30-11-2023

ಹಾಸನ: ಮತ್ತೊಂದು ಪುಂಡಾನೆ ಕೊನೆಗೂ ಸೆರೆ

Author: ಗಣಪತಿ ಶರ್ಮ

ಹಾಸನದ ಬೇಲೂರು ತಾಲ್ಲೂಕಿನಲ್ಲಿ ಮತ್ತೊಂದು ಕಾಡಾನೆಯನ್ನು ಗುರುವಾರ ಸೆರೆ ಹಿಡಿಯಲಾಯಿತು.

ಸತತ ಎಂಟು ಗಂಟೆ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಸೆರೆಹಿಡಿದು ಸ್ಥಳಾಂತರ ಮಾಡಿದ್ದಾರೆ.

ಪುಂಡಾನೆಯ ಸೆರೆಗೆ ಸತತ ಐದು ದಿನಗಳಿಂದ ಕಾರ್ಯಾಚರಣೆ ನಡೆಸಲಾಗುತ್ತಿತ್ತು.

ಗುರುವಾರ ಬೆಳಿಗ್ಗೆ ಹತ್ತು ಗಂಟೆಯಿಂದ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು.

ನಾಲ್ಕು ಸಾಕಾನೆಗಳನ್ನು ಕಂಡ ಕೂಡಲೇ ಮಕ್ನಾ ಆನೆ ಕಾಲ್ಕಿಳುತ್ತಿತ್ತು. ಸಂಜೆಯವರೆಗೂ ಸತಾಯಿಸಿತ್ತು.

ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ವೈದ್ಯರು ಹರಸಾಹಪಟ್ಟರು. ಅರಿವಳಿಕೆ ನೀಡಿದ ನಂತರವೂ ಆನೆ ಓಡುತ್ತಿತ್ತು.

ಆನೆಯನ್ನು ಹಿಂಬಾಲಿಸಿ ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾಕಾನೆಗಳು ಹೈರಾಣಾಗಬೇಕಾಯಿತು.

ಕಡೆಗೆ ಬೇಲೂರು ತಾಲ್ಲೂಕಿನ, ಅರೇಹಳ್ಳಿ ಬಳಿಯ ಅಣ್ಣಾಮಲೈ ಎಸ್ಟೇಟ್‌ನಲ್ಲಿ ಕಾಡಾನೆ ಕುಸಿದು ಬಿತ್ತು. ಬಳಿಕ ಸೆರೆ ಹಿಡಿಯಲಾಯಿತು.