ಸೂಯೆಜ್ ಕಾಲುವೆಯಲ್ಲಿ ದೈತ್ಯ ಹಡಗು ಮತ್ತೆ ತೇಲಲು ಹುಣ್ಣಿಮೆ ಚಂದ್ರನೇ ಕಾರಣ!

ಸೂಯೆಜ್ ಕಾಲುವೆಯಲ್ಲಿ ದೈತ್ಯ ಹಡಗು ಮತ್ತೆ ತೇಲಲು ಹುಣ್ಣಿಮೆ ಚಂದ್ರನೇ ಕಾರಣ!
ಸೂಯೆಜ್ ಕಾಲುವೆಯಲ್ಲಿ ಸಂಚಾರ ಆರಂಭಿಸಿದ ಎವರ್​ಗಿವನ್ ಹಡಗು (Image Courtesy: https://twitter.com/Maxar)

Evergiven moves in Suez Canal: ಹುಣ್ಣಿಮೆ ಚಂದ್ರನ ಆಕರ್ಷಣೆಗೆ ಸಾಗರದಲ್ಲಿ ದೊಡ್ಡ ಅಲೆಗಳು ಎದ್ದು ಸೂಯೆಜ್ ಕಾಲುವೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಮರಳಿನಲ್ಲಿ ಸಿಲುಕಿದ್ದ ಹಡಗು ಮತ್ತೆ ತೇಲಲು ಸಾಧ್ಯವಾಯಿತು ಎಂದು ವಿಶ್ಲೇಷಕರು ಹೇಳಿದ್ದಾರೆ.

Ghanashyam D M | ಡಿ.ಎಂ.ಘನಶ್ಯಾಮ

|

Mar 30, 2021 | 7:18 PM

ಈಜಿಪ್ಟ್​​ನ ಸೂಯೆಜ್​ ಕಾಲುವೆಯಲ್ಲಿ (Suez Canal) 6 ದಿನಗಳ ಕಾಲ ಸಿಲುಕಿದ್ದ ಎವರ್​ಗ್ರೀನ್​ ಕಂಪನಿಯ ದೈತ್ಯ ಹಡಗು ಎವರ್​ಗಿವನ್ ಮತ್ತೆ ತೇಲುತ್ತಾ ಸಾಗರ ಸೇರಲು ಮಾನವಶ್ರಮ, ಯಂತ್ರಗಳ ಬಳಕೆಗಿಂತಲೂ ಹೆಚ್ಚಾಗಿ ಹುಣ್ಣಿಮೆ ಚಂದ್ರ ಕಾರಣ ಸಾಗರ ತಜ್ಞರು ವಿಶ್ಲೇಷಿಸಿದ್ದಾರೆ. ಮೊನ್ನೆ (ಮಾರ್ಚ್ 28) ಹುಣ್ಣಿಮೆಯಂದು ಸೂಪರ್​ಮೂನ್​ ಸಹ ಇತ್ತು. ಚಂದ್ರ ಭೂಮಿಗೆ ತುಸು ಹತ್ತಿರ ಬಂದಿದ್ದ. ಈ ಸಂದರ್ಭ ಗುರುತ್ವಾಕರ್ಷಣ ಶಕ್ತಿಯಲ್ಲಿ ಏರುಪೇರಾಗಿ ಕಾಲುವೆಯಲ್ಲಿ ಎತ್ತರದ ಅಲೆಗಳು ಕಾಣಿಸಿಕೊಂಡಿದ್ದವು. ಕಾಲುವೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರಿಂದ ಮರಳಿನಲ್ಲಿ ಸಿಲುಕಿದ್ದ ಹಡಗು ಮತ್ತೆ ತೇಲಲು ಸಾಧ್ಯವಾಯಿತು ಎಂದು ವಿಶ್ಲೇಷಕರು ಹೇಳಿದ್ದಾರೆ.

ವಿಶ್ವದ ಪ್ರಮುಖ ಸಮುದ್ರಮಾರ್ಗ ಎನಿಸಿರುವ ಸೂಯೆಜ್ ಕಾಲುವೆಯಲ್ಲಿ ಎವರ್​ಗಿವನ್ ಹಡಗು ಸಿಲುಕಿಕೊಂಡಿದ್ದರಿಂದ ಏಷ್ಯಾ ಮತ್ತು ಯೂರೋಪ್​ ಖಂಡಗಳ ನಡುವೆ ಸಾಗಬೇಕಿದ್ದ ನೂರಾರು ಹಡಗುಗಗಳು ಎರಡೂ ಕಡೆ ತಮ್ಮ ಪಾಳಿಗಾಗಿ ಕಾಯುತ್ತಾ ನಿಂತುಕೊಂಡಿದ್ದವು. ಹಡಗನ್ನು ಕದಲಿಸಲು 14 ಶಕ್ತಿಶಾಲಿ ಟಗ್​ಬೋಟ್​ಗಳನ್ನು ಕಾಲುವೆ ಪ್ರಾಧಿಕಾರ ಕೆಲಸಕ್ಕೆ ಹಚ್ಚಿತ್ತು. ಕ್ರೇನ್​ಗಳನ್ನು ಬಳಸಿ ಹಡಗಿನ ಮೂತಿಯ ಬಳಿ ಮರಳು ಸಡಿಲಗೊಳಿಸುವ ಪ್ರಯತ್ನ ನಡೆದಿತ್ತು. ಆದರೂ ಹಡಗು ಕದಲಿರಲಿಲ್ಲ.

