Sri Lanka Crisis ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡ ರಾಜಪಕ್ಸ ಆಡಳಿತ ಒಕ್ಕೂಟ; ಹೊಸದಾಗಿ ನೇಮಕಗೊಂಡ ಹಣಕಾಸು ಸಚಿವ ಅಲಿ ಸಾಬ್ರಿ ರಾಜೀನಾಮೆ

Sri Lanka Crisis ಸಂಸತ್ತಿನಲ್ಲಿ ಬಹುಮತ ಕಳೆದುಕೊಂಡ ರಾಜಪಕ್ಸ ಆಡಳಿತ ಒಕ್ಕೂಟ; ಹೊಸದಾಗಿ ನೇಮಕಗೊಂಡ ಹಣಕಾಸು ಸಚಿವ ಅಲಿ ಸಾಬ್ರಿ ರಾಜೀನಾಮೆ
ಶ್ರೀಲಂಕಾದಲ್ಲಿ ಪ್ರತಿಭಟನೆ

ಶ್ರೀಲಂಕಾ ಅಧ್ಯಕ್ಷರ ಸಹೋದರ, ಹಣಕಾಸು ಸಚಿವಬೆಸಿಲ್ ರಾಜಪಕ್ಸ ಅವರನ್ನು ವಜಾಗೊಳಿಸಿ ಆ ಸ್ಥಾನಕ್ಕೆ ಅಲಿ ಸಾಬ್ರಿ ಅವರನ್ನು ನೇಮಕ ಮಾಡಲಾಗಿತ್ತು.  ಸಾಬ್ರಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ತಮ್ಮ ರಾಜೀನಾಮೆಯನ್ನು ಸಲ್ಲಿಸುತ್ತಾ, ಈ ಬಿಕ್ಕಟ್ಟನ್ನು ನಿಯಂತ್ರಿಸಲು  "ತಾಜಾ, ಪೂರ್ವಭಾವಿ ಮತ್ತು ಅಸಾಂಪ್ರದಾಯಿಕ ಕ್ರಮಗಳು" ಅಗತ್ಯವಿದೆ ಎಂದು ಹೇಳಿದರು.

TV9kannada Web Team

| Edited By: Rashmi Kallakatta

Apr 05, 2022 | 3:13 PM

ಕೊಲಂಬೊ: ತುರ್ತು ಪರಿಸ್ಥಿತಿ ಹೇರಿದ ನಂತರ ಮೊದಲ ಬಾರಿಗೆ ಮಂಗಳವಾರದ ಕಲಾಪ ಆರಂಭವಾಗುತ್ತಿದ್ದಂತೆ ಶ್ರೀಲಂಕಾ (Sri Lanka) ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ಅವರ ಆಡಳಿತ ಒಕ್ಕೂಟವು ಸಂಸತ್ತಿನಲ್ಲಿ ಬಹುಮತವನ್ನು ಕಳೆದುಕೊಂಡಿತು. ರಾಜಪಕ್ಸ ಕುಟುಂಬದ ವಿರುದ್ಧ ಸಾರ್ವಜನಿಕರ ಆಕ್ರೋಶದ ನಡುವೆಯೇ ಕನಿಷ್ಠ 41 ಶಾಸಕರು ಮೈತ್ರಿಕೂಟದಿಂದ ಹೊರನಡೆದಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಈ ಹಿಂದೆ ಅಧ್ಯಕ್ಷ ರಾಜಪಕ್ಸ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಸಂಸತ್ ಬಹುಮತವನ್ನು ಸಾಬೀತುಪಡಿಸುವವರಿಗೆ ಸರ್ಕಾರವನ್ನು ಹಸ್ತಾಂತರಿಸಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ. ಶ್ರೀಲಂಕಾ ಅಧ್ಯಕ್ಷರ ಸಹೋದರ, ಹಣಕಾಸು ಸಚಿವ ಬೆಸಿಲ್ ರಾಜಪಕ್ಸ ಅವರನ್ನು ವಜಾಗೊಳಿಸಿ ಆ ಸ್ಥಾನಕ್ಕೆ ಅಲಿ ಸಾಬ್ರಿ (Ali Sabry) ಅವರನ್ನು ನೇಮಕ ಮಾಡಲಾಗಿತ್ತು.  ಸಾಬ್ರಿ ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ ತಮ್ಮ ರಾಜೀನಾಮೆಯನ್ನು ಸಲ್ಲಿಸುತ್ತಾ, ಈ ಬಿಕ್ಕಟ್ಟನ್ನು ನಿಯಂತ್ರಿಸಲು  “ತಾಜಾ, ಪೂರ್ವಭಾವಿ ಮತ್ತು ಅಸಾಂಪ್ರದಾಯಿಕ ಕ್ರಮಗಳು” ಅಗತ್ಯವಿದೆ ಎಂದು ಹೇಳಿದರು. ಏಪ್ರಿಲ್ 3 ರಂದು ಅವರು ನ್ಯಾಯಾಂಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ, ಮತ್ತೊಂದು ಹುದ್ದೆಯನ್ನು ವಹಿಸಿಕೊಳ್ಳುವ ಉದ್ದೇಶ ಇರಲಿಲ್ಲ ಎಂದು  ಸಾಬ್ರಿ ಹೇಳಿದ್ದಾರೆ.

