ಮಾಸ್ಕೋ: ಇಡೀ ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದ್ದ ರಷ್ಯಾ-ಉಕ್ರೇನ್ ಸಂಘರ್ಷ (Russia-Ukraine Crisis) ಕೊನೆಗೊಳ್ಳುವ ಹಂತಕ್ಕೆ ತಲುಪಿದೆ. ಉಕ್ರೇನ್ ಗಡಿಯಿಂದ ಸಂಪೂರ್ಣವಾಗಿ ತನ್ನ ದೇಶದ ಸೇನಾ ತುಕಡಿಗಳನ್ನು ವಾಪಾಸ್ ಪಡೆಯುವುದಾಗಿ ರಷ್ಯಾ ಘೋಷಿಸಿದೆ. ಹಾಗೇ, ಉಕ್ರೇನ್‌ನ ಗಡಿಯಿಂದ (Ukraine Border) ಮೊದಲ ಸೇನಾ ತಂಡವನ್ನು ವಾಪಾಸ್ ಕರೆಸಿಕೊಳ್ಳುತ್ತಿರುವ ವಿಡಿಯೋ ಸ್ಥಳೀಯ ವಾಹಿನಿಗಳಲ್ಲಿ ಪ್ರಸಾರವಾಗಿದೆ. ರಷ್ಯನ್ ಸೈನಿಕರ ತಂಡ ರಷ್ಯಾದ ನಿಯಂತ್ರಿತ ದ್ವೀಪವನ್ನು ಸಂಪರ್ಕಿಸುವ ಸೇತುವೆಯನ್ನು ದಾಟುತ್ತಿರುವ ಫೋಟೋಗಳನ್ನು ವಾಹಿನಿಗಳು ಪ್ರಸಾರ ಮಾಡಿವೆ. ಈ ಕುರಿತು ಮಾಹಿತಿ ನೀಡಿರುವ ರಷ್ಯಾ ವಿದೇಶಾಂಗ ಇಲಾಖೆಯ ವಕ್ತಾರ, ಕ್ರೈಮಿಯಾದಲ್ಲಿ (Crimea) ಹಮ್ಮಿಕೊಂಡಿದ್ದ ಮಿಲಿಟರಿ ಕಾರ್ಯಾಚರಣೆ ಮುಕ್ತಾಯವಾಗಿದೆ. ರಷ್ಯಾ- ಉಕ್ರೇನ್ ಗಡಿಯಲ್ಲಿ ನಿಯೋಜನೆಯಾಗಿದ್ದ ಸೇನೆಗೆ ವಾಪಾಸ್ ಬರುವಂತೆ ಸೂಚಿಸಲಾಗಿದೆ ಎಂದು ಖಚಿತಪಡಿಸಿದ್ದಾರೆ.
ಮಂಗಳವಾರ ತನ್ನ ಕೆಲವು ಸೇನಾ ತುಕಡಿಗಳನ್ನು ಉಕ್ರೇನ್ ಗಡಿಯಿಂದ ಹಿಂಪಡೆದಿದ್ದ ರಷ್ಯಾ ಇಂದು ಸಂಪೂರ್ಣವಾಗಿ ಸೇನಾ ತುಕಡಿಗಳನ್ನು ಹಿಂಪಡೆಯುವುದಾಗಿ ಘೋಷಣೆ ಮಾಡಿದೆ. ಈ ಮೂಲಕ ಮತ್ತೊಂದು ಮಹಾಯುದ್ಧದ ಭೀತಿ ದೂರವಾದಂತಾಗಿದೆ. ದಕ್ಷಿಣ ಮಿಲಿಟರಿ ಘಟಕಗಳು ಯುದ್ಧತಂತ್ರದ ಚಟುವಟಿಕೆಗಳಲ್ಲಿ ಭಾಗವಹಿಸಿದ ನಂತರ ತಮ್ಮ ಮೂಲ ನೆಲೆಗೆ ವಾಪಾಸ್ ಹೋಗುತ್ತಿವೆ ಎಂದು ಮಾಸ್ಕೋದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ರಷ್ಯಾದ ಟ್ಯಾಂಕ್‌ಗಳು, ಪದಾತಿ ದಳದ ವಾಹನಗಳು ಮತ್ತು ಫಿರಂಗಿಗಳು ಕ್ರೈಮಿಯಾದಿಂದ ರೈಲಿನ ಮೂಲಕ ಹೊರಡುತ್ತಿವೆ.
ಜಾಗತಿಕ ರಾಜತಾಂತ್ರಿಕ ಒತ್ತಡ ಹಾಗೂ ಉಕ್ರೇನ್ ದೇಶದ ಪರವಾದ ಜಾಗತಿಕ ಬೆಂಬಲವನ್ನು ಗಮನಿಸಿ ರಷ್ಯಾ ತನ್ನ ಸೇನೆಯನ್ನು ವಾಪಾಸ್ ಪಡೆದಿದೆ ಎನ್ನಲಾಗುತ್ತಿದೆ. ಫಿರಂಗಿ, ಟ್ಯಾಂಕರ್ಗಳ ಜೊತೆಗೆ ಉಕ್ರೇನ್ ಗಡಿಯಲ್ಲಿ ನಿಯೋಜಿಸಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕೂಡ ರಷ್ಯಾ ಹಿಂಪಡೆದಿದೆ. ಉಕ್ರೇನ್ ಮೇಲೆ ದಾಳಿ ನಡೆಸುವುದಿಲ್ಲ ಎಂದು ರಷ್ಯಾ ಈವರೆಗೆ ಹೇಳುತ್ತಲೇ ಬಂದಿತ್ತು. ಉಕ್ರೇನ್ ಗಡಿಯಲ್ಲಿನ ಸೇನಾ ನಿಯೋಜನೆಯು ಮಿಲಿಟರಿ ತರಬೇತಿಗೆ ಮಾತ್ರ ಎಂದೂ ಅದು ಸ್ಪಷ್ಟಪಡಿಸಿತ್ತು. ಉಕ್ರೇನ್‌ಗೆ ನ್ಯಾಟೊ ಬೆಂಬಲವನ್ನು ವಿರೋಧಿಸಿರುವ ರಷ್ಯಾ, ಗಡಿಯಲ್ಲಿ ಸೇನೆಯನ್ನು ನಿಯೋಜಿಸಿತ್ತು. ಆದರೂ ರಷ್ಯಾ- ಉಕ್ರೇನ್ ಗಡಿಯಲ್ಲಿ ಯುದ್ಧ ನಡೆಯುವುದು ಖಚಿತವೆಂಬ ಆತಂಕ ಎದುರಾಗಿತ್ತು.
