ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದು, ತಾವು ಹುಟ್ಟುಹಾಕಿರುವ ಬ್ಲೂ ಒರಿಜಿನ್ ಸಂಸ್ಥೆಯ ಸಬ್ ಆರ್ಬಿಟಲ್ ಬಾಹ್ಯಾಕಾಶ ರಾಕೆಟ್ ನ್ಯೂ ಶೆಫರ್ಡ್ ಮೂಲಕ ಇಂದು ಅಂತರಿಕ್ಷಕ್ಕೆ ಜಿಗಿಯುತ್ತಿದ್ದಾರೆ. ಜೆಫ್ ಬೆಜೋಸ್ ಜತೆ ಅವರ ಸಹೋದರ ಮಾರ್ಕ್ ಬೆಜೋಸ್ ಹಾಗೂ ಇತರ ಇಬ್ಬರು ಗಗನ ಯಾತ್ರಿಗಳು ಈ ನೌಕೆಯನ್ನೇರಲಿದ್ದು ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ನಾನು ಐದು ವರ್ಷದ ಬಾಲಕನಾಗಿದ್ದಾಗಿಂದಲೂ ಅಂತರಿಕ್ಷಕ್ಕೆ ಜಿಗಿಯುವ ಕನಸು ಹೊತ್ತುಕೊಂಡಿದ್ದೆ. ಅಂತಿಮವಾಗಿ ಅದು ಈಡೇರುವ ಸಮಯ ಬಂದಿದ್ದು ನನ್ನ ಸಹೋದರನ ಜತೆ ಆಕಾಶಕ್ಕೆ ಹಾರಲಿದ್ದೇನೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಜೆಫ್ ಬೆಜೋಸ್, ಮಾರ್ಕ್ ಬೆಜೋಸ್ ಅವರೊಟ್ಟಿಗೆ ವ್ಯಾಲಿ ಫಂಕ್ ಹಾಗೂ ಆಲಿವರ್ ಡೇಮನ್ ಎಂಬ ಇನ್ನಿಬ್ಬರು ಸಾಥ್ ನೀಡುತ್ತಿದ್ದು, ಬ್ಲೂ ಒರಿಜಿನ್ ತಯಾರಿಸಿದ ಮೊಟ್ಟ ಮೊದಲ ಮಾನವ ಚಾಲಿತ ವಿಮಾನ ಎಂಬ ಕೀರ್ತಿಯನ್ನು ಇದು ಹೊತ್ತುಕೊಂಡಿದೆ. ಇದು 60 ಅಡಿ ಎತ್ತರದ ಬೂಸ್ಟರ್ ಹಾಗೂ ಆರು ಮಂದಿ ಕೂರಬಹುದಾದ ಕ್ಯಾಪ್ಸೂಲ್ ಅನ್ನು ಒಳಗೊಂಡಿದ್ದು, ಭೂಮಿಯಿಂದ 76 ಕಿಲೋ ಮೀಟರ್ ಎತ್ತರಕ್ಕೇರಿದ ನಂತರ ಬೂಸ್ಟರ್ ಮತ್ತು ಕ್ಯಾಪ್ಸೂಲ್ ಬೇರ್ಪಡಲಿವೆ. ಈ ವೇಳೆ ಬೂಸ್ಟರ್ ನಿಗದಿತ ಸ್ಥಳದಲ್ಲಿ ಇಳಿದರೆ ಕ್ಯಾಪ್ಸೂಲ್ 100 ಕಿಲೋ ಮೀಟರ್ ಎತ್ತರಕ್ಕೆ ಹೋದ ಬಳಿಕ ಭೂಮಿಯತ್ತ ಮುಖ ಮಾಡಲಿದೆ.
