ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆಮಾಡಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗಡ್ಡದನಾಯಕನಹಳ್ಳಿ ಗ್ರಾಮದಲ್ಲಿ ಗ್ರಾಮೀಣ ದಸರಾ ವೈಭವದಿಂದ ನಡೆಯಿತು. ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾ ಮಹೇಶ್ವರಿ ದೇವಾಲಯದ ವತಿಯಿಂದ ಮೂರು ದಿನಗಳ ದಸರಾ ಮಹೋತ್ಸವದ ಅಂಗವಾಗಿ ಅಮ್ಮನವರ ಆನೆ ಅಂಬಾರಿ ಉತ್ಸವ ಆಯೋಜಿಸಲಾಗಿತ್ತು. ಆನೆಯ ಮೇಲೆ ದುರ್ಗಾ ಮಹೇಶ್ವರಿ ಅಮ್ಮನವರ ಅಂಬಾರಿಯನ್ನು ಕೂರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಗ್ರಾಮೀಣ ಜಂಬೂ ಸವಾರಿ ನಡೆಸಲಾಯಿತು. ವಿವಿಧ ದೇವರುಗಳ ಪಲ್ಲಕ್ಕಿಗಳು ಅಂಬಾರಿಯ ಹಿಂದೆ ಸಾಗಿದವು. ವಿವಿಧ ಕಲಾ ತಂಡಗಳ ನೃತ್ಯ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು.