ಕಾಂಗೊದಲ್ಲಿ ಸಿಡಿದ ಜ್ವಾಲಾಮುಖಿ, ಆತಂಕದಲ್ಲಿ ಊರುಬಿಟ್ಟು ಓಡುತ್ತಿರುವ ಜನರಿಗೆ ಭಾರತೀಯ ಸೇನೆಯ ನೆರವು

|

Updated on: May 25, 2021 | 3:19 PM

ಜ್ವಾಲಾಮುಖಿಯಿಂದ ಹರಿದುಬರುತ್ತಿರುವ ಲಾವಾರಸದ ಶಾಖಕ್ಕೆ ಈವರೆಗೆ 31 ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ ನೂರಾರು ಮಕ್ಕಳು ನಾಪತ್ತೆಯಾಗಿದ್ದಾರೆ. ಕುಟುಂಬಗಳಿಂದ ಬೇರ್ಪಟ್ಟಿರುವ ಮಕ್ಕಳನ್ನು ಹುಡುಕಿ ಮತ್ತೆ ಕುಟುಂಬಕ್ಕೆ ಸೇರಿಸುವುದು ಆಡಳಿತಕ್ಕೆ ದೊಡ್ಡ ತಲೆನೋವಾಗಿವೆ.

ಕಾಂಗೊದಲ್ಲಿ ಸಿಡಿದ ಜ್ವಾಲಾಮುಖಿ, ಆತಂಕದಲ್ಲಿ ಊರುಬಿಟ್ಟು ಓಡುತ್ತಿರುವ ಜನರಿಗೆ ಭಾರತೀಯ ಸೇನೆಯ ನೆರವು
ಕಾಂಗೊ ದೇಶದ ಗೊಮಾ ನಗರದಲ್ಲಿ ಸಿಡಿದ ಜ್ವಾಲಾಮುಖಿ
Follow us on

ಗೊಮಾ: ಮಧ್ಯ ಆಫ್ರಿಕಾದ ಕಾಂಗೊ ದೇಶದಲ್ಲಿರುವ (Democratic Republic of Congo – DRC) ಗೊಮಾ ನಗರದಲ್ಲಿ ಜ್ವಾಲಾಮುಖಿ ಸಿಡಿದು, ಲಾವಾರಸವು ವಿಮಾನ ನಿಲ್ದಾಣವದವರೆಗೆ ಹರಿದುಬಂದಿದೆ. ಲಕ್ಷಾಂತರ ಜನರು ಹೆದರಿ ಊರುಬಿಟ್ಟು ಓಡುತ್ತಿದ್ದಾರೆ. ನೆರೆಯ ರ‍್ವಾಂಡಾ ನಗರ ತಲುಪಲು ಜನರು ಹಾತೊರೆಯುತ್ತಿದ್ದಾರೆ. ಸುಮಾರು 10 ಲಕ್ಷ ಜನಸಂಖ್ಯೆಯ ಗೊಮಾ ನಗರದ ಜನರು ಕಿತ್ತಳೆ ಬಣ್ಣದ ಬೆಂಕಿಯ ಕಿಡಿ ಕಂಡು ಕಂಗಾಲಾಗಿದ್ದಾರೆ.

ಜ್ವಾಲಾಮುಖಿಯಿಂದ ಹರಿದುಬರುತ್ತಿರುವ ಲಾವಾರಸದ ಶಾಖಕ್ಕೆ ಈವರೆಗೆ 31 ಮಂದಿ ಮೃತಪಟ್ಟಿದ್ದಾರೆ. ನಗರದಲ್ಲಿ ನೂರಾರು ಮಕ್ಕಳು ನಾಪತ್ತೆಯಾಗಿದ್ದಾರೆ. ಕುಟುಂಬಗಳಿಂದ ಬೇರ್ಪಟ್ಟಿರುವ ಮಕ್ಕಳನ್ನು ಹುಡುಕಿ ಮತ್ತೆ ಕುಟುಂಬಕ್ಕೆ ಸೇರಿಸುವುದು ಆಡಳಿತಕ್ಕೆ ದೊಡ್ಡ ತಲೆನೋವಾಗಿವೆ. ನಗರದ ರಸ್ತೆಗಳಲ್ಲಿ ಗಂಟುಮೂಟೆ ಸಮೇತ ಮನೆಗಳನ್ನು ಬಿಟ್ಟು ಹೊರಟ ಜನರ ದೊಡ್ಡ ಸಾಲುಗಳೇ ಕಾಣಿಸುತ್ತಿವೆ.

