Gotabaya Rajapaksa Profile: ಆಗ ಹೀರೊ ಈಗ ವಿಲನ್; ಶ್ರೀಲಂಕಾ ಬಿಕ್ಕಟ್ಟಿನ ಖಳನಾಯಕ ಗೊಟಬಯ ರಾಜಪಕ್ಸ
ಶ್ರೀಲಂಕಾ ರಾಜಕೀಯದ ಇತಿಹಾಸದಲ್ಲಿ ರಾಜಪಕ್ಸ ಕುಟುಂಬ ಹಲವು ದಶಕಗಳಿಂದ ದೇಶದ ರಾಜಕಾರಣದಲ್ಲಿ ಹಿಡಿತ ಸಾಧಿಸಿತ್ತು. ಆದರೆ, ಇದೀಗ ರಾಜಪಕ್ಸ ಕುಟುಂಬದ ಯಾರನ್ನೇ ಕಂಡರೂ ಶ್ರೀಲಂಕನ್ನರು ಉರಿದುಬೀಳುತ್ತಿದ್ದಾರೆ.

ಕುಟುಂಬ ರಾಜಕಾರಣದಿಂದ ದೇಶ ಯಾವ ಮಟ್ಟಿಗೆ ದಿವಾಳಿಯಾಗಬಹುದು ಎಂಬುದಕ್ಕೆ ಶ್ರೀಲಂಕಾ ಅತ್ಯುತ್ತಮ ಉದಾಹರಣೆಯಂತಿದೆ. 2.19 ಕೋಟಿ ಜನರಿರುವ ಶ್ರೀಲಂಕಾದಲ್ಲಿ ರಾಜಪಕ್ಸ (Rajapaksa Family) ಕುಟುಂಬದ ರಾಜಕಾರಣದಿಂದ ಜನರ ಪಾಲಿನ ಹೀರೋ ಆಗಿದ್ದವರು ಇದೀಗ ಕದ್ದುಮುಚ್ಚಿ ದೇಶ ಬಿಟ್ಟು ಪರಾರಿಯಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ಶ್ರೀಲಂಕಾದಲ್ಲಿ ಉಂಟಾದ ರಾಜಕೀಯ, ಆರ್ಥಿಕ ಬಿಕ್ಕಟ್ಟಿನ ಬಳಿಕ ಅನಿವಾರ್ಯವಾಗಿ ಅಧಿಕಾರದಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಎದುರಾಗಿದೆ. ಇದೀಗ ಗೊಟಬಯ ರಾಜಪಕ್ಸ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದಾರೆ.
ಶ್ರೀಲಂಕಾ ರಾಜಕೀಯದ ಇತಿಹಾಸದಲ್ಲಿ ರಾಜಪಕ್ಸ ಕುಟುಂಬ ಹಲವು ದಶಕಗಳಿಂದ ದೇಶದ ರಾಜಕಾರಣದಲ್ಲಿ ಹಿಡಿತ ಸಾಧಿಸಿತ್ತು. ಗೊಟಬಯ ರಾಜಪಕ್ಸ 1971ರಲ್ಲಿ ಶ್ರೀಲಂಕಾ ಸೇನೆ ಸೇರಿ 1971-1991ರ ತನಕ ಸೇವೆ ಸಲ್ಲಿಸಿದ್ದರು. ಬಳಿಕ ಅವರು ರಾಜಕೀಯಕ್ಕೆ ಸೇರಿದರು. ಅದಾದ ನಂತರ ಈ ಕುಟುಂಬ ಶ್ರೀಲಂಕಾದ ರಾಜಕಾರಣದಲ್ಲಿ ತನ್ನ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡಿತು. ರಾಜಪಕ್ಸ ಕುಟುಂಬಸ್ಥರು ಅಧ್ಯಕ್ಷ, ಪ್ರಧಾನಿ, ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಪಡೆದರು. 1936ರಿಂದ ಇಲ್ಲಿಯವರೆಗೆ ರಾಜಪಕ್ಸ ಕುಟುಂಬದ 14 ಜನರು ಸರ್ಕಾರದ ಮಹತ್ವದ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಈಗಿನ ಪ್ರಧಾನಿ ಮಹೀಂದಾ ರಾಜಪಕ್ಸ 2005-2015ರವರೆಗೆ ಶ್ರೀಲಂಕಾದ ಅಧ್ಯಕ್ಷರಾಗಿದ್ದರು.
