Explainer: ಇರಾನ್ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಯಾರು? ಅಲ್ಲಿನ ಜನರೇಕೆ ಈ ಬಾರಿ ಮತದಾನಕ್ಕೆ ಹಿಂಜರಿದರು?
ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡುವಾಗ ಇಸ್ಲಾಂ ನಿಷ್ಠೆ, ಧಾರ್ಮಿಕ ಕಾನೂನು ವ್ಯವಸ್ಥೆಗೆ ಬದ್ಧತೆ ಮತ್ತು ದೇಶಭಕ್ತಿಯನ್ನು ಮುಖ್ಯ ಮಾನದಂಡವಾಗಿ ಪರಿಗಣಿಸಲಾಗುತ್ತದೆ.
ಇರಾನ್ನ ಕಟ್ಟರ್ ಇಸ್ಲಾಮಿಕ್ ನಾಯಕ ಇಬ್ರಾಹಿಂ ರೈಸಿ ದೇಶದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇರಾನ್ನ ಇತಿಹಾಸದಲ್ಲಿಯೇ ಅತ್ಯಂತ ಕನಿಷ್ಠ ಪ್ರಮಾಣದ ಮತದಾನಕ್ಕೆ ಈ ಚುನಾವಣೆ ಸಾಕ್ಷಿಯಾಯಿತು. ಚಲಾವಣೆಯಾದ ಮತಗಳನ್ನು ಲೆಕ್ಕ ಹಾಕಿದಾಗ ಇಬ್ರಾಹಿಂ ಗೆಲುವು ಸ್ಪಷ್ಟವಾಯಿತು.
ಇರಾನ್ನ ಆಡಳಿತವಲಯ ಮತ್ತು ಅಧಿಕಾರದ ಅಖಾಡದಲ್ಲಿ ರೈಸಿ ಹಂತಹಂತವಾಗಿ ಮೇಲೇರಿದವರು. 1980ರಲ್ಲಿ ತಮ್ಮ 20ನೇ ವಯಸ್ಸಿನಲ್ಲಿ ಇರಾನ್ನ ಕೈಗಾರಿಕಾ ನಗರ ಕರಾಜ್ನ ಮುಖ್ಯ ವಿಚಾರಣಾಧಿಕಾರಿಯಾಗಿ (Prosecutor General) ನೇಮಕಗೊಂಡಿದ್ದರು. 2004ರಿಂದ 2014ರವರೆಗೆ ಇರಾನ್ನ ರಾಜಧಾನಿ ತೆಹರಾನ್ನಲ್ಲಿ ನ್ಯಾಯಾಂಗ ವಿಭಾಗದ ಉಪಮುಖ್ಯಸ್ಥರಾಗಿದ್ದರು. 2014ರಿಂದ 2016ರವರೆಗೆ ಇರಾನ್ನ ಮುಖ್ಯ ವಿಚಾರಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದಾದ ನಂತರ 2019ರಲ್ಲಿ ಇರಾನ್ ರಾಜಧಾನಿ ತೆಹರಾನ್ನಲ್ಲಿ ರಾಷ್ಟ್ರೀಯ ನ್ಯಾಯಾಂಗ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡರು. 1988ರ ಇರಾನ್-ಇರಾಕ್ ಯುದ್ಧದ ವೇಳೆ ಸಾವಿರಾರು ರಾಜಕೀಯ ಕೈದಿಗಳ ಹತ್ಯೆ ನಡೆದಿತ್ತು. ಈ ಹತ್ಯಾಕಾಂಡಗಳಲ್ಲಿ ರೈಸಿ ಕೈವಾಡವಿರುವ ಶಂಕೆ ವ್ಯಕ್ತವಾಗಿತ್ತು. ಇದೇ ಕಾರಣಕ್ಕೆ ರೈಸಿ ಅವರನ್ನು ನ್ಯಾಯಾಂಗ ಮುಖ್ಯಸ್ಥರಾಗಿ ನೇಮಿಸಿದಾಗ ಅಪಸ್ವರಗಳು ಕೇಳಿಬಂದಿದ್ದವು.
