ಡೊನಾಲ್ಡ್ ಟ್ರಂಪ್ ಪರ ಕೆಲಸ ಮಾಡಿದ್ದ ರಷ್ಯಾಗೆ ಅಮೆರಿಕ ಆರ್ಥಿಕ ನಿರ್ಬಂಧ: ಭಾರತ ಸೇರಿ ಹಲವು ದೇಶಗಳ ಮೇಲೆ ಗಂಭೀರ ಪರಿಣಾಮ

ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ಹಿಂದೆ ಸರಿಯುವ ಹೊತ್ತಿನಲ್ಲಿ ಘೋಷಣೆಯಾಗಿರುವ ಈ ಮಹತ್ವದ ಕ್ರಮ ಹಲವು ದೇಶಗಳ ಜಿಯೊ ಪೊಲಿಟಿಕಲ್ ಲೆಕ್ಕಾಚಾರವನ್ನು ಏರುಪೇರು ಮಾಡಲಿದೆ.

ಡೊನಾಲ್ಡ್ ಟ್ರಂಪ್ ಪರ ಕೆಲಸ ಮಾಡಿದ್ದ ರಷ್ಯಾಗೆ ಅಮೆರಿಕ ಆರ್ಥಿಕ ನಿರ್ಬಂಧ: ಭಾರತ ಸೇರಿ ಹಲವು ದೇಶಗಳ ಮೇಲೆ ಗಂಭೀರ ಪರಿಣಾಮ
ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
Follow us
|

Updated on:Apr 15, 2021 | 9:01 PM

ವಾಷಿಂಗ್​ಟನ್: ರಷ್ಯಾ ವಿರುದ್ಧ ಗುರುವಾರ ಹೊಸದಾಗಿ ಹಲವು ಆರ್ಥಿಕ ನಿರ್ಬಂಧಗಳನ್ನು ಅಮೆರಿಕ ಗುರುವಾರ ಘೋಷಿಸಿದೆ. ಅಮೆರಿಕದ ಚುನಾವಣಾ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ, ಸೈಬರ್ ದಾಳಿ ಮತ್ತು ಇತರ ಆಕ್ಷೇಪಾರ್ಹ ಚಟುವಟಿಕೆಗಳನ್ನು ನಡೆಸಿದ್ದಕ್ಕೆ ಈ ಶಿಕ್ಷೆ ಎಂದು ಅಮೆರಿಕ ಹೇಳಿದೆ. ಅಮೆರಿಕದ ಈ ನಿರ್ಧಾರವನ್ನು ನ್ಯಾಟೊ ಒಕ್ಕೂಟದ ಸದಸ್ಯ ರಾಷ್ಟ್ರಗಳು ಬೆಂಬಲಿಸಿವೆ. ಅಮೆರಿಕ ಮತ್ತು ರಷ್ಯಾ ಜೊತೆಗೆ ಸೌಹಾರ್ದ ಸಂಬಂಧ ಹೊಂದಿರುವ ಭಾರತದ ವಿದೇಶಾಂಗ ವ್ಯವಹಾರಗಳ ನೀತಿಯ ಮೇಲೆ ಈ ನಿರ್ಬಂಧ ಪರಿಣಾಮ ಬೀರಲಿದೆ. ಅಫ್ಗಾನಿಸ್ತಾನದಿಂದ ಅಮೆರಿಕ ಸೇನೆ ಹಿಂದೆ ಸರಿಯುವ ಹೊತ್ತಿನಲ್ಲಿ ಘೋಷಣೆಯಾಗಿರುವ ಈ ಮಹತ್ವದ ಕ್ರಮ ಹಲವು ದೇಶಗಳ ಜಿಯೊ ಪೊಲಿಟಿಕಲ್ ಲೆಕ್ಕಾಚಾರವನ್ನು ಏರುಪೇರು ಮಾಡಲಿದೆ. ಅಮೆರಿಕದ ಕ್ರಮವನ್ನು ನ್ಯಾಟೊ ಒಪ್ಪಂದದ ಮಿತ್ರ ರಾಷ್ಟ್ರಗಳು ಸ್ವಾಗತಿಸಿವೆ.

