ಬೆಂಗಳೂರಿನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡ 402 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
04 November 2023
ವಿಶ್ವಕಪ್ ಸೆಮಿಫೈನಲ್ಗೇರಬೇಕೆಂದರೆ ಪಾಕ್ ತಂಡ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಅದರಲ್ಲೂ ಈ ಗುರಿಯನ್ನು 35 ಓವರ್ಗಳ ಒಳಗೆ ಪಾಕ್ ಮುಟ್ಟಬೇಕಿದೆ.
ಆದರೆ ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಪಾಕ್ ತಂಡ ಇಷ್ಟು ಮೊತ್ತದ ಬೃಹತ್ ಗುರಿ ಬೆನ್ನಟ್ಟಿದ ಉದಾಹರಣೆಗಳಿಲ್ಲ.
ವಾಸ್ತವವಾಗಿ ಇದೇ ವಿಶ್ವಕಪ್ನಲ್ಲಿ ಬಾಬರ್ ಪಡೆ ಹೈದರಾಬಾದ್ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 354 ರನ್ಗಳ ಗುರಿಯನ್ನು 4 ವಿಕೆಟ್ ಕಳೆದುಕೊಂಡು ಸಾಧಿಸಿತ್ತು.
ಏಕದಿನ ವಿಶ್ವಕಪ್ನಲ್ಲಿ ಇದು ಪಾಕಿಸ್ತಾನ ತಂಡ ಬೆನ್ನಟ್ಟಿದ ಅತ್ಯಧಿಕ ರನ್ ಇದಾಗಿದೆ.
ಇದಕ್ಕೂ ಮೊದಲು 1992 ರಲ್ಲಿ ನಡೆದ ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ನೀಡಿದ್ದ 263 ರನ್ ಬೆನ್ನಟ್ಟಿದ್ದೇ ಪಾಕ್ ತಂಡದ ಇದುವರೆಗಿನ ದಾಖಲೆಯಾಗಿತ್ತು.
ಆ ಬಳಿಕ ನಾಲ್ಕು ವರ್ಷಗಳ ನಂತರ ಅಂದರೆ 1996ರ ವಿಶ್ವಕಪ್ನಲ್ಲಿ ಕರಾಚಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ 249 ರನ್‌ಗಳನ್ನು ಪಾಕ್ ತಂಡ ಬೆನ್ನಟ್ಟಿ ದಾಖಲೆ ಬರೆದಿತ್ತು.
ಹೀಗಾಗಿ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ 400 ರನ್ಗಳ ಗುರಿಯನ್ನು ಬೆನ್ನಟ್ಟಿದರೆ ಅದು ವಿಶ್ವದಾಖಲೆಯಾಗಲಿದೆ.