ಹಡಗು ಸಿಲುಕಿಕೊಂಡಿದ್ದ ಸ್ಥಳದಲ್ಲಿದ್ದ ಬೃಹತ್ ಬಂಡೆಯು ಹಡಗಿನ ಸಂಚಾರಕ್ಕೆ ತಡೆಯೊಡ್ಡಿತ್ತು. ಡ್ರೆಡ್ಜ್​ಗಳು 9.50 ಲಕ್ಷ ಕ್ಯೂಬಿಕ್ ಅಡಿಗಳಷ್ಟು ಮಣ್ಣನ್ನು ತೆಗೆದಿದ್ದವು. ಟಗ್​ಬೋಟ್​ಗಳು ಎವರ್​ಗಿವನ್ ಹಡಗನ್ನು ದೂಡಲು ಸತತ ಪ್ರಯತ್ನ ಮಾಡುತ್ತಿದ್ದವು. ಇಷ್ಟೆಲ್ಲಾ ಯತ್ನಗಳು ನಡುವೆ ಹಡಗಿನಲ್ಲಿದ್ದ 18,300 ಕಂಟೇನರ್​ಗಳನ್ನು ಕೆಳಗಿಳಿಸುವುದು ಮತ್ತು ಹಡಗಿನ ಇಂಧನ ಖಾಲಿ ಮಾಡುವ ಮೂಲಕ ಹಡಗಿನ ಒಟ್ಟಾರೆ ತೂಕ ಕಡಿಮೆ ಮಾಡಲು ಕಾಲುವೆ ಪ್ರಾಧಿಕಾರ ಸಿದ್ಧತೆ ಮಾಡಿಕೊಂಡಿತ್ತು.

ಆದರೆ ಭಾನುವಾರ ರಾತ್ರಿ ಮನುಷ್ಯರ ಪ್ರಯತ್ನಕ್ಕೆ ಪ್ರಕೃತಿಯ ಆಶೀರ್ವಾದವೂ ಸಿಕ್ಕಂತೆ ಆಗಿ ಎವರ್​ಗಿವನ್ ಕದಲಿತು. ಕಾಲುವೆಯಲ್ಲಿ ತೇಲುತ್ತಾ ಸಾಗರವನ್ನು ತಲುಪಿತು. ಇದಕ್ಕೆ ಚಂದ್ರನ ಆಕರ್ಷಣೆಗೆ ಸಾಗರ ಉಕ್ಕಿದ್ದೇ ಕಾರಣ ಎಂದು ಕೆಲ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

ಇದನ್ನೂ ಓದಿ: Suez canal unblocked: ಸೂಯೆಜ್ ಕಾಲುವೆಯಲ್ಲಿ ಸಿಲುಕಿದ್ದ ಎವರ್ ಗಿವನ್ ಹಡಗು ಮುಕ್ತ ಮುಕ್ತ ಮುಕ್ತ