ಏತನ್ಮಧ್ಯೆ ಸುಮಾರು 2,000 ಪ್ರತಿಭಟನಾಕಾರರು ಸೋಮವಾರ ತಂಗಲ್ಲೆಯಲ್ಲಿರುವ ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ನಿವಾಸವನ್ನು ತಲುಪಿ ರಾಜೀನಾಮೆಗೆ ಒತ್ತಾಯಿಸಿದರು. ಪ್ರತಿಭಟನಾಕಾರರು ಪೊಲೀಸ್ ಬ್ಯಾರಿಕೇಡ್‌ಗಳನ್ನು ಭೇದಿಸಿದರು ಎಂದು ವರದಿಯಾಗಿದೆ.  ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿವೆ. ಕೊಲಂಬೊದ ಇಂಡಿಪೆಂಡೆನ್ಸ್ ಸ್ಕ್ವೇರ್ ನಲ್ಲಿ ಮತ್ತು ಕನಿಷ್ಠ ಆರು ಶಾಸಕರ ನಿವಾಸಗಳ ಹೊರಗೆ ಸೇರಿದಂತೆ ದೇಶದಾದ್ಯಂತ ಪ್ರತಿಭಟನೆಗಳು ಮುಂದುವರೆದವು.

41 ಶಾಸಕರು ರಾಜೀನಾಮೆ;  ಅಧ್ಯಕ್ಷ, ಪ್ರಧಾನಿಯ ರಾಜೀನಾಮೆಗೆ ವಿಪಕ್ಷ ಒತ್ತಾಯ ಸಮ್ಮಿಶ್ರ ಪಕ್ಷವನ್ನು ತೊರೆಯಲಿರುವ 41 ಶಾಸಕರ ಹೆಸರನ್ನು ಪಕ್ಷದ ನಾಯಕರು ಮಂಗಳವಾರ ಸಂಸತ್ತಿನಲ್ಲಿ ಪ್ರಕಟಿಸಿದರು. ಅವರು ಈಗ ಸ್ವತಂತ್ರ ಸದಸ್ಯರಾಗಿದ್ದಾರೆ. ರಾಜಪಕ್ಸ ಅವರ ಅಲ್ಪಸಂಖ್ಯಾತ ಸರ್ಕಾರವು ನಿರ್ಧಾರ ಕೈಗೊಳ್ಳುವುದು ಹೆಚ್ಚು ಸವಾಲಿನ ಸಂಗತಿಯಾಗಿದ್ದರೂ ಇನ್ನೂ ಯಾವುದೇ ಮತ ಎಣಿಕೆ ನಡೆದಿಲ್ಲ. ಆದಾಗ್ಯೂ, ಸ್ವತಂತ್ರ ಸಂಸದರು ಸದನದಲ್ಲಿ ಸರ್ಕಾರದ ಪ್ರಸ್ತಾಪಗಳನ್ನು ಬೆಂಬಲಿಸುವುದನ್ನು ಮುಂದುವರಿಸಬಹುದು. “ಇಂಧನ ಮತ್ತು ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯಿದೆ. ಯಾವುದೇ ಔಷಧಿಗಳಿಲ್ಲದ ಕಾರಣ ಆಸ್ಪತ್ರೆಗಳು ಮುಚ್ಚುವ ಹಂತದಲ್ಲಿವೆ” ಎಂದು ರಾಜಪಕ್ಸ ಅವರ ಒಕ್ಕೂಟಕ್ಕೆ ಬೆಂಬಲವನ್ನು ಹಿಂತೆಗೆದುಕೊಂಡಿರುವ ಶ್ರೀಲಂಕಾ ಫ್ರೀಡಂ ಪಕ್ಷದ ನಾಯಕ ಮೈತ್ರಿಪಾಲ ಸಿರಿಸೇನಾ ಸಂಸತ್ತಿಗೆ ತಿಳಿಸಿದರು. ಇಂತಹ ಸಮಯದಲ್ಲಿ ನಮ್ಮ ಪಕ್ಷ ಜನರ ಪರ ನಿಂತಿದೆ.

