ಶ್ರೀಲಂಕಾ ಆಹಾರ ಬಿಕ್ಕಟ್ಟು: ರೈತರು ಸಾವಯವಕ್ಕೆ ಸಿದ್ಧಗೊಳ್ಳುವ ಮೊದಲೇ ರಸಗೊಬ್ಬರಕ್ಕೆ ನಿಷೇಧ, ಆಹಾರ ಭದ್ರತೆಗೆ ಆತಂಕ

ಮುಂದಿನ ಮುಂಗಾರು ಹಂಗಾಮಿನಿಂದ ಶ್ರೀಲಂಕಾ ಸರ್ಕಾರ ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ನಿರ್ಬಂಧಿಸುವುದಾಗಿ ಘೋಷಿಸಿದೆ. ಸರ್ಕಾರದ ಏಕಪಕ್ಷೀಯ ನಿರ್ಧಾರದ ವಿರುದ್ಧ ರೈತರು ಸೆಟೆದು ನಿಂತಿದ್ದಾರೆ.

ಶ್ರೀಲಂಕಾ ಆಹಾರ ಬಿಕ್ಕಟ್ಟು: ರೈತರು ಸಾವಯವಕ್ಕೆ ಸಿದ್ಧಗೊಳ್ಳುವ ಮೊದಲೇ ರಸಗೊಬ್ಬರಕ್ಕೆ ನಿಷೇಧ, ಆಹಾರ ಭದ್ರತೆಗೆ ಆತಂಕ
ಶ್ರೀಲಂಕಾದ ರೈತ (Pic Courtesy: island.lk
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Sep 03, 2021 | 10:32 PM

ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ವಿದೇಶಿ ಮೀಸಲು ನಿಧಿಯ ಕೊರತೆ, ಕುಂಠಿತಗೊಂಡ ಪ್ರವಾಸೋದ್ಯಮದ ಆದಾಯ ಮತ್ತು ನಿರುದ್ಯೋಗದ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಅಲ್ಲಿನ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸಿದ ಕೆಲ ಕ್ರಮಗಳೂ ಶ್ರೀಲಂಕಾದ ಈ ಸ್ಥಿತಿಗೆ ಕಾರಣ ಎಂದು ಹೇಳಲಾಗುತ್ತಿದೆ. ಮುಂದಿನ ಮುಂಗಾರು ಹಂಗಾಮಿನಿಂದ ಶ್ರೀಲಂಕಾ ಸರ್ಕಾರ ಕೃಷಿಯಲ್ಲಿ ರಾಸಾಯನಿಕಗಳ ಬಳಕೆಯನ್ನು ನಿರ್ಬಂಧಿಸುವುದಾಗಿ ಘೋಷಿಸಿದೆ. ಸರ್ಕಾರದ ಏಕಪಕ್ಷೀಯ ನಿರ್ಧಾರದ ವಿರುದ್ಧ ರೈತರು ಸೆಟೆದು ನಿಂತಿದ್ದಾರೆ. ಈ ಕುರಿತು ECONOMYNEXT ಜಾಲತಾಣದಲ್ಲಿ ಪ್ರಕಟವಾಗಿರುವ ವಿಶ್ಲೇಷಣೆಯ ಪ್ರಮುಖ ಅಂಶಗಳ ಸಂಗ್ರಹ ಇಲ್ಲಿದೆ.

