ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ

ಪಾಕಿಸ್ತಾನಕ್ಕೆ ಈ ಬೃಹತ್ ಮೊತ್ತವನ್ನು ಚೀನಾ ತನ್ನ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಕ ನೀಡುತ್ತಿಲ್ಲ. ಇದನ್ನು ವಾಣಿಜ್ಯ ಸಾಲ ಎಂದೂ ಪರಿಗಣಿಸಿಲ್ಲ.

ಸೌದಿ ಅರೇಬಿಯಾದ ಹಳೇ ಸಾಲ ತೀರಿಸಲು ಚೀನಾದಿಂದ ದೊಡ್ಡ ಮೊತ್ತದ ಹೊಸ ಸಾಲ ಪಡೆದ ಪಾಕಿಸ್ತಾನ
ಪ್ರಾತಿನಿಧಿಕ ಚಿತ್ರ
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 14, 2020 | 3:27 PM

ಇಸ್ಲಾಮಾಬಾದ್: ಸೌದಿ ಅರೇಬಿಯಾಕ್ಕೆ ತುರ್ತಾಗಿ ಪಾವತಿಸಬೇಕಿರುವ 2 ಶತಕೋಟಿ ಡಾಲರ್ ಹಳೇ ಸಾಲ ತೀರಿಸಲು ಪಾಕಿಸ್ತಾನವು ಅಷ್ಟೇ ಮೊತ್ತದ ಹೊಸ ಸಾಲವನ್ನು ಚೀನಾದಿಂದ ಪಡೆದುಕೊಳ್ಳುತ್ತಿದೆ. ಇಂದು (ಡಿ.14) ಸಾಲದ ಮೊದಲ ಕಂತಾಗಿ 1 ಶತಕೋಟಿ ಡಾಲರ್ ಮೊತ್ತವನ್ನು ಚೀನಾಗೆ ಪಾಕಿಸ್ತಾನ ಪಾವತಿಸಲಿದೆ. ಬಾಕಿ ಮೊತ್ತವನ್ನು ಜನವರಿ ತಿಂಗಳಲ್ಲಿ ಪಾವತಿಸುವುದಾಗಿ ಹೇಳಿದೆ.

ಪಾಕಿಸ್ತಾನಕ್ಕೆ ಈ ಬೃಹತ್ ಮೊತ್ತವನ್ನು ಚೀನಾ ತನ್ನ ವಿದೇಶಾಂಗ ವ್ಯವಹಾರಗಳ ಇಲಾಖೆಯ ಮೂಲಕ ನೀಡುತ್ತಿಲ್ಲ. ಇದನ್ನು ವಾಣಿಜ್ಯ ಸಾಲ ಎಂದೂ ಪರಿಗಣಿಸಿಲ್ಲ. ಅದರ ಬದಲು 2011ರ ದ್ವಿಪಕ್ಷೀಯ ಕರೆನ್ಸಿ ಸ್ವಾಪ್​ ಒಪ್ಪಂದದ (CSA) ಒಪ್ಪಂದದ ವ್ಯಾಪ್ತಿಯನ್ನು ಸ್ವಲ್ಪ ಹೆಚ್ಚಿಸಿ, ಈ ಸಾಲ ನೀಡುತ್ತಿದೆ.

ಏನಿದು CSA?
ಕರೆನ್ಸಿ ಸ್ವಾಪ್​ ಅಗ್ರಿಮೆಂಟ್ ಎಂದರೆ ಕರೆನ್ಸಿ ವಿನಿಮಯ ಒಪ್ಪಂದ. 2011ರಲ್ಲಿ ಪಾಕಿಸ್ತಾನದ ಸ್ಟೇಟ್ ಬ್ಯಾಂಕ್​ ಮತ್ತು ಚೀನಾದ ಪೀಪಲ್ಸ್​ ಬ್ಯಾಂಕ್​ ನಡುವೆ ಈ ಒಪ್ಪಂದ ಆಗಿದೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಹಣಕಾಸು ನೇರ ಹೂಡಿಕೆ ಉತ್ತೇಜಿಸಲು ಹಾಗೂ ಅಲ್ಪಾವಧಿ ಲಿಕ್ವಿಡಿಟಿ (ದ್ರವ್ಯತೆ) ಬೆಂಬಲ ನೀಡಲು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಮೂಲ ಒಪ್ಪಂದವನ್ನು 2014ರಲ್ಲಿ ನವೀಕರಿಸಲಾಗಿದ್ದು, ಅದರ ಅನ್ವಯ ಮೌಲ್ಯ 10 ಶತಕೋಟಿ ಚೀನಾ ಯುವಾನ್​ ಅಥವಾ 1.5 ಶತಕೋಟಿ ಅಮೆರಿಕ ಡಾಲರ್​ನಷ್ಟು ಮೊತ್ತವನ್ನು ಎರಡೂ ದೇಶಗಳು ಪರಸ್ಪರ ನಗದು ವಿನಿಮಯ ಮಾಡಿಕೊಳ್ಳಬಹುದಾಗಿತ್ತು.

2018ರಲ್ಲಿ ಈ ಒಪ್ಪಂದದ ವ್ಯಾಪ್ತಿಯನ್ನು ಮೂರು ವರ್ಷಗಳ ಅವಧಿಗೆ ಹೆಚ್ಚಿಸಲಾಗಿದ್ದು. ಇದರ ಅನ್ವಯ 20ಶತಕೋಟಿ ಯುವಾನ್ ಅಥವಾ 3 ಶತಕೋಟಿ ಡಾಲರ್​ಗೆ ಮೌಲ್ಯವನ್ನು ಏರಿಸಲಾಗಿದೆ. ಈ ಒಪ್ಪಂದದ ಪ್ರಕಾರ ಈಗ ಚೀನಾ ಕೊಟ್ಟಿರುವ 2 ಶತಕೋಟಿ ಡಾಲರ್ ಸಾಲವು ಪಾಕಿಸ್ತಾನವು ಹೊರದೇಶದಿಂದ ಪಡೆದುಕೊಂಡ ಸಾರ್ವಜನಿಕ ಸಾಲ ಎನಿಸಿಕೊಳ್ಳುವುದಿಲ್ಲ.

ಸಾಲದ ಷರತ್ತುಗಳ ಬಗ್ಗೆ ಎರಡೂ ದೇಶಗಳೂ ಮೌನವಾಗಿದ್ದು, ದ್ವಿಪಕ್ಷೀಯ ಗೌಪ್ಯ ವಿಚಾರ ಎಂದು ಹೇಳಿವೆ.

ಸದ್ಯಕ್ಕೆ ಪಾಕಿಸ್ತಾನಕ್ಕೆ ವೀಸಾ ವಿತರಣೆ ಸ್ಥಗಿತಗೊಳಿಸಿದ UAE

Published On - 3:26 pm, Mon, 14 December 20