Russia Ukraine War: ಉಕ್ರೇನ್ಗೆ ನೆರವು ಬೇಡ, ಅಮೆರಿಕಕ್ಕೆ ತಾಕೀತು ಮಾಡಿ ಗಡಿಗೆ ಅಣ್ವಸ್ತ್ರ ರವಾನಿಸಿದ ರಷ್ಯಾ
ಉಕ್ರೇನ್ ಗಡಿಯಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತ ಕ್ಷಿಪಣಿಗಳನ್ನು ನಿಯೋಜಿಸಲು ರಷ್ಯಾ ಮುಂದಾಗಿದ್ದು, ಯುದ್ಧ ಶೀಘ್ರ ಕೊನೆಗೊಳ್ಳದಿದ್ದರೆ ಜಗತ್ತಿಗೆ ಅಣ್ವಸ್ತ್ರದ ಆಪತ್ತು ತಪ್ಪಿದ್ದಲ್ಲ.
ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಸಶಸ್ತ್ರ ಸಂಘರ್ಷ ಸದ್ಯಕ್ಕೆ ಶಮನಗೊಳ್ಳುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಸದ್ಯದ ಮಟ್ಟಿಗೆ ಉಕ್ರೇನ್ ಸೇನೆ ಹಲವು ಪ್ರದೇಶಗಳಲ್ಲಿ ನಿರ್ಣಾಯಕ ಜಯಗಳಿಸಿದೆ. ಉಕ್ರೇನ್ನಲ್ಲಿ ತಾನು ಆಕ್ರಮಿಸಿಕೊಂಡಿದ್ದ ಸಾವಿರಾರು ಕಿಲೋಮೀಟರ್ ಪ್ರದೇಶವನ್ನು ಬಿಟ್ಟುಕೊಟ್ಟಿರುವ ರಷ್ಯಾ ಸೇನೆ ಗಡಿಯತ್ತ ಹಿಮ್ಮೆಟ್ಟಿದೆ. ಈ ನಡುವೆ ಉಕ್ರೇನ್ನ ನಾಲ್ಕು ಪ್ರಾಂತ್ಯಗಳನ್ನು ರಷ್ಯಾ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವ ಆದೇಶಕ್ಕೆ ಸಹಿ ಹಾಕಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಲ್ಲ ಆರೋಗ್ಯವಂತ ಪುರುಷರು ಸೇನೆಗೆ ಸೇರಬೇಕು ಎಂದು ಆಜ್ಞೆ ಮಾಡಿದ್ದಾರೆ. ಸೇನೆಗೆ ಸೇರಬೇಕಾಗುತ್ತದೆ ಎನ್ನುವ ಭೀತಿಯಲ್ಲಿ ಲಕ್ಷಾಂತರ ಜನರು ರಷ್ಯಾದಿಂದ ಓಡಿಹೋಗುತ್ತಿದ್ದು, 2ನೇ ಮಹಾಯುದ್ಧದ ನಂತರ ರಷ್ಯಾದಲ್ಲಿ ಇದು ಅತಿದೊಡ್ಡ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ.