ರಷ್ಯಾ ಸರ್ಕಾರದ ಸಾಲಪತ್ರಗಳಲ್ಲಿ (ಡೆಟ್) ಅಮೆರಿಕದ ಬ್ಯಾಂಕ್​ಗಳು ವಹಿವಾಟು ನಡೆಸುವುದನ್ನು​ ಅಧ್ಯಕ್ಷ ಜೋ ಬೈಡನ್ ನಿಷೇಧಿಸಿದ್ದಾರೆ. ಗೂಢಚರ್ಯೆಯ ಆರೋಪ ಹೊತ್ತಿದ್ದ 10 ರಾಜತಾಂತ್ರಿಕರನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಯತ್ನಿಸಿದ 32 ಮಂದಿಗೆ ಅಮೆರಿಕ ಪ್ರವೇಶ ನಿರ್ಬಂಧಿಸಲಾಗಿದೆ.

ರಷ್ಯಾ ವಿರುದ್ಧ ಅಮೆರಿಕರು ಆರ್ಥಿಕವಾಗಿ ನಷ್ಟವುಂಟು ಮಾಡಬಲ್ಲ ಕ್ರಮ ಜರುಗಿಸಬಹುದು ಎಂಬುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್​ರ ಈ ಕಾರ್ಯಾದೇಶವು ಸೂಚಿಸುತ್ತದೆ. ಇತರ ದೇಶಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ರಷ್ಯಾ ಮುಂದುವರಿಸಿದರೆ ಇಂಥ ಇನ್ನಷ್ಟು ಕ್ರಮಗಳಿಗೆ ಅಮೆರಿಕ ಮುಂದಾಗಬಹುದು ಎಂಬ ಸಂಕೇತವನ್ನು ಇದು ನೀಡಿದೆ ಎಂದು ಶ್ವೇತ ಭವನವು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳಲ್ಲಿ ರಷ್ಯಾ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದೆ. ಇದನ್ನು ತಡೆಯಲು ಅಮೆರಿಕ ಕಠಿಣ ಕ್ರಮಕ್ಕೆ ಮುಂದಾಗಬೇಕಾಯಿತು ಎಂದು ಹೇಳಿಕೆಯು ತಿಳಿಸಿದೆ. 2016 ಮತ್ತು 2020ರ ಅಧ್ಯಕ್ಷೀಯ ಚುನಾವಣೆಗಳಲ್ಲಿ ರಷ್ಯಾದ ಗುಪ್ತಚರ ಸಂಸ್ಥೆಗಳು ತಪ್ಪು ಮಾಹಿತಿ ಪ್ರಸಾರ ಮತ್ತು ಕೆಟ್ಟ ತಂತ್ರಗಳನ್ನು ಅನುಸರಿಸಿ ಡೊನಾಲ್ಡ್​ ಟ್ರಂಪ್​ಗೆ ನೆರವಾಗಲು ಯತ್ನಿಸಿದ್ದವು ಎಂಬ ಆರೋಪಗಳನ್ನು ಈ ಮೂಲಕ ಅಮೆರಿಕ ಪರೋಕ್ಷವಾಗಿ ಪ್ರಸ್ತಾಪಿಸಿದೆ.

