08-05-2024

IPL 2024: ಈ 10 ಆಟಗಾರರಿಗೆ ಇದು ಕೊನೆಯ ಸೀಸನ್

Author: ಪೃಥ್ವಿ ಶಂಕರ

ಐಪಿಎಲ್ 2024 ರಲ್ಲಿ ಗುಂಪು ಹಂತದ ಪಂದ್ಯಗಳು ಬಹುತೇಕ ಮುಗಿದಿವೆ. ಇದರ ನಂತರ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ.

ಈ ಸೀಸನ್ ಅನೇಕ ಸ್ಟಾರ್ ಆಟಗಾರರಿಗೆ ಕೊನೆಯ ಐಪಿಎಲ್ ಆಗುವ ಸಾಧ್ಯತೆಗಳಿವೆ. ಈ ಪಟ್ಟಿಯಲ್ಲಿ ಅನೇಕ ದೊಡ್ಡ ಹೆಸರುಗಳು ಸೇರಿವೆ.

ಮೊದಲನೆಯದ್ದಾಗಿ 42ರ ಹರೆಯದ ಎಂಎಸ್ ಧೋನಿಗೆ ಇದು ಕೊನೆಯ ಸೀಸನ್ ಆಗಿರಬಹುದು. ಗಾಯದಿಂದ ಬಳಲುತ್ತಿರುವ ಧೋನಿ ಮುಂದಿನ ಸೀಸನ್ ಆಡುವ ಸಾಧ್ಯತೆ ಕಡಿಮೆಯಾಗಿದೆ.

ಇದಲ್ಲದೆ, 38 ವರ್ಷದ ದಿನೇಶ್ ಕಾರ್ತಿಕ್ ಐಪಿಎಲ್ ಆರಂಭವಾಗುವುದಕ್ಕೂ ಮೊದಲೆ ಇದು ನನ್ನ ಕೊನೆಯ ಐಪಿಎಲ್ ಎಂದಿದ್ದರು. ಐಪಿಎಲ್ ನಡು ನಡುವೆಯೂ ನಿವೃತ್ತಿಯ ಸುಳಿವು ನೀಡಿದ್ದರು.

ಇಂಜುರಿಯಿಂದ ಬಳಲುತ್ತಿರುವ 35 ವರ್ಷದ ಇಶಾಂತ್ ಶರ್ಮಾ, ಈ ಆವೃತ್ತಿಯಲ್ಲೇ ಡೆಲ್ಲಿ ಕ್ಯಾಪಿಟಲ್ಸ್ ಪರ ಅನೇಕ ಪಂದ್ಯಗಳನ್ನು ಆಡಲಿಲ್ಲ. ಅಲ್ಲದೆ ಅವರ ಫಾರ್ಮ್​ ಕೂಡ ಅಷ್ಟು ಉತ್ತಮವಾಗಿಲ್ಲ.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಈ ಆವೃತ್ತಿಯಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರನ್ನು ಈಗಾಗಲೇ ತಂಡದಿಂದ ಹೊರಗಿಡಲಾಗಿದೆ. ಅಲ್ಲದೆ ವಯಸ್ಸಿನ ಕಾರಣ ವಾರ್ನರ್​​ಗೆ ಇದು ಕೊನೆಯ ಐಪಿಎಲ್ ಆಗಿರಬಹುದು.

ಪ್ರಸ್ತುತ ಚೆನ್ನೈ ಪರ ಆಡುತ್ತಿರುವ 35 ವರ್ಷದ ಅಜಿಂಕ್ಯ ರಹಾನೆ ಆರಂಭಿಕರಾಗಿ ಚೆನ್ನೈಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಹೀಗಾಗಿ ಅವರನ್ನು ಮೆಗಾ ಹರಾಜಿನಲ್ಲಿ ಖರೀದಿಸುವ ಸಾಧ್ಯತೆಗಳಿಲ್ಲ.

ಹಾಗೆಯೇ ಕನ್ನಡಿಗ 34ರ ಹರೆಯದ ಮನೀಷ್ ಪಾಂಡೆ ಹಾಗೂ 39ರ ಹರೆಯದ ವೃದ್ಧಿಮಾನ್ ಸಾಹಾ ಅವರಿಗೂ ಮುಂದಿನ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಗುವ ಸಾಧ್ಯತೆ ಕಡಿಮೆ.

ಇವರಲ್ಲದೇ ಮೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ವಿಜಯ್ ಶಂಕರ್ ಹೆಸರುಗಳು ಈ ಪಟ್ಟಿಯಲ್ಲಿ ಸೇರಿವೆ. ವಾಸ್ತವವಾಗಿ, ಫಿಟ್ನೆಸ್ ಹೊರತುಪಡಿಸಿ, ಈ ಆಟಗಾರರು ನಿರಂತರ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದಾರೆ.