Kannada News World Varanasi Gyanvapi Mosque Case Court to decide of Mosque Committee Plea
ವಾರಣಾಸಿ ಜ್ಞಾನವಾಪಿ ಮಸೀದಿ ಪ್ರಕರಣ: ನ್ಯಾಯಾಲಯದಿಂದ ಇಂದು ತೀರ್ಪು
ವಿಡಿಯೊ ಚಿತ್ರೀಕರಣವು ಅಕ್ರಮ ಎನ್ನುವ ಮಸೀದಿ ಸಮಿತಿಯ ವಾದವನ್ನು ಆಲಿಸಬೇಕೇ? ಬೇಡವೇ ಎನ್ನುವ ಬಗ್ಗೆಯೂ ನ್ಯಾಯಾಲಯವು ತೀರ್ಮಾನ ಪ್ರಕಟಿಸಲಿದೆ.
ಜ್ಞಾನವಾಪಿ ಮಸೀದಿ
Image Credit source: PTI
Follow us on
ದೆಹಲಿ: ಸುಪ್ರೀಂಕೋರ್ಟ್ ಸೂಚನೆಯಂತೆ ಜ್ಞಾನವಾಪಿ ಮಸೀದಿ (Gyanvapi Mosque) ಪ್ರಕರಣದ ವಿಚಾರಣೆ ನಡೆಸುತ್ತಿರುವ ವಾರಣಾಸಿಯ ಹಿರಿಯ ನ್ಯಾಯಾಧೀಶರು ಇಂದು ತೀರ್ಪು ನೀಡಲಿದ್ದಾರೆ. ಮಸೀದಿ ಆವರಣದಲ್ಲಿ ಕಳೆದ ವಾರ ನಡೆಸಿದ ವಿಡಿಯೊ ಚಿತ್ರೀಕರಣವು ಅಕ್ರಮ ಎನ್ನುವ ಮಸೀದಿ ಸಮಿತಿಯ ವಾದವನ್ನು ಆಲಿಸಬೇಕೇ? ಬೇಡವೇ ಎನ್ನುವ ಬಗ್ಗೆಯೂ ನ್ಯಾಯಾಲಯವು ತೀರ್ಮಾನ ಪ್ರಕಟಿಸಲಿದೆ. ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದ 10 ಪ್ರಮುಖ ಬೆಳವಣಿಗೆಗಳಿವು…
ಪ್ರಕರಣದ ಮುಂದಿನ ವಿಚಾರಣೆ ದಿನಾಂಕವನ್ನೂ ನ್ಯಾಯಾಲಯವು ಇಂದೇ ಘೋಷಿಸಲಿದೆ.
ಮಸೀದಿ ಆವರಣದಲ್ಲಿ ವಿಡಿಯೊ ಚಿತ್ರೀಕರಣ ಮತ್ತು ಸಮೀಕ್ಷೆಯು 1991ರ ಕಾನೂನು ಉಲ್ಲಂಘಿಸುತ್ತದೆ. ದೇಶದ ಯಾವುದೇ ಶ್ರದ್ಧಾಕೇಂದ್ರದ ಸ್ಥಿತಿಯನ್ನು ಬದಲಿಸುವಂತಿಲ್ಲ ಎಂದು ಕಾಯ್ದೆ ಸ್ಪಷ್ಟಪಡಿಸುತ್ತದೆ. ಯಥಾಸ್ಥಿತಿ ಕಾಪಾಡಿಕೊಳ್ಳುವ ಕುರಿತ ತನ್ನ ಮನವಿಯನ್ನು ಮೊದಲು ವಿಚಾರಣೆಗೆ ಅಂಗೀಕರಿಸಬೇಕೆಂದು ಮಸೀದಿ ಸಮಿತಿಯು ವಿನಂತಿಸಿದೆ. ಈ ಬಗ್ಗೆ ನ್ಯಾಯಾಲಯ ಇಂದು ತೀರ್ಮಾನ ಪ್ರಕಟಿಸಲಿದೆ.
ಈ ಸಂಬಂಧ ಕಳೆದ ಶುಕ್ರವಾರ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಜ್ಞಾನವಾಪಿ ಮಸೀದಿ ಸಮಿತಿಯ ಅರ್ಜಿ ಅಥವಾ ಸಮೀಕ್ಷೆಗೆ ವಿನಂತಿಸಿದ ಶ್ರದ್ಧಾಳುಗಳ ಅರ್ಜಿಯ ಪೈಕಿ ಯಾವುದನ್ನು ಮೊದಲು ವಿಚಾರಣೆ ನಡೆಸಬೇಕೆಂದು ನಿರ್ಧರಿಸುವ ಹೊಣೆಗಾರಿಕೆಯನ್ನು ವಾರಣಾಸಿ ನ್ಯಾಯಾಲಯಕ್ಕೇ ನೀಡಿತು.
