ಶತ್ರುವೇ ಅಲ್ಲದವರನ್ನು ಕೊಲ್ಲುವುದು ಹೇಗೆ: ಉಕ್ರೇನ್​ನಲ್ಲಿ ರಷ್ಯಾ ಸೈನಿಕರ ದ್ವಂದ್ವ, ಹಿಟ್ಲರ್ ವಿರುದ್ಧ ಹೋರಾಡಿದ್ದ ಕೆಚ್ಚು ಈಗಿಲ್ಲ

ಶತ್ರುವೇ ಅಲ್ಲದವರನ್ನು ಕೊಲ್ಲುವುದು ಹೇಗೆ: ಉಕ್ರೇನ್​ನಲ್ಲಿ ರಷ್ಯಾ ಸೈನಿಕರ ದ್ವಂದ್ವ, ಹಿಟ್ಲರ್ ವಿರುದ್ಧ ಹೋರಾಡಿದ್ದ ಕೆಚ್ಚು ಈಗಿಲ್ಲ
ಉಕ್ರೇನ್​ನಲ್ಲಿ ರಷ್ಯಾದ ಮಿಲಿಟರಿ ವಾಹನಗಳ ಸಾಲು

ಹಿಟ್ಲರ್​ನ ನಾಝಿ ಸೇನೆಯನ್ನು ಮಣಿಸಿ ಜರ್ಮನ್ ರಾಜಧಾನಿ ಬರ್ಲಿನ್​ ಗೆದ್ದ ನಂತರ ವಿಶ್ವದ ಅತಿದೊಡ್ಡ ಸೇನಾ ಶಕ್ತಿ ಮೆರೆದಿದ್ದ ಸೋವಿಯತ್ ರಷ್ಯಾಕ್ಕೆ ಉಕ್ರೇನ್​ನಂಥ ಅಷ್ಟೇನೂ ಪ್ರಬಲವಲ್ಲದ ದೇಶದಲ್ಲಿ ನಿರೀಕ್ಷಿತ ಮುನ್ನಡೆ ಸಾಧ್ಯವಾಗುತ್ತಿಲ್ಲ ಏಕೆ?

TV9kannada Web Team

| Edited By: Ghanashyam D M | ಡಿ.ಎಂ.ಘನಶ್ಯಾಮ

Mar 06, 2022 | 3:27 PM

ಉಕ್ರೇನ್ (Ukraine) ಗಡಿಯಲ್ಲಿ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ಭಾರೀ ಸಂಖ್ಯೆಯಲ್ಲಿ ಜಮೆ ಮಾಡಿಕೊಂಡಿದ್ದ ರಷ್ಯಾ (Russia) ಯುದ್ಧ ಘೋಷಿಸಿ 10 ದಿನಗಳು ಕಳೆದಿವೆ. ವಿಶ್ವದಲ್ಲಿ ಅಮೆರಿಕ ಮತ್ತು ಚೀನಾ ದೇಶಗಳಿಗೆ ಸರಿಸಮನಾಗಿ ನಿಲ್ಲಬಲ್ಲ ಶಕ್ತಿಯಿರುವ ಸಶಸ್ತ್ರ ಪಡೆಗಳಿರುವ ರಷ್ಯಾಕ್ಕೆ ಉಕ್ರೇನ್ ನೆಲದಲ್ಲಿ ಗಟ್ಟಿ ವಿರೋಧ ವ್ಯಕ್ತವಾಗುತ್ತಿದೆ. ರಾಜಧಾನಿ ಕೀವ್ ಸೇರಿದಂತೆ ಪ್ರಮುಖ ನಗರಗಳನ್ನು ವಶಪಡಿಸಿಕೊಳ್ಳಲು ಅಕ್ಷರಶಃ ಅವುಗಳಿಗೆ ಮುತ್ತಿಗೆ ಹಾಕಿ, ಹೊರ ಜಗತ್ತಿನ ಸಂಪರ್ಕ ಕಡಿತಗೊಳಿಸಲಾಗಿದೆ. ವಿದ್ಯುತ್, ನೀರು, ಆಹಾರ ಪೂರೈಕೆ ಕಡಿತಗೊಳಿಸುವ ಮೂಲಕ ಶರಣಾದರೆ ಮಾತ್ರ ಸಹಜ ಬದುಕು ಸಾಧ್ಯ ಎಂಬ ಸಂದೇಶ ರವಾನಿಸಲಾಗುತ್ತಿದೆ. ಉಕ್ರೇನ್ ವಿರುದ್ಧ ರಷ್ಯಾ ವ್ಯಾಕ್ಯುಂ ಬಾಂಬ್​ನಂಥ ಮಾರಕ ಅಸ್ತ್ರ ಪ್ರಯೋಗಿಸಿದೆ. ಆದರೆ ವಿಶ್ವದ ಹಲವು ದೇಶಗಳ ಮಿಲಿಟರಿ ತಜ್ಞರ ಲೆಕ್ಕಾಚಾರಕ್ಕೆ ವ್ಯತಿರಿಕ್ತವಾಗಿ ರಷ್ಯಾಕ್ಕೆ ಉಕ್ರೇನ್ ಸೆಡ್ಡು ಹೊಡೆದು ನಿಂತಿದೆ. ಹಿಟ್ಲರ್​ನ ನಾಝಿ ಸೇನೆಯನ್ನು ಮಣಿಸಿ ಜರ್ಮನ್ ರಾಜಧಾನಿ ಬರ್ಲಿನ್​ ಗೆದ್ದ ನಂತರ ವಿಶ್ವದ ಅತಿದೊಡ್ಡ ಸೇನಾ ಶಕ್ತಿ ಮೆರೆದಿದ್ದ ಸೋವಿಯತ್ ರಷ್ಯಾಕ್ಕೆ ಉಕ್ರೇನ್​ನಂಥ ಅಷ್ಟೇನೂ ಪ್ರಬಲವಲ್ಲದ ದೇಶದಲ್ಲಿ ನಿರೀಕ್ಷಿತ ಮುನ್ನಡೆ ಸಾಧ್ಯವಾಗುತ್ತಿಲ್ಲ ಏಕೆ?