ಜನರ ಪಾಲಿನ ಹೀರೋ ಆಗಿದ್ದ ಗೊಟಬಯ ರಾಜಪಕ್ಸ: ಎಲ್‌ಟಿಟಿಎ ಜತೆಗಿನ 30 ವರ್ಷಗಳ ಜನಾಂಗೀಯ ಸಂಘರ್ಷಕ್ಕೆ ಅಂತ್ಯ ಹಾಡಿದ ಮಹೀಂದಾ ರಾಜಪಕ್ಸ ಮತ್ತು ಗೊಟಬಯ ರಾಜಪಕ್ಸ ಶ್ರೀಲಂಕಾ ರಾಜಕಾರಣದ ಇತಿಹಾಸದಲ್ಲಿ ಬಹಳ ಮುಖ್ಯ ಸ್ಥಾನ ಪಡೆದಿದ್ದಾರೆ. ಇದೇ ಕಾರಣದಿಂದ ಗೊಟಬಯ ರಾಜಪಕ್ಸ ಸಿಂಹಳೀಯ ಬೌದ್ಧರ ಯುದ್ಧದ ಹೀರೋ ಆಗಿ ಹೊರ ಹೊಮ್ಮಿದರು. ಕ್ರಮೇಣ ಅವರ ಸರ್ಕಾರ ತೆಗೆದುಕೊಂಡ ಅನೇಕ ತಪ್ಪು ನಿರ್ಧಾರಗಳಿಂದ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾದವು. ಅದರ ಪರಿಣಾಮವಾಗಿ ರಾಜಪಕ್ಸ ಕುಟುಂಬದ ಹೆಸರು ಕೇಳಿದರೆ ಶ್ರೀಲಂಕನ್ನರು ಉರಿದುಬೀಳುತ್ತಿದ್ದಾರೆ.
ಇದನ್ನೂ ಓದಿ: Sri Lanka Crisis: ಶ್ರೀಲಂಕಾ ಅಧ್ಯಕ್ಷರ ಮನೆಗೆ ಪ್ರತಿಭಟನಾಕಾರರ ಮುತ್ತಿಗೆ; ಅಧಿಕೃತ ನಿವಾಸದಿಂದ ಗೊಟಬಯ ರಾಜಪಕ್ಸ ಪರಾರಿ
ಗೊಟಬಯ ರಾಜಪಕ್ಸ ತಮ್ಮ ಪತ್ನಿ ಮತ್ತು ಇಬ್ಬರು ಅಂಗರಕ್ಷಕರೊಂದಿಗೆ ಇಂದು ಮುಂಜಾನೆ ಶ್ರೀಲಂಕಾದ ವಾಯುಪಡೆಯ ವಿಮಾನದ ಮೂಲಕ ದೇಶವನ್ನು ತೊರೆದಿದ್ದಾರೆ. ಅವರು ಮಾಲ್ಡೀವ್ಸ್‌ನ ರಾಜಧಾನಿ ಮಾಲೆಗೆ ತೆರಳಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ. ಶನಿವಾರ ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗಿದ ನಂತರ ಸಂಸತ್ತಿನ ಸ್ಪೀಕರ್ ರಾಜೀನಾಮೆ ನೀಡುವುದಾಗಿ ರಾಜಪಕ್ಸ ಅವರಿಗೆ ತಿಳಿಸಿರುವುದಾಗಿ ಇಂದು ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗೊಟಬಯ ರಾಜಪಕ್ಸ ಶ್ರೀಲಂಕಾದ ಸ್ವಾತಂತ್ರ್ಯದ ನಂತರದ ಇತಿಹಾಸದಲ್ಲಿ ಶ್ರೀಲಂಕಾದ ಅತ್ಯಂತ ಶಕ್ತಿಶಾಲಿ ರಾಜಕೀಯ ಕುಟುಂಬಗಳ ಭಾಗವಾಗಿದ್ದರು. ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿಯಾಗಿ ಸುಮಾರು 20 ವರ್ಷಗಳ ಕಾಲ ಶ್ರೀಲಂಕಾದ ರಾಜಕೀಯದಲ್ಲಿ ಪ್ರಾಬಲ್ಯ ಸಾಧಿಸಿದ ಗೊಟಬಯ ಅವರ ಅಣ್ಣ ಮಹಿಂದಾ ರಾಜಪಕ್ಸ ಕೂಡ ಈಗ ತಲೆಮರೆಸಿಕೊಂಡಿದ್ದಾರೆ.
