ಪಾರ್ಟಿ ಮಾಡೋ ನೆಪದಲ್ಲಿ ಕರೆದೊಯ್ದು.. ಗೆಳೆಯನನ್ನೇ ಕೊಲೆಗೈದ ಕಿರಾತಕ ಫೈನಾನ್ಶಿಯರ್ಸ್​

  • KUSHAL V
  • Published On - 12:10 PM, 25 Oct 2020

ಬೆಂಗಳೂರು: ಯುವಕನನ್ನು ಕಿಡ್ನ್ಯಾಪ್ ಮಾಡಿ ಕೊನೆಗೆ ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ ಹೆಸರಘಟ್ಟದ ಬಳಿ ನಡೆದಿದೆ. ಲಗ್ಗೆರೆ ನಿವಾಸಿ ಮಹೇಶ್‌ ಗೌಡ(20) ಕೊಲೆಯಾದ ಯುವಕ ಎಂದು ತಿಳಿದುಬಂದಿದೆ. ಮಹೇಶ್​ನನ್ನು ಕೊಲೆಗೈದ ಕೃಷ್ಣ ಮತ್ತು ರವಿ ಪೊಲೀಸರಿಗೆ ಶರಣಾಗಿದ್ದಾರೆ.
ಕಿಡ್ನ್ಯಾಪ್, ಕಿತ್ತಾಟ ಕೊಲೆಯಲ್ಲಿ ಅಂತ್ಯ
ಮೂಲತಃ ಲಗ್ಗೆರೆ ನಿವಾಸಿಯಾಗಿದ್ದ ಮೃತ ಮಹೇಶ್ ಗೌಡ ಲಾಡ್ಜ್ ನಡೆಸುತ್ತಿದ್ದ. ಇದೇ ತಿಂಗಳ 21ನೇ ತಾರೀಖು ಗೆಳೆಯರ ಜೊತೆ ಪಾರ್ಟಿ ಮಾಡೋಕೆ ಅಂತಾ ಹೊರಗಡೆ ಹೋಗಿದ್ದ. ನಂತರ ಮನೆಗೆ ವಾಪಾಸ್​ ಬರದೇ ನಾಪತ್ತೆಯಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಕುಟುಂಬಸ್ಥರು ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ನಾಪತ್ತೆಯಾದ ಯುವಕನಿಗಾಗಿ ಹುಡುಕಾಟ ನಡೆಸೋಕೆ ಮುಂದಾದ ಪೊಲೀಸರಿಗೆ ಆಗ ಒಂದು ಶಾಕ್​ ಎದುರಾಯ್ತು. ಕಾಣೆಯಾದ ಯುವಕನ ಬಗ್ಗೆ ತಿಳಿಯಲು ಆತನ ಸ್ನೇಹಿತರಿಗೆ ಬುಲಾವ್​ ನೀಡಿದ್ದ ವೇಳೆ ನಿನ್ನೆ ಠಾಣೆಗೆ ಹಾಜರಾದ ಕೃಷ್ಣ ಹಾಗೂ ರವಿ ಸಾರ್​ ನಾಪತ್ತೆಯಾದ ಮಹೇಶ್​ನನ್ನು ನಾವೇ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿಬಿಟ್ಟೆವು ಎಂದು ತಪ್ಪೊಪ್ಪಿಕೊಂಡಿದ್ದಾರಂತೆ. ಜೊತೆಗೆ, ಮಹೇಶ್​ ಗೌಡನ ಶವವನ್ನು ಹೂತಿಟ್ಟಿರುವುದಾಗಿ ಸಹ ಹೇಳಿಕೆ ನೀಡಿದ್ದಾರಂತೆ.

ಮೂಲತಃ ಫೈನಾನ್ಶಿಯರ್ಸ್​​ ಆಗಿರುವ ಆರೋಪಿಗಳು ಮಹೇಶ್​ಗೆ ಮೊದಲಿನಿಂದಲೂ ಪರಿಚಯಸ್ಥರು. ಪಾರ್ಟಿ ಮಾಡುವ ನೆಪದಲ್ಲಿ ಹೆಸರಘಟ್ಟದಲ್ಲಿರುವ ತಮ್ಮ ಜಮೀನಿಗೆ ಮಹೇಶ್‌ ಗೌಡನನ್ನು ಕರೆದೊಯ್ದ ಆರೋಪಿಗಳು ಆತನನ್ನು ಕಿಡ್ನ್ಯಾಪ್ ಮಾಡೋಕೆ ಸ್ಕೆಚ್ ಹಾಕಿದ್ದರಂತೆ. ಇದನ್ನು ಅರಿತ ಮಹೇಶ್​ ಆರೋಪಿಗಳ ಜೊತೆ ಕಿತ್ತಾಟಕ್ಕೆ ಇಳಿದಿದ್ದಾನೆ. ಆಗ, ಕೃಷ್ಣ ಮತ್ತು ರವಿ ಮಹೇಶ್​ ಕೊಲೆ ಮಾಡಿ ಅಲ್ಲೇ ಹೂತು ಹಾಕಿದ್ದರಂತೆ. ಸದ್ಯ, ಆರೋಪಿಗಳನ್ನು ಬಂಧಿಸಿ ಮತ್ತಷ್ಟು ವಿಚಾರಣೆಗೆ ಒಳಪಡಿಸಲಾಗುತ್ತಿದೆ.