ಒಂಬತ್ತು ದಿನಗಳ ಶಿರಸಿ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವ ಆರಂಭವಾಗಿದೆ, ನೀವಿನ್ನೂ ಹೋಗಿಲ್ವಾ?
ಒಂಬತ್ತು ದಿನಗಳ ಜಾತ್ರಾಮಹೋತ್ಸವ ಮುಗಿದ ಬಳಿಕ ಧಾರ್ಮಿಕ ಆಚರಣೆಯೊಂದರ ಮೂಲಕ ಮಾರಿಕಾಂಬೆ ದೇವಿಯ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಿಟ್ಟು 40 ದಿನಗಳ ನಂತರ ಅದನ್ನು ಪುನಃ ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಲಾಗುತ್ತದೆ.
ಶಿರಸಿ: ಒಂಬತ್ತು ದಿನಗಳ ಕಾಲ ನಡೆಯುವ ಮತ್ತು ಕೇವಲ ರಾಜ್ಯದಲ್ಲಿ ಮಾತ್ರ ಅಲ್ಲ ದಕ್ಷಿಣ ಭಾರತದಲ್ಲಿ (South India) ನಡೆಯುವ ಅತಿದೊಡ್ಡ ಜಾತ್ರೆಗಳ ಪೈಕಿ ಒಂದೆನಿಸಿಕೊಂಡಿರುವ ಶಿರಸಿ ಮಾರಿಕಾಂಬ ದೇವಿ (Sirsi Marikamba Devi) ಜಾತ್ರಾ ಮಹೋತ್ಸವ ಮಂಗಳವಾರದಿಂದ ಆರಂಭಗೊಂಡಿದೆ ಮಾರಾಯ್ರೇ. ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಬರೀ ಜಾತ್ರೆಯದ್ದೇ ಮಾತು, ಚರ್ಚೆ. ಪ್ರತಿನಿತ್ಯ ಲಕ್ಷಾಂತರ ಭಕ್ತಾದಿಗಳನ್ನು (devotees) ಸೆಳೆಯುವ ಸದರಿ ಜಾತ್ರೆಯು ಮಾರ್ಚ್ 23ರಂದು ಕೊನೆಗೊಳ್ಳುತ್ತದೆ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಮಾರಿಕಾಂಬೆಯ ಕಲ್ಯಾಣ ಮಹೋತ್ಸವ ಮಂಗಳವಾರ ಅಂದರೆ, ಜಾತ್ರೆಯ ಮೊದಲ ದಿನದಂದು ಜರುಗಿದೆ. ಬುಧವಾರ ಮದ್ಯಾಹ್ನ ಶಿರಸಿಯ ಬಿಡಕಿ ಬೈಲಿನ ಗದ್ದುಗೆಯಲ್ಲಿ ಮಾರಿಕಾಂಬೆ ದೇವತೆಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ದೇವಿಯ ರಥೋತ್ಸವ ಬುಧವಾರದಂದೇ ನಡೆದಿದ್ದು ಇದನ್ನು ಹಲವಾರು ವಾಹಿನಿಗಳು ನೇರಪ್ರಸಾರ ಮಾಡಿದವು.
ಅಂದಹಾಗೆ ಶಿರಸಿ ಅಧಿದೇವತೆ ಮಾರಿಕಾಂಬೆಯ ಜಾತ್ರೆ ಎರಡು ವರ್ಷಗಳಿಗೊಮ್ಮೆ ನಡೆಯುವ ಮಹೋತ್ಸವವಾಗಿದೆ ಮತ್ತು ಜಾತ್ರೆ ನಡೆಯುವ ವರ್ಷ ಈ ಭಾಗದಲ್ಲಿ ಬಣ್ಣಗಳ ಹಬ್ಬ ಹೋಳಿಯನ್ನು ಆಚರಿಸುವುದಿಲ್ಲ. ಇದು ಶತಮಾನಗಳಿಂದ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ.
ಒಂಬತ್ತು ದಿನಗಳ ಜಾತ್ರಾಮಹೋತ್ಸವ ಮುಗಿದ ಬಳಿಕ ಧಾರ್ಮಿಕ ಆಚರಣೆಯೊಂದರ ಮೂಲಕ ಮಾರಿಕಾಂಬೆ ದೇವಿಯ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಿಟ್ಟು 40 ದಿನಗಳ ನಂತರ ಅದನ್ನು ಪುನಃ ದೇವಸ್ಥಾನಕ್ಕೆ ತಂದು ಪ್ರತಿಷ್ಠಾಪಿಸಲಾಗುತ್ತದೆ. ಈ 40 ದಿನಗಳ ಅವಧಿಗೆ ದೇವಿಯ ಗುಡಿಯನ್ನು ತೆರೆಯುವುದಿಲ್ಲ. ಈ ಅವಧಿಯನ್ನು ಸೂತಕ ಎಂದು ಪರಿಗಣಿಸಲಾಗುತ್ತದೆ.
ಎಲ್ಲ ಜಾತ್ರೆಗಳಂತೆ ಶಿರಸಿಯಲ್ಲೂ ಮಹೋತ್ಸವದ ಪ್ರಯುಕ್ತ ಯಕ್ಷಗಾನದ ಅಟಗಳನ್ನು ಅಯೋಜಿಸಲಾಗುತ್ತದೆ. ನಾಟಕ ಕಂಪನಿಗಳು ಬಿಡಾರ ಹೂಡುತ್ತವೆ. ಸಿಹಿ ತಿಂಡಿ, ಬೆಂಡು ಬತ್ತಾಸು, ಬಗೆಬಗೆಯ ಮಿಕ್ಸ್ಚರ್, ಗೊಂಬೆಗಳು ಮಕ್ಕಳ ಆಟದ ಸಾಮಾನುಗಳು, ಮೊದಲಾದವುಗಳ ನೂರಾರು ಅಂಗಡಿಗಳು ಇಲ್ಲಿ ನೋಡಬಹುದು.
ಕರ್ನಾಟಕದ ನಾನಾ ಭಾಗಗಳಲ್ಲದೆ ನೆರೆಯ ಗೋವಾ, ಮಹಾರಾಷ್ಟ್ರ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಭಕ್ತಾದಿಗಳು ಜಾತ್ರೆಗೆ ಬರುತ್ತಾರೆ.
ಮಕ್ಕಳ ಪರೀಕ್ಷೆಗಳ ಜಂಜಾಟವಿಲ್ಲದಿದ್ದರೆ ನೀವೂ ಜಾತ್ರೆಗೆ ಹೋಗಬಹುದು.
ಇದನ್ನು ಓದಿ: ರಸ್ತೆ ಬದಿ ನಿಂತು ಕಚ್ಚಾ ಬಾದಾಮ್ ಹಾಡಿಗೆ ಡ್ಯಾನ್ಸ್ ಮಾಡಿದ ಮಹಿಳೆ: 8 ಮಿಲಿಯನ್ಗೂ ಅಧಿಕ ವೀಕ್ಷಣೆ ಪಡೆದ ವಿಡಿಯೋ