ಅಣ್ಣನಂತೆ ರಾಜಕೀಯ ಸೇರಲು ಇಚ್ಛಿಸದ ಗೊಟಬಯ ರಾಜಪಕ್ಸ ಆರಂಭದಲ್ಲಿ ತಮ್ಮ 21ನೇ ವಯಸ್ಸಿನಲ್ಲಿ ಶ್ರೀಲಂಕಾ ಸೇನೆಗೆ ಸೇರಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ಲೆಫ್ಟಿನೆಂಟ್ ಕರ್ನಲ್ ಹುದ್ದೆಗೆ ಏರಿದರು. ಆದರೆ, ಬಳಿಕ ಸ್ವಯಂ ನಿವೃತ್ತಿಯನ್ನು ತೆಗೆದುಕೊಂಡ ಅವರು ಅಮೆರಿಕಾಗೆ ವಲಸೆ ಹೋದರು. ಅಲ್ಲಿ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡಿದರು.
2005ರಲ್ಲಿ ಮಹಿಂದಾ ರಾಜಪಕ್ಸ ಶ್ರೀಲಂಕಾದ ಅಧ್ಯಕ್ಷರಾದಾಗ ರಕ್ಷಣಾ ಕಾರ್ಯದರ್ಶಿಯಾಗಿ ಗೊಟಬಯ ರಾಜಪಕ್ಸ ರಾಜಕೀಯಕ್ಕೆ ಪ್ರವೇಶಿಸಿದರು. ಅವರು ಸ್ವತಂತ್ರ ರಾಜ್ಯಕ್ಕಾಗಿ ಹೋರಾಡುತ್ತಿದ್ದ ಗೆರಿಲ್ಲಾ ಗುಂಪಿನ ಲಿಬರೇಶನ್ ಟೈಗರ್ಸ್ ಆಫ್ ತಮಿಳ್ ಈಳಂ (LTTE) ವಿರುದ್ಧದ ಯುದ್ಧದ ಉಸ್ತುವಾರಿ ವಹಿಸಿದರು. 26 ವರ್ಷಗಳ ಸಂಘರ್ಷದ ನಂತರ ಎಲ್ಟಿಟಿಇ ಅಂತಿಮವಾಗಿ 2009ರಲ್ಲಿ ಸೋಲನ್ನು ಒಪ್ಪಿಕೊಂಡರು. ಅಮೆರಿಕಾ ಅಂದಾಜು ಮಾಡಿದ ಪ್ರಕಾರ, ಈ ಯುದ್ಧದ ಕೊನೆಯ ಕೆಲವು ತಿಂಗಳುಗಳಲ್ಲಿ 40,000 ತಮಿಳು ನಾಗರಿಕರು ಕೊಲ್ಲಲ್ಪಟ್ಟರು. ನಂತರವೂ ಸಾವಿನ ಸಂಖ್ಯೆ ಏರಿಕೆಯಾಯಿತು.
ಇದಾದ ನಂತರ ಶ್ರೀಲಂಕಾದ ಬಹುಸಂಖ್ಯಾತ ಸಿಂಹಳೀಯ ಬೌದ್ಧರು ಗೊಟಬಯ ರಾಜಪಕ್ಸ ಅವರನ್ನು ಯುದ್ಧವೀರನಂತೆ ಕಂಡರೆ, ಇತರರು ಅವರನ್ನು ಹತ್ಯೆಗಳು, ಚಿತ್ರಹಿಂಸೆಯ ಹರಿಕಾರ ಎಂಬಂತೆ ಬಿಂಬಿಸಿ, ಸಾವಿರಾರು ಜನರ ಸಾವಿನ ಹೊಣೆಯನ್ನು ಅವರ ಹೆಗಲಿಗೆ ಕಟ್ಟಿದರು. ಆದರೆ, ಆ ಆರೋಪಗಳನ್ನು ಗೊಟಬಯ ನಿರಾಕರಿಸುತ್ತಲೇ ಬಂದರು. ಇದಾದ ಬಳಿಕ ಮಹೀಂದಾ ರಾಜಪಕ್ಸ ಬದಲಾಗಿ ಗೊಟಬಯ ಶ್ರೀಲಂಕಾ ರಾಜಕೀಯದಲ್ಲಿ ಗಟ್ಟಿಯಾಗಿ ನೆಲೆಯೂರಿದರು.
2019ರ ನವೆಂಬರ್ ಚುನಾವಣೆಯಲ್ಲಿ ಗೊಟಬಯ ರಾಜಪಕ್ಸ ಭಾರೀ ಅಂತರದಿಂದ ಗೆದ್ದರು. ಅವರು ಜನಾಂಗೀಯ ಮತ್ತು ಧಾರ್ಮಿಕ ಗುರುತನ್ನು ಲೆಕ್ಕಿಸದೆ ಎಲ್ಲಾ ಶ್ರೀಲಂಕಾದವರನ್ನು ಪ್ರತಿನಿಧಿಸುವುದಾಗಿ ತಮ್ಮ ದೇಶದ ಜನರಿಗೆ ಭರವಸೆ ನೀಡಿದರು. 2020ರ ಆಗಸ್ಟ್ನಲ್ಲಿ ಅವರ ಪಕ್ಷವು ಸಂಸತ್ತಿನಲ್ಲಿ ತನ್ನ ಬಹುಮತವನ್ನು ಮೂರನೇ ಎರಡರಷ್ಟು ಹೆಚ್ಚಿಸಿತು. ಎರಡು ಅವಧಿಯ ಮಿತಿಯನ್ನು ಒಳಗೊಂಡಂತೆ ಅಧ್ಯಕ್ಷೀಯ ಅಧಿಕಾರವನ್ನು ಸೀಮಿತಗೊಳಿಸುವ ಕಾನೂನುಗಳನ್ನು ರದ್ದುಗೊಳಿಸಲು ಅವಕಾಶ ಮಾಡಿಕೊಟ್ಟಿತು.
ಅವರು ಮಹಿಂದಾ ರಾಜಪಕ್ಸ ಅವರನ್ನು ಪ್ರಧಾನ ಮಂತ್ರಿಯಾಗಿ ಮತ್ತು ಇತರ ಸಂಬಂಧಿಕರನ್ನು ಮಂತ್ರಿ ಸ್ಥಾನಗಳಿಗೆ ಮರು ನೇಮಕ ಮಾಡಿದರು. ಆದರೆ, ಶ್ರೀಲಂಕಾದ ಆಡಳಿತದ ಮೇಲೆ ರಾಜಪಕ್ಸ ಕುಟುಂಬದ ಹಿಡಿತ ಹೆಚ್ಚು ಕಾಲ ಉಳಿಯಲಿಲ್ಲ.
ಸಾಂಕ್ರಾಮಿಕ ಮತ್ತು ಜನಪ್ರಿಯ ತೆರಿಗೆ ಕಡಿತದಿಂದ ತೀವ್ರವಾಗಿ ಸಂಕಷ್ಟಕ್ಕೀಡಾದ ಶ್ರೀಲಂಕಾ ತೀವ್ರ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತು. ಅಗತ್ಯ ವಸ್ತುಗಳ ಕೊರತೆ ಮತ್ತು ಅತಿರೇಕದ ಹಣದುಬ್ಬರವು ಈ ವರ್ಷ ಸಾವಿರಾರು ಜನರನ್ನು ಬೀದಿಗೆ ತಂದಿತು. ಮೇ 9ರಂದು ಅವರ ಬೆಂಬಲಿಗರ ಗುಂಪೊಂದು ಸರ್ಕಾರ ವಿರೋಧಿ ಪ್ರತಿಭಟನಾಕಾರರ ಮೇಲೆ ದಾಳಿ ಮಾಡಿದ ನಂತರ ಮಹಿಂದಾ ಅವರು ಪ್ರಧಾನ ಮಂತ್ರಿ ಸ್ಥಾನದಿಂದ ಕೆಳಗಿಳಿದರು. ಗೊಟಬಯ ರಾಜಪಕ್ಸ ತಮ್ಮ ಸರ್ಕಾರಿ ಬಂಗಲೆ ತೊರೆದು ತಲೆಮರೆಸಿಕೊಂಡಿದ್ದರು. ಇಂದು ಅವರು ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದಾರೆ. ಈ ಎಲ್ಲ ಗಲಾಟೆಗಳ ನಡುವೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ.
Published On - 12:29 pm, Wed, 13 July 22