ಉಕ್ರೇನ್ ನಾಗರಿಕರನ್ನು ಕೊಲ್ಲುವಷ್ಟು ದ್ವೇಷಿಸಲು ರಷ್ಯದ ಸೈನಿಕರಿಗೆ ಸಾಧ್ಯವಾಗುತ್ತಿಲ್ಲ. ಆದರೆ 2ನೇ ಮಹಾಯುದ್ಧದ ಸಂದರ್ಭ ಹೀಗಿರಲಿಲ್ಲ. ಆಗ ಜರ್ಮನ್ನರ ವಿರುದ್ಧ ರಷ್ಯನ್ನರಿಗೆ ಕುತ್ತಿಗೆವರೆಗೆ ದ್ವೇಷವಿತ್ತು. ಹೀಗಾಗಿಯೇ ಮಾಸ್ಕೊ ಗಡಿಯಿಂದ ಬರ್ಲಿನ್​ವರೆಗೆ ಬೆನ್ನಟ್ಟಿ ಹೋಗಿ ಬಡಿದರು. ಆದರೆ ಉಕ್ರೇನ್ ವಿಚಾರದಲ್ಲಿ ಹಾಗಲ್ಲ. ಭಾಷೆ ಮತ್ತು ಸಾಂಸ್ಕೃತಿಕವಾಗಿ ಅತಿ ಎನ್ನುವಷ್ಟು ವ್ಯತ್ಯಾಸಗಳಿಲ್ಲ. ಬಹುಕಾಲ ರಷ್ಯಾ ಒಕ್ಕೂಟದ ಭಾಗವೇ ಆಗಿದ್ದ ಉಕ್ರೇನ್​ ದೇಶದಲ್ಲಿರುವ ರಸ್ತೆ, ಸೇತುವೆ, ಅಣೆಕಟ್ಟಿನಂಥ ಮೂಲಸೌಕರ್ಯವನ್ನು ಹಾಳುಗೆಡವಲು ರಷ್ಯಾ ಸೇನೆಗೆ ಸಾಧ್ಯವಾಗುತ್ತಿಲ್ಲ. 2ನೇ ಮಹಾಯುದ್ಧದ ಸಂದರ್ಭದಲ್ಲಿ ತನ್ನದೇ ದೇಶದ ಸೇತುವೆ, ಅಣೆಕಟ್ಟು ಸ್ಫೋಟಿಸಿದ್ದ ರಷ್ಯಾದ ಸೈನಿಕರಿಗೆ ನಂತರದ ದಿನಗಳಲ್ಲಿ ನಾಗರಿಕರು ಅನುಭವಿಸಿದ ಸಂಕಷ್ಟದ ಅರಿವು ಗಾಢವಾಗಿದೆ.

