ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾ ಅಮಾನತು, ಕೃತಜ್ಞತೆ ತಿಳಿಸಿದ ಉಕ್ರೇನ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ಕರಡು ನಿರ್ಣಯದ ಮೇಲೆ ಗುರುವಾರ ಸಾಮಾನ್ಯ ಸಭೆಯಲ್ಲಿ ಮತದಾನ ನಡೆದಿದೆ.
ದೆಹಲಿ: ಉಕ್ರೇನ್‌ನ (Ukraine) ಬುಕಾದಲ್ಲಿ ನಡೆದ ಹತ್ಯೆಗಳ ನಂತರ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (United Nations General Assembly) ಇಂದು ರಷ್ಯಾವನ್ನು(Russia) ಮಾನವ ಹಕ್ಕುಗಳ ಮಂಡಳಿಯಿಂದ( Human Rights Council) ಅಮಾನತುಗೊಳಿಸಿದೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ಕರಡು ನಿರ್ಣಯದ ಮೇಲೆ ಗುರುವಾರ ಸಾಮಾನ್ಯ ಸಭೆಯಲ್ಲಿ ಮತದಾನ ನಡೆದಿದೆ. ಉಕ್ರೇನ್‌ನ ನಗರ ಬುಕಾದ ಬೀದಿಗಳಲ್ಲಿ ರಷ್ಯಾದ ಸೇನೆಯಿಂದ ಕ್ರೂರವಾಗಿ ಹತ್ಯೆಯಾದ ಜನರ ಶವಗಳ ಚಿತ್ರಗಳು ಪತ್ತೆಯಾದ ನಂತರ ಅಮೆರಿಕವು ಈ ನಿರ್ಣಯವನ್ನು ಮಂಡಿಸಿತ್ತು. ಕೈವ್ ಸುತ್ತಮುತ್ತಲಿನ ಬುಕಾ ಮತ್ತು ಇತರ ಪಟ್ಟಣಗಳಲ್ಲಿ ನಾಗರಿಕ ಹತ್ಯೆಗಳ ಪುರಾವೆಗಳು ಸಿಕ್ಕಿದ್ದು ರಷ್ಯಾದ ಪಡೆಗಳ ಮೇಲೆ ಉಕ್ರೇನ್ ಆರೋಪ ಹೊರಿಸಿತ್ತು. ಇದನ್ನು ಮಾಸ್ಕೋ ನಿರಾಕರಿಸಿತ್ತು. ಯುಎನ್ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ಉಕ್ರೇನ್ “ಕೃತಜ್ಞತೆ” ಸಲ್ಲಿಸಿದ್ದು “ಯುದ್ಧ ಅಪರಾಧಿಗಳನ್ನು” ಇಲ್ಲಿ ಪ್ರತಿನಿಧಿಯಾಗಿರಿಸಬಾರದು ಎಂದಿದೆ.”ಮಾನವ ಹಕ್ಕುಗಳನ್ನು ರಕ್ಷಿಸುವ ಗುರಿಯನ್ನು ಹೊಂದಿರುವ ಯುಎನ್ ಸಂಸ್ಥೆಗಳಲ್ಲಿ ಯುದ್ಧ ಅಪರಾಧಿಗಳಿಗೆ ಸ್ಥಾನವಿಲ್ಲ” ಎಂದು ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ಟ್ವಿಟರ್‌ನಲ್ಲಿ ಹೇಳಿದ್ದಾರೆ. UNGA (ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ) ನಿರ್ಣಯವನ್ನು ಬೆಂಬಲಿಸಿದ ಮತ್ತು ಇತಿಹಾಸದ ಸರಿಯಾದ ನಿರ್ಧಾರ ಆಯ್ಕೆ ಮಾಡಿದ ಎಲ್ಲಾ ಸದಸ್ಯ ರಾಷ್ಟ್ರಗಳಿಗೆ ಕೃತಜ್ಞರಾಗಿರುತ್ತೇನೆ ಎಂದು ಅವರು ಹೇಳಿದ್ದಾರೆ.
Russia’s rights of membership in the UN Human Rights Council has just been suspended. War criminals have no place in UN bodies aimed at protecting human rights. Grateful to all member states which supported the relevant UNGA resolution and chose the right side of history.
— Dmytro Kuleba (@DmytroKuleba) April 7, 2022
ಸಾಮಾನ್ಯ ಸಭೆಯ 193 ಮತಗಳ ಪೈಕಿ, 93 ಮತಗಳು ರಷ್ಯಾವನ್ನು ಅಮಾನತು ಮಾಡುವ ನಿರ್ಣಯದ ಪರವಾಗಿ ಚಲಾವಣೆಗೊಂಡಿವೆ, 24 ಮತಗಳು ನಿರ್ಣಯದ ವಿರುದ್ಧವಾಗಿ ಚಲಾವಣೆಗೊಂಡಿವೆ. ಇನ್ನು 58 ಸದಸ್ಯ ರಾಷ್ಟ್ರಗಳು ಮತದಾನದಲ್ಲಿ ಪಾಲ್ಗೊಂಡಿಲ್ಲ.ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ರಷ್ಯಾವನ್ನು ಅಮಾನತುಗೊಳಿಸಲು ನಡೆದ ಮತದಾನದಲ್ಲಿ ಭಾರತ ಪಾಲ್ಗೊಂಡಿಲ್ಲ. ಉಕ್ರೇನ್ ಮೇಲಿನ ಆಕ್ರಮಣದ ನಂತರ ರಷ್ಯಾದ ವಿರುದ್ಧದ ಅಂತರರಾಷ್ಟ್ರೀಯ ಒಗ್ಗಟ್ಟು ದುರ್ಬಲಗೊಂಡಿರುವುದನ್ನು ತೋರಿಸುತ್ತಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಿಂದ ದೇಶವೊಂದನ್ನು ಅಮಾನತು ಮಾಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕಿಂತ ಮೊದಲು 2011 ರಲ್ಲಿ ಲಿಬಿಯಾವನ್ನು ಇದೇ ರೀತಿ ಅಮಾನತು ಮಾಡಲಾಗಿತ್ತು. ಸರ್ಕಾರಿ ವಿರೋಧಿ ಪ್ರತಿಭಟನಾಕಾರರ ಮೇಲೆ ಮುಅಮ್ಮರ್ ಅಲ್-ಕದಾಫಿಯ ಹಿಂಸಾತ್ಮಕ ದಮನದ ಹಿನ್ನೆಲೆಯಲ್ಲಿ ಲಿಬಿಯಾದ ಅರಬ್ ಜಮಾಹಿರಿಯಾದಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿ ಸಾಮಾನ್ಯ ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗಿತ್ತು.
Published On - 10:43 pm, Thu, 7 April 22