23-06-2024

ಭಾರತ- ಆಸೀಸ್ ಮುಖಾಮುಖಿಯಲ್ಲಿ ಯಾರದ್ದು ಮೇಲುಗೈ?

Author: ಪೃಥ್ವಿ ಶಂಕರ

ಟಿ20 ವಿಶ್ವಕಪ್ 2024 ರ ಸೂಪರ್ 8 ನಲ್ಲಿ ಭಾರತದ ಮುಂದಿನ ಪಂದ್ಯವು ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.

ಭಾರತ ತನ್ನ ಆರಂಭಿಕ ಎರಡು ಸೂಪರ್ 8 ಪಂದ್ಯಗಳನ್ನು ಗೆದ್ದಿದೆ. ಹೀಗಾಗಿ ಸೆಮಿಫೈನಲ್‌ಗೆ ಭಾರತ ಪ್ರಬಲ ಸ್ಪರ್ಧಿಯಾಗಿದೆ.

ಅಲ್ಲದೆ ಈ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಅಧಿಕೃತವಾಗಿ ಲಗ್ಗೆ ಇಡಲು ಟೀಂ ಇಂಡಿಯಾ ಬಯಸುತ್ತಿದೆ. ಆದ್ದರಿಂದ ಎರಡೂ ತಂಡಗಳ ಹೆಡ್ ಟು ಹೆಡ್ ದಾಖಲೆ ನೋಡುವುದು ಮುಖ್ಯವಾಗಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಇದುವರೆಗೆ 31 ಪಂದ್ಯಗಳು ನಡೆದಿವೆ. ಈ ಪೈಕಿ ಟೀಂ ಇಂಡಿಯಾ 19 ಪಂದ್ಯಗಳನ್ನು ಗೆದ್ದಿದ್ದರೆ, ಆಸ್ಟ್ರೇಲಿಯಾ ತಂಡ 11 ಪಂದ್ಯಗಳನ್ನು ಗೆದ್ದಿದೆ.

ಅದೇ ಸಮಯದಲ್ಲಿ, ಟಿ20 ವಿಶ್ವಕಪ್‌ನಲ್ಲಿ ಉಭಯ ದೇಶಗಳ ನಡುವೆ ಇದುವರೆಗೆ 5 ಪಂದ್ಯಗಳು ನಡೆದಿವೆ. ಈ ಪೈಕಿ ಭಾರತ ಮೂರು ಪಂದ್ಯಗಳನ್ನು ಗೆದ್ದಿದ್ದು, ಆಸ್ಟ್ರೇಲಿಯಾ 2 ಪಂದ್ಯಗಳನ್ನು ಗೆದ್ದಿದೆ.

ಭಾರತ ತನ್ನ ಕೊನೆಯ ಪಂದ್ಯವನ್ನು 2010 ರಲ್ಲಿ ಸೇಂಟ್ ಲೂಸಿಯಾದ ಡ್ಯಾರೆನ್ ಸಾಮಿ ರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಡಿತು.

ಈ ಮೈದಾನದಲ್ಲಿ ಭಾರತ ಇದುವರೆಗೆ ಮೂರು ಪಂದ್ಯಗಳನ್ನು ಆಡಿದ್ದು, ಅದರಲ್ಲಿ 2 ಪಂದ್ಯಗಳನ್ನು ಗೆದ್ದಿದ್ದರೆ, ಒಂದರಲ್ಲಿ ಸೋಲನ್ನು ಎದುರಿಸಬೇಕಾಯಿತು.

ಹೀಗಿರುವಾಗ 14 ವರ್ಷಗಳ ನಂತರ ಇದೇ ಮೈದಾನದಲ್ಲಿ ಆಸ್ಟ್ರೇಲಿಯಾ ಟೀಂ ಇಂಡಿಯಾ ಟಿ20 ಪಂದ್ಯವನ್ನಾಡಲಿದೆ.

ಭಾರತ ಸೆಮಿಫೈನಲ್‌ಗೆ ಕೇವಲ ಒಂದು ಗೆಲುವಿನ ಅಂತರದಲ್ಲಿದೆ. ಆಸ್ಟ್ರೇಲಿಯ ವಿರುದ್ಧ ಭಾರತ ಗೆದ್ದರೆ ಸೆಮಿಫೈನಲ್ ತಲುಪಲಿದೆ. ಇತ್ತ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ಸೋತರೆ, ಟಿ20 ವಿಶ್ವಕಪ್‌ನಲ್ಲಿ ಅದರ ಪಯಣ ಇನ್ನಷ್ಟು ಕಷ್ಟಕರವಾಗಲಿದೆ.