ಸುರಕ್ಷಿತ ಸ್ಥಳಗಳಿಗೆ ಧಾವಿಸುವ ಧಾವಂತದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ಈವರೆಗೆ 9 ಜನರು ಸಾವನ್ನಪ್ಪಿದ್ದಾರೆ. ಜೈಲುಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ನಾಲ್ವರು ಲಾವಾರಸಕ್ಕೆ ಸಿಲುಕಿ ಸುಟ್ಟುಹೋಗಿದ್ದಾರೆ. ನಗರದಲ್ಲಿ ಒಟ್ಟಾರೆ ಪರಿಸ್ಥಿತಿ ಭೀಕರವಾಗಿದ್ದು, ಜನರು ಅಸಹಾಯಕತೆಯಿಂದ ಜೀವ ಉಳಿಸಿಕೊಳ್ಳುವುದು ಹೇಗೆಂದು ಕಂಗಾಲಾಗಿದ್ದಾರೆ.

ನೂರಾರು ಮನೆಗಳು ಸುಟ್ಟುಹೋಗಿದ್ದು, ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ ಎಂದು ಗೊಮಾ ನಗರದಲ್ಲಿರುವ ವಿಶ್ವಸಂಸ್ಥೆಯ ಪ್ರತಿನಿಧಿಗಳು ಹೇಳಿದ್ದಾರೆ. ಈ ನಡುವೆ ಅಲ್ಲಿ ಕಾಲರಾ ಸಾಂಕ್ರಾಮಿಕವೂ ಕಾಣಿಸಿಕೊಂಡಿದ್ದು, ವಿಶ್ವಸಂಸ್ಥೆಯ ಮಕ್ಕಳ ನಿಧಿ (ಯುನಿಸೆಫ್) ಪ್ರತಿನಿಧಿಗಳು ಜನರಿಗೆ ಆರೋಗ್ಯ ಸೇವೆ ಒದಗಿಸಲು ಶ್ರಮಿಸುತ್ತಿದ್ದಾರೆ.

ವಿದೇಶ ಪ್ರವಾಸದಲ್ಲಿದ್ದ ಕಾಂಗೊ ಅಧ್ಯಕ್ಷ ಫೆಲಿಕ್ಸ್ ಶಿಸೆಕೆಡಿ ತರಾತುರಿಯಲ್ಲಿ ಸ್ವದೇಶಕ್ಕೆ ಹಿಂದಿರುಗಿದ್ದಾರೆ. ರಕ್ಷಣಾ ವ್ಯವಸ್ಥೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾರೆ. ದೇಶದ ಪೂರ್ವ ಭಾಗದಲ್ಲಿರುವ ಉತ್ತರ ಕಿವು ಪ್ರಾಂತ್ಯದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ. ಜ್ವಾಲಾಮುಖಿಯ ಹಿನ್ನೆಲೆಯಲ್ಲಿ ಗೊಮಾ ನಾಗರಿಕರನ್ನು ಸ್ಥಳಾಂತರಿಸುವ ಪ್ರಕ್ರಿಯೆ ಆರಂಭವಾಗಿದೆ ಎಂದು ಉತ್ತರ ಕಿವು ರಾಜ್ಯಪಾಲ ನ್ಡಿಮಾ ಕೊಂಗ್ಬಾ ಕಾನ್​ಸ್ಟಂಟ್ ಹೇಳಿದ್ದಾರೆ.

ರ‍್ವಾಂಡಾ ದೇಶದ ಗಡಿಯಲ್ಲಿರುವ ನ್ಯಿರಗೊಂಗೊ ಜ್ವಾಲಾಮುಖಿಯು ಶನಿವಾರ ರಾತ್ರಿಯಿಂದೀಚೆಗೆ ರೌದ್ರಾವತಾರ ತಾಳಿದೆ. ಗೊಮಾದಲ್ಲಿರುವ ಜ್ವಾಲಾಮುಖಿ ನಿಗಾ ಕಚೇರಿಯ ಪ್ರಕಾರ ಲಾವಾರಸವು ಇದೀಗ ರ‍್ವಾಂಡಾ ಗಡಿಯತ್ತ ಹರಿಯುತ್ತಿದೆ. ಗೊಮಾ ನಗರವು ಎರಡು ಸಜೀವ ಜ್ವಾಲಾಮುಖಿಗಳನ್ನು ಮಡಿಲಲ್ಲಿ ಇರಿಸಿಕೊಂಡಿದೆ. ನ್ಯಿರಗೊಂಗೊ ಮತ್ತು ನ್ಯಾಮುಲಗಿರ ಜ್ವಾಲಾಮುಖಿಗಳು ಯಾವಾಗ ಬೇಕಾದರೂ ಸಿಡಿಯಬಹುದು ಎಂಬ ಆತಂಕದಲ್ಲಿ ಅಲ್ಲಿನ ಜನರು ದಿನದೂಡುತ್ತಿದ್ದಾರೆ.