1988ರ ಜುಲೈ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ತೆಹರಾನ್ ಸಮೀಪದ ಇವಿನ್ ಮತ್ತು ಗೊಹಾರ್ಡಷ್ಟ್ ಸೆರೆಮನೆಗಳಲ್ಲಿದ್ದ ರಾಜಕೀಯ ಭಿನ್ನಮತೀಯರು ಏಕಾಏಕಿ ಕಣ್ಮರೆಯಾಗುವಲ್ಲಿ ಮತ್ತು ಕಾನೂನುಬಾಹಿರವಾಗಿ ನಡೆದಿದ್ದ ಹತ್ಯೆಗಳಲ್ಲಿ ರೈಸಿ ಕೈವಾಡ ಇದ್ದ ಬಗ್ಗೆ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್ನ್ಯಾಷನಲ್ ದೂರಿತ್ತು. ಮೃತರ ದೇಹಗಳನ್ನು ಗೌಪ್ಯವಾಗಿ ಸಾಮೂಹಿಕ ಅಂತ್ಯಸಂಸ್ಕಾರಗಳ ಮೂಲಕ ಕಣ್ಮರೆ ಮಾಡಲಾಗಿತ್ತು.
ಇರಾನ್ನ ಪ್ಯಾರಾ ಮಿಲಿಟರಿ ದಳ ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ (Islamic Revolutionary Guard Corps – IRGC) ಜತೆಗೂ ರೈಸಿ ಅವರಿಗೆ ಹತ್ತಿರದ ಸಂಬಂಧವಿದೆ. ಐಆರ್ಜಿಸಿ ದಳದ ಅಂಗವೆನಿಸಿರುವ ಖದ್ಸ್ ಸಂಘಟನೆಯ ಉಸ್ತುವಾರಿಯಾಗಿದ್ದ ಖಾಸಿಂ ಸುಲೇಮಾನಿ ಅವರನ್ನು ಅಮೆರಿಕ 2020ರಲ್ಲಿ ವಾಯುದಾಳಿಯಲ್ಲಿ ಕೊಂದಿತ್ತು. ಅಮೆರಿಕ ಸರ್ಕಾರವು 2019ರಲ್ಲಿ ಖದ್ಸ್ ಸಂಘಟನೆಯನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಕಟ್ಟರ್ ಮತೀಯವಾದಿ, ಮತಾಂಧ ಎನಿಸಿರುವ ರೈಸಿ ಇರಾನ್ನ ಹಿಂದಿನ ಅಧ್ಯಕ್ಷ ಹಸನ್ ರೌಹಾನಿ ವಿರುದ್ಧ 2017ರಲ್ಲಿಯೂ ಚುನಾವಣೆಗೆ ಸ್ಪರ್ಧಿಸಿದ್ದರು. ಒಂದು ಹಂತದಲ್ಲಿ ಇರಾನ್ ಸರ್ವೋಚ್ಛ ನಾಯಕ ಅಯತುಲ್ಲಾ ಖಾನ್ ಅಲ್ ಖಮೇನಿಗೆ ಇಬ್ರಾಹಿಂ ರೈಸಿ ಉತ್ತರಾಧಿಕಾರಿಯಾಗುತ್ತಾರೆ ಎಂಬ ಮಾತುಗಳೂ ಕೇಳಿಬಂದಿದ್ದವು.