Ever Given Ship

ಎವರ್ ಗಿವನ್ ಹಡಗು

1312 ಅಡಿ ಉದ್ದದ ಹಡಗು ಸರಕುಗಳನ್ನು ಸಾಗಣೆ ಮಾಡುವ ಆ ಹಡಗಿನ ಹೆಸರು ಎವರ್ ಗಿವನ್. ಇನ್ನು ಇದು 1312 ಅಡಿ ಉದ್ದದ್ದು. ಕಳೆದ ಮಂಗಳವಾರದಂದು (ಮಾರ್ಚ್ 23, 2021) ಈಜಿಪ್ಟ್​ನ ಸೂಯೆಜ್ ಕಾಲುವೆಯಲ್ಲಿ ದಿಢೀರನೆ ಟ್ರಾಫಿಕ್ ಜಾಮ್ ಆಗುವುದಕ್ಕೆ ಕಾರಣ ಆದ ಹಡಗು ಇದೇ. ಜಾಗತಿಕ ವಾಣಿಜ್ಯ ವಹಿವಾಟಿನ ಶೇ 12ರಷ್ಟು ನಡೆಯುವುದು ಇದೇ ಸೂಯೆಜ್ ಕಾಲುವೆ ಮೂಲಕ. ಮೆಡಿಟರೇನಿಯನ್ ಸಮುದ್ರ ಮತ್ತು ಕೆಂಪು ಸಮುದ್ರದ ಮಧ್ಯೆ ಸಂಪರ್ಕ ಕಲ್ಪಿಸಿ, ಏಷ್ಯಾ ಹಾಗೂ ಯುರೋಪ್ ಮಧ್ಯೆ ಅತ್ಯಂತ ಸಮೀಪದ ಸಮುದ್ರ ಮಾರ್ಗದ ನಂಟನ್ನು ಬೆಸೆಯುತ್ತದೆ. ಮೊನ್ನೆ ಸಂಚಾರ ದಟ್ಟಣೆಗೆ ಕಾರಣವಾದ ಹಡಗಿನ ಹೆಸರು ಎವರ್ ಗಿವನ್. ಇದು “ಎವರ್​ಗ್ರೀನ್” ಕಂಪೆನಿಗೆ ಸೇರಿದ್ದು. ಪನಾಮದಲ್ಲಿ ನೋಂದಣಿಯಾಗಿದೆ. ಚೀನಾದಿಂದ ಹೊರಟು ನೆದರ್ಲೆಂಡ್ಸ್​ನ ಬಂದರು ನಗರಿ ರೊಟರ್​ಡ್ಯಾಮ್ ತಲುಪಿತ್ತು. ಉತ್ತರಕ್ಕೆ ಚಲಿಸುತ್ತಾ ಸೂಯೆಜ್ ಕಾಲುವೆ ಮೂಲಕ ಮೆಡಿಟರೇನಿಯನ್ ಕಡೆಗೆ ಪಯಣಿಸಿತ್ತು.

400 ಮೀಟರ್ ಉದ್ದದ ಹಡಗು 2,00,000 ಟನ್​ನ ಈ ಹಡಗು 2018ರಲ್ಲಿ ನಿರ್ಮಾಣ ಆಗಿದೆ. ತೈವಾನೀಸ್ ಟ್ರಾನ್ಸ್​ಪೋರ್ಟ್ ಕಂಪೆನಿಯಿಂದ ಎವರ್​ಗಿವನ್ ಹಡಗಿನ ನಿರ್ವಹಣೆ ಆಗುತ್ತಿದೆ. ಮಂಗಳವಾರದಂದು ಸ್ಥಳೀಯ ಕಾಲಮಾನ ಬೆಳಗ್ಗೆ 7.40ರ ಹೊತ್ತಿಗೆ ಹಡಗು ಅಡ್ಡಡ್ಡ ತಿರುಗಿ ನಿಂತುಬಿಟ್ಟಿತು. ಈ ಹಡಗು ಅದೆಷ್ಟು ಅಗಾಧ ಅಂದರೆ, 400 ಮೀಟರ್ ಉದ್ದ (1312 ಅಡಿ) ಹಾಗೂ 59 ಮೀಟರ್ (193 ಅಡಿ) ಅಗಲ ಇದೆ.

120 ಮೈಲುದ್ದದ ಕೃತಕ ಜಲ ಮಾರ್ಗ ಈ ಸೂಯೆಜ್ ಕಾಲುವೆ 120 ಮೈಲುದ್ದದ ಕೃತಕ ಜಲ ಮಾರ್ಗ. 1869ರಲ್ಲಿ ಇದು ಆರಂಭವಾದ ದಿನದಿಂದ ಭೌಗೋಳಿಕ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿದೆ. ಈಗ ಈ ಕಾಲುವೆ ಅತ್ಯಂತ ಮುಖ್ಯವಾದ ಅಂತರರಾಷ್ಟ್ರೀಯ ಹಡಗುಗಳ ಜಲ ಸಾರಿಗೆ ಮಾರ್ಗವಾಗಿದೆ. ಈ ಸೂಯೆಜ್ ಕಾಲುವೆ ಇರುವುದು ಈಜಿಪ್ಟ್​ನಲ್ಲಿ. ಯುರೋಪ್​ನಿಂದ ಏಷ್ಯಾಕ್ಕೆ ನೇರವಾದ ಸಂಪರ್ಕವನ್ನು ಇದು ಕಲ್ಪಿಸುತ್ತದೆ.

ಇದನ್ನೂ ಓದಿ: Suez Canal Blockage: ಎವರ್ ಗಿವನ್ ಕಂಟೇನರ್ ಹಡಗು ಬಿಡಿಸಲು ಅಮೆರಿಕ ನೆರವು; ವಿಶ್ವ ವಾಣಿಜ್ಯ ಚಟುವಟಿಕೆ ಅಯೋಮಯ

Follow us on

Most Read Stories

Click on your DTH Provider to Add TV9 Kannada