ಇಂದು ಉಕ್ರೇನ್​ನ ನೆಲದಲ್ಲಿ ನಡೆಯುತ್ತಿರುವ ಯುದ್ಧವು ರಷ್ಯಾ ಒಕ್ಕೂಟದ ಸದಸ್ಯ ರಾಷ್ಟ್ರ ಹೊರತುಪಡಿಸಿ ಬೇರೆಡೆ ನಡೆದಿದ್ದರೆ ರಷ್ಯಾ ಸೇನೆಯ ವರ್ತನೆ ಮತ್ತು ಆಕ್ರಮಣದ ತೀವ್ರತೆ ಬೇರೆಯೇ ರೀತಿಯಲ್ಲಿ ಇರುತ್ತಿತ್ತು. ಒಂದು ರೀತಿಯಲ್ಲಿ ತಮ್ಮದೇ ನೆಲ, ತಮ್ಮದೇ ಜನ ಎನಿಸಿದವರ ವಿರುದ್ಧದ ಹೋರಾಟ ಇದು. ಹೀಗಾಗಿಯೇ 2ನೇ ಮಹಾಯುದ್ಧ ಅಥವಾ ಇತರ ದೇಶಗಳ ವಿರುದ್ಧ ಸೋವಿಯತ್ ಸೇನೆಯ ಹೋರಾಟದ ವೈಖರಿ ಈಗ ಕಾಣುತ್ತಿಲ್ಲ.

ರಸ್ತೆಯುದ್ದಕ್ಕೂ ರಷ್ಯಾ ಸೇನಾ ವಾಹನಗಳ ಸಾಲು

ರಷ್ಯಾ ಗಡಿಯಿಂದ ಉಕ್ರೇನ್ ರಾಜಧಾನಿ ಕೀವ್​ವರೆಗಿನ ದಾರಿಯಲ್ಲಿ ಉದ್ದಕ್ಕೆ ಮಿಲಿಟರಿ ವಾಹನಗಳ ಸಾಲು ಕಾಣಿಸುತ್ತದೆ. ಇಂಧನ ಕೊರತೆಯಿಂದ ಹಲವು ವಾಹನಗಳು ಅಲ್ಲಲ್ಲೇ ನಿಂತುಬಿಟ್ಟಿವೆ. ರಷ್ಯಾ ಸೈನಿಕರು ಅಕ್ಕಪಕ್ಕದ ಮನೆಗಳು ಮತ್ತು ಅಂಗಡಿಗಳಲ್ಲಿ ಆಹಾರವನ್ನು ಕೇಳಿ ಪಡೆದುಕೊಳ್ಳುತ್ತಿದ್ದಾರೆ. ಆದರೆ ಕಿತ್ತುಕೊಳ್ಳುತ್ತಿಲ್ಲ ಎಂದು ಬ್ಲೂಮ್​ಬರ್ಗ್​ ವರದಿ ಮಾಡಿದೆ.