ವಾರಣಾಸಿ ಜಿಲ್ಲಾ ನ್ಯಾಯಾಲಯದಲ್ಲಿ ಈ ಸಂಬಂಧ ನಿನ್ನೆ ಮಧ್ಯಾಹ್ನ 30 ನಿಮಿಷದ ವಾದವನ್ನು ನ್ಯಾಯಾಧೀಶರು ಆಲಿಸಿದರು.
‘ಸುಪ್ರೀಂಕೋರ್ಟ್ ಸೂಚನೆಯ ಮೇರೆಗೆ ನಮ್ಮ ವಾದವನ್ನೇ ಮೊದಲು ಆಲಿಸಬೇಕು ಎಂದು ವಿನಂತಿಸಿದೆ. ಪ್ರತಿವಾದಿಗಳು ಇನ್ನಷ್ಟು ಸಮಯ ಬೇಕೆಂದು ಕೋರಿದ್ದರು. ಯಥಾಸ್ಥಿತಿಯ ಬಗ್ಗೆ ನ್ಯಾಯಾಲಯ ಮೊದಲು ತನ್ನ ತೀರ್ಮಾನಿಸಬೇಕೆಂದು ಕೋರಿದೆ’ ಎಂದು ಮಸೀದಿ ಸಮಿತಿ ಪರ ವಕೀಲ ಅಭಯ್ ನಾಥ್ ಯಾದವ್ ಹೇಳಿದರು.
ವಾರಣಾಸಿ ಜ್ಞಾನವಾಪಿ ಮಸೀದಿ ಪ್ರಕರಣದ ವಿಚಾರಣೆಯನ್ನು ಕಳೆದ ವಾರ ನಡೆಸಿದ ಸುಪ್ರೀಂಕೋರ್ಟ್ ಉತ್ತರ ಪ್ರದೇಶದ ಹಿರಿಯ ನ್ಯಾಯಾಧೀಶರೊಬ್ಬರು ಪ್ರಕರಣದ ವಿಚಾರಣೆ ನಡೆಸಬೇಕು ಎಂದು ಸೂಚಿಸಿತ್ತು.
ಇದು ತುಂಬಾ ಸಂಕೀರ್ಣ ಮತ್ತು ಸೂಕ್ಷ್ಮ ವಿಚಾರ. ಈ ಸಂಬಂಧದ ವಾದವನ್ನು ವಿಚಾರಣಾ ನ್ಯಾಯಾಲಯಕ್ಕಿಂತಲೂ ಅನುಭವಿ ನ್ಯಾಯಾಧೀಶರು ಆಲಿಸುವುದು ಒಳ್ಳೆಯದು ಎಂಬುದು ನಮ್ಮ ಅಭಿಪ್ರಾಯ ಎಂದು ಸುಪ್ರೀಂಕೋರ್ಟ್ ಹೇಳಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ಸೋರಿಕೆಯನ್ನು ತಡೆಗಟ್ಟಬೇಕು. ಈ ಹಿಂದೆ ವಾರಣಾಸಿ ನ್ಯಾಯಾಲಯಕ್ಕೆ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಕೆಯಾಗುವ ಮೊದಲೇ ಸೂಕ್ಷ್ಮ ಮಾಹಿತಿಯನ್ನು ಹಿಂದೂ ಪರ ವಕೀಲರು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರು.
ವಿಡಿಯೊ ಸಮೀಕ್ಷೆಯ ವೇಳೆ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹಿಂದೂ ಅರ್ಜಿದಾರರ ಪರ ವಕೀಲರು ಈ ಮೊದಲು ಪ್ರತಿಪಾದಿಸಿದ್ದರು.
ಈ ಪ್ರತಿಪಾದನೆಯನ್ನು ಮಸೀದಿ ಸಮಿತಿಯ ಸದಸ್ಯರು ಒಪ್ಪಿರಲಿಲ್ಲ. ಇದು ವಝೂಖಾನಾದೊಳಗೆ ಅಳವಡಿಸಿದ್ದ ಕಾರಂಜಿ ವ್ಯವಸ್ಥೆಯ ಭಾಗವಾಗಿತ್ತು. ನಮಾಜ್ಗೆ ಮೊದಲು ಮುಸ್ಲಿಮರು ಕೈಕಾಲು ಸ್ವಚ್ಛಗೊಳಿಸಲು ಇದೇ ನೀರು ಬಳಸುತ್ತಿದ್ದರು. ಎಂದು ಮಸೀದಿ ಸಮಿತಿಯು ವಾದಿಸಿತ್ತು.