ಅಮೆರಿಕದಲ್ಲಿ ಭಾರತೀಯರ ವಿರುದ್ಧ ಜನಾಂಗೀಯ ದಾಳಿಗೆ ಕಾರಣವೇನು?; ವಿವಾದ ಹುಟ್ಟಿದ್ದು ಹೇಗೆ?
ಅಮೆರಿಕದಲ್ಲಿ ಭಾರತೀಯರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅದರಲ್ಲೂ ಈ ಬಾರಿಯ ಅಧ್ಯಕ್ಷೀಯ ಚುನಾವಣೆಯ ಚುನಾಯಿತ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಎಐ ನೀತಿ ಸಲಹೆಗಾರರಾಗಿ ಭಾರತೀಯ ಮೂಲದ ಶ್ರೀರಾಮ್ ಕೃಷ್ಣನ್ ಅವರನ್ನು ನೇಮಿಸಿದ ನಂತರ ಜನಾಂಗೀಯ ನಿಂದನೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೆನಡಾದ ಸಂಗೀತಗಾರ್ತಿ ಮತ್ತು ಎಲಾನ್ ಮಸ್ಕ್ ಅವರ ಮಾಜಿ ಪ್ರೇಯಸಿ ಗ್ರಿಮ್ಸ್ ಕೂಡ ಅಮೆರಿಕಾದ ಸಾಮಾಜಿಕ ಮಾಧ್ಯಮದಲ್ಲಿ ಬೆಳೆಯುತ್ತಿರುವ ಭಾರತ-ವಿರೋಧಿ ಟೀಕೆಯನ್ನು ಖಂಡಿಸಿದ್ದಾರೆ. ತನ್ನ ಮಲತಂದೆಯೂ ಓರ್ವ ಭಾರತೀಯ ಎಂದು ಆಕೆ ಹೇಳಿದ್ದಾರೆ.
ವಾಷಿಂಗ್ಟನ್: ಅಮೆರಿಕದ ಶ್ವೇತಭವನದ AI ನೀತಿ ಸಲಹೆಗಾರರಾಗಿ ಭಾರತೀಯ-ಅಮೆರಿಕನ್ ಶ್ರೀರಾಮ್ ಕೃಷ್ಣನ್ ಅವರನ್ನು ನೇಮಿಸುವ ಕುರಿತು ಟ್ರಂಪ್‌ವರ್ಲ್ಡ್‌ನಲ್ಲಿ ಅವರ ‘ಟೆಕ್ ಕ್ಯಾಬಲ್’ ಮತ್ತು MAGA ನೇಟಿವಿಸ್ಟ್‌ಗಳ ನಡುವೆ ತೀವ್ರ ಚಕಮಕಿ ನಡೆದಿತ್ತು. ಟ್ರಂಪ್ ನಿಷ್ಠಾವಂತ ಲಾರಾ ಲೂಮರ್ ಮತ್ತು ಇತರರು ವಿದೇಶಿ ಪ್ರಭಾವದ ಬಗ್ಗೆ ಕಾಳಜಿಯನ್ನು ಉಲ್ಲೇಖಿಸಿ ಶ್ರೀರಾಮ್ ಕೃಷ್ಣನ್ ಅವರ ಆಯ್ಕೆಗೆ ವಿರೋಧಿಸಿದರು. ಆದರೆ ಎಲಾನ್ ಮಸ್ಕ್ ಮತ್ತು ಇತರ ಟೆಕ್ ನಾಯಕರು ಶ್ರೀರಾಮ್ ಕೃಷ್ಣನ್ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇದಾದ ನಂತರ ಅಮೆರಿಕದಲ್ಲಿ ಭಾರತೀಯರ ವಿರುದ್ಧ ಜನಾಂಗೀಯ ಹೇಳಿಕೆಗಳು, ಅಸಮಾಧಾನಗಳು ಹೆಚ್ಚಾಗಿವೆ.