ಶ್ವೇತ ಭವನದ ಹೇಳಿಕೆಯಲ್ಲಿ ‘ಅಮೆರಿಕ, ಅದರ ಮಿತ್ರರಾಷ್ಟ್ರಗಳು ಮತ್ತು ಸಹವರ್ತಿಗಳ ವಿರುದ್ಧ ಸೈಬರ್ ದಾಳಿ’ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಕಳೆದ ವರ್ಷ ಸೋಲಾರ್​ವಿಂಡ್ಸ್​ ಹ್ಯಾಕ್ ಎಂದೇ ಜನಜನಿತವಾದ ಸೈಬರ್ ದಾಳಿಯನ್ನು ಇದು ಸೂಚಿಸುತ್ತದೆ. ಅಮೆರಿಕದ ಆಡಳಿತ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಈ ಸೈಬರ್ ದಾಳಿ ನಡೆದಿತ್ತು.

ಅಮೆರಿಕದ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಮುಖ್ಯವೆನಿಸಿದ ದೇಶಗಳಲ್ಲಿ ಭಿನ್ನಮತೀಯರು, ಪತ್ರಕರ್ತರು ಮತ್ತು ಭದ್ರತಾ ಪಡೆಗಳನ್ನು ರಷ್ಯಾ ಗುರಿಯಾಗಿಸಿಕೊಂಡಿತ್ತು ಎಂದು ಅಮೆರಿಕದ ಹೇಳಿಕೆ ತಿಳಿಸಿದೆ. ಉಕ್ರೇನ್​ನ ಕ್ರಿಮಿಯಾ ನಗರವನ್ನು ರಷ್ಯಾ ಆಕ್ರಮಿಸಿಕೊಳ್ಳಲು ಕಾರಣವಾದ ಎಂಟು ವ್ಯಕ್ತಿಗಳು ಮತ್ತು ಸಂಸ್ಥೆಗಳ ವಿರುದ್ಧ ಅಮೆರಿಕದ ಖಜಾನೆ ಇಲಾಖೆಯ ಜೊತೆಗೆ ಐರೋಪ್ಯ ಒಕ್ಕೂಟ, ಆಸ್ಟ್ರೇಲಿಯಾ, ಬ್ರಿಟನ್ ಮತ್ತು ಕೆನಡಾ ದೇಶಗಳು ನಿರ್ಬಂಧ ಹೇರಿದ್ದವು. ‘ಅಮೆರಿಕ ವಿಧಿಸಿರುವ ಈ ನಿರ್ಬಂಧವನ್ನು ಎಲ್ಲ ಮಿತ್ರರಾಷ್ಟ್ರಗಳೂ ಬೆಂಬಲಿಸುತ್ತವೆ. ಇತರ ದೇಶಗಳಲ್ಲಿ ಆಡಳಿತ ಅಸ್ಥಿರಗೊಳಿಸುವ ರಷ್ಯಾದ ವಿರುದ್ಧ ಅಮೆರಿಕ ಜರುಗಿಸಿರುವ ಕ್ರಮದ ಪರವಾಗಿ ನಾವಿದ್ದೇವೆ’ ಎಂದು ನ್ಯಾಟೊ ಮಿತ್ರಪಡೆಗಳ ಪರವಾಗಿ ಬೆಲ್ಜಿಯಂ​ ಹೇಳಿದೆ.

