Carbis Bay Declaration: ಭವಿಷ್ಯದಲ್ಲಿ ಕಾಡಬಹುದಾದ ಸಾಂಕ್ರಾಮಿಕ ರೋಗಗಳ ವಿರುದ್ಧ ಜಿ7 ನಾಯಕರ ಅಸ್ತ್ರ ಸಿದ್ಧತೆ; ಮಹತ್ವಾಕಾಂಕ್ಷಿ ಘೋಷಣೆಗೆ ಸಹಿ

ಜಿ7 ರಾಷ್ಟ್ರಗಳ ಕಾರ್ಬಿಸ್​ ಬೇ ಡಿಕ್ಲೇರೇಶನ್​ನಡಿ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಜೂನೋಟಿಕ್​ ಕಾಯಿಲೆಗಳ ನಿಯಂತ್ರಣಕ್ಕಾಗಿ ಲಸಿಕೆ ಅಭಿವೃದ್ಧಿಪಡಿಸಲು ಯುಕೆ ಒಂದು ಹೊಸ ಕೇಂದ್ರವನ್ನು ಸ್ಥಾಪಿಸಲಿದೆ.

Carbis Bay Declaration: ಭವಿಷ್ಯದಲ್ಲಿ ಕಾಡಬಹುದಾದ ಸಾಂಕ್ರಾಮಿಕ ರೋಗಗಳ ವಿರುದ್ಧ ಜಿ7 ನಾಯಕರ ಅಸ್ತ್ರ ಸಿದ್ಧತೆ; ಮಹತ್ವಾಕಾಂಕ್ಷಿ ಘೋಷಣೆಗೆ ಸಹಿ
ಜಿ7 ನಾಯಕರು
Follow us
TV9 Web
| Updated By: Lakshmi Hegde

Updated on: Jun 12, 2021 | 6:29 PM

ಜಗತ್ತಿನ ಏಳು ಶ್ರೀಮಂತರಾಷ್ಟ್ರಗಳು ಅಂದರೆ ಜಿ7 (G7) ನಾಯಕರು ಮಹತ್ವದ ನಿರ್ಧಾರವನ್ನೊಂದನ್ನು ಕೈಗೊಂಡಿದ್ದಾರೆ. ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಗುರಿಯೊಂದಿಗೆ, ಪ್ರಮುಖ ಜಾಗತಿಕ ಆರೋಗ್ಯ ಘೋಷಣೆಯಾದ ಕಾರ್ಬಿಸ್​ ಬೇ ಡಿಕ್ಲೇರೇಶನ್​​ಗೆ ಸಹಿ ಹಾಕಲಿದ್ದಾರೆ. ಈ ಘೋಷಣೆಯ ಅನ್ವಯ, ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಎದುರಾದರೂ ಅದರ ನಿಯಂತ್ರಣಕ್ಕಾಗಿ ತಮ್ಮಲ್ಲಿನ ಸಂಪನ್ಮೂಲಗಳನ್ನು ಬಳಸಲು ಜಿ7 ನಾಯಕರು ಬದ್ಧರಾಗಿರುತ್ತಾರೆ ಎಂದು ಯುಕೆ ಸರ್ಕಾರ ತಿಳಿಸಿದೆ.

