ಎರಡು ಬೇರೆ ಬೇರೆ ಕೊರೊನಾ ಲಸಿಕೆ ತೆಗೆದುಕೊಂಡರೆ ಏನಾಗುತ್ತೆ? ಅಧ್ಯಯನ ಹೇಳಿದ್ದೇನು?
ಸದ್ಯದ ಮಟ್ಟಿಗೆ ಈ ಪ್ರಯೋಗವು ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಫಲಿತಾಂಶವನ್ನು ನೀಡಿಲ್ಲವಾದರೂ ಸಣ್ಣಪುಟ್ಟ ಅಡ್ಡಪರಿಣಾಮಗಳು ಕೆಲ ದಿನಗಳಲ್ಲಿ ನಿವಾರಣೆಯಾಗುವುದನ್ನು ತಿಳಿಸಿದೆ. ಮೇಲಾಗಿ ಎಲ್ಲಾ ಲಸಿಕೆಗಳನ್ನೂ ಹೀಗೆ ಮಿಶ್ರಣ ಮಾಡಿದಾಗ ಒಂದೇ ತೆರನಾದ ಫಲಿತಾಂಶ ಸಿಗಲಿದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕಿದೆ.
ಕೊರೊನಾ ಮೊದಲ ಅಲೆ ಶುರುವಾದಾಗಿನಿಂದ ಈ ವರ್ಷದ ಆರಂಭದ ತನಕವೂ ಬಿಟ್ಟೂಬಿಡದೆ ಅದೇ ಯೋಚನೆ ನಮ್ಮನ್ನು ಕಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಇನ್ನೇನು ಪರಿಸ್ಥಿತಿ ಹತೋಟಿಗೆ ಬಂತು ಎಂದು ಜನರು ಸಹಜ ಸ್ಥಿತಿಗೆ ಮರಳುವಷ್ಟರಲ್ಲಿ ಎರಡನೇ ಅಲೆ ಬಂದು ಮತ್ತೆ ನಮ್ಮನ್ನು ಭಯ, ಆತಂಕ, ಅನಿಶ್ಚಿತತೆಯ ಕಡಲಲ್ಲಿ ಮುಳುಗಿಸಿಬಿಟ್ಟಿದೆ. ಸದ್ಯದ ಪರಿಸ್ಥಿತಿಯಲ್ಲಿ ತಜ್ಞರು ಹೇಳುವಂತೆ ಕೊರೊನಾದಿಂದ ತಕ್ಕಮಟ್ಟಿಗೆ ಪಾರಾಗಲು ವೈಯಕ್ತಿಕ ಜಾಗ್ರತೆ ಹಾಗೂ ಲಸಿಕೆ ತೆಗೆದುಕೊಳ್ಳುವುದೊಂದೇ ಈಗಿರುವ ಪರಿಹಾರ. ಆದರೆ, ಕೊರೊನಾ ಲಸಿಕೆ ವಿಚಾರದಲ್ಲಿ ಇನ್ನೂ ಕೂಡ ಸಾಕಷ್ಟು ಗೊಂದಲಗಳಿದ್ದು, ವಿಜ್ಞಾನಿಗಳು ಸಹ ಹೊಸ ಹೊಸ ಆಯಾಮಗಳಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ.
ಈಗ ಲಭ್ಯವಿರುವ ಬಹುತೇಕ ಕೊರೊನಾ ಲಸಿಕೆಗಳನ್ನು ಎರಡು ಡೋಸ್ಗಳಲ್ಲಿ ಕೊಡಲಾಗುತ್ತಿದ್ದು, ಎರಡು ಬಾರಿಯೂ ಒಂದೇ ಕಂಪೆನಿಯ ಲಸಿಕೆ ತೆಗೆದುಕೊಳ್ಳಬೇಕೆಂದು ತಜ್ಞರು ಎಚ್ಚರಿಸಿದ್ದಾರೆ. ಆದರೆ, ಈಗ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಕೊರೊನಾ ಲಸಿಕೆ ಕೊರತೆ ಉಲ್ಬಣಿಸಿದ್ದು ಎರಡನೇ ಡೋಸ್ ಪಡೆಯುವುದಕ್ಕೆ ಲಸಿಕೆಯೇ ಇಲ್ಲ ಎನ್ನುವಂತಾಗಿದೆ. ಹೀಗಾಗಿ ಇಂತಹ ಸಂದಿಗ್ಧತೆಯಲ್ಲಿ ಪರಿಹಾರ ಮಾರ್ಗವನ್ನು ಹುಡುಕಲೆತ್ನಿಸುತ್ತಿರುವ ವಿದೇಶಿ ವಿಜ್ಞಾನಿಗಳು ಒಂದೇ ವ್ಯಕ್ತಿಗೆ ಎರಡು ಕಂಪೆನಿಗಳ ಲಸಿಕೆಯನ್ನು ತಲಾ ಒಂದೊಂದು ಡೋಸ್ ನೀಡಿದರೆ ಏನಾಗಬಹುದು ಎಂದು ತಿಳಿಯಲು ಮುಂದಾಗಿದ್ದಾರೆ.