ಅಡಕತ್ತರಿಯಲ್ಲಿ ಭಾರತ ಅಮೆರಿಕ ಮತ್ತು ರಷ್ಯಾ ಜೊತೆಗೆ ಸೌಹಾರ್ದ ಸಂಬಂಧ ಹೊಂದಿರುವ ಭಾರತದ ವಿದೇಶಾಂಗ ವ್ಯವಹಾರಗಳ ನೀತಿಯ ಮೇಲೆ ಈ ನಿರ್ಬಂಧ ಪರಿಣಾಮ ಬೀರಲಿದೆ. ಅಫ್ಗಾನಿಸ್ತಾನದಿಂದ ಅಮೆರಿಕದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಲವು ಬಾರಿ ತಮ್ಮ ನಿಲುವು ಪುನರುಚ್ಚರಿಸಿದ್ದಾರೆ. ಅಫ್ಗಾನಿಸ್ತಾನದೊಂದಿಗೆ ಭೌಗೋಳಿಕ ಗಡಿ ಹಂಚಿಕೊಂಡಿರುವ ರಷ್ಯಾ ಸಹ ಅಫ್ಗಾನಿಸ್ತಾನದ ಆಡಳಿತದಲ್ಲಿ ಮತ್ತು ಅಲ್ಲಿನ ಕೆಲ ಯುದ್ಧದಣಿಗಳ ವಲಯದಲ್ಲಿ ಪ್ರಭಾವ ಹೊಂದಿದೆ. ಭಾರತವು ಅಫ್ಗಾನಿಸ್ತಾನದ ಶಾಂತಿ ಸ್ಥಾಪನೆ ಪ್ರಕ್ರಿಯೆಲ್ಲಿ ಸಕ್ರಿಯ ಪಾತ್ರ ವಹಿಸಬೇಕೆಂದು ರಷ್ಯಾ ಪ್ರತಿಪಾದಿಸುತ್ತಿದೆ. ಭಾರತವನ್ನು ದೂರ ಇರಿಸಿ, ಪಾಕಿಸ್ತಾನಕ್ಕೆ ಸಕ್ರಿಯ ಪಾತ್ರ ನೀಡಲು ಅಮೆರಿಕ ಬಯಸುತ್ತಿದೆ. ಭಾರತಕ್ಕೆ ಪಶ್ಚಿಮ ಗಡಿಯಲ್ಲಿ ಪಾಕಿಸ್ತಾನದ ಉಪಟಳ ನಿಯಂತ್ರಣಕ್ಕೆ ಬರಲು ಅಫ್ಗಾನಿಸ್ತಾನದಲ್ಲಿ ಭಾರತದ ಪ್ರಭಾವ ವೃದ್ಧಿ ಅನಿವಾರ್ಯ. ಪಾಕಿಸ್ತಾನದ ಪಶ್ಚಿಮ ಗಡಿ ಅಂದರೆ ಅಫ್ಗಾನ್-ಪಾಕ್ ಗಡಿಯಲ್ಲಿ ಭಾರತದ ಪ್ರಭಾವ ಕಡಿಮೆಯಾದರೆ ಅದು ಕಾಶ್ಮೀರದ ಸ್ಥಿರತೆಯ ಮೇಲೆಯೂ ಪರಿಣಾಮ ಬೀರುತ್ತದೆ.

ಬಲೂಚಿಸ್ತಾನದ ಪ್ರತ್ಯೇಕವಾದಿಗಳನ್ನು ಸಕ್ರಿಯವಾಗಿರಿಸುವಲ್ಲಿ ಭಾರತದ ಗುಪ್ತಚರ ಇಲಾಖೆಯ ಪಾತ್ರವೂ ಇದೆ ಎಂದು ಪಾಕಿಸ್ತಾನ ಆಗಾಗ ಆರೋಪಿಸುತ್ತಿರುತ್ತದೆ. ಈ ಮೂಲಕ ಪಾಕಿಸ್ತಾನದ ಆಡಳಿತಕ್ಕೆ ಆಂತರಿಕ ತಲೆಬೇನೆ ಹೆಚ್ಚಿಸಿ ಕಾಶ್ಮೀರವನ್ನು ಸುರಕ್ಷಿತವಾಗಿರಿಸಿಕೊಳ್ಳುವುದು ಭಾರತದ ಲೆಕ್ಕಾಚಾರ ಎಂಬ ಮಾತು ಹಲವು ಬಾರಿ ಪ್ರಸ್ತಾಪವಾಗಿದೆ. ಆದರೆ ಈಗ ಅಮೆರಿಕ-ರಷ್ಯಾ ನಡುವಣ ಈ ಸಂಘರ್ಷ ಬಿಗಡಾಯಿಸಿದರೆ ಭಾರತದ ಬಹುತೇಕ ಲೆಕ್ಕಾಚಾರಗಳು ಏರುಪೇರಾಗುತ್ತವೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಥವಾ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವೆ ಒಬ್ಬರ ಜೊತೆಗಷ್ಟೇ ಉತ್ತಮ ಸಂಬಂಧ ಸಾಧ್ಯ ಎಂಬ ಸಂದರ್ಭ ಒದಗಿದರೆ ನರೇಂದ್ರ ಮೋದಿ ಯಾವ ಹೆಜ್ಜೆ ಇಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ರಾಜತಾಂತ್ರಿಕವಾಗಿ ಇದು ಭಾರತವು ಇತರ ದೇಶಗಳ ಮೇಲೆ ಹೊಂದಿರುವ ಸಂಬಂಧಗಳ ವಿಚಾರದಲ್ಲಿ ಹಲವು ವರ್ಷಗಳವರೆಗೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ‘ಹಂತಕ’ ಆರೋಪ; ಅಮೆರಿಕಾ ಅಧ್ಯಕ್ಷ ಜೋ ಬೈಡನ್​ಗೆ​ ನೇರಾನೇರ ಚರ್ಚೆಗೆ ಆಹ್ವಾನವಿತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್

ಇದನ್ನೂ ಓದಿ: ಆಂಧ್ರಕ್ಕೆ 25 ಲಕ್ಷ ಡೋಸ್​ ಕೊರೊನಾ ಲಸಿಕೆ ನೀಡುವಂತೆ ಪ್ರಧಾನಿಗೆ ಪತ್ರ; ಅಮೆರಿಕಾದಲ್ಲಿ 12-15 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಮನವಿ

Published On - 8:15 pm, Thu, 15 April 21

ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಾಗಲಕೋಟ: ಜಾತ್ರೆಗೆ 500 ನೋಟುಗಳ ಅಂಗಿ ತೊಟ್ಟುಕೊಂಡು ಬಂದ ಯುವಕ
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
ಬಿಗ್​ಬಾಸ್ ಮನೆಯ ಫೇಕ್ ಸ್ಪರ್ಧಿ ಯಾರು? ಊಸರವಳ್ಳಿ ಯಾರು?
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
Daily Devotional: ಪೂಜೆಯ ಫಲ ಪಡೆಯುವುದು ಹೇಗೆ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
ವಾರ ಭವಿಷ್ಯ: ನವೆಂಬರ್​ 11 ರಿಂದ ​17ರವರೆಗೆ ವಾರ ಭವಿಷ್ಯ ಹೀಗಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
Nithya Bhavishya: ಈ ರಾಶಿಯವರಿಗೆ 5 ಗ್ರಹಗಳ ಶುಭ ಫಲವಿದೆ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ನಾಗೇಂದ್ರರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಸುಳಿವು ನೀಡಿದ ಸಿಎಂ
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಬಿಜೆಪಿಯ ನಿಷ್ಠಾವಂತ ನಾಯಕರಿಂದ ಸರ್ಕಾರದ ವಿರುದ್ಧ ಪುನಃ ಹೋರಾಟ: ಯತ್ನಾಳ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಮೂರು ಬಾರಿ ಸಂಸದರಾಗಿದ್ದ ಸುರೇಶ್ ಚನ್ನಪಟ್ಟಣಕ್ಕೆ ನೀಡಿದ್ದೇನು? ನಿಖಿಲ್
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಆರಂಭಿಕ ಹಂತದಲ್ಲಿ ಕಾಂಗ್ರೆಸ್ ಪಕ್ಷದ ಕುತಂತ್ರ ಅಡ್ಡಿಯಾಗಿತ್ತು:ಕುಮಾರಸ್ವಾಮಿ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ
ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್‌ಗೆ ಬಸ್ ಡಿಕ್ಕಿ;18 ಮಂದಿಗೆ ಗಾಯ