ಉಕ್ರೇನ್ನಲ್ಲಿ ಅನುಭವಿಸಿದ ಸೋಲುಗಳಿಗೆ ಅಮೆರಿಕದ ನೆರವು ಕಾರಣ ಎಂದು ಭಾವಿಸಿರುವ ರಷ್ಯಾ, ಇದೀಗ ತನ್ನ ರಾಯಭಾರಿಯ ಮೂಲಕ ಅಮೆರಿಕ ಸರ್ಕಾರಕ್ಕೆ ಎಚ್ಚರಿಕೆಯ ನೇರ ಸಂದೇಶ ರವಾನಿಸಿದೆ. ಉಕ್ರೇನ್ಗೆ ಸಹಾಯದ ಪ್ರಮಾಣ ಹೆಚ್ಚಿಸುವ ಅಮೆರಿಕ ನಿರ್ಧಾರವನ್ನು ಖಂಡತುಂಡವಾಗಿ ವಿರೋಧಿಸಿರುವ ರಷ್ಯಾ ಸರ್ಕಾರವು, ‘ನೀವು ನೆರವು ನೀಡುವುದನ್ನು ತಕ್ಷಣ ನಿಲ್ಲಿಸದಿದ್ದರೆ ನಮ್ಮ ಸೇನೆಯನ್ನು ಎದುರಿಸಲು ಸಜ್ಜಾಗಿ. ನಿಮ್ಮ ಮೇಲೆ ದಾಳಿ ಮಾಡಲೂ ನಾವೂ ಹಿಂಜರಿಯುವುದಿಲ್ಲ’ ಎಂದು ಹೇಳಿದೆ. ಅಮೆರಿಕದಲ್ಲಿರುವ ರಷ್ಯಾದ ರಾಯಭಾರಿ ಆನಟೊಲಿ ಅಂಟೊನೊವ್ ಈ ವಿಚಾರವನ್ನು ಸ್ಪಷ್ಟ ಧ್ವನಿಯಲ್ಲಿ ಅಮೆರಿಕದ ಅಧ್ಯಕ್ಷರ ಕಚೇರಿಗೆ ರವಾನಿಸಿದ್ದಾರೆ.
‘ಉಕ್ರೇನ್ನಲ್ಲಿ ನೀವು ಏನೆಲ್ಲಾ ಮಾಡುತ್ತಿದ್ದರೋ ಅದು ನೇರವಾಗಿ ನಮ್ಮ ಭದ್ರತೆಗೆ ಇರುವ ಅಪಾಯವಾಗಿದೆ. ರಷ್ಯಾ ಮತ್ತು ಅಮೆರಿಕ ಸೇನೆಗಳು ರಣಭೂಮಿಯಲ್ಲಿ ಮುಖಾಮುಖಿಯಾಗುವ ಅಪಾಯ ಇದರಿಂದ ಮತ್ತಷ್ಟು ಹೆಚ್ಚಾಗಿದೆ. ಉಕ್ರೇನ್ ಸಂಘರ್ಷದಲ್ಲಿ ಅಮೆರಿಕವನ್ನು ಸಹಭಾಗಿ ಎಂದು ರಷ್ಯಾ ಪರಿಗಣಿಸಿದೆ’ ಎಂದು ಆನಟೊಲಿ ಹೇಳಿದ್ದಾರೆ.
ಅಗತ್ಯ ನೆರವು ದೊರೆತರೆ ಉಕ್ರೇನ್ ಸೈನಿಕರು ರಷ್ಯನ್ ಸೇನೆಯನ್ನು ಹಿಮ್ಮೆಟ್ಟಿಸಬಲ್ಲರು ಎಂಬುದು ಖಾತ್ರಿಯಾದ ನಂತರ ಅಮೆರಿಕ ಸೇನಾ ನೆರವನ್ನು ಹೆಚ್ಚಿಸಿದೆ. ಉಕ್ರೇನ್ನತ್ತ ಅಮೆರಿಕವು ನಿಖರವಾಗಿ ಗುರಿ ಮುಟ್ಟಬಲ್ಲ ‘ಹಿಮಾರ್ಸ್’ ಬಹುರಾಕೆಟ್ ವ್ಯವಸ್ಥೆಯನ್ನು ಕಳುಹಿಸಿಕೊಟ್ಟಿದೆ. ಕಳೆದ ಫೆಬ್ರುವರಿ 24ರಂದು ರಷ್ಯಾ ಸೇನೆಯು ಉಕ್ರೇನ್ ಗಡಿ ಪ್ರವೇಶಿಸಿದ ನಂತರ ಈವರೆಗೆ ಅಮೆರಿಕ ಸುಮಾರು 17 ಶತಕೋಟಿ ಡಾಲರ್ ಮೊತ್ತದಷ್ಟು ಸೇನಾ ನೆರವನ್ನು ಉಕ್ರೇನ್ಗೆ ಒದಗಿಸಿದೆ. ಆರಂಭದಲ್ಲಿ ರಷ್ಯಾ ಸೇನೆಯ ಎದುರು ತತ್ತರಿಸಿ ಹಿಮ್ಮೆಟ್ಟಿದ್ದ ಉಕ್ರೇನ್ ನಂತರದ ದಿನಗಳಲ್ಲಿ ಚೇತರಿಸಿಕೊಂಡು, ಪುನರ್ ಸಂಘಟಿತವಾಗಿ ರಷ್ಯಾ ಸೇನೆಯನ್ನು ಸೋಲಿಸುವ ಮಟ್ಟಿಗೆ ಪುಟಿದೇಳಲು ಅಮೆರಿಕದ ನೆರವು ಮುಖ್ಯ ಕಾರಣ.