ಅಧ್ಯಕ್ಷೀಯ ಚುನಾವಣೆಯಲ್ಲಿ ಉಮೇದುವಾರಿಕೆಯ ಗೊಂದಲ ಜೂನ್ 18ರಂದು ಇರಾನ್ನ 13ನೇ ಅಧ್ಯಕ್ಷೀಯ ಚುನಾವಣೆ ನಡೆದಿತ್ತು. ಈ ಬಾರಿ ಒಟ್ಟು 7 ಮಂದಿ ಕಣದಲ್ಲಿದ್ದರು. ಸಯೀದ್ ಜಲೀಲಿ, ಇಬ್ರಾಹಿಂ ರೈಸಿ, ಅಲಿಝೆರಾ ಝಕಾನಿ, ಸಯೆದಾ ಅಮೀರ್ ಹುಸೇನ್ ಖಾಝಿಝಾದೇಹ್ ಹಶೇಮಿ, ಮೊಹ್ಶನ್ ಮೆಹ್ರಾಲಿಝಾದೇಹ್, ಮೊಹೆನ್ ರಾಝೈ ಮತ್ತು ಅಬ್ದೊಲ್ನಾಸೆರ್ ಹೆಮ್ಮಟಿ ಕಣದಲ್ಲಿದ್ದ ಅಭ್ಯರ್ಥಿಗಳು. ಈ ಪೈಕಿ ಮೂವರು ಬುಧವಾರ ಕಣದಿಂದ ಹಿಂದೆ ಸರಿದಿದ್ದರು. ಈ ಬಾರಿ ಚುನಾವಣೆಯಲ್ಲಿ 5.9 ಕೋಟಿ ಮಂದಿಗೆ ಮತಚಲಾವಣೆಯ ಹಕ್ಕು ಇತ್ತು. ಈ ಪೈಕಿ 13 ಲಕ್ಷಕ್ಕೂ ಹೆಚ್ಚು ಮಂದಿ ಇದೇ ಮೊದಲ ಬಾರಿಗೆ ಮತದಾನದ ಹಕ್ಕು ಪಡೆದವರಿದ್ದರು. ಇರಾನ್ನ ಒಟ್ಟು ಜನಸಂಖ್ಯೆ 8.59 ಕೋಟಿಗೂ ಹೆಚ್ಚು. 18 ವರ್ಷ ದಾಟಿದವರಿಗೆ ಅಲ್ಲಿ ಮತದಾನದ ಹಕ್ಕು ಸಿಗುತ್ತದೆ.
ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಇರಾನ್ನ ಸರ್ವೋಚ್ಛ ನಾಯಕ ಅಯಾತುಲ್ಲಾ ಅಲಿ ಖಮೇನಿ ಜನರನ್ನು ವಿನಂತಿಸಿಕೊಂಡಿದ್ದರು. ಆದರೂ ಮತದಾನದ ಪ್ರಮಾಣ ಶೇ 50 ದಾಟಲಿಲ್ಲ. ಇರಾನ್ ಇತಿಹಾಸದಲ್ಲಿಯೇ ಇದು ಅತ್ಯಂತ ಕನಿಷ್ಠ ಪ್ರಮಾಣದ ಮತದಾನ ಎನಿಸಿದೆ. ಮತದಾನದ ಅರ್ಹತೆ ಇರುವವರ ಪೈಕಿ 2.8 ಕೋಟಿ ಮಂದಿ ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದರು.
ಜನರಿಗೆ ಇಷ್ಟವಾಗ್ತಿಲ್ಲ ಸರ್ಕಾರದ ಧೋರಣೆ ಈ ಬಾರಿಯ ಚುನಾವಣೆಯಲ್ಲಿ ಇರಾನ್ನ ಮತದಾರರ ಬಹುದೊಡ್ಡ ವರ್ಗ ತಮ್ಮ ಹಕ್ಕು ಚಲಾಯಿಸಲಿಲ್ಲ. ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆದಿಲ್ಲ ಎಂದು ಬಹುತೇಕರಿಗೆ ಅನ್ನಿಸಿತು. ಚುನಾವಣೆಯ ಉಸ್ತುವಾರಿ ಹೊತ್ತ ರಕ್ಷಣಾ ಮಂಡಳಿ (ಗಾರ್ಡಿಯನ್ ಕೌನ್ಸಿಲ್) ಮೇಲೆ ಜನರಿಗೆ ನಂಬಿಕೆ ಇರಲಿಲ್ಲ. 12 ಜನರ ಈ ರಕ್ಷಣಾ ಮಂಡಳಿಯಲ್ಲಿ ಆರು ಮಂದಿ ಧಾರ್ಮಿಕ ವಿದ್ವಾಂಸರು ಮತ್ತು ಆರು ಮಂದಿ ನ್ಯಾಯಾಧೀಶರು ಇರುತ್ತಾರೆ. ಇವರನ್ನು ಸರ್ವೋಚ್ಛ ನಾಯಕ ಖಮೋನಿ ಸ್ವತಃ ನೇಮಿಸುತ್ತಾರೆ. ಈ ಮಂಡಳಿಯು ಈ ಬಾರಿ ನಾಮಪತ್ರ ಸಲ್ಲಿಸಿದ್ದ ಹಲವರಿಗೆ ಸ್ಪರ್ಧೆಯ ಅವಕಾಶವನ್ನೇ ನಿರಾಕರಿಸಿತು.