ಈ ಕ್ಯಾಪ್ಸೂಲ್ ಸುಮಾರು 3 ನಿಮಿಷಗಳ ಕಾಲ ಅಂತರಿಕ್ಷದಲ್ಲಿ ತೇಲಲಿದ್ದು ಅಷ್ಟು ಹೊತ್ತು ಒಳಗಿದ್ದವರು ಶೂನ್ಯ ಗುರುತ್ವಾಕರ್ಷಣೆಯ ಅನುಭವ ಪಡೆಯಲಿದ್ದಾರೆ. ನಂತರ ಕ್ಯಾಪ್ಸೂಲ್ ಭೂಮಿಗೆ ಇಳಿಯಲಿದ್ದು, ಏರ್ ಬ್ಯಾಗ್ ಸಹಾಯದಿಂದ ಹಿಂದಿರುಗಲಿದೆ. ಕ್ಯಾಪ್ಸೂಲ್ ಗಂಟೆಗೆ 1.6 ಕಿಲೋ ಮೀಟರ್ ವೇಗದಲ್ಲಿ ಭೂಮಿಯತ್ತ ಧಾವಿಸಲಿದ್ದು, 26 ಕಿಲೋ ಮೀಟರ್ ದೂರದಲ್ಲಿದ್ದಾಗಲೇ ಪ್ಯಾರಾಚ್ಯೂಟ್ ತೆರೆದುಕೊಳ್ಳುವಂತೆ ವ್ಯವಸ್ಥೆ ರೂಪಿಸಲಾಗಿದೆ.
ಈ ಅಂತರಿಕ್ಷ ಯಾನದ ನೇರಪ್ರಸಾರ ವೀಕ್ಷಣೆಗೆ ಬ್ಲೂ ಒರಿಜಿನ್ ಸಂಸ್ಥೆ ವ್ಯವಸ್ಥೆ ಮಾಡಿದ್ದು, BlueOrigin.com ವೆಬ್ಸೈಟ್ ಹಾಗೂ ಸಂಸ್ಥೆಯ ಟ್ವಿಟರ್, ಫೇಸ್ಬುಕ್, ಯೂಟ್ಯೂಬ್ ಚಾನೆಲ್ಗಳಲ್ಲಿ ಇದನ್ನು ವೀಕ್ಷಿಸಬಹುದಾಗಿದೆ. ಭಾರತೀಯ ಕಾಲಮಾನದಲ್ಲಿ ಇಂದು (ಜುಲೈ 20) ಸಂಜೆ 5 ಗಂಟೆಗೆ ಇದರ ನೇರಪ್ರಸಾರ ವೀಕ್ಷಣೆ ಸಾಧ್ಯವಿದ್ದು, ಆಸಕ್ತರಿಗೆ ಇದೊಂದು ಉತ್ತಮ ಅವಕಾಶವಾಗಿದೆ.
ಪ್ರಯಾಣ ಹೇಗಿರಲಿದೆ?
ವಿವಿಧ ಹಂತಗಳನ್ನೊಳಗೊಂಡ ಈ ಪ್ರಯಾಣದಲ್ಲಿ ಕ್ಯಾಪ್ಸೂಲ್ ಹಾಗೂ ಬೂಸ್ಟರ್ ಮೊದಲು ರಾಕೆಟ್ ರೀತಿ ನೇರವಾಗಿ ಗಗನಕ್ಕೆ ಚಿಮ್ಮಲಿವೆ. ಭೂಮಿಯಿಂದ 76 ಕಿಲೋ ಮೀಟರ್ (2.50 ಲಕ್ಷ ಅಡಿ) ದೂರದಲ್ಲಿ ಕ್ಯಾಪ್ಸೂಲ್ ಬೂಸ್ಟರ್‌ನಿಂದ ಬೇರ್ಪಡಲಿದೆ. ಬಳಿಕ 106 ಕಿಲೋ ಮೀಟರ್ (3.50 ಲಕ್ಷ ಅಡಿ) ಎತ್ತರಕ್ಕೆ ಕ್ಯಾಪ್ಸೂಲ್ ಸಾಗಲಿದ್ದು, ಲಾಂಚ್‌ಪ್ಯಾಡ್‌ನಿಂದ 2 ಮೈಲಿ ದೂರದಲ್ಲಿ ಬೂಸ್ಟರ್ ಇಳಿಯಲಿದೆ. ಬಳಿಕ ಪ್ಯಾರಾಚ್ಯೂಟ್ ಸಹಾಯದಿಂದ ಕ್ಯಾಪ್ಸೂಲ್ ಮರುಭೂಮಿಯಲ್ಲಿ ಇಳಿಯಲಿದ್ದು, ಈ ಯೋಜನೆ ಬಗ್ಗೆ ಭಾರೀ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.