ಜ್ವಾಲಾಮುಖಿಯಿಂದಾಗಿ ಗೊಮಾ ನಗರದಲ್ಲಿ ಮನೆಗಳು ಸುಟ್ಟು ಹೋಗುತ್ತಿವೆ

2002ರಲ್ಲಿ ನ್ಯಿರಗೊಂಗೊ ಜ್ವಾಲಾಮುಖಿ ದೊಡ್ಡ ಪ್ರಮಾಣದಲ್ಲಿ ಸಿಡಿದಿತ್ತು. 250 ಮಂದಿ ಮೃತಪಟ್ಟು, 1,20,000 ಮಂದಿ ಮನೆಗಳನ್ನು ಕಳೆದುಕೊಂಡಿದ್ದರು. ಈ ಬಾರಿ ಸಿಡಿದಿರುವ ಜ್ವಾಲಾಮುಖಿಯ ತೀವ್ರತೆಯ 2002ರ ತೀವ್ರತೆಗೆ ಸರಿಸಮನಾಗಿದೆ. ನಗರದ ಇತರ ಪ್ರದೇಶಗಳಿಗೆ ಹೆಚ್ಚೇನೂ ಆತಂಕವಿಲ್ಲ. ಏಕೆಂದರೆ ಲಾವಾರಸವು ಆ ಪ್ರದೇಶಗಳ ಮನೆಯ ಹತ್ತಿರಕ್ಕೆ ಹರಿಯಲಾರದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಮೊದಲು ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಉತ್ತರ ಕಿವು ಪ್ರಾಂತ್ಯದ ಮಿಲಿಟರಿ ಗವರ್ನರ್ ಕಾನ್​ಸ್ಟಂಟ್ ನ್ಡಿಮಾ ನಾಗರಿಕ ರಕ್ಷಣಾ ಘಟಕಗಳ ಮಾರ್ಗದರ್ಶನವನ್ನು ಜನರು ಅನುಸರಿಸಬೇಕು ಎಂದು ಮನವಿ ಮಾಡಿದ್ದರು. ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲಿರುವ ಭಾರತೀಯ ಸೇನೆಯ ತುಕಡಿಯು ನಾಗರಿಕರು ಮತ್ತು ವಿಶ್ವಸಂಸ್ಥೆಯ ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ನೆರವಾಗಿದೆ. ಮೇ 22ರಂದು ಸಂಜೆ 6.30ಕ್ಕೆ ನ್ಯರಗೊಂಗೊ ಪರ್ವತದ ಜ್ವಾಲಾಮುಖಿಯು ಸಿಡಿದಿದೆ.

(Volcano Erupts in Congo Indian Army Helps in Evacuation Citizens Flee to save their life)

ಇದನ್ನೂ ಓದಿ: ಸಮಾಧಾನಕರ ಸಂಗತಿ: ಸ್ಪುಟ್ನಿಕ್ ಲೈಟ್ ಲಸಿಕೆ ಪ್ರಯೋಗ 3ನೇ ಹಂತಕ್ಕೆ.. ಅಕ್ಟೋಬರ್ ವೇಳೆಗೆ ಭಾರತಕ್ಕೆ 85 ಕೋಟಿ ಡೋಸ್ ಲಭ್ಯ

ಇದನ್ನೂ ಓದಿ: ಕೊರೊನಾ ಬರದಂತೆ ರಕ್ಷಿಸುವಲ್ಲಿ ಲಸಿಕೆ ಯಶಸ್ವಿ.. ರಾಜ್ಯದಲ್ಲಿ ಎರಡು ಡೋಸ್ ಲಸಿಕೆ ಪಡೆದವರಲ್ಲಿ ಸಾವಿನ ಸಂಖ್ಯೆ ಕಡಿಮೆ

Published On - 3:18 pm, Tue, 25 May 21