ಕಳೆದ ಒಂದು ವಾರದಿಂದ ರಾಜ್ಯಾದ್ಯಂತ ಮಳೆಯಾಗುತ್ತಿದೆ. ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪು ಎರೆದಿದ್ದಾನೆ.
ಬಾಗಲಕೋಟೆ ಜಿಲ್ಲೆಯ ರಬಕವಿಬನಹಟ್ಟಿ ನಗರದಲ್ಲಿ ಧಾರಾಕಾರ ಮಳೆಯಾಗಿದ್ದು, ಭೂಮಿ ತಂಪಾಗಿದೆ. ಮಳೆ ಜೊತೆಗೆ ಬಿರುಗಾಳಿ ಬೀಸುತ್ತಿದೆ.
ರಸ್ತೆಗಳಲ್ಲಿ ಮೊಣಕಾಲಿನವರೆಗೂ ಮಳೆ ನೀರು ನಿಂತಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬೈಕ್ಗಳು ನೀರಲ್ಲಿ ಸಿಲುಕಿವೆ.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದೆ. ಕಳಸ, ಮೂಡಿಗೆರೆ, ಕೊಪ್ಪ, NR ಪುರ ತಾಲೂಕಿನಲ್ಲಿ ಗುಡುಗು ಮಿಂಚು ಸಹಿತ ಬಿರುಗಾಳಿಯೊಂದಿಗೆ ಧಾರಾಕಾರವಾಗಿ ಮಳೆ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ, ನೆಲ್ಯಾಡಿ, ಪಂಜ ಕಡೆಗಳಲ್ಲಿ ಗಾಳಿ ಮತ್ತು ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಗಾಳಿಗೆ ಕೋಡಿಂಬಾಳ ಮಡ್ಯಡ್ಕ ಬಳಿ ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಉಡುಪಿ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆಯಾಗಿದೆ. ಮಣಿಪಾಲ, ಕಾರ್ಕಳ, ಕಾಪು , ಸೇರಿದಂತೆ ನಗರದಾದ್ಯಂತ ಉತ್ತಮ ಮಳೆಯಾಗಿದೆ.
ಚಾಮರಾಜನಗರದ ಕುಲಗಾಣದಲ್ಲೂ ಕೂಡ ಅತ್ಯಧಿಕ 122 ಮಿಮೀ ಮಳೆಯಾಗಿದೆ. ರಾಜ್ಯಾದ್ಯಂತ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರ, ಹೆಮ್ಮಿಗೆಪುರದಲ್ಲಿ ಅತ್ಯಧಿಕ 9.5 ಮಿಮೀ ಮಳೆಯಾಗಿದೆ. ಬೆಂಗಳೂರಿನಲ್ಲಿ ಶನಿವಾರ ಸಂಜೆ ಮೋಡಕವಿದ ವಾತಾವರಣ ಇದೆ.