ಸಾವಯವ ಗೊಬ್ಬರಗಳನ್ನು ಬಳಸಿಯೇ ಕೃಷಿ ನಿರ್ವಹಿಸುವ ಸ್ಥಿತಿ ತಲುಪಬೇಕು ಎನ್ನುವ ಶ್ರೀಲಂಕಾ ಸರ್ಕಾರದ ಆಲೋಚನೆಯು ಒಂದು ಆದರ್ಶವಾಗಿ ತುಂಬಾ ಚೆನ್ನಾಗಿದೆ. ಆದರೆ ವಾಸ್ತವದಲ್ಲಿ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಸರ್ಕಾರವು ಇದ್ದಕ್ಕಿದ್ದಂತೆ ಜಾರಿಗೊಳಿಸಿದ ಈ ಕ್ರಮಕ್ಕೆ ರೈತರು ಮತ್ತು ಕೃಷಿ ವಲಯದ ಇತರ ಸಹಭಾಗಿಗಳು ಸಿದ್ಧವಾಗಿಲ್ಲ. ಕೃಷಿ ಕ್ಷೇತ್ರವನ್ನು ಹತ್ತಿರದಿಂದ ಗಮನಿಸುತ್ತಿದ್ದವರು ಸರ್ಕಾರದ ಈ ತೀರ್ಮಾನದಿಂದ ಉಂಟಾಗಬಹುದಾದ ಸಂಭಾವ್ಯ ಸಮಸ್ಯೆಗಳ ಬಗ್ಗೆ ಒತ್ತಿ ಹೇಳುತ್ತಿದ್ದಾರೆ.

‘ಇದು ನಿಜಕ್ಕೂ ಅತ್ಯುತ್ತಮ ಆದರ್ಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದನ್ನು ಸಾಧಿಸಲು ಒಂದು ಯೋಜಿತ ಕಾರ್ಯಪದ್ಧತಿ ಬೇಕು’ ಎನ್ನುತ್ತಾರೆ ದಿಲ್​ಮಾಹ್ ಟೀ ಕಂಪನಿಯ ಮುಖ್ಯ ನಿರ್ವಹಣಾಧಿಕಾರಿ ದಿಲ್ಹಾನ್ ಫೆರ್ನಾಡೊ.

ಸಾವಯವ ಕೃಷಿಯನ್ನು ಏಕಾಏಕಿ ಆರಂಭಿಸಲು ಆಗುವುದಿಲ್ಲ. ಇಷ್ಟು ಕಾಲ ರಾಸಾಯನಿಕ ಬಿದ್ದಿರುವ ಮಣ್ಣಿನ ಪುನರುಜ್ಜೀವನದ ಕೆಲಸ ಮೊದಲು ಆಗಬೇಕು. ಸಾವಯವ ಕೃಷಿಯ ಮೂಲ ಅಂಶಗಳನ್ನು ರೈತರಿಗೆ ಮನಗಾಣಿಸಬೇಕು. ಕೃಷಿ ಪದ್ಧತಿಯಲ್ಲಿ ಆಗಬೇಕಿರುವ ಬದಲಾವಣೆಗಳು ಮತ್ತು ವಿವಿಧ ಹಂತಗಳನ್ನು ಗುರುತಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಯಾವುದನ್ನು ನಾವು ಸಾವಯವ ಎನ್ನುತ್ತೇವೆ ಎಂಬ ಬಗ್ಗೆ ಮಾನದಂಡಗಳು ರೂಪುಗೊಳ್ಳಬೇಕು ಎಂದು ಅಭಿಪ್ರಾಯಪಡುತ್ತಾರೆ ಅವರು.

ಆದರೆ ಈ ಯಾವ ಕೆಲಸವೂ ಶ್ರೀಲಂಕಾದಲ್ಲಿ ಆಗಲಿಲ್ಲ. ಈಗ ಏನು ಚರ್ಚೆ ನಡೆಯುತ್ತಿದೆಯೋ ಅವೆಲ್ಲ ಹಲವು ವರ್ಷಗಳ ಹಿಂದೆಯೇ ನಡೆಯಬೇಕಿತ್ತು. ಶ್ರೀಲಂಕಾ ಇಂದು ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟಕ್ಕೆ ನಗದು ಮುದ್ರಣ ಮತ್ತು ನಗದು ಮೌಲ್ಯ ಕುಸಿತದ ಜೊತೆಗೆ ಇದ್ದಕ್ಕಿದ್ದಂತೆ ಸಾವಯವಕ್ಕೆ ಹೊರಳಿಕೊಳ್ಳುವ ಅಲ್ಲಿನ ಸರ್ಕಾರದ ಆತುರದ ತೀರ್ಮಾನವೂ ಕಾರಣ. ನೀತಿ ನಿರೂಪಣೆಯ ವಿಚಾರದಲ್ಲಿ ನಿಖರತೆ ಇರಲಿಲ್ಲ. ಇದರ ಜೊತೆಗೆ ಹಲವು ವಿಚಾರಗಳನ್ನು ಸರ್ಕಾರವು ರಾಷ್ಟ್ರೀಯತೆ, ಸಾಂಸ್ಕೃತಿಕ ಅಸ್ಮಿತೆಯೊಂದಿಗೆ ಬೆಸೆಯುತ್ತಿದೆ. ಜನರಲ್ಲಿ ಗೊಂದಲ ಉಂಟಾಗಲು ಇವೆಲ್ಲ ಕಾರಣಗಳಾಗಿವೆ.

