Greenland Rain: ಇತಿಹಾಸದಲ್ಲೇ ಮೊದಲ ಬಾರಿಗೆ ಭರ್ಜರಿ ಮಳೆ; ಇಲ್ಲಿ ಮಳೆ ಸುರಿದದ್ದೇ ಜಾಗತಿಕ ಮಟ್ಟದಲ್ಲಿ ಚಿಂತೆಗೆ ಕಾರಣ
6,56,000 ಚದರ ಮೈಲಿಯಷ್ಟು ಮಂಜುಗಡ್ಡೆಯ ನೆಲವನ್ನು ಹೊಂದಿರುವ ಗ್ರೀನ್ಲ್ಯಾಂಡ್ನಲ್ಲಿ ಮಳೆ ಸುರಿದ ಒಂದೇ ದಿನ 3,37,000 ಚದರ ಮೈಲಿಯಷ್ಟು ಭಾಗದಲ್ಲಿ ಮಂಜು ಕರಗಿದೆ. ಬಿದ್ದ ಮಳೆಯ ತೂಕ 7 ಬಿಲಿಯನ್ ಟನ್.
ಹವಾಮಾನ ವೈಪರೀತ್ಯ ಅತ್ಯಂತ ತೀವ್ರತರದಲ್ಲಿ ಬದಲಾಗುತ್ತಿರುವುದು ಪದೇ ಪದೇ ಸಾಬಿತಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಗ್ರೀನ್ಲ್ಯಾಂಡ್ ದ್ವೀಪದ ಮಂಜುಗಡ್ಡೆಗಳ ಬಳಿ ಸುರಿದ ಭರ್ಜರಿ ಮಳೆ. ಆರ್ಕಿಟಿಕ್ ಮತ್ತು ಅಟ್ಲಾಂಟಿಕ್ ಸಮುದ್ರಗಳ ನಡುವಿನ ಜಗತ್ತಿನ ಅತ್ಯಂತ ದೊಡ್ಡ ದ್ವೀಪ ಗ್ರೀನ್ಲ್ಯಾಂಡ್ ಮುಕ್ಕಾಲು ಭಾಗ ಮಂಜುಗಡ್ಡೆಗಳಿಂದಲೇ ಆವೃತವಾಗಿದೆ. ಗ್ರೀನ್ಲ್ಯಾಂಡ್ ಇಂತಹದ್ದೊಂದು ಮಂಜುಗಡ್ಡೆಯ ಪ್ರದೇಶದಲ್ಲಿ ಕಳೆದ ಶನಿವಾರ ಭರ್ಜರಿ ಮಳೆ ಸುರಿದಿದೆ. ಈ ವಿದ್ಯಮಾನ ಜಗತ್ತಿನಾದ್ಯಂತ ಹಲವರ ತಲ್ಲಣಕ್ಕೆ ಕಾರಣವಾಗಿದೆ.
ಮಳೆ ಚೆನ್ನಾಗಿ ಸುರಿಯುವ ಪ್ರದೇಶದಲ್ಲಿ ಮಳೆ ಬೀಳದೇ ಇದ್ದರೆ ಹೇಗೆ ನಮಗೆ ಚಿಂತೆಯಾಗುತ್ತದೆಯೋ, ಅದೇ ರೀತಿ ಸಹಜವಾಗಿ ಮಳೆ ಸುರಿಯದೇ ಇರುವಲ್ಲಿ ಮಳೆ ಸುರಿದರೂ ಆತಂಕಪಡಬೇಕಿದೆ. ಇದೇ ಕಾರಣಕ್ಕೆ ಗ್ರೀನ್ಲ್ಯಾಂಡ್ ಸುರಿದ ಮಳೆ ಸದ್ಯದ ಚಿಂತೆಗೆ ಕಾರಣ. ಅಮೆರಿಕದ ರಾಷ್ಟ್ರೀಯ ಹಿಮ ಮತ್ತು ಮಂಜು ಅಧ್ಯಯನ ಕೇಂದ್ರದ ಪ್ರಕಾರ ಗ್ರೀನ್ಲ್ಯಾಂಡ್ ಮಂಜುಗಡ್ಡೆಗಳ ಮೇಲೆ ಸದ್ಯ ಸುರಿದಿರುವ ಮಳೆ 1950ರ ನಂತರದ ದಾಖಲೆ ಮಳೆ. ಮಳೆಯ ಪ್ರಭಾವ ಮಂಜುಗಡ್ಡೆಗಳ ಮೇಲೂ ಆಗಿದ್ದು ಸಹಜವಾಗಿ ಕರಗುವ ಮಂಜಿನ ಪ್ರಮಾಣಕ್ಕಿಂತ 7 ಪಟ್ಟು ಹೆಚ್ಚು ಕರಗಿದೆ.
6,56,000 ಚದರ ಮೈಲಿಯಷ್ಟು ಮಂಜುಗಡ್ಡೆಯ ನೆಲವನ್ನು ಹೊಂದಿರುವ ಗ್ರೀನ್ಲ್ಯಾಂಡ್ನಲ್ಲಿ ಮಳೆ ಸುರಿದ ಒಂದೇ ದಿನ 3,37,000 ಚದರ ಮೈಲಿಯಷ್ಟು ಭಾಗದಲ್ಲಿ ಮಂಜು ಕರಗಿದೆ. ಬಿದ್ದ ಮಳೆಯ ತೂಕ 7 ಬಿಲಿಯನ್ ಟನ್. 2019ರಲ್ಲಿ ಹವಾಮಾನ ವೈಪರೀತ್ಯದ ಕಾರಣಗಳಿಂದ ಗ್ರೀನ್ಲ್ಯಾಂಡ್ನ 532 ಬಿಲಿಯನ್ ಟನ್ ಮಂಜುಗಡ್ಡೆ ಕರಗಿ ಸಮುದ್ರ ಸೇರಿತ್ತು.ಅದೇ ವರ್ಷ ಜಾಗರಿಕವಾಗಿ ಸಮುದ್ರ ಮಟ್ಟ 1.5 ಮಿಲಿ ಮೀಟರ್ನಷ್ಟು ಏರಿಕೆಯಾಗಿತ್ತು. ಈಗ ಗ್ರೀನ್ಲ್ಯಾಂಡ್ನ ಮಂಜುಗಡ್ಡೆಗಳ ಬಳಿ ದಾಖಲೆ ಪ್ರಮಾಣದ ಮಳೆ ಸುರಿದಿರುವುದು ಸಹ ಹವಾಮಾನ ವೈಪರೀತ್ಯ ಇನ್ನೊಂದು ಮೆಟ್ಟಿಲು ಹತ್ತಿ ನಿಂತಿದೆ ಎಂಬುದಕ್ಕೆ ಉದಾಹರಣೆ ಎನ್ನುತ್ತಿದ್ದಾರೆ ಪರಿಸರ ಪರಿಣಿತರು.
ಇದನ್ನೂ ಓದಿ:
Panjshir: ತಾಲಿಬಾನ್ ಪಾಲಿಗೆ ಈವರೆಗೆ ಸವಾಲಾಗಿಯೇ ಉಳಿದಿರುವ ಅಫ್ಘಾನಿಸ್ತಾನದ ಪ್ರತಿರೋಧದ ಕಣಿವೆ ಪಂಜ್ಶೀರ್
(Greenland Rain first time in the history worries Climate Change)