ಈ ಅಧ್ಯಯನದಲ್ಲಿ ಮೊದಲ ಬಾರಿಗೆ ಆಸ್ಟ್ರಾಜೆನೆಕಾ ಹಾಗೂ ಎರಡನೇ ಬಾರಿ ಫೈಜರ್ ನೀಡಲಾಗಿದ್ದು, ಎರಡನೇ ಡೋಸ್ ಪಡೆದ ನಾಲ್ಕು ವಾರಗಳ ನಂತರ ಲಸಿಕೆ ಪಡೆದ ವ್ಯಕ್ತಿಯಲ್ಲಿ ಆಯಾಸ, ತಲೆನೋವು ಕಾಣಿಸಿಕೊಂಡಿದೆ. ಆದರೆ, ಈ ಅಡ್ಡಪರಿಣಾಮ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ದು, ಬೇಗ ಸರಿ ಹೋಗಿದೆ ಎಂದು ದಿ ಲ್ಯಾನ್ಸೆಟ್ ಮೆಡಿಕಲ್ ಜರ್ನಲ್ನಲ್ಲಿ ಆಕ್ಸ್ಫರ್ಡ್ ತಜ್ಞರು ತಿಳಿಸಿದ್ದಾರೆ. ಅಲ್ಲದೇ ಮೊದಲು ಫೈಜರ್, ನಂತರ ಆಸ್ಟ್ರಾಜೆನೆಕಾ ಲಸಿಕೆ ನೀಡಿದಾಗಲೂ ಇದೇ ಪರಿಣಾಮ ಕಂಡುಬಂದಿದೆ ಎಂದಿದ್ದಾರೆ.
ಫ್ರಾನ್ಸ್ನಲ್ಲಿ ಆಸ್ಟ್ರಾ ಲಸಿಕೆಯನ್ನು ವೃದ್ಧರಿಗೆ ನೀಡಬಾರದು ಎಂದು ಘೋಷಿಸುವ ವೇಳೆಗಾಗಲೇ ಹಲವರು ಮೊದಲ ಡೋಸ್ ಪಡೆದಾಗಿದ್ದ ಕಾರಣ ಅನಿವಾರ್ಯವಾಗಿ ಎರಡನೇ ಡೋಸ್ನಲ್ಲಿ ಫೈಜರ್ ಮತ್ತು ಬಯೋಎನ್ಟೆಕ್ ಲಸಿಕೆಯನ್ನು ನೀಡಲಾಗಿತ್ತು. ಆ ಪ್ರಯೋಗವು ನಿರೀಕ್ಷಿಸಿದ್ದಕ್ಕಿಂತಲೂ ಆಸಕ್ತಿದಾಯಕ ಫಲಿತಾಂಶವನ್ನು ನೀಡಿದೆ ಎಂದು ಮ್ಯಾಥ್ಯೂ ಸ್ನಾಪ್ ಹೇಳಿದ್ದಾರೆ. ಆದರೆ, ಇದು ರೋಗ ನಿರೋಧಕ ಶಕ್ತಿಯನ್ನು ಯಾವ ಪ್ರಮಾಣದಲ್ಲಿ ಹೆಚ್ಚಿಸುತ್ತದೆ ಎಂದಾಗಲೀ, ಇದರಿಂದ ಯಾವೆಲ್ಲಾ ಉಪಯೋಗಗಳು ಆಗಲಿವೆ ಎಂದಾಗಲೀ ಉನ್ನತ ಅಧ್ಯಯನದಿಂದ ತಿಳಿದುಬರಬೇಕಷ್ಟೆ ಎಂಬ ಮಾಹಿತಿಯನ್ನು ನೀಡಿದ್ದಾರೆ.
ಸದ್ಯದ ಮಟ್ಟಿಗೆ ಈ ಪ್ರಯೋಗವು ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಫಲಿತಾಂಶವನ್ನು ನೀಡಿಲ್ಲವಾದರೂ ಸಣ್ಣಪುಟ್ಟ ಅಡ್ಡಪರಿಣಾಮಗಳು ಕೆಲ ದಿನಗಳಲ್ಲಿ ನಿವಾರಣೆಯಾಗುವುದನ್ನು ತಿಳಿಸಿದೆ. ಮೇಲಾಗಿ ಎಲ್ಲಾ ಲಸಿಕೆಗಳನ್ನೂ ಹೀಗೆ ಮಿಶ್ರಣ ಮಾಡಿದಾಗ ಒಂದೇ ತೆರನಾದ ಫಲಿತಾಂಶ ಸಿಗಲಿದೆಯೇ ಎಂಬುದನ್ನೂ ಖಚಿತಪಡಿಸಿಕೊಳ್ಳಬೇಕಿದೆ. ಒಂದುವೇಳೆ ಇದು ಯಶಸ್ವಿಯಾದರೆ ಲಸಿಕೆ ಕೊರತೆಯನ್ನು ಎದುರಿಸುತ್ತಿರುವ ಬಡ ಮತ್ತು ಮಧ್ಯಮ ವರ್ಗದ ರಾಷ್ಟ್ರಗಳು ಎರಡನೇ ಡೋಸ್ ಲಸಿಕೆಗಾಗಿ ನಿರ್ದಿಷ್ಟ ಸಂಸ್ಥೆಯ ದುಂಬಾಲು ಬೀಳುವ ಬದಲು ಯಾವುದನ್ನು ಬೇಕಿದ್ದರೂ ನೀಡುವ ಮೂಲಕ ಲಸಿಕೆ ವಿತರಣೆಯನ್ನು ಚುರುಕುಗೊಳಿಸಬಹುದಾಗಿದೆ.
ಇದನ್ನೂ ಓದಿ: ಭಾರತದಲ್ಲಿ ಪತ್ತೆಯಾಗಿರುವ ಕೊರೊನಾವೈರಸ್ನ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿ : ವಿಶ್ವ ಆರೋಗ್ಯ ಸಂಸ್ಥೆ