ಮಿಲಿಟರಿ ನಡೆಗಳ ವಿಚಾರದಲ್ಲಿ ಅಪ್ರತಿಮ ಬುದ್ಧಿವಂತ ಎನಿಸಿಕೊಂಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್​ರ ಸಾಮರ್ಥ್ಯಕ್ಕೂ ಉಕ್ರೇನ್ ಯುದ್ಧ ಒಂದು ಸವಾಲಾಗಿ ಪರಿಣಮಿಸಿದೆ. ಇದರ ಜೊತೆಗೆ ರಷ್ಯಾ ಸೇನೆಗೆ ರೈಲ್ವೆ ವ್ಯವಸ್ಥೆಯ ಸೌಕರ್ಯ ದೊರೆಯುತ್ತಿಲ್ಲ ಎನ್ನುವುದೂ ಸಹ ಹಿನ್ನಡೆಗೆ ಮತ್ತೊಂದು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸೋವಿಯತ್ ಒಕ್ಕೂಟ ಜೀವಂತವಿದ್ದ ಕಾಲದಿಂದಲೂ ರಷ್ಯಾದ ಸಶಸ್ತ್ರ ಪಡೆಗಳು ರೈಲಿನ ಮೇಲೆ ಅತಿಯಾಗಿ ಅವಲಂಬಿ. ಯುದ್ಧಭೂಮಿಗೆ ನೀರು ಮತ್ತು ತೈಲ ಪೂರೈಕೆಗಾಗಿ ಪೈಪ್​ಲೈನ್​ಗಳನ್ನೂ ಅಲ್ಲಿನ ಎಂಜಿನಿಯರ್​ಗಳು ಅಳವಡಿಸುತ್ತಿದ್ದು. ಆದರೆ ಉಕ್ರೇನ್​ನಲ್ಲಿ ಎಲ್ಲವನ್ನೂ ರಸ್ತೆ ಮಾರ್ಗವಾಗಿಯೇ ಸಾಗಿಸಬೇಕಾಗಿದೆ. ರಷ್ಯಾ ಸೇನೆಯ ಬಳಿ ಅಗತ್ಯ ಪ್ರಮಾಣದ ಟ್ರಕ್​ಗಳು ಇಲ್ಲ. ಹೀಗಾಗಿ ನಿರೀಕ್ಷಿತ ವೇಗದಲ್ಲಿ ಯುದ್ಧೋಕರಣಗಳನ್ನು ಸಮರ ಭೂಮಿಗೆ ಸಾಗಿಸಲು ಸಾಧ್ಯವಾಗುತ್ತಿಲ್ಲ.

ಹೊರ ಜಗತ್ತಿಗೆ ರಷ್ಯಾದ ಆಕ್ರಮಣ ಎದ್ದುಕಾಣುವಷ್ಟು ತೀವ್ರವಾಗಿ ಉಕ್ರೇನ್​ನ ಪ್ರತಿರೋಧ ಅರಿವಾಗುತ್ತಿಲ್ಲ. ಯುದ್ಧ ಬೇಗ ಮುಗಿದಷ್ಟೂ ರಷ್ಯಾಕ್ಕೆ ಲಾಭ ಹೆಚ್ಚು, ಸಂಘರ್ಷದ ದಿನಗಳು ಹೆಚ್ಚಾದಷ್ಟೂ ಉಕ್ರೇನ್​ಗೆ ಲಾಭ. ಉಕ್ರೇನ್ ಆಡಳಿತವೂ ಇದೇ ನಿಟ್ಟಿನಲ್ಲಿ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ರಷ್ಯಾಕ್ಕೆ ರೈಲ್ವೆ ವ್ಯವಸ್ಥೆಯ ಲಾಭ ದಕ್ಕದಿರಲು ಏನೆಲ್ಲಾ ಮಾಡಬೇಕೋ ಅದೆಲ್ಲವನ್ನೂ ಬಹಳ ಹಿಂದೆಯೇ ಮಾಡಿಮುಗಿಸಿದೆ.

ಆದರೆ ಉಕ್ರೇನ್​ನಲ್ಲಿರುವ ರಷ್ಯಾದ ಕಮಾಂಡರ್​ಗಳು ಮನಸ್ಸು ಮಾಡಿದರೆ ಶೀಘ್ರದಲ್ಲಿ ಪ್ರತಿತಂತ್ರ ಹೆಣೆಯುವುದು ಕಷ್ಟವಲ್ಲ. ಪುಟಿನ್ ಆಡಳಿತದಲ್ಲಿ ಸೇನೆಗೆ ಅಷ್ಟು ಸ್ವಾತಂತ್ರ್ಯವೂ ಇದೆ. ಆದರೂ ಅವರು ಹಾಗೆ ಮಾಡುತ್ತಿಲ್ಲ. ಯುದ್ಧಭೂಮಿಯಲ್ಲಿ ಹೋರಾಟ ನಿಧಾನಿಸುವುದೂ ಸಹ ಒಂದು ಕಾರ್ಯತಂತ್ರ ಎನ್ನುತ್ತಾರೆ ಅಮೆರಿಕ ಸೇನೆಯ ಲೆಫ್ಟಿನೆಂಟ್ ಕರ್ನಲ್ ಅಲೆಕ್ಸ್ ವೆರ್​ಶಿನಿನ್ ಕಾರಣವಿಲ್ಲದೆ. ಉಕ್ರೇನ್​ನಲ್ಲಿ ಸೇನೆಗೆ ಹಿನ್ನಡೆಯಾಗಿದೆ ಎಂದು ರಷ್ಯಾ ಎಲ್ಲಿಯೂ ಹೇಳಿಲ್ಲ. ಕಳೆದ ಗುರುವಾರ ರಷ್ಯಾ ದೂರದರ್ಶನದಲ್ಲಿ ಹೇಳಿಕೆ ನೀಡಿದ್ದ ಪುಟಿನ್, ‘ಎಲ್ಲವೂ ಅಂದುಕೊಂಡಂತೆ ಆಗುತ್ತಿದೆ. ಪ್ಲಾನ್ ಪ್ರಕಾರವೇ ನಮ್ಮ ಸಶಸ್ತ್ರಪಡೆಗಳು ಕೀವ್​ ಮಾರ್ಗದಲ್ಲಿ ಮುನ್ನಡೆಯುತ್ತಿವೆ’ ಎಂದು ಹೇಳಿದ್ದರು.