ಮೃತ ಸೈನಿಕರ ಶವಗಳನ್ನು ಹೊತ್ತೊಯ್ಯದ ರಷ್ಯಾ ಸೇನೆ
ಸೇನಾ ಕಾರ್ಯತಂತ್ರದ ದೃಷ್ಟಿಯಿಂದ ಮಹತ್ವ ಪಡೆದಿರುವ ಉಕ್ರೇನ್ನ ಲಿಮನ್ ನಗರದಿಂದ ಹಿಂದೆ ಸರಿದಿರುವ ರಷ್ಯಾದ ಸೇನೆಯು ಮೃತ ಸೈನಕರ ಶವಗಳನ್ನೂ ಕೊಂಡೊಯ್ದಿಲ್ಲ. ರಸ್ತೆಗಳ ಮೇಲೆ ಬಿದ್ದಿದ್ದ ಮೃತ ಸೈನಿಕರ ಶವಗಳಿಗೆ ಉಕ್ರೇನ್ ನಾಗರಿಕರು ಮತ್ತು ಸೈನಿಕರೇ ಅಂತ್ಯಸಂಸ್ಕಾರ ನೆರವೇರಿಸಿದರು. ಅಂತಿಮ ಹೋರಾಟದ ನಂತರ ಉಕ್ರೇನ್ ಸೇನೆಯು ತನ್ನ ಸಹವರ್ತಿಗಳ ಶವಗಳನ್ನು ಒಂದೆಡೆ ಕಲೆಹಾಕಿತು. ಆದರೆ ರಷ್ಯಾ ಸೈನಿಕರ ಶವಗಳು ರಸ್ತೆಗಳಲ್ಲಿಯೇ ಇದ್ದವು ಎಂದು ಅಸೋಸಿಯೇಟೆಡ್ ಪ್ರೆಸ್ ಸುದ್ದಿಸಂಸ್ಥೆಯ ಪ್ರತಿನಿಧಿ ವರದಿ ಮಾಡಿದ್ದಾರೆ. ಉಕ್ರೇನ್ನಲ್ಲಿರುವ ರಷ್ಯಾದ ಸೇನೆಗೆ ಇದೇ ಮಾರ್ಗದಿಂದ ಆಹಾರ, ಇಂಧನ, ಔಷಧ ಬರಬೇಕಿದ್ದು ಮುಂದಿನ ದಿನಗಳಲ್ಲಿ ಮತ್ತೆ ಈ ಪ್ರದೇಶದಲ್ಲಿ ಹೋರಾಟ ಭುಗಿಲೇಳಬಹುದು ಎಂದು ವಿಶ್ಲೇಷಿಸಲಾಗಿದೆ.
