ಅವಹೇಳನಕಾರಿ ವಿಡಿಯೋ: ಯೂಟ್ಯೂಬರ್​ಗೆ ಮಾನನಷ್ಟ ನೋಟಿಸ್ ಕಳುಹಿಸಿದ ಅಕ್ಷಯ್​ ಕುಮಾರ್​

  • KUSHAL V
  • Published On - 19:36 PM, 21 Nov 2020

ಮುಂಬೈ: ತಮ್ಮ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆಂದು ಬಾಲಿವುಡ್​ ನಟ ಅಕ್ಷಯ್ ಕುಮಾರ್ ಬಿಹಾರ ಮೂಲದ ಯೂಟ್ಯೂಬರ್ ರಶೀದ್ ಸಿದ್ದೀಕಿ​ಗೆ ಮಾನನಷ್ಟದ ನೋಟಿಸ್ ಕಳುಹಿಸಿದ್ದರು. ಆದರೆ ಇದೀಗ, ಯೂಟ್ಯೂಬರ್ (ಯೂಟ್ಯೂಬ್​ನಲ್ಲಿ ವಿಡಿಯೋ ಪೋಸ್ಟ್​ ಮಾಡುವವರು) ರಶೀದ್ ಸಿದ್ದೀಕಿ ನಟ ಕಳುಹಿಸಿರುವ ನೋಟಿಸನ್ನು ತಳ್ಳಿಹಾಕಿದ್ದಾರೆ.

ಜೊತೆಗೆ, ನೋಟಿಸ್​ನಲ್ಲಿ ಸೂಚಿಸಿಲಾಗಿದ್ದ 500 ಕೋಟಿ ರೂ. ನಷ್ಟದ ಮೊತ್ತವನ್ನು ಸಹ ನೀಡಲು ನಿರಾಕರಿಸಿದ್ದಾರೆ. ಇದಲ್ಲದೆ, ತಾವು ನೀಡಿರುವ ನೋಟಿಸ್ ಹಿಂಪಡೆದುಕೊಳ್ಳುವಂತೆ ಯೂಟ್ಯೂಬರ್ ರಶೀದ್ ಸಿದ್ದೀಕ್ ನಟನಿಗೆ ಒತ್ತಾಯಿಸಿದ್ದಾರೆ. ಇದನ್ನು ನಿರಾಕರಿಸಿದರೇ ಅಕ್ಷಯ್ ಕುಮಾರ್ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದೆಂದು ರಶೀದ್​ ತಿಳಿಸಿದ್ದಾರೆ.

ರಶೀದ್ ಸಿದ್ದೀಕಿ ತನ್ನ FF ನ್ಯೂಸ್ ಯೂಟ್ಯೂಬ್ ಚಾನಲ್​ನಲ್ಲಿ ನಟ ಸುಶಾಂತ್ ಸಿಂಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಿರುದ್ಧ ಮಾನಹಾನಿಕರ ಮತ್ತು ಅವಹೇಳನಕಾರಿ ವಿಡಿಯೋಗಳನ್ನು ಪೋಸ್ಟ್​ ಮಾಡಿದ್ದಾರೆಂದು ಅಕ್ಷಯ್ ಕುಮಾರ್ ಕಾನೂನು ಸಂಸ್ಥೆ ಐ.ಸಿ. ಲೀಗಲ್ ಮೂಲಕ ನವೆಂಬರ್ 17 ರಂದು ನೋಟಿಸ್ ಕಳುಹಿಸಿದ್ದರು.

ಇದಕ್ಕೆ, ನನ್ನ ಮೇಲೆ ಮಾಡಿದ ಆರೋಪಗಳು ಸುಳ್ಳು ಮತ್ತು ದಬ್ಬಾಳಿಕೆಯಿಂದ ಕೂಡಿದೆ. ಪ್ರತಿಯೊಬ್ಬ ಭಾರತೀಯ ಪ್ರಜೆಗೂ ವಾಕ್ ಸ್ವಾತಂತ್ರ್ಯದ ಹಕ್ಕಿದೆ ಎಂದು ರಶೀದ್ ಸಿದ್ದೀಕಿ ತಮ್ಮ ವಕೀಲರ ಮೂಲಕ ಪ್ರತ್ಯುತ್ತರ ನೀಡಿದ್ದಾರೆ.ಈ ಮೊದಲು ಮಹಾರಾಷ್ಟ್ರ ಸರ್ಕಾರ ಮತ್ತು ಸಚಿವ ಆದಿತ್ಯ ಠಾಕ್ರೆ ವಿರುದ್ಧವೂ ಮಾನಹಾನಿ ವಿಡಿಯೋಗಳನ್ನು ಅಪ್ಲೋಡ್ ಮಾಡಿದ್ದ ರಶೀದ್ ಸಿದ್ದೀಕಿ ವಿರುದ್ಧ ಮುಂಬೈ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.