11-12-2023

2ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಯಾವಾಗ ಆರಂಭ?

Author: ಪೃಥ್ವಿ ಶಂಕರ

ಮಹಿಳಾ ಪ್ರೀಮಿಯರ್ ಲೀಗ್ ಎರಡನೇ ಸೀಸನ್‌ಗೆ ತಯಾರಿ ಶುರುವಾಗಿದೆ. ಈ ಟೂರ್ನಿಗೆ ಐದು ತಂಡಗಳು ಸಿದ್ಧವಾಗಿವೆ.

ಆದರೆ ಈ ನಡುವೆ ಮಹಿಳಾ ಪ್ರೀಮಿಯರ್ ಲೀಗ್ ಯಾವಾಗ ಆರಂಭವಾಗಲಿದೆ ಎಂಬ ಪ್ರಶ್ನೆ ಕ್ರೀಡಾಭಿಮಾನಿಗಳಲ್ಲಿ ಮೂಡಿದೆ.

ಬಿಸಿಸಿಐ ಮೂಲಗಳ ಪ್ರಕಾರ, ಫೆಬ್ರವರಿ 22 ರಿಂದ ಮಾರ್ಚ್ 17 ರವರೆಗೆ ಮಹಿಳಾ ಪ್ರೀಮಿಯರ್ ಲೀಗ್‌ 2ನೇ ಆವೃತ್ತಿ ನಡೆಯುವ ಸಾಧ್ಯತೆಗಳಿವೆ. ಈ ಬಗ್ಗೆ ಬಿಸಿಸಿಐ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡಲಿದೆ.

ಮೊದಲ ಆವೃತ್ತಿಯಲ್ಲಿ, ಮಹಿಳಾ ಪ್ರೀಮಿಯರ್ ಲೀಗ್‌ನ ಎಲ್ಲಾ ಪಂದ್ಯಗಳು ಮುಂಬೈನಲ್ಲಿ ನಡೆದಿದ್ದವು. ಆದರೆ ಈ ಸೀಸನ್‌ಗೆ ಎರಡು ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿತ್ತು.

ಈ ಬಗ್ಗೆ ಕ್ರಿಕ್‌ಬಜ್‌ಗೆ ಹೇಳಿಕೆ ನೀಡಿರುವ ಜಯ್ ಶಾ ಅವರು, ಫೆಬ್ರವರಿಯಲ್ಲಿ ಟೂರ್ನಿ ನಡೆಯುವುದು ಖಚಿತ. ಆದರೆ ಲಾಜಿಸ್ಟಿಕ್ಸ್ ಸುಲಭವಾಗುವುದರಿಂದ ಒಂದೇ ಸ್ಥಳದಲ್ಲಿ ಪಂದ್ಯಾವಳಿಯನ್ನು ಆಡಿಸಲು ಒತ್ತು ನೀಡಲಾಗುವುದು ಎಂದಿದ್ದರು.

ಹಾಗೆಯೇ ಪಂದ್ಯಾವಳಿಯನ್ನು ಒಂದೇ ರಾಜ್ಯದ ಎರಡು ಸ್ಥಳಗಳಲ್ಲಿ ನಡೆಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದಿದ್ದರು.

ಬೆಂಗಳೂರು, ಉತ್ತರ ಪ್ರದೇಶ, ಅಹಮದಾಬಾದ್, ರಾಜ್‌ಕೋಟ್ ಮತ್ತು ಬರೋಡಾ ಕೂಡ ಇದಕ್ಕೆ ಉತ್ತಮ ಆಯ್ಕೆಗಳಾಗಿವೆ. ಆದರೆ ನಾವು ಒಟ್ಟಾಗಿ ಕುಳಿತು ಈ ಬಗ್ಗೆ ನಿರ್ಧರಿಸುತ್ತೇವೆ ಎಂದು ಜಯ್ ಶಾ ಹೇಳಿದ್ದಾರೆ.