ಭಾರತೀಯ-ಅಮೆರಿಕನ್ ಶ್ರೀರಾಮ್ ಕೃಷ್ಣನ್ ಅವರು ಕೃತಕ ಬುದ್ಧಿಮತ್ತೆಯ ಕುರಿತು ಶ್ವೇತಭವನದ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು MAGA ಮುಖ್ಯಸ್ಥ ಡೊನಾಲ್ಡ್ ಟ್ರಂಪ್ ಅವರು ಘೋಷಿಸಿರುವುದು ಹಲವು ಭಿನ್ನಾಭಿಪ್ರಾಯಗಳಿಗೆ ಪ್ರಚೋದನೆ ನೀಡಿತು.
ಟ್ರಂಪ್ ಅವರ ದೀರ್ಘಕಾಲದ ಸಹವರ್ತಿ ಎಲಾನ್ ಮಸ್ಕ್ ಶ್ರೀರಾಮ್ ಅವರ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯುಎಸ್ ತನ್ನ ಜಾಗತಿಕ ಪ್ರಾಮುಖ್ಯತೆಯನ್ನು ಕಾಪಾಡಿಕೊಳ್ಳಲು ವಿಶ್ವದಾದ್ಯಂತದ ಅತ್ಯುತ್ತಮ ವ್ಯಕ್ತಿಗಳನ್ನು ಆಕರ್ಷಿಸುವ ಅಗತ್ಯವಿದೆ ಎಂಬ ವಾದವನ್ನು ಅವರು ಮಂಡಿಸಿದರು. ಅಮೆರಿಕದಲ್ಲ್ಲಿರುವ ವಲಸಿಗರು ಅದರಲ್ಲೂ ಭಾರತೀಯ-ಅಮೆರಿಕನ್ನರು ಯುಎಸ್ ಆರ್ಥಿಕತೆಗೆ ಅಗಾಧವಾದ ಕೊಡುಗೆ ನೀಡಿದ್ದಾರೆ ಎಂಬ ಪ್ರತಿಪಾದನೆಯನ್ನು ಅವರು ಅನುಮೋದಿಸಿದರು.
ಇದನ್ನೂ ಓದಿ: ಭಾರತ ಮೂಲದ ವಿವೇಕ್ ರಾಮಸ್ವಾಮಿಗೆ ಅಮೆರಿಕ ಸರ್ಕಾರದಲ್ಲಿ ಮಹತ್ವದ ಹುದ್ದೆ ಕೊಟ್ಟ ಟ್ರಂಪ್
ಶ್ರೀರಾಮ್ ಕೃಷ್ಣನ್ ಮೈಕ್ರೋಸಾಫ್ಟ್, ಟ್ವಿಟ್ಟರ್, ಫೇಸ್‌ಬುಕ್, ಸ್ನ್ಯಾಪ್ ಮತ್ತು ಯಾಹೂ ಮುಂತಾದ ಉನ್ನತ ತಂತ್ರಜ್ಞಾನ ಸಂಸ್ಥೆಗಳಲ್ಲಿ ಸುದೀರ್ಘ ವೃತ್ತಿಜೀವನವನ್ನು ಹೊಂದಿದ್ದಾರೆ. ಶ್ರೀರಾಮ್ ಎಲಾನ್ ಮಸ್ಕ್ ಜೊತೆಗೂ ಹಲವು ವರ್ಷಗಳ ಬಾಂಧವ್ಯ ಹೊಂದಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ತಮ್ಮ 2.0 ಕ್ಯಾಬಿನೆಟ್‌ಗೆ ಐವರು ಭಾರತೀಯ-ಅಮೆರಿಕನ್ನರನ್ನು ನೇಮಿಸಿದ್ದಾರೆ. ಇದು ಅಮೆರಿಕದಲ್ಲಿ ಜನಾಂಗೀಯ ದಾಳಿ ಹೆಚ್ಚಾಗಲು ಮುಖ್ಯ ಕಾರಣ. ಟ್ರಂಪ್ ನೇಮಕ ಮಾಡಿದ ಭಾರತೀಯ ಮೂಲದ ಅಮೆರಿಕನ್ನರ ಪೈಕಿ ವಿವೇಕ್ ರಾಮಸ್ವಾಮಿ, ಕಾಶ್ ಪಟೇಲ್, ಹರ್ಮೀತ್ ಧಿಲ್ಲೋನ್, ಜೇ ಭಟ್ಟಾಚಾರ್ಯ, ಶ್ರೀರಾಮ ಕೃಷ್ಣನ್ ಸೇರಿದ್ದಾರೆ. ಅದರಲ್ಲೂ ಮುಖ್ಯವಾಗಿ ಎಐ ಸಲಹೆಗಾರರಾಗಿ ಶ್ರೀರಾಮ್ ಕೃಷ್ಣನ್ ಅವರ ನೇಮಕಾತಿ ಮತ್ತು ಗ್ರೀನ್ ಕಾರ್ಡ್ ಸಮಸ್ಯೆಯ ನಿಲುವು ಕೆಲವು ಬಲಪಂಥೀಯ ಕಾರ್ಯಕರ್ತರು, ಲಾರಾ ಲೂಮರ್ ಮತ್ತು ಇತರ ಸಾಮಾಜಿಕ ಮಾಧ್ಯಮದ ವ್ಯಕ್ತಿಗಳಂತಹ MAGA ಪರ ಬೆಂಬಲಿಗರಿಂದ ಟೀಕೆಗಳನ್ನು ಎದುರಿಸಿತು.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ಹಾಗೂ ಮಸ್ಕ್ರಿಂದ ಸಹಾಯ ಕೇಳಿದ್ದ ಉತ್ತರ ಪ್ರದೇಶ ಮೂಲದ ಟೆಕ್ಕಿ ಅತುಲ್ ಸುಭಾಷ್
ಶ್ರೀರಾಮ್ ಕೃಷ್ಣನ್ ಆಯ್ಕೆ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವುದನ್ನು ಹಾಗೂ ಅವರ ವಿರುದ್ಧ ಜನಾಂಗೀಯ ನಿಂದನೆ ನಡೆದಿರುವುದನ್ನು ಖಂಡಿಸಿರುವ ಎಲಾನ್ ಮಸ್ಕ್ ಮಾಜಿ ಪ್ರೇಯಸಿ ಗ್ರಿಮ್ಸ್, ನನ್ನ ಮಲತಂದೆಯ ಭಾರತೀಯ. ನಾನು ಹತ್ತಿರದಿಂದ ಭಾರತೀಯ ಸಂಸ್ಕೃತಿಯನ್ನು ನೋಡಿದ್ದೇನೆ. ಭಾರತೀಯನ ಜೊತೆಯೇ ಬಾಲ್ಯವನ್ನು ಕಳೆದಿದ್ದೇನೆ ಎಂದಿದ್ದಾರೆ. ಏಕಾಏಕಿ ಎಲ್ಲಿಲ್ಲದ ಭಾರತೀಯ ವಿರೋಧಿ ಶಕ್ತಿಯ ಬಗ್ಗೆ ಸಂಚು ಮಾಡುವುದು ಮುಜುಗರದ ಸಂಗತಿ ಎಂದು ಟೀಕಿಸಿದ್ದಾರೆ.
ಯುಎಸ್ ಅಧ್ಯಕ್ಷರಾಗಿ ಚುನಾಯಿತ ಡೊನಾಲ್ಡ್ ಟ್ರಂಪ್ ಅವರು ಶ್ರೀರಾಮ ಕೃಷ್ಣನ್ ಅವರನ್ನು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿಯ ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ನಾಮನಿರ್ದೇಶನ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಟ್ರಂಪ್, “ಶ್ರೀರಾಮ ಕೃಷ್ಣನ್ ಅವರು ವೈಟ್ ಹೌಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಾರೆ” ಎಂದು ಬರೆದಿದ್ದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