ರಷ್ಯಾದಲ್ಲಿ ಸೇನಾ ನೇಮಕಾತಿ ಚುರುಕು
ಉಕ್ರೇನ್ನಲ್ಲಿ ಸರಣಿ ಸೋಲು ಕಂಡಿರುವ ರಷ್ಯಾ ಸೇನೆಗೆ ಬಲ ತುಂಬಲು ಪುಟಿನ್ ಮುಂದಾಗಿದ್ದಾರೆ. ಹೊಸದಾಗಿ 3 ಲಕ್ಷ ಮಂದಿಯನ್ನು ಸೇನೆಗೆ ಭರ್ತಿ ಮಾಡಿಕೊಳ್ಳಲು ಆದೇಶ ಹೊರಡಿಸಿದ್ದು, ‘ಉಕ್ರೇನ್ಗೆ ಬೆಂಬಲಿಸುತ್ತಿರುವ ದೇಶಗಳ ಮೇಲೆ ಪ್ರತಿದಾಳಿಗೆ ಹಿಂಜರಿಯುವುದಿಲ್ಲ’ ಎಂದು ಎಚ್ಚರಿಸಿದ್ದಾರೆ ಎಂದು ‘ಅಜ್ಜಝೀರಾ’ ಸುದ್ದಿತಾಣ ವರದಿ ಮಾಡಿದೆ. ಉಕ್ರೇನ್ ಗಡಿಯಲ್ಲಿ ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತ ಕ್ಷಿಪಣಿಗಳನ್ನು ನಿಯೋಜಿಸಲು ರಷ್ಯಾ ಮುಂದಾಗಿದ್ದು, ಯುದ್ಧ ಶೀಘ್ರ ಕೊನೆಗೊಳ್ಳದಿದ್ದರೆ ಜಗತ್ತಿಗೆ ಅಣ್ವಸ್ತ್ರದ ಆಪತ್ತು ತಪ್ಪಿದ್ದಲ್ಲ ಎಂದು ‘ವಿಯಾನ್’ ಸುದ್ದಿವಾಹಿಸುವ ಸುದ್ದಿ ಬಿತ್ತರಿಸಿದೆ.
2014ರಲ್ಲಿ ಕ್ರಿಯಿಯಾ ಪ್ರಸ್ಥಭೂಮಿಯನ್ನು ವಶಪಡಿಸಿಕೊಂಡಾಗ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಏಕಾಏಕಿ ಹೆಚ್ಚಾಗಿತ್ತು. ಈ ಬಾರಿಯೂ ಯುದ್ಧದ ಆರಂಭದಲ್ಲಿ ರಷ್ಯಾ ಪಡೆಗಳು ಉಕ್ರೇನ್ ರಾಜಧಾನಿ ಕೀವ್ ವರೆಗೆ ತಲುಪಿದಾಗ ರಷ್ಯನ್ನರು ಪುಟಿನ್ ಅವರನ್ನು ಕೊಂಡಾಡಿದ್ದರು. ಆದರೆ ಇದೀಗ ರಷ್ಯನ್ ಪಡೆಗಳು ಉಕ್ರೇನ್ನ ಸಂಘಟಿತ ಮತ್ತು ಹಠಾತ್ ದಾಳಿಯಿಂದ ತತ್ತರಿಸಿ ಹಿಮ್ಮೆಟ್ಟುತ್ತಿದ್ದು, ಪುಟಿನ್ ಜನಪ್ರಿಯತೆಯೂ ಕುಸಿಯುತ್ತಿದೆ. ‘ಇದು ರಷ್ಯಾದ ಯುದ್ಧವಲ್ಲ, ಪುಟಿನ್ ಯುದ್ಧ. ರಷ್ಯಾಕ್ಕಾಗಿ ಬೇಕಾದರೆ ಸಾಯುತ್ತೇನೆ, ಪುಟಿನ್ಗಾಗಿ ಅಲ್ಲ’ ಎಂದು ಅಲ್ಲಿನ ಯುವಜನರು ಘೋಷಣೆಗಳನ್ನು ಕೂಗುತ್ತಿದ್ದು ಪ್ರತಿಭಟನೆ ಹತ್ತಿಕ್ಕುವುದು ಅಲ್ಲಿನ ಆಡಳಿತಕ್ಕೆ ದೊಡ್ಡ ತಲೆಬಿಸಿಯಾಗಿದೆ.