ್ ಎಫ್ ಜೊತೆ ಮಾಡಿಕೊಂಡಿದ್ದರೂ ಫೆಬ್ರವರಿಯಲ್ಲಿ ಇಮ್ರಾನ್ ಖಾನ್ ನೇತೃತ್ವದ ಹಿಂದಿನ ಸರ್ಕಾರ ಜೂನ್ ವರೆಗೆ ಅವುಗಳ ಬೆಲೆ ಹೆಚ್ಚಿಸದಿರುವ ನಿರ್ಣಯ ತೆಗೆದುಕೊಂಡಿತ್ತು. ಏಪ್ರಿಲ್ ನಲ್ಲಿ ಅವರ ಸರ್ಕಾರ ಪದಚ್ಯುತಗೊಂಡ ಬಳಿಕ ಅಧಿಕಾರಕ್ಕೆ ಬಂದ ಹೊಸ ಸರ್ಕಾರಕ್ಕೆ ಐ ಎಮ್ ಎಫ್ ನ ನೆರವು ಬೇಕಿತ್ತು ಆದರೆ ಪೆಟ್ರೋಲಿಯಂ ಪದಾರ್ಥಗಳ ಬೆಲೆ ಹೆಚ್ಚಿಸುವ ಬಗ್ಗೆ ಗೊಂದಲದಲ್ಲಿತ್ತು.
ಆದರೆ ಬೆಲೆ ಹೆಚ್ಚಿಸದ ಹೊರತು ನೆರವು ಸಿಗಲಾರದು ಅಂತ ಐ ಎಮ್ ಎಫ್ ನ ಅಂತಿಮ ನಿರಾಕರಣೆಯ ನಂತರ ಜನರಲ್ಲಿ ತೀವ್ರ ಸ್ವರೂಪದ ಆಕ್ರೋಶ ಹುಟ್ಟಿಸಲಿರುವ ನಿರ್ಧಾರ ತೆಗೆದುಕೊಳ್ಳುವುದು ಶಹಭಾಜ್ ಷರೀಫ್ ಸರ್ಕಾರಕ್ಕೆ ಅನಿವಾರ್ಯವಾಗಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.