ಇದನ್ನೂ ಓದಿ: ಯುದ್ಧ ಯಾರಿಗೂ ಬೇಕಾಗಿಲ್ಲ ಎಂಬುದನ್ನು ವ್ಲಾದಿಮಿರ್​ ಪುಟಿನ್​ಗೆ ಅರ್ಥ ಮಾಡಿಸಿ; ಪ್ರಧಾನಿ ಮೋದಿಗೆ ಉಕ್ರೇನ್​ ವಿದೇಶಾಂಗ ಸಚಿವರ ಮನವಿ

Second Student Died in Ukraine

ಉಕ್ರೇನ್​ನಲ್ಲಿ ರಷ್ಯಾದ ವಾಹನ ಸಾಲು

ಜನರ ವಿಶ್ವಾಸ ಸಿಗುತ್ತಿಲ್ಲ

ಪಶ್ಚಿಮ ಯೂರೋಪ್​ನ ದೇಶಗಳಿಗೂ ಉಕ್ರೇನ್​ಗೂ ಸಾಕಷ್ಟು ವ್ಯತ್ಯಾಸವಿದೆ. ರಷ್ಯಾದಲ್ಲಿ ಬಳಕೆಯಾಗುವಂಥದ್ದ ಗೇಜ್​ ಅನ್ನು ಉಕ್ರೇನ್ ರೈಲ್ವೆ ಬಳಸುತ್ತದೆ. ಆದರೆ ಖಾರ್ಕಿವ್, ಮೈಕೊಲೆವ್ ಮತ್ತು ಝಪೊರಿಝ್​ಝಹಿಯಾದಂಥ ನಗರಗಳನ್ನು ಅಧೀನದಲ್ಲಿ ಇರಿಸಿಕೊಳ್ಳದೇ ರೈಲ್ವೆ ವ್ಯವಸ್ಥೆ ಬಳಕೆ ರಷ್ಯಾಕ್ಕೆ ದಕ್ಕುವಂತಿಲ್ಲ. ಈ ನಗರಗಳನ್ನು ವಶಪಡಿಸಿಕೊಂಡು ಅಧೀನದಲ್ಲಿ ಇರಿಸಿಕೊಳ್ಳಬೇಕೆಂದರೆ ಉಕ್ರೇನ್​ಗೆ ಬಂದಿರುವ ಪಡೆಗಳಲ್ಲಿಯೇ ಒಂದಿಷ್ಟು ಜನರನ್ನು ಅಲ್ಲಿ ಉಳಿಸಬೇಕಾಗುತ್ತದೆ.

ಉಕ್ರೇನ್​ ಜನರ ವಿಶ್ವಾಸವನ್ನು ರಷ್ಯಾ ದಕ್ಕಿಸಿಕೊಂಡಿಲ್ಲ. ಹೀಗಾಗಿ ರಷ್ಯಾ ಸೇನೆಯ ಎಂಜಿನಿಯರ್​ಗಳಿಗೆ ಪೈಪ್​ಲೈನ್​ಗಳನ್ನು ಅಳವಡಿಸಲು ಸಾಧ್ಯವಾಗುತ್ತಿಲ್ಲ. ಗೆದ್ದ ನೆಲದಲ್ಲಿ ಪೈಪ್​ಲೈನ್ ಅಳವಡಿಸಿದರೆ ಜನರ ವಿಶ್ವಾಸ ಇಲ್ಲದಿದ್ದರೆ ಅವಕ್ಕೆ ಉಳಿಗಾಲ ಇರುವುದಿಲ್ಲ. ಹೀಗಾಗಿ ಇಂಧನವನ್ನು ಟ್ಯಾಂಕರ್​ಗಳ ಮೂಲಕ ರಸ್ತೆ ಮಾರ್ಗದಲ್ಲಿಯೇ ಸಾಗಿಸಬೇಕಾಗಿದೆ. ವಾಹನಗಳ ಸಾಲಿನಲ್ಲಿ ಇರುವ ಟ್ಯಾಂಕರ್​ಗಳನ್ನು ಗುರಿಯಾಗಿಸಿ ನಾಶಪಡಿಸುವಂತೆ ಉಕ್ರೇನ್​ನ ರಕ್ಷಣಾ ಇಲಾಖೆಯು ತನ್ನ ನಾಗರಿಕರಿಗೆ ಕರೆ ನೀಡಿದೆ.