ಇರಾನ್ ಚುನಾವಣೆಯಲ್ಲಿ ಅಭ್ಯರ್ಥಿಗಳ ಪೂರ್ವಾಪರಗಳನ್ನು ಸರ್ಕಾರ ನೇಮಿಸುವ ಸಮಿತಿ ಪರಿಶೀಲಿಸುತ್ತದೆ. ನಂತರ ರಕ್ಷಣಾ ಮಂಡಳಿ ಅಭ್ಯರ್ಥಿಗಳ ಚಾರಿತ್ರ್ಯವನ್ನು ವಿಮರ್ಶಿಸುತ್ತದೆ. ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡುವಾಗ ಇಸ್ಲಾಂ ನಿಷ್ಠೆ, ಧಾರ್ಮಿಕ ಕಾನೂನು ವ್ಯವಸ್ಥೆಗೆ ಬದ್ಧತೆ ಮತ್ತು ದೇಶಭಕ್ತಿಯನ್ನು ಮುಖ್ಯ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಈಚಿನ ದಿನಗಳಲ್ಲಿ ನಡೆದಿದ್ದ ಹಲವು ಚುನಾವಣೆಗಳಲ್ಲಿ ನಡೆದಿದ್ದಂತೆ ಈ ಬಾರಿಯೂ ಒಂದಲ್ಲಾ ಒಂದು ನೆಪದಿಂದ ಸುಧಾರಣಾವಾದಿಗಳು ಮತ್ತು ಪ್ರಗತಿಪರರಿಗೆ ರಕ್ಷಣಾ ಮಂಡಳಿಯು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸಿತು.
ಮತದಾನದಿಂದ ದೂರು ಉಳಿದ ಜನತೆ ಮತ ಚಲಾಯಿಸಿದರೆ ಈ ತಪ್ಪು ವ್ಯವಸ್ಥೆಯನ್ನು ಒಪ್ಪಿಕೊಂಡಂತೆ ಆಗುತ್ತದೆ ಎಂದು ಹಲವರು ಚುನಾವಣೆಯಿಂದ ದೂರ ಉಳಿದರು. ಚುನಾವಣೆ ಘೋಷಣೆಯಾದ ಆರಂಭದಲ್ಲಿ 600 ಅಭ್ಯರ್ಥಿಗಳಿದ್ದರು. ಈ ಪೈಕಿ 7 ಜನರಿಗೆ ಮಾತ್ರ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಸಿಕ್ಕಿತ್ತು. ಇವರ ಪೈಕಿ ಒಬ್ಬರೂ ಜನಾನುರಾಗ ಪಡೆದಿರಲಿಲ್ಲ. ರೈಸಿ ಗೆಲುವು ಬಹುತೇಕ ಖಚಿತವಾಗಿತ್ತು.
