ಶಿವಮೊಗ್ಗ ನಗರದ ಗೋಪಾಳದ ಪರಮಹಂಸ ನಗರದ ನಿವಾಸಿ ಮಂಜುನಾಥ್ ಎಂಬುವರ ಮನೆ ಬಳಿ ಕಳೆದ ಎರಡ್ಮೂರು ದಿನಗಳಿಂದ ನಿರಂತರವಾಗಿ ಕಾಣಿಸಿಕೊಳ್ಳುತ್ತಿದ್ದ 9 ಅಡಿಗೂ ಅಧಿಕ ಉದ್ದದ ಬೃಹತ್ ಹೆಬ್ಬಾವನ್ನು ಯಶಸ್ವಿಯಾಗಿ ಸೆರೆಹಿಡಿಯಲಾಗಿದೆ. ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದ್ದ ಈ ಸರೀಸೃಪವನ್ನು ರಕ್ಷಿಸಲು ಉರಗ ತಜ್ಞ ಸ್ನೇಕ್ ಕಿರಣ್ ಸ್ಥಳಕ್ಕೆ ಆಗಮಿಸಿ, ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಿ ಕಾರ್ಯಾಚರಣೆ ನಡೆಸಿದರು. ಪ್ರಾಣಾಪಾಯವಿಲ್ಲದೆ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆಹಿಡಿದ ತಕ್ಷಣವೇ ನಿವಾಸಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಸೆರೆಸಿಕ್ಕ ಬೃಹತ್ ಹೆಬ್ಬಾವನ್ನು ಸ್ನೇಕ್ ಕಿರಣ್ ಅವರು ಹತ್ತಿರದ ಸುರಕ್ಷಿತ ಅರಣ್ಯ ಪ್ರದೇಶಕ್ಕೆ ತಂದು ಬಿಟ್ಟಿದ್ದಾರೆ.