ಮೈಲುಗಟ್ಟಲೆ ಸೈನಿಕರು

4.1 ಕೋಟಿ ಜನಸಂಖ್ಯೆಯ ಉಕ್ರೇನ್​ ವಿಸ್ತೀರ್ಣದಲ್ಲಿ ಫ್ರಾನ್ಸ್​ಗಿಂತಲೂ ದೊಡ್ಡ ದೇಶ. ರಷ್ಯಾದಿಂದ ಬರುತ್ತಿರುವ ಸೇನೆಯು ಬ್ರಿಗೇಡ್​ವಾರು ವಾಹನಸಾಲಿನಲ್ಲಿ ಸಂಚರಿಸುತ್ತಿದೆ. ಒಂದು ಬ್ರಿಗೇಡ್​ನಲ್ಲಿ ಸುಮಾರು 5000 ಸೈನಿಕರು ಇರುತ್ತಾರೆ. ಅಂದರೆ ಸುಮಾರು 400 ವಾಹನಗಳು ಇರುತ್ತವೆ. ರಷ್ಯಾ ಸೇನೆಯ ನಿಯಮಗಳ ಪ್ರಕಾರ ಒಂದು ಸೇನಾ ವಾಹನದಿಂದ ಮತ್ತೊಂದು ವಾಹನ 50 ಮೀಟರ್ ಅಂತರ ಕಾಯ್ದುಕೊಳ್ಳುತ್ತದೆ. ಈ ಲೆಕ್ಕಾಚಾರದಲ್ಲಿ ಒಂದು ಬ್ರಿಗೇಡ್​ನ ವಾಹನಸಾಲು 20 ಕಿಲೋಮೀಟರ್​ವರೆಗೆ ಇರುತ್ತದೆ. ಇಂಥ ನಾಲ್ಕು ಬ್ರಿಗೇಡ್​ಗಳು ಸೇರಿದರೆ ಒಂದು ಡಿವಿಷನ್ ಎಂದಾಗುತ್ತದೆ. ಯಾವುದೇ ಕಾರಣಕ್ಕೆ ಸೇನಾ ಟ್ರಕ್ ರಸ್ತೆ ಮಧ್ಯೆ ಕೆಟ್ಟು ನಿಂತರೆ ಅದರ ಹಿಂದಿನ ವಾಹನ ಸಾಲು ನಿಂತಲ್ಲೇ ಇರಬೇಕಾಗುತ್ತದೆ. ರಷ್ಯಾದ ವೇಗಕ್ಕೆ ಕಡಿವಾಣ ಹಾಕಿರುವುದು ಈ ಸಮಸ್ಯೆ.

ಇದನ್ನೂ ಓದಿ: Ukraine Crisis: ರಷ್ಯಾ- ಉಕ್ರೇನ್ ಬಿಕ್ಕಟ್ಟಿನ ಇತ್ತೀಚಿನ ಬೆಳವಣಿಗೆಗಳೇನು? ಇಲ್ಲಿವೆ 10 ಮುಖ್ಯಾಂಶಗಳು

ಇದನ್ನೂ ಓದಿ: Ukraine War: ರಷ್ಯಾದಿಂದ ಕದನ ವಿರಾಮ ಉಲ್ಲಂಘನೆ; ಮರಿಪೊಲ್​ನಲ್ಲಿ ಮತ್ತೆ ಗುಂಡಿನ ದಾಳಿ

Follow us on

Related Stories

Most Read Stories

Click on your DTH Provider to Add TV9 Kannada