New batch of @Maxar satellite ? show Russia’s continuing buildup in the past 48 hours. Increased military activity in Belarus, Crimea, and western Russia. This is Rechitsa, Belarus, showing Russian troops, equipment, and departures. pic.twitter.com/h34jTVJynx
— Christopher Miller (@ChristopherJM) February 15, 2022
ಆದರೂ ಫೆ. 20ರಂದು ಚೀನಾದಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್ ಅಂತ್ಯದವರೆಗೆ ಉಕ್ರೇನ್ ಮೇಲೆ ರಷ್ಯಾದ ದಾಳಿ ನಡೆಯುವ ಸಾಧ್ಯತೆಯಿಲ್ಲ ಎಂದು ಊಹಿಸಲಾಗಿತ್ತು. ಯುದ್ಧದ ಭೀತಿಯಿಂದ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಉಕ್ರೇನ್‌ನಲ್ಲಿ ವಾಸಿಸುವ ಎಲ್ಲಾ ಅಮೆರಿಕನ್ ಪ್ರಜೆಗಳನ್ನು ಸಾಧ್ಯವಾದಷ್ಟು ಬೇಗ ಹೊರಡುವಂತೆ ಸೂಚಿಸಿದ್ದರು.
ಹಾಗೇ, ರಷ್ಯಾ ಅಧ್ಯಕ್ಷ ಪುಟಿನ್ ಉಕ್ರೇನ್ ಗಡಿಯಲ್ಲಿ ಯುದ್ಧ ಘೋಷಿಸುವ ಸಾಧ್ಯತೆ ಇದ್ದುದರಿಂದ ಭಾರತ ಕೂಡ ಉಕ್ರೇನ್‌ನಲ್ಲಿರುವ ತನ್ನ ನಾಗರಿಕರಿಗೆ ದೇಶವನ್ನು ತಾತ್ಕಾಲಿಕವಾಗಿ ತೊರೆಯುವುದನ್ನು ಪರಿಗಣಿಸುವಂತೆ ಸಲಹೆ ನೀಡಿತ್ತು. ಉಕ್ರೇನ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಅನಿಶ್ಚಿತತೆಯ ದೃಷ್ಟಿಯಿಂದ, ಭಾರತೀಯ ಪ್ರಜೆಗಳು, ಅಲ್ಲೇ ಉಳಿಯಲು ಅನಿವಾರ್ಯವಲ್ಲದ ವಿದ್ಯಾರ್ಥಿಗಳು ತಾತ್ಕಾಲಿಕವಾಗಿ ಉಕ್ರೇನ್ ದೇಶವನ್ನು ತೊರೆಯುವುದನ್ನು ಪರಿಗಣಿಸಬಹುದು ಎಂದು ಕೈವ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಸೂಚಿಸಿತ್ತು. ಹಾಗೇ, ಭಾರತೀಯ ಪ್ರಜೆಗಳು ಉಕ್ರೇನ್‌ನ ಯಾವ ಪ್ರದೇಶದಲ್ಲಿ ಇರುತ್ತೀರಿ ಎನ್ನುವ ಬಗ್ಗೆ ರಾಯಭಾರ ಕಚೇರಿಗೆ ತಿಳಿಸಲು ವಿನಂತಿಸಲಾಗಿದೆ, ರಾಯಭಾರ ಕಚೇರಿಯು ಅಗತ್ಯವಿದ್ದಾಗ ಅವರನ್ನು ತಲುಪಲು ಸಹಾಯ ಮಾಡಲಿದೆ ಎಂದು ಸಂದೇಶ ರವಾನಿಸಲಾಗಿತ್ತು. ಆದರೆ, ಇದೀಗ ರಷ್ಯಾ ತನ್ನ ಸೇನಾ ಪಡೆಯನ್ನು ಹಿಂಪಡೆದಿರುವುದರಿಂದ ಉಕ್ರೇನ್ ಮಾತ್ರವಲ್ಲದೆ ಬೇರೆ ದೇಶಗಳು ಕೂಡ ನಿಟ್ಟುಸಿರು ಬಿಡುವಂತಾಗಿದೆ.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಸಂಘರ್ಷ: ತೈಲ ಬೆಲೆಗಳ ಏರಿಕೆ, ಬಜೆಟ್ ಮತ್ತು ಹಣದುಬ್ಬರದ ಮೇಲೆ ಹೇಗೆ ಪ್ರಭಾವ ಬೀರಲಿದೆ?
Published On - 2:04 pm, Wed, 16 February 22