ನವದೆಹಲಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಹಮಾಸ್ ನಾಯಕ ಮೊಹಮ್ಮದ್ ದಿಯಾಬ್ ಇಬ್ರಾಹಿಂ ಅಲ್-ಮಸ್ರಿ, ಇಸ್ರೇಲ್‌ನ ಮಾಜಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ಬಂಧಿಸಲು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ವಾರಂಟ್ ಹೊರಡಿಸಿದೆ. ಈ ನಿರ್ಧಾರವು ನೆತನ್ಯಾಹು ಮತ್ತು ಇತರರನ್ನು ಅಂತಾರಾಷ್ಟ್ರೀಯವಾಗಿ ಬೇಕಾಗಿರುವ ಆರೋಪಿಗಳನ್ನಾಗಿ ಪರಿವರ್ತಿಸುತ್ತದೆ. ಇದು 13 ತಿಂಗಳ ಸಂಘರ್ಷವನ್ನು ಕೊನೆಗೊಳಿಸಲು ಕದನ ವಿರಾಮದ ಮಾತುಕತೆಯ ಪ್ರಯತ್ನಗಳನ್ನು ಸಂಕೀರ್ಣಗೊಳಿಸುತ್ತದೆ. ಆದರೆ ಇಸ್ರೇಲ್ ಮತ್ತು ಅದರ ಪ್ರಮುಖ ಮಿತ್ರರಾಷ್ಟ್ರವಾದ ಯುನೈಟೆಡ್ ಸ್ಟೇಟ್ಸ್ ಅಂತಾರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ ಸದಸ್ಯರಲ್ಲದ ಕಾರಣ ಅದರ ಪ್ರಾಯೋಗಿಕ ಪರಿಣಾಮಗಳು ಹೆಚ್ಚಾಗಿರದೇ ಇರಬಹುದು. ಹಲವಾರು ಹಮಾಸ್ ಅಧಿಕಾರಿಗಳು ಈ ಸಂಘರ್ಷದಲ್ಲಿ ಕೊಲ್ಲಲ್ಪಟ್ಟರು.
ಗಾಜಾದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ಮಾನವೀಯತೆಯ ವಿರುದ್ಧದ ಅಪರಾಧಗಳು ಮತ್ತು ಯುದ್ಧಾಪರಾಧಗಳ ವಿರುದ್ಧ ಇಬ್ಬರೂ ನಾಯಕರನ್ನು ಆರೋಪಿಸಿ ಅಂತಾರಾಷ್ಟ್ರೀಯ ನ್ಯಾಯಾಲಯವು ವಾರಂಟ್‌ಗಳನ್ನು ಹೊರಡಿಸಿತು. ಇಸ್ರೇಲ್ ಪಿಎಂ ನೆತನ್ಯಾಹು ಮತ್ತು ಇತರ ಇಸ್ರೇಲಿ ನಾಯಕರು ಐಸಿಸಿ ಮುಖ್ಯ ಪ್ರಾಸಿಕ್ಯೂಟರ್ ಕರೀಮ್ ಖಾನ್ ಅವರ ವಾರೆಂಟ್ ಅನ್ನು ಅವಮಾನಕರ ಎಂದು ಖಂಡಿಸಿದ್ದಾರೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಸಹ ಇದಕ್ಕೆ ವಿರೋಧಿಸಿದ್ದಾರೆ ಮತ್ತು ಹಮಾಸ್ ವಿರುದ್ಧ ತನ್ನನ್ನು ತಾನು ರಕ್ಷಿಸಿಕೊಳ್ಳುವ ಇಸ್ರೇಲ್‌ನ ಹಕ್ಕನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ಹಮಾಸ್ ಮುಖ್ಯಸ್ಥನ ಹತ್ಯೆ ಬೆನ್ನಲ್ಲೇ ಇಸ್ರೇಲ್ ಪ್ರಧಾನಿ ನೆತನ್ಯಾಹು ಮನೆ ಮೇಲೆ ಡ್ರೋನ್ ದಾಳಿ
ಪಿಎಂ ನೆತನ್ಯಾಹು ಮತ್ತು ಮಾಜಿ ಸಚಿವ ಗ್ಯಾಲಂಟ್ ಅವರು ಗಾಜಾದ ನಾಗರಿಕರಿಗೆ ಆಹಾರ, ನೀರು, ಔಷಧ, ವೈದ್ಯಕೀಯ ಸರಬರಾಜು, ಇಂಧನ ಮತ್ತು ವಿದ್ಯುತ್ ಸಮಸ್ಯೆಯಿಂದ ಉದ್ದೇಶಪೂರ್ವಕವಾಗಿ ಬಳಲುವಂತೆ ಮಾಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ಆರೋಪಿಸಿದೆ.
ಹಮಾಸ್‌ನ ಅಕ್ಟೋಬರ್ 7ರ ದಾಳಿಯ ನಂತರ ಗಾಜಾ ಯುದ್ಧವು ಪ್ರಾರಂಭವಾಯಿತು. ಇದು ಇಸ್ರೇಲಿ ಪ್ರತೀಕಾರಕ್ಕೆ ಕಾರಣವಾಯಿತು. ಇದು ನಾಗರಿಕರ ಸಾವಿನ ಸಂಖ್ಯೆಯನ್ನು ಹೆಚ್ಚಿಸಿದೆ ಮತ್ತು ಗಾಜಾದ ವಿಶಾಲ ಪ್ರದೇಶಗಳನ್ನು ನೆಲಸಮಗೊಳಿಸಿದೆ. ಇಸ್ರೇಲಿ ಅಧಿಕೃತ ಅಂಕಿಅಂಶಗಳ ಆಧಾರದ ಮೇಲೆ ಇಸ್ರೇಲ್ ಮೇಲೆ ಹಮಾಸ್‌ನ ಅಕ್ಟೋಬರ್ 7ರ ದಾಳಿಯು 1,170ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು.
ಇದನ್ನೂ ಓದಿ: ಲೆಬನಾನ್ ಮೇಲೆ ಇಸ್ರೇಲ್ ಮತ್ತೆ ವೈಮಾನಿಕ ದಾಳಿ, 11 ಮಂದಿ ಸಾವು, 48 ಜನರಿಗೆ ಗಾಯ
ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ಅನ್ನು 2002ರಲ್ಲಿ ಸ್ಥಾಪಿಸಲಾಯಿತು. ನೆದರ್ಲ್ಯಾಂಡ್ನ ಹೇಗ್ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಇದು ಶಾಶ್ವತ ಜಾಗತಿಕ ನ್ಯಾಯಾಲಯವಾಗಿದ್ದು, ದೌರ್ಜನ್ಯಗಳು, ಯುದ್ಧ ಅಪರಾಧಗಳು, ನರಮೇಧಗಳು ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ ವ್ಯಕ್ತಿಗಳು, ನಾಯಕರನ್ನು ವಿಚಾರಣೆಗೆ ಒಳಪಡಿಸಬಹುದು. 1991ರಿಂದ 2001ರವರೆಗಿನ ಯುಗೊಸ್ಲಾವ್ ಯುದ್ಧಗಳು ಮತ್ತು 1994ರಲ್ಲಿ ರುವಾಂಡನ್ ನರಮೇಧದ ನಂತರ ICC ಅನ್ನು ರಚಿಸಲಾಯಿತು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