ಇರಾನ್ನಲ್ಲಿ ಈ ಬಾರಿಯಿಂದ ಚುನಾವಣೆಗೆ ಸ್ಪರ್ಧಿಸಲು 40ರಿಂದ 75ರ ವಯೋಮಿತಿಯಲ್ಲಿರಬೇಕೆಂಬ ಹೊಸ ನಿಯಮವೊಂದು ಜಾರಿಗೆ ಬಂದಿದೆ. ಹಲವು ಆಕಾಂಕ್ಷಿಗಳು ಚುನಾವಣೆಯಿಂದ ದೂರ ಉಳಿಯಲು ಈ ನಿಯಮವೂ ಕಾರಣವಾಯಿತು. ಇರಾನ್ನಲ್ಲಿ ಮಹಿಳೆಯರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ನಿಯಮವೇನೂ ಇಲ್ಲ. ಆದರೂ ಎಲ್ಲ ಮಹಿಳಾ ಉಮೇದುವಾರರನ್ನು ಸ್ಪರ್ಧೆಗೆ ಅನರ್ಹಗೊಳಿಸಲಾಯಿತು. ನಿಯಮಗಳ ಪ್ರಕಾರ ಇರಾನ್ನ ಅಧ್ಯಕ್ಷಗಾದಿಗೆ ಸ್ಪರ್ಧಿಸುವವರು ಶಿಯಾ ಮುಸ್ಲಿಂ ಆಗಿರಬೇಕು. ಇರಾನ್ನ ಶೇ 90ರಷ್ಟು ಜನರು ಶಿಯಾ ಮುಸ್ಲಿಮರಾಗಿದ್ದಾರೆ ಎನ್ನುವುದು ಗಮನಾರ್ಹ ಅಂಶ.
ಮುಂದುವರಿದ ಆರ್ಥಿಕ ಬಿಕ್ಕಟ್ಟು ಅಣ್ವಸ್ತ್ರ ತಯಾರಿಕೆಗೆ ಇರಾನ್ ರಹಸ್ಯ ಪ್ರಯತ್ನಗಳನ್ನು ಮುಂದುವರಿಸಿದೆ ಎಂಬ ಅನುಮಾನಗಳ ಮೇಲೆ ಅಮೆರಿಕ ಇರಾನ್ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ. ಇದರಿಂದ ಇರಾನ್ನ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. 2017ರ ನಂತರ ಇರಾನ್ ಅರ್ಥ ವ್ಯವಸ್ಥೆ ಕುಸಿಯುತ್ತಲೇ ಇದೆ. 2020ರಲ್ಲಿ ಆರ್ಥಿಕತೆಯು ಶೇ 5ರಷ್ಟು ಕುಸಿತ ದಾಖಲಿಸಿತ್ತು. ಇದು ಜನರ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದು, ಬಡತನದ ಪ್ರಮಾಣ ಹೆಚ್ಚಾಗುತ್ತಿದೆ. ಇರಾನ್ನಿಂದ ತೈಲ ಖರೀದಿಸುವ ದೇಶಗಳೂ ಅಮೆರಿಕದ ಕೆಂಗಣ್ಣಿಗೆ ಗುರಿಯಾಗುತ್ತಿರುವುದರಿಂದ, ಬಹುತೇಕ ದೇಶಗಳು ಇರಾನ್ನೊಂದಿಗೆ ಸೌಹಾರ್ದ ಸಂಬಂಧ ಹೊಂದಲು ಹಿಂಜರಿಯುತ್ತಿವೆ.
(Profile of Iran New President Ebrahim Raisi What went wrong in Presidents Election this time)
ಇದನ್ನೂ ಓದಿ: ಇರಾನ್ ಹೊಸ ಅಧ್ಯಕ್ಷ ಇಬ್ರಾಹಿಂ ರೈಸಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ, ಆಯ್ಕೆ ವಿಧಾನದ ಬಗ್ಗೆ ಅಮೆರಿಕ ಅಪಸ್ವರ
ಇದನ್ನೂ ಓದಿ: Explainer: ಎಂಜಿನಿಯರಿಂಗ್ ಅದ್ಭುತ ಕಾಳೇಶ್ವರಂ ಏತ ನೀರಾವರಿ ಯೋಜನೆ; ಏಕಿಷ್ಟು ಪ್ರಾಮುಖ್ಯತೆ? ಈಗೇಕೆ ಸುದ್ದಿಯಲ್ಲಿದೆ?
Published On - 11:37 pm, Sun, 20 June 21