17-04-2024

ದಿನೇಶ್ ಕಾರ್ತಿಕ್ ಸಿಡಿಲಬ್ಬರದ ಸಿಕ್ಸರ್ ಸಿಡಿಸುವ ಬ್ಯಾಟ್ ಬೆಲೆ ಎಷ್ಟು ಗೊತ್ತಾ?

Author: ಪೃಥ್ವಿ ಶಂಕರ

ಐಪಿಎಲ್ 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನ ತುಂಬಾ ಕಳಪೆಯಾಗಿದೆ. ತಂಡವು ಇದುವರೆಗೆ ಆಡಿರುವ 7 ಪಂದ್ಯಗಳಲ್ಲಿ 6 ರಲ್ಲಿ ಸೋತಿದೆ.

ಅದಾಗ್ಯೂ ತಂಡದ ಅನುಭವಿ ವಿಕೆಟ್ ಕೀಪರ್ ಬ್ಯಾಟ್ಸ್​ಮನ್ ದಿನೇಶ್ ಕಾರ್ತಿಕ್ ಮಾತ್ರ ತಂಡದ ಪರ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ.

ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರುವ 40 ವರ್ಷದ ದಿನೇಶ್ ಕಾರ್ತಿಕ್, ಆರ್​ಸಿಬಿ ಗೆಲುವಿಗಾಗಿ ಇಲ್ಲಿಯವರೆಗೆ ಆಡಿರುವ ಭಾಗಶಃ ಪಂದ್ಯಗಳಲ್ಲಿ ಏಕಾಂಗಿ ಹೋರಾಟ ನೀಡಿದ್ದಾರೆ.

ಇದಕ್ಕೆ ಉದಾಹರಣೆಯಾಗಿ ಕಾರ್ತಿಕ್ ತಮ್ಮ ಕೊನೆಯ ಐಪಿಎಲ್ ಪಂದ್ಯದಲ್ಲಿ ಎಸ್​ಆರ್​ಹೆಚ್ ವಿರುದ್ಧ ಕೇವಲ 35 ಎಸೆತಗಳಲ್ಲಿ 83 ರನ್ ಗಳಿಸಿದ್ದರು.

ಅಲ್ಲದೆ ಇದೇ ಪಂದ್ಯದಲ್ಲಿ 107 ಮೀಟರ್ ಉದ್ದದ ಸಿಕ್ಸರ್ ಸಿಡಿಸಿ ಈ ಆವೃತ್ತಿಯ ಅತಿ ಉದ್ದದ ಸಿಕ್ಸರ್ ಸಿಡಿಸಿದ ಆಟಗಾರ ಎಂಬ ದಾಖಲೆಯನ್ನು ಬರೆದಿದ್ದರು.

ಇದೀಗ ನೀರು ಕುಡಿದಷ್ಟು ಸುಲಭವಾಗಿ ಸಿಕ್ಸರ್​ ಹಾಗೂ ಬೌಂಡರಿಗಳನ್ನು ಸಿಡಿಸುವ ಕಾರ್ತಿಕ್ ಬಳಸುವ ಬ್ಯಾಟ್​ನ ಬೆಲೆ ಎಷ್ಟು ಎಂದು ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ವಾಸ್ತವವಾಗಿ ದಿನೇಶ್ ಕಾರ್ತಿಕ್ ಮೀರತ್‌ನ ಪ್ರಸಿದ್ಧ ಕಂಪನಿಯಾದ ಎಸ್‌ಎಸ್‌ನ ಬ್ಯಾಟ್ ಮತ್ತು ಇತರ ಕಿಟ್​ಗಳನ್ನು ಬಳಸುತ್ತಾರೆ. ಇದು ಡಿಕೆ ಅವರ ನೆಚ್ಚಿನ ಬ್ರ್ಯಾಂಡ್ ಆಗಿದೆ.

ಕಳೆದ 15 ವರ್ಷಗಳಿಂದ ಈ ಕಂಪನಿಯ ಬ್ಯಾಟ್ ಅನ್ನು ಬಳಸುತ್ತಿದ್ದೇನೆ ಮತ್ತು ಯಾವಾಗಲೂ ಅದರೊಂದಿಗೆ ಬ್ಯಾಟಿಂಗ್ ಮಾಡುತ್ತೇನೆ ಎಂದು ಕಾರ್ತಿಕ್ ಅವರೇ ಸ್ವತಃ ವೀಡಿಯೊದಲ್ಲಿ ಹೇಳಿದ್ದಾರೆ.

ಈ ಬ್ಯಾಟ್‌ನ ವಿಶೇಷತೆಗೆ ಸಂಬಂಧಿಸಿದಂತೆ ಮಾತನಾಡಿರುವ ಕಾರ್ತಿಕ್ ಅದರ ವಿಲೋ ಅದ್ಭುತವಾಗಿದೆ. ಈ ಬ್ಯಾಟ್​ಗೆ ಬಡಿದ ನಂತರ ಚೆಂಡು ಪಡೆಯುವ ಬೌನ್ಸ್ ಅತ್ಯುತ್ತಮವಾಗಿದೆ ಎಂದಿದ್ದರು.

ಅನೇಕ ಸ್ಟಾರ್ ಬ್ಯಾಟ್ಸ್‌ಮನ್‌ಗಳು 1 ರಿಂದ 1.5 ಲಕ್ಷ ರೂಪಾಯಿ ಬೆಲೆಯ ಬ್ಯಾಟ್​ಗಳನ್ನು ಬಳಸುತ್ತಾರೆ. ಆದರೆ ಕಾರ್ತಿಕ್ ಅವರ ಬ್ಯಾಟ್ ಕೇವಲ 36000 ರೂ.ಗಳಾಗಿದ್ದು, ಕಂಪನಿಯಿಂದ 30000 ರೂ.ವರೆಗಿನ ರಿಯಾಯಿತಿ ಧರದಲ್ಲಿ ಲಭ್ಯವಿದೆ.