ಆಸ್ಟ್ರೇಲಿಯಾದ ಕ್ರಿಸ್ಮಸ್ ದ್ವೀಪದಲ್ಲಿ ಕೋಟ್ಯಂತರ ಕೆಂಪು ಏಡಿಗಳ ವಾರ್ಷಿಕ ವಲಸೆ ಆರಂಭವಾಗಿದೆ. ಈ ವಲಸೆಯ ಮೇಲ್ವಿಚಾರಣೆ ಮತ್ತು ನಿರ್ವಹಣೆ ನಡೆಸುವ ‘ಪಾರ್ಕ್ಸ್ ಆಸ್ಟ್ರೇಲಿಯಾ’ ಸಂಸ್ಥೆಯ ಪ್ರಕಾರ, ಪ್ರಮುಖ ಮಳೆಗಾಲದ ಮಳೆಯು ಶುರುವಾದಾಗ ಈ ಏಡಿಗಳು ದ್ವೀಪದ ಕಾಡುಗಳಿಂದ ಸಮುದ್ರದತ್ತ ಪ್ರಯಾಣ ಬೆಳೆಸುತ್ತವೆ. ದ್ವೀಪದ ದಟ್ಟ ಕಾಡುಗಳಲ್ಲಿ ನೆಲೆಸಿರುವ ಕೆಂಪು ಏಡಿಗಳು, ಮಳೆಗಾಲದ ಮೊದಲ ಪ್ರಮುಖ ಮಳೆಯೊಂದಿಗೆ ತೇವಾಂಶ ಹೆಚ್ಚಾದಾಗ ಸಮುದ್ರದ ತೀರದ ಕಡೆಗೆ ಸಾಗಲು ಪ್ರಾರಂಭಿಸುತ್ತವೆ. ರಸ್ತೆಗಳು, ಮನೆಗಳು ಮತ್ತು ಕಾಡಿನ ಹಾದಿಗಳ ಮೂಲಕ ಏಡಿಗಳು ಒಟ್ಟಾಗಿ ಸಾಗುವ ಈ ಅಪರೂಪದ ದೃಶ್ಯ ಪ್ರತಿವರ್ಷವೂ ವೀಕ್ಷಕರ ಗಮನ ಸೆಳೆಯುತ್ತದೆ.