ಕೊರೊನಾ ಸೋಂಕು ಜಗತ್ತಿನಾದ್ಯಂತ 3.7 ಮಿಲಿಯನ್​ ಜನರ ಪ್ರಾಣ ಬಲಿಪಡೆದಿದೆ ಎಂದು ಜಾನ್​ ಹಾಪ್​​ಕಿನ್ಸ್​ ಯೂನಿವರ್ಸಿಟಿ ವರದಿ ನೀಡಿದೆ. ಇನ್ನು ಬಹುತೇಕ ಎಲ್ಲ ದೇಶಗಳ ಆರ್ಥಿಕ ಪರಿಸ್ಥಿತಿಯನ್ನು ನಾಶಮಾಡಿದೆ. ಇನ್ನೂ ಈ ಸೋಂಕಿನ ತೀವ್ರತೆ ಕಡಿಮೆಯಾಗಿಲ್ಲ. ಈ ಹೊತ್ತಲ್ಲಿ ಜಿ7 ನಾಯಕರ ಘೋಷಣೆ ತುಂಬ ಮುಖ್ಯವೆನಿಸಿದೆ. ಇನ್ನು ಕಾರ್ಬಿಸ್​ ಬೇ ಡಿಕ್ಲೇರೇಶನ್​ ಬಗ್ಗೆ ಮಾತನಾಡಿದ ಬ್ರಿಟಿಷ್​ ಪ್ರಧಾನಮಂತ್ರಿ ಬೋರಿಸ್​ ಜಾನ್ಸನ್​, ಕೊರೊನಾ ವಿರುದ್ಧ ಹೋರಾಡಲು ಇಡೀ ಜಗತ್ತು ಒಗ್ಗಟ್ಟಾಗಿ ನಿಂತಿದೆ. ಊಹೆಗೂ ಮೀರಿದ ವೇಗದಲ್ಲಿ ಕೊವಿಡ್​ 19 ಲಸಿಕೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಆದರೆ ಮುಂದೆ ಯಾವತ್ತೂ ಇಂಥದ್ದೊಂದು ಸಾಂಕ್ರಾಮಿಕ ರೋಗ ಬಾರದಂತೆ ತಡೆಯುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಕಳೆದ 18ತಿಂಗಳಲ್ಲಿ ನಾವು ಕಲಿತಿದ್ದು ಸಾಕಷ್ಟಿದೆ. ಮುಂದೆ ಇಂಥ ಪರಿಸ್ಥಿತಿ ಎದುರಾಗಲು ಬಿಡುವುದಿಲ್ಲ ಎಂಬ ಘೋಷಣೆಯೊಂದಿಗೆ ಇಂದು ವಿಶ್ವದ ಪ್ರಭಾವಿ ಪ್ರಜಾಪ್ರಭುತ್ವ ರಾಷ್ಟ್ರಗಳೆಲ್ಲ ಸೇರಿ ಒಟ್ಟಾಗಿದ್ದರ ಬಗ್ಗೆ ತುಂಬ ಖುಷಿಯಾಗುತ್ತಿದೆ ಎಂದು ಬೋರಿಸ್​ ತಿಳಿಸಿದ್ದಾರೆ. ಅಮೆರಿಕ, ಯುಕೆ, ಜರ್ಮನಿ, ಫ್ರಾನ್ಸ್​​, ಕೆನಡಾ, ಇಟಲಿ ಮತ್ತು ಜಪಾನ್​ ದೇಶಗಳನ್ನು ಈ ಜಿ7 ಒಳಗೊಂಡಿದ್ದು, 2021ರ ಜಿ7 ಶೃಂಗಸಭೆಯ ಅಧ್ಯಕ್ಷತೆ ಬ್ರಿಟನ್​​ದ್ದಾಗಿದೆ. ಈ ಬಾರಿ ಶೃಂಗಸಭೆಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಅತಿಥಿ ರಾಷ್ಟ್ರಗಳಾಗಿ ಆಹ್ವಾನ ನೀಡಿತ್ತು.

100ದಿನಗಳ ಮಿಷನ್​ ಜಿ7 ರಾಷ್ಟ್ರಗಳ ಕಾರ್ಬಿಸ್​ ಬೇ ಡಿಕ್ಲೇರೇಶನ್​ನಡಿ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಜೂನೋಟಿಕ್​ ಕಾಯಿಲೆಗಳ ನಿಯಂತ್ರಣಕ್ಕಾಗಿ ಲಸಿಕೆ ಅಭಿವೃದ್ಧಿಪಡಿಸಲು ಯುಕೆ ಒಂದು ಹೊಸ ಕೇಂದ್ರವನ್ನು ಸ್ಥಾಪಿಸಲಿದೆ. ಯುಕೆ ಸರ್ಕಾರದ ಮುಖ್ಯ ವೈಜ್ಞಾನಿಕ ಸಲಹೆಗಾರ ಸರ್​ ಪ್ಯಾಟ್ರಿಕ್​ ವ್ಯಾಲಾನ್ಸ್​ ಮತ್ತು ಅಮೆರಿಕದ ಪ್ರಮುಖ ದಾನಿಗಳಲ್ಲೊಬ್ಬರಾದ ಮೆಲಿಂದಾ ಫ್ರೆಂಚ್​ ಗೇಟ್ಸ್​​ ಅವರು ಜಿ7 ರಾಷ್ಟ್ರಗಳು ಮತ್ತು ಅದರ ಅತಿಥಿ ರಾಷ್ಟ್ರಗಳೆದುರು, ರೋಗನಿರ್ಣಯ, ಚಿಕಿತ್ಸೆ ಮತ್ತು ಲಸಿಕೆ ಅಭಿವೃದ್ಧಿಗಾಗಿ 100 ದಿನಗಳ ಮಿಷನ್​ ಪ್ರಸ್ತಾಪವನ್ನಿಟ್ಟಿದ್ದಾರೆ. ಅಂದರೆ ಯಾವುದೇ ಸಾಂಕ್ರಾಮಿಕ ರೋಗ ಶುರುವಾದರೂ ಕೇವಲ 100 ದಿನಗಳಲ್ಲಿ ಅದರ ನಿಯಂತ್ರಣ ಆಗುವಷ್ಟು ವೇಗದಲ್ಲಿ ಕೆಲಸ ಆಗಬೇಕು ಎಂಬುದು ಇದರ ಉದ್ದೇಶ. ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಭವಿಷ್ಯದಲ್ಲಿ ಅಸಂಖ್ಯಾತ ಜನರ ಜೀವ ಉಳಿಸಲಿದೆ ಎಂದು ವ್ಯಾಲಾನ್ಸ್​ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲೇ ಪತ್ತೆಯಾಯ್ತು ಅಕ್ರಮ ಕೊವಿಡ್ ಕೇರ್ ಸೆಂಟರ್! ದಾಳಿ ನಡೆಸಿದ ಅಧಿಕಾರಿಗಳು

(G7 leaders to sign Carbis Bay Declaration to prevent pandemic in future)