ಸಂಕಷ್ಟಕ್ಕೆ ಕೊರೊನಾ ಕಾರಣ ಕೊರೊನಾ ಪಿಡುಗಿನಿಂದಾಗಿ ವಿಶ್ವದ ಹಲವು ದೇಶಗಳಂತೆ ಶ್ರೀಲಂಕಾ ಸಹ ಹಲವು ಕಷ್ಟನಷ್ಟಗಳನ್ನು ಅನುಭವಿಸಿತು. ಈ ಬಿಕ್ಕಟ್ಟಿನಿಂದ ಪಾರಾಗಲೆಂದು ತೆಗೆದುಕೊಂಡ ನಿರ್ಧಾರಗಳು ಉಲ್ಟಾ ಹೊಡೆದದ್ದು ವಿಪರ್ಯಾಸ. ಪ್ರವಾಸೋದ್ಯಮಮವೇ ಶ್ರೀಲಂಕಾದ ಮುಖ್ಯ ಆದಾಯ ಮೂಲ. ಆದರೆ ಕೊರೊನಾ ಸೋಂಕು ವ್ಯಾಪಿಸಿದ್ದಾಗ ಹೆಚ್ಚು ಸಂಕಷ್ಟ ಎದುರಿಸಿದ ವಲಯ ಅದು. ಹೀಗಾಗಿಯೇ ಆದಾಯ ಕೊರತೆಯ ಜೊತೆಗೆ ವಿದೇಶಿ ಮೀಸಲು ನಿಧಿ ಕೊರತೆಯ ಅಡಕತ್ತರಿಯಲ್ಲಿ ಸಿಲುಕಿದ್ದ ಶ್ರೀಲಂಕಾ ಸರ್ಕಾರ ತುರ್ತಾಗಿ ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇಬೇಕಾದ ಅನಿವಾರ್ಯತೆಗೆ ಸಿಲುಕಿತು. ಹೀಗಾಗಿಯೇ ಮುಂಗಾರು ಬಿತ್ತನೆಗೆ ಕಾಲವೂ ಬಂದಿತ್ತು. ರಸಗೊಬ್ಬರ ಆಮದು ಮಾಡಿಕೊಳ್ಳಲು ಬೇಕಿದ್ದ 40 ಕೋಟಿ ಅಮೆರಿಕನ್ ಡಾಲರ್ ಹಣವನ್ನು ಉಳಿಸುವ ಉದ್ದೇಶದಿಂದ ಸರ್ಕಾರ ರಸಗೊಬ್ಬರ ಆಮದು ಮೇಲೆ ನಿರ್ಬಂಧ ವಿಧಿಸಿತು.