ಸಿರಿಸೇನಾ ಅವರು ಇತರ ಶಾಸಕರೊಂದಿಗೆ ಅಧ್ಯಕ್ಷ ರಾಜಪಕ್ಸ ಮತ್ತು ಅವರ ಹಿರಿಯ ಸಹೋದರ, ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸ ಅವರು ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರವನ್ನು ಕಂಡುಕೊಳ್ಳಲು ಸ್ಪಷ್ಟ ಯೋಜನೆಯನ್ನು ಮಂಡಿಸಲು ಕರೆ ನೀಡಿದರು.  ಆದರೆ ವಿರೋಧ ಪಕ್ಷಗಳು ಅಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಕೆಳಗಿಳಿಯುವಂತೆ ಒತ್ತಾಯಿಸಿವೆ.

ರಾಜಪಕ್ಸ ಅಧಿಕಾರದ ಮೇಲಿನ ಹಿಡಿತ ದುರ್ಬಲ: ಆಡಳಿತಾರೂಢ ಒಕ್ಕೂಟ ಎಷ್ಟು ಸ್ಥಾನಗಳನ್ನು ಹೊಂದಿದೆ? 2020 ರ ಸಾರ್ವತ್ರಿಕ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದಿದ್ದ ಮತ್ತು ವಿರೋಧ ಪಕ್ಷದಿಂದ ಪಕ್ಷಾಂತರದ ಮೂಲಕ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಂಡ ಆಡಳಿತ ಒಕ್ಕೂಟವು ಮಂಗಳವಾರ ಕನಿಷ್ಠ 41 ಸಂಸದರ ಬೆಂಬಲವನ್ನು ಕಳೆದುಕೊಂಡಿದೆ. ಇವರಲ್ಲಿ ಮಾಜಿ ಅಧ್ಯಕ್ಷ ಸಿರಿಸೇನಾ ಅವರ ಶ್ರೀಲಂಕಾ ಫ್ರೀಡಂ ಪಾರ್ಟಿ (SLFP) ಸದಸ್ಯರು ಮತ್ತು 11 ಸಮ್ಮಿಶ್ರ ಪಾಲುದಾರರ ಇತರರು ಸೇರಿದ್ದಾರೆ. ಇದು ಈಗ 109 ಸ್ಥಾನಗಳನ್ನು ಹೊಂದಿರುವಂತೆ ತೋರುತ್ತಿದೆ, 225 ಸದಸ್ಯರ ಸಂಸತ್ತಿನಲ್ಲಿ ಸರಳ ಬಹುಮತಕ್ಕೆ ಅಗತ್ಯವಿರುವ 113 ಸ್ಥಾನಗಳಿಗಿಂತ ಐದು ಕಡಿಮೆ. ಆದಾಗ್ಯೂ, ಸರ್ಕಾರವು ಸರಳ ಬಹುಮತವನ್ನು ಹೊಂದಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಇದನ್ನೂ ಓದಿ: Sri Lanka Crisis: ರಾಜೀನಾಮೆ ನೀಡಲು ಶ್ರೀಲಂಕಾ ಅಧ್ಯಕ್ಷ ನಕಾರ, ವಿರೋಧ ಪಕ್ಷಗಳ ಏಕತಾ ಪ್ರಸ್ತಾವಕ್ಕೆ ತಿರಸ್ಕಾರ

Follow us on

Related Stories

Most Read Stories

Click on your DTH Provider to Add TV9 Kannada