‘ಶ್ರೀಲಂಕಾದ ಮೂಲನಿವಾಸಿಗಳ ಸರಾಸರಿ ಆಯಸ್ಸು 140 ವರ್ಷವಿತ್ತು. ನಮ್ಮ ಜನರ ಸರಾಸರಿ ಆಯಸ್ಸು ಕಡಿಮೆಯಾಗಲು ಮತ್ತು ದೇಶದಲ್ಲಿ ಹಲವು ಕಾಯಿಲೆಗಳು ವ್ಯಾಪಕವಾಗಿ ಕಾಣಿಸಿಕೊಳ್ಳಲು ಕೃಷಿಯಲ್ಲಿ ಬಳಸುವ ರಾಸಾಯನಿಕಗಳೇ ಕಾರಣ’ ಎಂದು ಶ್ರೀಲಂಕಾದ ಸರ್ಕಾರಿ ವೈದ್ಯಾಧಿಕಾರಿಗಳ ಸಂಸ್ಥೆ (Sri Lanka Government Medical Officers Association) ಅಲ್ಲಿನ ಸರ್ಕಾರದ ಮನವೊಲಿಸಿತು. ತಮ್ಮ ವಾದಕ್ಕೆ ಪೂರಕವಾಗಿ ವಿಶ್ವಕೋಶವೊಂದರ ಪುಟಗಳನ್ನೂ ಸರ್ಕಾರದ ಮುಂದಿಟ್ಟಿತ್ತು. ಇದನ್ನು ಒಪ್ಪಿಕೊಂಡ ಸರ್ಕಾರವು ಸಾವಯವ ಕೃಷಿ ನೀತಿ ಪ್ರಕಟಿಸಿದೆ ಎನ್ನುತ್ತಾರೆ ಅಲ್ಲಿನ ರೈತರು.

ನೀತಿ ನಿರೂಪಣೆಯ ಗೊಂದಲ ಅಧಿಕಾರ ಯಾರ ಕೈಲಿದೆಯೋ ಅವರು ದೇಶಕ್ಕೆ ಸಂಬಂಧಿಸಿದ ನೀತಿಗಳನ್ನು ತಮ್ಮ ಇಚ್ಛಾನುಸಾರ ರೂಪಿಸುವುದು ಶ್ರೀಲಂಕಾದಲ್ಲಿ ವಾಡಿಕೆ. ಪುರಾವೆಗಳನ್ನು ಸಂಗ್ರಹಿಸಿ, ಅದರ ಸಾಧಕ-ಬಾಧಕಗಳನ್ನು ನಿರ್ಭಾವುಕವಾಗಿ ವಿಮರ್ಶಿಸಿದ ನಂತರ ತೀರ್ಮಾನಗಳನ್ನು ತೆಗೆದುಕೊಳ್ಳುವ ಶಿಷ್ಟಾಚಾರವೇ ಶ್ರೀಲಂಕಾದಲ್ಲಿ ಬೆಳೆಯಲಿಲ್ಲ. ವಾಸ್ತವ ಸ್ಥಿತಿಗಳನ್ನು ಮತ್ತು ಸಂಭಾವ್ಯ ಪರಿಣಾಮಗಳನ್ನು ಸರಿಯಾಗಿ ವಿಮರ್ಶಿಸದೇ ತೆಗೆದುಕೊಳ್ಳುವ ರಾಜಕೀಯ ನಿರ್ಧಾರಗಳಿಗೆ ಅಲ್ಲಿನ ಜನರು ಇದೀಗ ಬೆಲೆ ತೆರುತ್ತಿದ್ದಾರೆ. ರಾಜಕೀಯ ಪಕ್ಷವೊಂದು ಪ್ರಣಾಳಿಕೆಯಲ್ಲಿ ಒಂದಷ್ಟು ವಿಚಾರಗಳನ್ನು ಪ್ರಸ್ತಾಪಿಸುತ್ತದೆ. ಅಧಿಕಾರಕ್ಕೆ ಬರುವ ರಾಜಕೀಯ ಪಕ್ಷವು ತನ್ನ ಪ್ರಣಾಳಿಕೆ ಜಾರಿಗೊಳಿಸಲು ಸಿಕ್ಕ ಜನಾದೇಶ ಎಂದು ಭಾವಿಸಿ, ತರಾತುರಿಯಲ್ಲಿ ಚುನಾವಣಾ ಘೋಷಣೆಗಳನ್ನು ಜಾರಿಗಳಿಸಲು ಹೊರಡುವುದು ವಾಡಿಕೆಯಾಗಿದೆ.

ಪ್ರಣಾಳಿಕೆ ರೂಪಿಸುವುದು ರಾಜಕೀಯ ನಿರ್ಧಾರ, ಆದರೆ ಅದನ್ನು ಜಾರಿಗಳಿಸುವುದು ಆಡಳಿತಾತ್ಮಕ ನಿರ್ಧಾರವಾಗುತ್ತದೆ. ಹೀಗೆ ಆಡಳಿತಾತ್ಮಕ ನಿರ್ಧಾರಗಳನ್ನು ಜಾರಿಗಳಿಸುವ ಮೊದಲು ತಜ್ಞರ ಸಮಿತಿಗಳನ್ನು ನೇಮಿಸಿ ಸಾಧಕ-ಬಾಧಕಗಳನ್ನು ಪರಿಶೀಲಿಸಬೇಕಾಗುತ್ತದೆ. ಹಾಗೆ ಮಾಡದಿದ್ದರೆ ಅನಾಹುತಗಳೇ ಆಗುತ್ತವೆ. ರಸಗೊಬ್ಬರ ಬಳಕೆ ತರಾತುರಿಯಲ್ಲಿ ನಿರ್ಬಂಧ ವಿಧಿಸಿದ ಶ್ರೀಲಂಕಾ ಸರ್ಕಾರದ ತೀರ್ಮಾನದಿಂದ ಈಗ ಆಗಿರುವುದು ಇದೇ ಎನ್ನುತ್ತಾರೆ ಶ್ರೀಲಂಕಾದ ಆರ್ಥಿಕತೆಯನ್ನು ಅಧ್ಯಯನ ಮಾಡಿರುವ ರೋಹನ್ ಸಮಜೀವ.

ಶ್ರೀಲಂಕಾದಲ್ಲಿ ಆದಂಥದ್ದೇ ಬೆಳವಣಿಗೆ ಈಚೆಗೆ ಭೂತಾನ್​ನಲ್ಲಿಯೂ ಆಗಿತ್ತು ಎಂದು ಗಮನ ಸೆಳೆಯುತ್ತಾರೆ ಮತ್ತೋರ್ವ ಅರ್ಥ ವಿಶ್ಲೇಷಕ ಫರ್ನಾಂಡೊ. ಆದರೆ ಭೂತಾನ್​ನಲ್ಲಿ ಅಲ್ಲಿನ ಸರ್ಕಾರ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡು ನಿರ್ಧಾರ ಘೋಷಿಸಿದ್ದರಿಂದ ಆಹಾರ ಧಾನ್ಯಗಳ ಬೆಲೆ ಶ್ರೀಲಂಕಾದಷ್ಟು ಏರಿಕೆಯಾಗಿರಲಿಲ್ಲ. ಆದರೆ ಶ್ರೀಲಂಕಾದಲ್ಲಿ ಸಾವಯವ ಉತ್ಪನ್ನಗಳು ಇತರ ಉತ್ಪನ್ನಗಳಿಗಿಂತಲೂ ದುಬಾರಿಯಾಗಿವೆ. ಆರ್ಥಿಕವಾಗಿ ಬಲಾಢ್ಯ ದೇಶ ಎನಿಸಿಕೊಂಡಿರುವ ಸ್ವಿಟ್ಜ್​ರ್​ಲೆಂಡ್​ ಸಹ ಕೃಷಿಯಲ್ಲಿ ರಾಸಾಯನಿಕ ಬಳಕೆಯನ್ನು ನಿರ್ಬಂಧಿಸಲು ನಿರ್ಧರಿಸಿತ್ತು. ಆದರೆ ಸಂಭಾವ್ಯ ಪರಿಣಾಮಗಳನ್ನು ಪರಿಗಣಿಸಿ, ಕೊನೆ ಗಳಿಗೆಯಲ್ಲಿ ತನ್ನ ನಿರ್ಧಾರ ಹಿಂದೆ ಪಡೆಯಿತು. ಈ ಎರಡೂ ದೇಶಗಳ ಉದಾಹರಣೆಗಳನ್ನು ಶ್ರೀಲಂಕಾ ಆಡಳಿತಗಾರರು ಸೂಕ್ಷ್ಮವಾಗಿ ಗಮನಿಸಬೇಕಿದೆ.

ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆಯುವ ಆಹಾರ ಉತ್ಪನ್ನಗಳಿಗೆ ವಿದೇಶಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಸಿಗುತ್ತದೆ ಎಂದು ಸರ್ಕಾರದ ವಕ್ತಾರರು ಹೇಳಿದ್ದರು. ಬಡತನ ಮತ್ತು ಅಪೌಷ್ಟಿಕತೆಯಿಂದ ಬಳಲುತ್ತಿರುವ ದೇಶಕ್ಕೆ ಇದು ಆಶಾದಾಯಕ ಬೆಳವಣಿಗೆ ಎಂದು ಪ್ರತಿಪಾದಿಸಿದ್ದರು. ಇದು ನಿಜವೇ ಆಗಿದ್ದರೂ, ಸಾವಯವ ಪದ್ಧತಿ ಅಳವಡಿಸಿಕೊಳ್ಳಲು ರೈತರು ಸಿದ್ಧರಾಗಿರಬೇಕಲ್ಲವೇ?

ಯೋಜನೆಯೇ ಸಿದ್ಧವಾಗಿರಲಿಲ್ಲ ಇಡೀ ಕೃಷಿ ಕ್ಷೇತ್ರವನ್ನು ಸಂಪೂರ್ಣವಾಗಿ ಸಾವಯವಕ್ಕೆ ಬದಲಿಸಲು ಪ್ರಾಯೋಗಿಕ ಕಾರ್ಯತಂತ್ರ ಬೇಕಿತ್ತು ಎನ್ನುತ್ತಾರೆ ಐತ್​ಕೆನ್ ಸ್ಪೆನ್ಸ್ ಪ್ಲಾಂಟೇಶನ್ ಮ್ಯಾನೇಜ್​ಮೆಂಟ್ಸ್​ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ರೋಹನ್ ಫರ್ನಾಂಡೊ.

ಕೃಷಿಯಲ್ಲಿ ಪರಿವರ್ತನೆ ತರಬೇಕು ಎಂಬುದು ಸರ್ಕಾರದ ಚಿಂತನೆಯಾಗಿದ್ದರೆ ಮೊದಲು ಒಂದು ದೀರ್ಘಾವಧಿಗೆ ಯೋಜನೆ ರೂಪಿಸಬೇಕಿತ್ತು. ಅದನ್ನು ಅನುಷ್ಠಾನಗೊಳಿಲು ತಂತ್ರಗಳನ್ನು ಹೆಣೆಯಬೇಕಿತ್ತು. ಜನರಿಗೆ ಅದರ ಅನಿವಾರ್ಯತೆಯನ್ನು ಮನಗಾಣಿಸಬೇಕಿತ್ತು. ಆದರೆ ಶ್ರೀಲಂಕಾ ಸರ್ಕಾರ ರಾತ್ರೋರಾತ್ರಿ ನಿರ್ಧಾರ ಪ್ರಕಟಿಸಿ, ತರಾತುರಿಯಲ್ಲಿ ಸಾವಯವ ಜಾರಿಗೊಳಿಸಲು ಮುಂದಾಯಿತು ಎನ್ನುವುದು ಅವರ ಆಕ್ಷೇಪ.

ದಿಲ್​ಮಾಹ್ ಟೀ ಕಂಪನಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ದಿಲ್​ಹಾನ್ ಫರ್​ನೆಂಡೊ ಸಹ ಇದೇ ಮಾತನ್ನು ಪುಷ್ಟೀಕರಿಸುತ್ತಾರೆ. ತೋಟಕ್ಕೆ ಕೊಡುತ್ತಿರುವ ಕೃತಕ ಪೋಷಕಾಂಶಗಳನ್ನು ನಾವು ಮೊದಲು ಕಡಿಮೆ ಮಾಡಬೇಕು. ಏಕಾಏಕಿ ಇವನ್ನು ನಿಲ್ಲಿಸಲು ಆಗುವುದಿಲ್ಲ. ಹಂತಹಂತವಾಗಿ ನಿಲ್ಲಿಸಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ. ಮುಂದಿನ ಮುಂಗಾರು ಹಂಗಾಮಿನಿಂದ ರಸಗೊಬ್ಬರ ಬಳಕೆ ನಿರ್ಬಂಧಿಸಿರುವ ಶ್ರೀಲಂಕಾ ರಸಗೊಬ್ಬರದ ಸ್ಥಾನದಲ್ಲಿ ಸಾವಯವ ಗೊಬ್ಬರ ಬಳಕೆಗೆ ಉತ್ತೇಜನ ನೀಡಲು ನಿರ್ಧರಿಸಿದೆ. ಇದೇ ಕಾರಣಕ್ಕೆ ರಸಗೊಬ್ಬರ ಆಮದು ನಿಷೇಧಿಸಿದ್ದು, ಸಾವಯವ ಗೊಬ್ಬರ ಆಮದು ಮಾಡಿಕೊಳ್ಳಲು ಅವಕಾಶ ನೀಡಿದೆ.

ರೈತರ ಪ್ರತಿರೋಧ ಸರ್ಕಾರದ ನಿರ್ಧಾರ ಖಂಡಿಸಿ ರೈತರು ಬೀದಿಗಳಿದು ಹೋರಾಡುತ್ತಿದ್ದಾರೆ. ಸಾವಯವಕ್ಕೆ ಇದ್ದಕ್ಕಿದ್ದಂತೆ ಹೊರಳಿಕೊಳ್ಳಲು ಆಗುವುದಿಲ್ಲ. ಅದಕ್ಕಾಗಿ ಸಮಯಬೇಕು ಎಂದು ಆಗ್ರಹಿಸುತ್ತಿದ್ದಾರೆ. ಸರ್ಕಾರದ ನಿರ್ಧಾರದಿಂದ ಏನಾಗಬಹುದು ಎಂಬ ಬಗ್ಗೆ ಸಂದಿಗ್ಧತೆ ನಿರ್ಮಾಣವಾಗಿದೆ ಎನ್ನುತ್ತಾರೆ ಹಣ್ಣು ವ್ಯಾಪಾರ ಮಾಡುವ ಕಂಪನಿ ಜಾನ್ ಕೀಲ್ಸ್​ನ ಅಧ್ಯಕ್ಷ ಚರಿತ ಸಬಸಿಂಘೆ. ರೈತರೊಂದಿಗೆ ಮಾತನಾಡಿದಾಗ ಅವರು ನಾವು ಹಂತಹಂತವಾಗಿ ಸಾವಯವ ಕೃಷಿ ಆರಂಭಿಸಬೇಕಿತ್ತು. ಏಕಾಏಕಿ ಹೊರಳಿಕೊಳ್ಳಲು ಆಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬ ಬಗ್ಗ ಎಲ್ಲರಲ್ಲೂ ಗೊಂದಲವಿದೆ ಎಂದು ಅವರು ಹೇಳುತ್ತಾರೆ.

(Sri Lanka Economy Crisis fertilizer ban too sudden opines farmers uncertainty about future)

ಇದನ್ನೂ ಓದಿ: ವಿದೇಶೀ ವಿನಿಮಯ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿದ್ದಂತೆ ಆಹಾರ ತುರ್ತುಸ್ಥಿತಿ ಘೋಷಿಸಿದ ಶ್ರೀಲಂಕಾ

ಇದನ್ನೂ ಓದಿ: Food Emergeny In Srilanka: ಶ್ರೀಲಂಕಾದಲ್ಲಿ ಆಹಾರಕ್ಕೆ ತತ್ವಾರ; ವಿದೇಶೀ ವಿನಿಮಯ ಕೊರತೆ, ತುರ್ತು ಪರಿಸ್ಥಿತಿ ಘೋಷಣೆ

Published On - 10:29 pm, Fri, 3 September 21

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ಈ ಬಾರಿ ಬಿಗ್ ಬಾಸ್ ಟ್ರೋಫಿ ಯಾರಿಗೆ? ಭವಿಷ್ಯ ನುಡಿದ ಐಶ್ವರ್ಯಾ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